ಹಿಂದೆಂದೂ ಪ್ಯಾಂಡಮಿಕ್ನೊಂದಿಗೆ ಫಂಗಸ್ ಸಮಸ್ಯೆ ಬೆಸೆದುಕೊಂಡಿರಲಿಲ್ಲ. ಇದಕ್ಕೆ ಸತತವಾಗಿ ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸುತ್ತಿರುವುದು ಕಾರಣವಿರಬಹುದು ಎಂದು ಏಮ್ಸ್ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಕೊರೋನಾ 2ನೇ ಅಲೆ ಸೃಷ್ಟಿಸುವ ಕರಾಳತೆಯ ಮಧ್ಯೆಯೇ ಭಾರತೀಯರನ್ನು ಬ್ಲ್ಯಾಕ್ ಫಂಗಸ್ (mucormycosis) ಕಾಡುತ್ತಿದೆ. ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಪ್ಪು ಶಿಲೀಂದ್ರಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ. ಈ ಸಂಬಂಧ ಏಮ್ಸ್ನ ನ್ಯೂರೋಸರ್ಜನ್ ವೈದ್ಯರು ನೀಡಿರುವ ಹೇಳಿಕೆ ಪ್ರಕಾರ ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುತ್ತದೆಯಂತೆ. ಸತತವಾಗಿ ಒಂದೇ ಮಾಸ್ಕನ್ನು ಧರಿಸುವುದರಿಂದ ಫಂಗಸ್ ಬೆಳೆಯುತ್ತಿದೆ ಎಂದು ಡಾ. ಸರಾಟ್ ಚಂದ್ರ ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಹೊಸ ಕಾಯಿಲೆ ಅಲ್ಲ. ಆದರೆ ಕೊರೋನಾ ಸಾಂಕ್ರಾಮಿಕವಾಗಿರುವ ಸಂದರ್ಭದಲ್ಲಿ ಫಂಗಸ್ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಪರೂಪ. ಇದಕ್ಕೆ ಅಸ್ವಚ್ಛವಾದ ಮಾಸ್ಕ್ ಕಾರಣವಿರಬೇಕು ಎಂದು ವೈದ್ಯರು ವಿಶ್ಲೇಷಿಸಿದ್ದಾರೆ. ಸತತವಾಗಿ ಒಂದೇ ಮಾಸ್ಕ್ ಧರಿಸುವುದರಿಂದ ಫಂಗಸ್ ಸುಲಭವಾಗಿ ಬೆಳೆಯುತ್ತಿದೆ. ಹೀಗಾಗಿಯೇ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅನಿಯಂತ್ರಿತ ಮಧುಮೇಹ, ಅತಿಯಾದ ಸ್ಟಿರಾಯಿಡ್ ಬಳಕೆ, ಮೆಡಿಕಲ್ ಆಕ್ಸಿಜನ್ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್ ಫಂಗಸ್ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಏಮ್ಸ್ ವೈದ್ಯರು ತಿಳಿಸಿದರು.
ಇನ್ನು ಆಕ್ಸಿಜನ್ ಸಿಲಿಂಡರ್ನಿಂದ ಕೋಲ್ಡ್ ಆಕ್ಸಿಜನನ್ನು ನೇರವಾಗಿ ನೀಡುವುದು ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಹಿಂದೆಂದೂ ಪ್ಯಾಂಡಮಿಕ್ನೊಂದಿಗೆ ಫಂಗಸ್ ಸಮಸ್ಯೆ ಬೆಸೆದುಕೊಂಡಿರಲಿಲ್ಲ. ಆದರೆ ಈಗ ಕೊರೋನಾ 2ನೇ ಅಲೆಯ ಸಮಯದಲ್ಲಿ ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಇದಕ್ಕೆ ಸತತವಾಗಿ ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸುತ್ತಿರುವುದು ಕಾರಣವಿರಬಹುದು ಎಂದು ಏಮ್ಸ್ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳಬಹುದು?
ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು, ಅತಿ ಹೆಚ್ಚು ಸ್ಟಿರಾಯಿಡ್ಸ್ ಬಳಸುವವರರು, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು, ದೀರ್ಘ ಕಾಲದ ಆರೋಗ್ಯ ಸಮಸ್ಯೆ ಇರುವವರು, ಅತಿಯಾದ ಶೀತ, ಥಂಡಿ ಸಮಸ್ಯೆ ಎದುರಿಸುತ್ತಿರುವವರು, ಉಸಿರಾಟದ ಸಮಸ್ಯೆಯಿಂದ ಮೆಡಿಕಲ್ ಆಕ್ಸಿಜನ್ ಸಹಾಯ ಪಡೆದವರು, ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಪಡೆದವರು.
ಮೇಲಿನ ಲಕ್ಷಣಗಳಿರುವವರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇವರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಬ್ಲ್ಯಾಕ್ ಫಂಗಸ್ ಬಂದಿದೆಯಾ ಎಂದು ಪರೀಕ್ಷಿಸುವುದು ಹೇಗೆ?
ಮೂಗಿನಲ್ಲಿ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು, ಮೂಗಿನಲ್ಲಿ ಕಿರಿಕಿರಿ, ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು, ದೃಷ್ಟಿ ಮಂಜಾಗುವುದು, ರೆಪ್ಪೆ ತೆರೆಯಲು/ಮುಚ್ಚಲು ಕಷ್ಟವಾಗುವುದು, ಕಣ್ಣು ಕಾಣದಿರುವುದು, ಮುಖ ಮರಗಟ್ಟುವಿಕೆ, ಜುಮ್ ಎನಿಸುವ ಅನುಭವ, ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು, ಮುಖದಲ್ಲಿ ಊತ, ಮುಖ ಕಪ್ಪುಗಟ್ಟುವಿಕೆ , ಮುಖದಲ್ಲಿ ನೋವು, ಹಲ್ಲು ಉದುರುವುದು, ಬಾಯಿಯಲ್ಲಿ ಕಪ್ಪು ಬಣ್ಣ, ಊತ ಕಾಣಿಸಿಕೊಳ್ಳುವುದು.
ಮೇಲಿನ ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ಹೈ ಶುಗರ್ ಇರುವವರು, ಅನಾರೋಗ್ಯ ಪೀಡಿತರು ಈ ಲಕ್ಷಣಗಳ ಬಗ್ಗೆ ಗಮನ ಹರಿಸಬೇಕು. ಸ್ವಯಂ ನಿಗಾ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ಮುಂದೆ ದೊಡ್ಡ ಅಪಾಯ ತಂದೊಡ್ಡಬಹುದು.
ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಾಗ ಏನು ಮಾಡಬೇಕು?
ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಂಡು ಬಂದೊಡನೆ ENT ವೈದ್ಯರನ್ನು ಸಂಪರ್ಕಿಸಿ
ENT ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಪಡೆಯಬೇಕು
ರಕ್ತದಲ್ಲಿ ಮಧುಮೇಹ ಪ್ರಮಾಣವನ್ನು ಸದಾ ಪರೀಕ್ಷಿಸುತ್ತಿರಬೇಕು, ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಬೇಕು
ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಚಿಕಿತ್ಸೆ ಪಡೆಯಬೇಕು, ನಿರ್ಲಕ್ಷ್ಯ ಮಾಡಬಾರದು
ವೈದ್ಯರನ್ನು ಕೇಳದೆ ಸ್ಟಿರಾಯಿಡ್, ಆ್ಯಂಟಿ ವೈರಲ್ ಔಷಧಗಳನ್ನು ತೆಗೆದುಕೊಳ್ಳಬಾರದು
ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್, ಎಂಆರ್ಐ ಮಾಡಿಸಬೇಕು.
ಅನಗತ್ಯವಾಗಿ ವೈದ್ಯರನ್ನು ಕೇಳದೆ ಔಷಧಗಳನ್ನು ತೆಗೆದುಕೊಳ್ಳುವುದು ಪ್ರಾಣಕ್ಕೆ ಕುತ್ತು ತರಬಹುದು. ಅತಿಯಾದ ಹೆದರಿಕೆಯಿಂದ ಅಗತ್ಯವಿಲ್ಲದಿದ್ದರೂ ಸಿಟಿ ಸ್ಕ್ಯಾನ್, ಎಂಆರ್ಐ ಮಾಡಿಸಬಾರದು. ಭಯಕ್ಕಿಂತ ಹೆಚ್ಚಾಗಿ ಎಚ್ಚರಿಕೆಯಿಂದ ಇದ್ದರೆ ಬ್ಲ್ಯಾಕ್ ಫಂಗಸ್ನಿಂದ ಬಚಾವ್ ಆಗಬಹುದು.