ಹೆಂಡತಿಗೆ ಫೋನ್ ಮಾಡಿ ಆದಷ್ಟು ಬೇಗ ಬರ್ತೀನಿ ಅಂದ ಯೋಧ ಮರುದಿನ ಮನೆಗೆ ಬಂದಿದ್ದು ಶವವಾಗಿ

in Kannada News/News/Story/ಕನ್ನಡ ಮಾಹಿತಿ 450 views

ಚಾಮರಾಜನಗರ: ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮರಳಿ ಬರುತ್ತೇನೆಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಬಳಿಕ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಗುಂಡ್ಲುಪೇಟೆಯ ಯೋಧ ಕೊನೆಯುಸಿರೆಳೆದಿದ್ದಾರೆ.

Advertisement

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಶಿವಕುಮಾರ್(31) ಮೃತ ಸಿಆರ್ ಪಿಎಫ್ ಯೋಧ. ಹೃದಯಾಘಾತದಿಂದ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮತ್ತೆ ಮನೆಗೆ ಬರುತ್ತೇನೆಂದು ಸಮಾಧಾನ ಹೇಳಿ ಫೋನ್ ಕಟ್ ಮಾಡಿದ್ದು, ಬಳಿಕ 3 ಗಂಟೆಗಳಲ್ಲಿ ಹೃದಯಾಘಾತವಾಗಿದೆ. ಯೋಧನನ್ನು ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮೃತ ಯೋಧನಿಗೆ ಎರಡು ಮಕ್ಕಳಿದ್ದು, ಇಂದು ರಾತ್ರಿ ಶಿವಕುಮಾರ್ ಪಾರ್ಥಿವ ಶರೀರ ಹುಟ್ಟೂರಿಗೆ ಬರುವ ಸಾಧ್ಯತೆ ಇದೆ.

ಯೋಧ ಶಿವಕುಮಾರ್ ಕಳೆದ 8 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ದೆಹಲಿಯಲ್ಲಿ ನಿಯೋಜನೆಗೊಂಡಿದ್ದರು. ಕೊರೊನಾ ಸಮಯದಲ್ಲಿ ಮೂರು ತಿಂಗಳು ರಜೆ ತೆಗೆದುಕೊಂಡು ಊರಿಗೆ ಬಂದಿದ್ದ ಶಿವಕುಮಾರ್, ಕಳೆದ 8 ದಿನಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಮರಳಿದ್ದರು.

ಇದನ್ನೂ ಓದಿ: ಮೂರು ತಲೆಮಾರಿನಿಂದ ನಮ್ಮ ಮನೆಯ ಸದಸ್ಯರೆಲ್ಲಾ ವೈದ್ಯರು, ತಮ್ಮ ಬದುಕಿನ ಚಿತ್ರಣ ಬಿಚ್ಚಿಟ್ಟ ಕುಟುಂಬ 

ಕೊರೊನಾ ಸಂಕಷ್ಟದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನರ ಪ್ರಾಣ ಉಳಿಸುವುದೋಸ್ಕರ ಹಗಲಿರುಳು ದುಡಿಯುತ್ತಿರುವ ವೈದ್ಯರ ಪರಿಶ್ರಮ ಹಾಗೂ ತ್ಯಾಗಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ರೋಗಿಗೆ ದೈವಸ್ವರೂಪಿಯಾಗಿರುವ ಎಲ್ಲಾ ವೈದ್ಯರಿಗೆ ವೈದ್ಯರ ದಿನದ ಶುಭಾಶಯಗಳು.

ವೈದ್ಯರ ದಿನದ ವಿಶೇಷವಾಗಿ ಒಂದು ವಿಶೇಷ ಕುಟುಂಬವೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಈ ಕುಟುಂಬದವರ ಪರಿಚಯ ಜೊತೆಗೆ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಆಡಿದ ಮಾತುಗಳನ್ನು ಕೇಳುತ್ತಿದ್ದರೆ ವೈದ್ಯ ವೃತ್ತಿ ಎನ್ನುವುದು ಎಷ್ಟೊಂದು ಪವಿತ್ರ ಹಾಗೂ ನಿಸ್ವಾರ್ಥವಾದ ಸೇವೆ ಹಾಗೂ ತಮ್ಮ ವೈಯಕ್ತಿಕ ಜೀವನದಲ್ಲಿ ಮಾಡಬೇಕಾದ ತ್ಯಾಗ ಎಂಥದ್ದು ಎಂಬುವುದೆಲ್ಲಾ ತಿಳಿದಾಗ ಅವರ ಮೇಲೆ ನಮಗಿರುವ ಗೌರವ ದುಪ್ಪಟ್ಟಾಗುವುದು.

ಒಂದು ಮನೆಯಲ್ಲಿ ಗಂಡ-ಹೆಂಡತಿ ವೈದ್ಯರಾಗಿರುತ್ತಾರೆ, ಅವರ ಮಕ್ಕಳು ಕೂಡ ಅದೇ ವೃತ್ತಿ ಆಯ್ಕೆ ಮಾಡುವ ಎಷ್ಟೋ ಕುಟುಂಬಗಳಿವೆ. ನಾವಿಲ್ಲ ನಿಮಗೆ ಹೇಳ ಹೊರಟಿರುವುದು ಬೆಂಗಳೂರಿನಲ್ಲಿ ಪ್ರಸಿದ್ಧ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಆಗಿರುವ ಡಾ. ಮಾಕಮ್ ರಮೇಶ್‌ ಕುಟುಂಬದ ಬಗ್ಗೆ. ಈ ಕುಟುಂಬದದಲ್ಲಿ 3 ತಲೆ ಮಾರಿನಿಂದಲೂ ಎಲ್ಲರೂ ವೈದ್ಯರಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಮಾಕಮ್ ರಮೇಶ್‌ ಅವರು ಕಳೆದ 30 ವರ್ಷಗಳಿಂದಲೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಬೆಂಗಳೂರಿನಲ್ಲಿ ಮೊದಲ ವೀಡಿಯೋ ಲ್ಯಾಪ್ರೋಸ್ಕೋಪಿಕ್ ಸರ್ಜರಿ ಮಾಡಿದ ಹೆಗ್ಗಳಿಕೆ ಇವರದ್ದು. ಇವರು ಲ್ಯಾಪ್ರೋಸ್ಕೋಪಿಕ್ ಸರ್ಜರಿ ಕುರಿತು 5 ಖಂಡಗಳಲ್ಲಿ 1500ಕ್ಕೂ ಅಧಿಕ ವೈದ್ಯರಿಗೆ ತರಬೇತಿ ನೀಡಿದ್ದಾರೆ. ಇವರ ಪತ್ನಿ ಡಾ. ಸರಸ್ವತಿ ಕೂಡ ಪ್ರಸಿದ್ಧ ಸ್ತ್ರೀ ರೋಗ ತಜ್ಞರು. ಡಾ. ರಮೇಶ್‌ ಅವರ ಪೋಷಕರು ಕೂಡ ವೈದ್ಯ ವೃತ್ತಿಯಲ್ಲಿದ್ದು ಜನರ ಸೇವೆ ಮಾಡಿದವರೇ, ಇದೀಗ ಮಕ್ಕಳು ಕೂಡ ಪೋಷಕರ ಹಾದಿಯಲ್ಲಿಯೇ ಸಾಗಿದ್ದಾರೆ.

ವೈದ್ಯರು ಎಂದ ಮೇಲೆ 24/7 ರೋಗಿಗಳ ಒಡನಾಟದಲ್ಲಿಯೇ ಇರಬೇಕು, ಅವರಿಗೆ ವೈಯಕ್ತಿಕ ಸಮಯ ಅಂತ ಸಿಗುವುದು ತುಂಬಾ ಕಡಿಮೆ. ಅಂಥದ್ದರಲ್ಲಿ ಮನೆಯಲ್ಲಿ ಎಲ್ಲರೂ ವೈದ್ಯರಾದಾಗ ಅಂಥ ಕುಟುಂಬದ ವೈಯಕ್ತಿಕ ಬದುಕು ಹೇಗಿರುತ್ತೆ, ವೈದ್ಯರ ಮಕ್ಕಳು ಇತರರ ಮಕ್ಕಳಿಗಿಂತ ಹೇಗೆ ಭಿನ್ನವಾಗಿ ಬೆಳೆಯುತ್ತಾರೆ, ಪೋಷಕರು ಸದಾ ಬ್ಯುಸಿ ಇದ್ದಾಗ ಅಪ್ಪ-ಅಮ್ಮನ ಜತೆ ಹೆಚ್ಚಿನ ಸಮಯ ಕಳೆಯಲು ಸಿಗದೆ ಒದ್ದಾಡುವ ಮಕ್ಕಳ ಮನಸ್ಥಿತಿ ಇವೆಲ್ಲದರ ಬಗ್ಗೆ ಆ ಕುಟುಂಬ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಬನ್ನಿ ಅವರ ಮಾತುಗಳಲ್ಲಿಯೇ ವೈದ್ಯರ ಬದುಕು ಹೇಗಿರುತ್ತೆ ಎಂದು ತಿಳಿಯೋಣ…

ಕುಟುಂಬದ ಬಗ್ಗೆ ಡಾ. ರಮೇಶ್‌ರವರು ಹೇಳುತ್ತಾ ಹೋಗಿದ್ದು ಹೀಗೆ

‘ನಮ್ಮ ತಂದೆ ಡಾ. ಆರ್. ಎಸ್‌.ಕೆ ಮೂರ್ತಿ, ತಾಯಿ ಡಾ. ಎಂ ಆರುಂಧತಿ. ತಂದೆಗೆ ಈಗ 88 ವರ್ಷ, ತಾಯಿಗೆ 86 ವರ್ಷ, ಇವರಿಬ್ಬರೂ ವೈದ್ಯಕೀಯ ವೃತ್ತಿಯಲ್ಲಿ ಇದ್ದರು. ತಂದೆ, ತಾಯಿ ಇಬ್ಬರೂ ಕರ್ನಾಟಕದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ(ಬಳ್ಳಾರಿ, ಹುಬ್ಬಳ್ಳಿ, ಮೈಸೂರು, ಬೆಂಗಳೂರು) ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದ್ದಾರೆ.

ತಾಯಿ ಪ್ರಸೂತಿ ಮತ್ತು ಸ್ತ್ರೀ ರೋಗತಜ್ಞರಾಗಿದ್ದರು. ಅವರು ಸ್ತ್ರೀ ರೋಗ ತಜ್ಞ ವಿಭಾಗ ಮುಖ್ಯಸ್ಥರಾಗಿದ್ದರು. ಪತ್ನಿ ಡಾ. ಸರಸ್ವತಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ. ನಾವು ಮೂರು ಜನ ಮಕ್ಕಳು. ನನ್ನ ತಮ್ಮಂದಿರಲ್ಲಿ ಒಬ್ಬರು ಡಾಕ್ಟರ್ಮತ್ತೊಬ್ಬರು ಎಂಜಿನಿಯರ್ ಆಗಿದ್ದಾರೆ. ಕರ್ನಾಟಕದಲ್ಲಿ ಲ್ಯಾಪ್ರೋಸ್ಕೋಪಿಕ್ ಸರ್ಜರಿ ಮೊತ್ತ ಮೊದಲಿಗೆ ಶುರು ಮಾಡಿದ್ದು ನಾನೇ. ನನ್ನ ಇನ್ನೊಬ್ಬ ತಮ್ಮ ಡಾ. ರಾಜೇಶ್‌ ಮೂರ್ತಿ, ಅವರು ರೇಡಿಯೋಲಾಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮನ ಹೆಂಡತಿ ಡಾ. ಗೋಪಿಕಾ ರಾಜೇಶ್‌ ಮಕ್ಕಳ ರೋಗ ತಜ್ಞೆ ಮಾಡಿದ್ದಾರೆ.

ಆದರೆ ಮೂರನೇ ತಲೆಮಾರಿನಲ್ಲಿ ನನ್ನದು ಹಾಗೂ ನನ್ನ ತಮ್ಮಂದಿರ ಮಕ್ಕಳು ಎಲ್ಲರೂ ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಮಗ ಡಾ. ಗೌರಂಗ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸರ್ಜನ್‌ ಆಗಿದ್ದಾನೆ. ಮಗಳು ಎಂಬಿಬಿಎಸ್ ಓದುತ್ತಿದ್ದಾಳೆ. ನನ್ನ ತಮ್ಮಂದಿರ ಮಕ್ಕಳಾದ ಡಾ. ಪರೇಶ್‌ ಎಂಬಿಬಿಎಸ್ ಮುಗಿಸಿದ್ದಾನೆ, ಮತ್ತೊಬ್ಬ ತಮ್ಮನ ಮಗ ಹರೇಶ್ ಮೆಡಿಕಲ್ ವೃತ್ತಿಗೆ ಸಂಬಂಧಪಟ್ಟ ಫೋರೆನ್ಸಿಕ್‌ನಲ್ಲಿ ಡಿಗ್ರಿ ತಗೊಂಡು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾನೆ. ಕೊನೆಯ ತಮ್ಮನ ಮಗ ಕೂಡ ಡಾ. ಜ್ಯೋತಿಷ್. ಹೀಗೆ ನಮ್ಮ ಕುಟುಂಬದ ಮೂರನೇ ತಲೆಮಾರಿನವರು ಎಲ್ಲರೂ ವೈದ್ಯಕೀಯ ವೃತ್ತಿಯಲ್ಲಿದ್ದಾರೆ’.

ಡಾಕ್ಟರ್ ಮಕ್ಕಳೇಕೆ ಡಾಕ್ಟರ್‌? ಎಂಬ ನಮ್ಮ ಪ್ರಶ್ನೆಗೆ ಅವರ ಉತ್ತರ

ನಾವೆಲ್ಲಾ ನೋಡುತ್ತೇವೆ ಡಾಕ್ಟರ್ ಮಕ್ಕಳು ಹೆಚ್ಚಾಗಿ ಡಾಕ್ಟರ್ ಆಗುತ್ತಾರೆ, ಏಕೆ ಎಂಬ ಎಂಬ ಪ್ರಶ್ನೆ ಅವರ ಮುಂದಿಟ್ಟಾಗ ಅವರು ಕೊಟ್ಟ ಉತ್ತರ ಮತ್ತಷ್ಟು ಸೊಗಸಾಗಿದೆ.

‘ನಾವು ತಂದೆ-ತಾಯೊ ಸೇವೆ ಸಲ್ಲಿಸುವುದನ್ನು ನೋಡುತ್ತಾ ಬೆಳೆಯುತ್ತೇವೆ. ಅವರ ಸೇವೆಗೆ ದೊರೆಯುವ ಗೌರವ, ಜನರನ್ನು ಅವರನ್ನು ದೇವರಂತೆ ಕಾಣುವ ರೀತಿ ಎಲ್ಲವೂ ನಮಗೂ ಆ ರೀತಿ ಆಗಬೇಕೆಂಬ ಆಸೆಯನ್ನು ಹುಟ್ಟಿಸುತ್ತದೆ. ಅದರ ಜೊತೆಗೆ ಹೊರಗಿನವರ ಒತ್ತಡ ಕೂಡ ಬೀಳಲಾರಂಭಿಸುತ್ತದೆ, ನಾವೆಲ್ಲಾ ಪಿಯುಸಿ ಬರುವಷ್ಟರಲ್ಲಿ ಮನೆಗೆ ಬಂದವರೆಲ್ಲಾ ನಿಮ್ಮ ಅಪ್ಪ-ಅಮ್ಮ ಡಾಕ್ಟರ್, ನೀವು ಡಾಕ್ಟರ್ ಆಗ್ತೀರಾ ಎಂದೆಲ್ಲಾ ಕೇಳುತ್ತಾರೆ. ಹೀಗೆ ನಮಗೆ ಗೊತ್ತಿಲ್ಲದೆ ಮನೆಯೊಳಗಿನ ಹಾಗೂ ಹೊರಗಿನ ಪರಿಸರದ ಪ್ರೇರೇಪಣೆ ಸಿಗುತ್ತದೆ, ಹಾಗಾಗಿ ಬಹುತೇಕ ಡಾಕ್ಟರ್ ಮಕ್ಕಳು ಕೂಡ ಡಾಕ್ಟರ್ ಆಗ್ತಾರೆ.

ಕುಟುಂಬದಲ್ಲಿ ವೈದ್ಯರಿದ್ದರೆ ಹೆಚ್ಚುವುದು ಮಾನಸಿಕ ಸ್ಥೈರ್ಯ

ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ ‘ಕುಟುಂಬದಲ್ಲಿ ವೈದ್ಯರಿದ್ದರೆ ಒಂದು ಪ್ಲಸ್‌ ಪಾಯಿಂಟ್ ಅಂದರೆ ನಮ್ಮ ಕೆಲಸದ ಒತ್ತಡದ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಎಲ್ಲರಿಗೂ ಗೊತ್ತಿದೆ, ವೈದ್ಯರ ಬದುಕು ಅಂದರೆ ರಾತ್ರಿ-ಹಗಲು ಅಂತ ಇಲ್ಲದೆ ಯಾವ ಸಮಯದಲ್ಲಿ ರೋಗಿ ಬರುತ್ತಾರೋ ರೋಗಿಗಳ ಶುಶ್ರೂಷೆ ಮಾಡಬೇಕಾಗುತ್ತದೆ. ಈ ಕಾರಣದಿಂದ ವೈಯಕ್ತಿಕ ಬದುಕಿಗೆ ಅಷ್ಟೊಂದು ಸಮಯ ಕೊಡಲು ಸಾಧ್ಯವಾಗುವುದಿಲ್ಲ, ಈ ಕೆಲಸದ ಒತ್ತಡ ನಮ್ಮದೇ ವೃತ್ತಿಯಲ್ಲಿರುವವರಿಗೆ ಚೆನ್ನಾಗಿ ಅರಿವು ಇರುತ್ತದೆ. ಆದ್ದರಿಂದ ಮನೆಯಲ್ಲಿ ವೈದ್ಯರಿದ್ದರೆ ಅವರಿಗೆ ನಮ್ಮ ಕಷ್ಟಗಳ ಅರಿವು ಇರುತ್ತದೆ, ಹೊಂದಿಕೊಂಡು ಹೋಗುತ್ತಾರೆ ಹಾಗೂ ನಮ್ಮ ಕೆಲಸಕ್ಕೆ ಮಾನಸಿಕ ಬೆಂಬಲ ನೀಡುತ್ತಾರೆ. ಇದರಿಂದ ಮಾನಸಿಕ ಸ್ಥೆರ್ಯ ಹೆಚ್ಚಾಗುವುದು’ ಎಂದಿದ್ದಾರೆ.

ತಮ್ಮ ವೈಯಕ್ತಿಕ ಬದುಕಿನ ಚಿತ್ರಣ ಬಿಚ್ಚಿಟ್ಟ ಕುಟುಂಬ
ಗಂಡ-ಹೆಂಡತಿ ಇಬ್ಬರೂ ವೈದ್ಯ ವೃತ್ತಿಯಲ್ಲಿರುವ ತಮ್ಮ ಕುಟುಂಬವನ್ನು ಹೇಗೆ ನಿಭಾಯಿಸಿಕೊಂಡು ಹೋಗ್ತಾರೆ, ಡಾಕ್ಟರ್ಸ್ ಮಕ್ಕಳು ಇತರ ಮಕ್ಕಳಿಗಿಂತ ಹೇಗೆ ಭಿನ್ನವಾಗಿರುತ್ತಾರೆ, ಇನ್ನು ಮಕ್ಕಳಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗದಿದ್ದಾಗ ಮಕ್ಕಳ ಮನಸ್ಸಿನಲ್ಲಾಗುವ ಭಾವನೆಗಳ ಬಗ್ಗೆ ತುಂಬಾ ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಡಾ. ರಮೇಶ್‌ ಅವರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುತ್ತಾ ‘ನಾವಿಬ್ಬರೂ ಡಾಕ್ಟರ್ಸ್, ಆದ್ದರಿಂದ ನಮಗೆ ನಮ್ಮ ವೈಯಕ್ತಿಕ ಬದುಕಿಗೆ ಹೆಚ್ಚು ಸಮಯ ಸಿಗಲ್ಲ. ನಾನು ಫ್ರೀ ಇದ್ದಾಗ ಅವರಿಗೆ ಯಾವುದಾದರೂ ಒಂದು ಕೇಸ್ ಬಂದಿರುತ್ತೆ, ಅವರು ಫ್ರೀ ಇದ್ದಾಗ ನನಗೆ ಬೇರೆ ಯಾವುದೋ ಕೇಸ್ ಇರುತ್ತದೆ. ಇಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರುವುದರಿಂದ ಸುಂದರ ಸಂಸಾರ ನಮ್ಮದಾಗಿದೆ, ಇನ್ನು ಡಾಕ್ಟರ್ಸ್ ಮಕ್ಕಳು ಕೂಡ ತುಂಬಾ ಭಿನ್ನವಾಗಿ ಬೆಳಯುತ್ತಾರೆ, ನಮ್ಮ ಮಕ್ಕಳು ಬೇಗನೆ ತಮ್ಮ ಕೆಲಸವನ್ನು ತಾವು ಮಾಡಲು ಕಲಿಯುತ್ತಾರೆ, ಪೋಷಕರಿಗೆ ಸಮಯವಿಲ್ಲದ ಕಾರಣ ಅವರೇ ಹೋಂ ವರ್ಕ್ ಮಾಡಿಕೊಳ್ಳುತ್ತಾರೆ, ತಮಗೆ ಬೇಕಾದ ಅಡುಗೆ ಕೂಡ ತಾವೇ ಮಾಡಲು ಬೇಗನೆ ಕಲಿತು ಕೊಳ್ಳುತ್ತಾರೆ’ ಎಂದರು.

ಹೆರಿಗೆಯಾದ ಮೂರೇ ದಿನಕ್ಕೆ ಡ್ಯೂಟಿಗೆ ಮರಳಿದ್ದೆ

ಡಾ. ಸರಸ್ವತಿ ಮಾತನಾಡುತ್ತಾ ‘ ಈ ವೃತ್ತಿಯಲ್ಲಿರುವುದರಿಂದ ನಾನು ನನ್ನ ಚೊಚ್ಚಲು ಹೆರಿಗೆಗೂ ಅಮ್ಮನ ಮನೆಗೆ ಹೋಗಲಿಲ್ಲ, ಹೆರಿಗೆಯ ದಿನದವರೆಗೂ ಡ್ಯೂಟಿ ಮಾಡಿದ್ದೇನೆ, ಹೆರಿಗೆಯಾದ ಮೂರೇ ದಿನಕ್ಕೆ ಮಗುವನ್ನು ಅಜ್ಜಿ ಬಳಿ ಬಿಟ್ಟು ಹೆರಿಗೆ ಮಾಡಿಸಲು ಆಸ್ಪತ್ರೆಗೆ ಬಂದಿದ್ದೆ. ನಮಗೆ ನಮ್ಮ ಮಕ್ಕಳಿಗೆ ಸರಿಯಾಗಿ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಮನೆಯವರ ಸಹಕಾರ ನಮಗಿತ್ತು, ನಾನು ರೋಗಿಗಳ ಆರೈಕೆ ಮಾಡುತ್ತಿದ್ದರೆ, ಮಕ್ಕಳ ಆರೈಕೆ ಅಜ್ಜಿ ಮಾಡುತ್ತಿದ್ದರು. ಈಗಲೂ ಅಷ್ಟೇ ನಮ್ಮಲ್ಲಿ ಒಬ್ಬರಿಗೊಬ್ಬರು ತುಂಬಾ ಸಹಾಯ ಮಾಡುತ್ತೇವೆ.

ಕೆಲವೊಮ್ಮೆ ನಮಗೆ ಅಡುಗೆ ಮಾಡುವುದಿರಲಿ, ಮಾಡಿಟ್ಟ ಆಹಾರ ತಿನ್ನಲೂ ಸಮಯವಿರಲ್ಲ, ಅಷ್ಟರಲ್ಲಿ ಆಸ್ಪತ್ರೆಯಿಂದ ಕರೆ ಬಂದು ಧಾವಿಸಬೇಕಾಗುತ್ತದೆ. ನಮ್ಮ ಬದುಕು ನೋಡಿ ನನ್ನ ಮಗಳು ಚಿಕ್ಕವಳಿರುವಾಗ ನಾವು ಅವಳಿಗೆ ತುಂಬಾ ಕಂಪ್ಲೇಂಟ್ ಮಾಡುತ್ತಿದ್ದಳು. ನಾನು ಮಾತ್ರ ಡಾಕ್ಟರ್ ಆಗಲ್ಲ, ನಿಮ್ಮ ಬದುಕು ಬೇಡ ಎಂದು ಹೇಳುತ್ತಿದ್ದಳು, ಆದರೆ ನಮಗೆ ಆಶ್ಚರ್ಯವಾಗಿದ್ದು ಪಿಯುಸಿ ಮುಗಿದ ಬಳಿಕ ನಾನು ಎಂಬಿಬಿಎಸ್ ಮಾಡುತ್ತೇನೆ ಎಂದು ಹೇಳಿದಾಗ. ಬೇಡ ನಮ್ಮ ವೃತ್ತಿಗೆ ಬಂದರೆ ನೀನು ಕೂಡ ನಮ್ಮಂತೆ ಬ್ಯುಸಿಯಾಗಬೇಕು, ಕುಟುಂಬಕ್ಕೆ ಸಮಯ ಕೊಡಲು ಆಗಲ್ಲ ಎಂದು ಹೇಳಿದಾಗ ಆಕೆ ‘ ನಾನೂ ಕೂಡ ಡಾಕ್ಟರ್ ಆಗುವೆ’ ಎಂದು ದೃಢವಾಗಿ ಹೇಳಿದಳು, ಈಗ ಎಂಬಿಬಿಎಸ್‌ ಓದುತ್ತಿದ್ದಾಳೆ’ ಎಂದರು.

ಡಾಕ್ಟರ್ ಆಗಲ್ಲ ಎಂದ ಮಗಳೂ ಈಗ ಡಾಕ್ಟರ್

ಡಾಕ್ಟರ್ ಆಗಲ್ಲ ಎಂದ ನೀವು ಕೂಡ ಡಾಕ್ಟರ್ ಆಗಲು ತೀರ್ಮಾನಿಸಿದ್ದು ಏಕೆ ಎಂದು ಮಗಳ ಬಳಿ ಕೇಳಿದಾಗ ‘ ನಾವು ಚಿಕ್ಕವರಿದ್ದಾಗ ಅಪ್ಪ-ಅಮ್ಮ ಸದಾ ಬ್ಯುಸಿಯಾಗಿರುವುದು ನೋಡಿ ಸಿಟ್ಟು ಬರುತ್ತಿತ್ತು. ನಮಗೂ ಅವರ ಜೊತೆ ಸಮಯ ಕಳೆಯಲು ಇಷ್ಟ, ಆದರೆ ಅವರಿಗೆ ಸಮಯವಿಲ್ಲ, ಇದರಿಂದ ಕೋಪ ಬರುತ್ತಿತ್ತು.

ಆಗ ನಾನು ಮಾತ್ರ ಡಾಕ್ಟರ್ ಆಗ ಬಾರದು ಎಂದು ತೀರ್ಮಾನಿಸಿದ್ದೆ. ಆದರೆ ಬೆಳೆಯುತ್ತಿದ್ದಂತೆ ಅವರ ಸೇವೆಯ ಅರ್ಥವಾಗಲಾರಂಭಿಸಿತು, ಆ ವೃತ್ತಿ ಬದುಕಿನ ಸಾರ್ಥಕತೆ ಅರಿವು ಉಂಟಾಯಿತು, ಹಾಗಾಗಿ ನಾನು ಕೂಡ ರೋಗಿಗಳ ಸೇವೆ ಮಾಡಲು ಬಯಸಿದೆ’ ಎಂದಿದ್ದಾರೆ.

ಇನ್ನು ಮಗ ಡಾ. ಗೌರಂಗ್ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ಒಳ್ಳೆಯದು ಆಗಲು ಕೆಲವೊಂದು ತ್ಯಾಗ ಮಾಡಲೇಬೇಕು. ನಾನು ಚಿಕ್ಕವನಾಗಿರುವಾಗ ನಾನು ಏಳುವಾಗ ಅಪ್ಪ-ಅಮ್ಮ ಡ್ಯೂಟಿಗೆ ಹೋಗಿರುತ್ತಿದ್ದರು, ಅವರು ಬರುವಷ್ಟರಲ್ಲಿ ನಾನು ಮಲಗಿರುತ್ತಿದ್ದೆ. ಅಜ್ಜ-ಅಜ್ಜಿಯ ಆರೈಕೆಯಲ್ಲಿ ಬೆಳೆದೆ. ಅಪ್ಪ-ಅಮ್ಮನ ಜೊತೆ ಕಳೆಯಲು ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಆದರೆ ಅವರ ಕೆಲಸದ ಅರಿವು ನನಗಾಗುತ್ತಿತ್ತು, ನನ್ನ ಹಿರಿಯರೆಲ್ಲರೂ ವೈದ್ಯರು, ಅವರನ್ನು ನೋಡಿ ಬೆಳೆದ ನನಗೂ ಆ ವೃತ್ತಿ ಕಡೆಗೆ ಗೌರವ, ಆಸಕ್ತಿ ಮೂಡಿತು’ ಎಂದಿದ್ದಾರೆ.

ಹೀಗೆ ಇಡೀ ಕುಟುಂಬವೇ ಇಂದು ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೋಗಿಗಳ ಬದುಕಿನ ಆಶಾಕಿರಣವಾಗಿರುವ ಈ ಕುಟುಂಬಕ್ಕೆ ಹಾಗೂ ರೋಗಿಗಳ ಸೇವೆ ಮಾಡುತ್ತಿರುವ ಪ್ರತಿಯೊಬ್ಬ ವೈದ್ಯರಿಗೂ ಮತ್ತೊಮ್ಮೆ ವೈದ್ಯ ದಿನದ ಶುಭಾಶಯಗಳು…

Advertisement
Share this on...