ಮೈಸೂರು:
ಇಂದು ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಅವರನ್ನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಭೇಟಿಯಾಗಿ ಅಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಅರುಣ್ ಯೋಗಿರಾಜ್, ನನ್ನ ಬಾಲ್ಯದ ವಿದ್ಯಾಭ್ಯಾಸ ಹಾಗೂ ಡಿಗ್ರಿ ಇದೇ ಜೆಎಸ್ಎಸ್ ಸಂಸ್ಥೆಯಲ್ಲಿ ಮಾಡಿದ್ದೆ. ಪೂಜ್ಯರ ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದೇನೆ. ಬೆಳಗ್ಗಿನ ಉಪಹಾರಕ್ಕೆ ಪೂಜ್ಯರು ಆಹ್ವಾನಿಸಿದ್ದರು. ನನ್ನ ಕೆಲಸಕ್ಕೆ ಪೂಜ್ಯರ ಆಶೀರ್ವಾದ ಬೇಕಿತ್ತು. ಹೀಗಾಗಿ ಮಠಕ್ಕೆ ಭೇಟಿ ನೀಡಿದೆ. ಅಯೋಧ್ಯೆಯಲ್ಲಿ ನಾನು ಸ್ವಾಮೀಜಿಯನ್ನ ಭೇಟಿ ಆಗಬೇಕಿತ್ತು. ಆದ್ರೆ ಒತ್ತಡಗಳಿಂದ ಸಾಧ್ಯವಾಗಿರಲಿಲ್ಲ. ರಾಮಲಲ್ಲಾ ಮೂರ್ತಿ ಬಗ್ಗೆ ಸ್ವಾಮೀಜಿ ಅಭಿಪ್ರಾಯ ಕೇಳಬೇಕಿತ್ತು. ಅದಕ್ಕೆ ನಾನು ಮಾಡಿದ ಮೂರ್ತಿ ಬಗ್ಗೆ ಸ್ವಾಮೀಜಿಗೆ ತಿಳಿಸಿದೆ. ನಾನು ಮಾಡಿದ ವಿಗ್ರಹ ನನಗೆ ನಾನೆತ್ತ ಮಗುವಿದ್ದಂತೆ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವಂತೆ ನನ್ನ ಮೂರ್ತಿ ನನ್ನನ್ನ ಕುರುಡು ಮಾಡುತ್ತೆ. ಆದರೆ ಬೇರೆಯವರ ಅಭಿಪ್ರಾಯ ಮುಖ್ಯ ಆಗತ್ತೆ. ಹೀಗಾಗಿ ಇಂದು ಸ್ವಾಮೀಜಿಗೆ ಫೋಟೋ ತೋರಿಸಿ ಅಭಿಪ್ರಾಯ ಕೇಳಿದೆ.
ಸ್ವಾಮೀಜಿ ಫೋಟೋ ನೋಡಿ ತುಂಬ ಚೆನ್ನಾಗಿದೆ ಅಂದಿದ್ದಾರೆ. ಮೂರ್ತಿ ನೋಡಿ ಎಲ್ಲರೂ ಭಾವುಕರಾಗಿದ್ದಾರೆ. ಈ ಮಟ್ಟದ ಪ್ರೀತಿ ಸಿಗತ್ತೆ ಎಂದು ನಾನು ಭಾವಿಸಿರಲಿಲ್ಲ. ಭಾರತದಲ್ಲಿ ಶಿಲ್ಪ ಕಲಾವಿದನಿಗೆ ಈ ಮಟ್ಟದ ಗುರುತಿಸುವಿಕೆ ಸಿಕ್ಕಿರೋದು ಇದೇ ಮೊದಲು. ಇನ್ನಷ್ಟು ಕಲಾವಿದರನ್ನ ಗುರುತಿಸುವ ಕೆಲಸ ಆಗಲಿ ಎಂದು ನುಡಿದರು.
ಯಾವುದೇ ಊರಿಗೂ ಭೇಟಿ ನೀಡಿದರು ನಮ್ಮೂರೇ ನಮಗೆ ಹೆಚ್ಚು. ಮೈಸೂರನ್ನ ತುಂಬಾ ಮಿಸ್ ಮಾಡ್ಕೋತಿದ್ದೆ. ಕೆಲಸದ ಒತ್ತಡದಿಂದ ಮೈಸೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಮೈಸೂರಿಗೆ ಬಂದಿದ್ದೇನೆ ಶ್ರೀಗಳ ಆಶೀರ್ವಾದ ಕೂಡ ಪಡೆದಿದ್ದೇನೆ. ಜನರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ನಮ್ಮ ತಂದೆಯವರನ್ನ ನೆನಪು ಮಾಡಿಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿರುವುದರ ಬಗ್ಗೆ ಮಾಹಿತಿ ಇಲ್ಲ ಎಂದರು.
ಮೈಸೂರು ನಗರಪಾಲಿಕೆಯಿಂದ ನೀಡಬೇಕಿದ್ದ 12 ಲಕ್ಷ ಹಣ ವಿಳಂಬದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅರುಣ ಯೋಗಿರಾಜ್, 2015ರಲ್ಲಿ ನಗರಪಾಲಿಕೆಗೆ ಮೂರ್ತಿ ಕೆತ್ತನೆ ಮಾಡಿಕೊಟ್ಟಿದ್ದೆ. ಅದರ ಬಾಕಿ ಮೊತ್ತ ನನಗೆ ಇನ್ನು ಬಂದಿಲ್ಲ. ನಾನು ಸ್ವಲ್ಪ ಒತ್ತಡದಲ್ಲಿ ಇದ್ದೆ. ಅದಕ್ಕೆ ಅದರ ಕಡೆ ಗಮನ ಹರಿಸಿರಲಿಲ್ಲ. ನಾನು ಮೊದಲಿಂದ ಕಮರ್ಶಿಯಲ್ ಕಡಿಮೆ. ನಾನು ಕಲೆಗೆ ಹೆಚ್ಚು ಪ್ರೋತ್ಸಾಹ ಕೊಡ್ತಿನಿ ಎಂದರು.