ಉತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿರುವ ಮುಸ್ಲಿಂ ಮಹಿಳೆಯೊಬ್ಬರು ಪತಿ ಹಾಗೂ ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲವ್ ಜಿಹಾದ್ ಕ್ಯಾಂಪೇನ್ ನಡೆಸುತ್ತಿದ್ದ ಗಂಡ ಸೈಯದ್ ಹಸನೈನ್ ಅಶ್ರಫ್ ಮತ್ತು ಅತ್ತೆ ಶಾದಿಯಾ ವಿರುದ್ಧ ಮಹಿಳೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನ್ನ ಪತಿ ಮತ್ತು ಅತ್ತೆ ಮುಸ್ಲಿಮೇತರ ಮಹಿಳೆಯರನ್ನು ತಮ್ಮ ಜಾಲದಲ್ಲಿ ಸಿಲುಕಿಸಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಹಸನೈನ್ ಬೆಂಗಳೂರಿನ ದರ್ಗಾವೊಂದರ ಸಜ್ಜದಂಶಿನ್ (ದರ್ಗಾದ ದೊಡ್ಡ ಫಕೀರ) ಎಂದು ಅವರು ಹೇಳಿದರು. ಅವರು ಮತಾಂತರಕ್ಕೆ ವಿದೇಶದಿಂದ ಹಣ ಪಡೆಯುತ್ತಿದ್ದಾರೆ. ಅವರ ಸಂಬಂಧಿಕರೂ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ಇನ್ಸ್ ಪೆಕ್ಟರ್ ಅಜಯ್ ಪ್ರಕಾಶ್ ತ್ರಿಪಾಠಿ ಪ್ರಕಾರ, ಪತಿ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ನಾಲ್ವರು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡುವಂತೆ ಹಸ್ನೈನ್ ಒತ್ತಡ ಹೇರಿದ್ದ. ಇದನ್ನು ಮಾಡದಿದ್ದರೆ ಲಂಡನ್ನಲ್ಲಿ ನೆಲೆಸಿರುವ ತನ್ನ ಸಹೋದರ ಸೇರಿದಂತೆ ಇಡೀ ಕುಟುಂಬವನ್ನು ಕೊಂದುಬಿಡುತ್ತೇವೆ ಎಂದು ಧಮಕಿ ಹಾಕಿದ್ದ. ಮಹಿಳೆ ಆತನ ಮಾತನ್ನು ಕೇಳಲು ನಿರಾಕರಿಸಿದಾಗ, ಆಕೆಯ ಪತಿ ಆಕೆಯನ್ನು ಹೊಡೆದು ಮನೆಯಿಂದ ಹೊರಹಾಕಿದ್ದಾನೆ.
ಹಿಂದೂ ಮಹಿಳೆಯರನ್ನೇ ಟಾರ್ಗೇಟ್ ಮಾಡಿ ಬಲೆಗೆ ಬೀಳಿಸುತ್ತಿದ್ದ
ಖುರ್ರಂನಗರದ ನಿವಾಸಿಯಾಗಿರುವ ಸಂತ್ರಸ್ತೆ ಉಮ್ಮೆ ಕುಲ್ಸುಮ್, ಬೆಂಗಳೂರಿನ ನಿವಾಸಿಯಾದ ತನ್ನ ಪತಿ ಹಿಂದೂ ಮಹಿಳೆಯರನ್ನೇ ಟಾರ್ಗೇಟ್ ಮಾಡಿ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಾನೆ ಎಂದು ಆರೋಪಿಸಿದ್ದಾರೆ ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ. ನಂತರ, ಮದುವೆಯ ನೆಪದಲ್ಲಿ ಅವರನ್ನು ಧರ್ಮ ಬದಲಾಯಿಸುವಂತೆ ಮಾಡುತ್ತಾನೆ. ಎಲ್ಲಾ ಧರ್ಮದ ಜನರು ದರ್ಗಾಕ್ಕೆ ಬರುತ್ತಾರೆ, ಅದರ ಲಾಭವನ್ನು ಅವರು ಜನರನ್ನು ಬ್ರೈನ್ ವಾಶ್ ಮಾಡಿ ಅವರನ್ನು ಮತಾಂತರಗೊಳಿಸಲು ಬಳಸಿಕೊಳ್ಳುತ್ತಾರೆ ಎಂದು ಮಹಿಳೆ ತಿಳಿಸಿದ್ದಾಳೆ ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.
ನಾನು ಗರ್ಭಿಣಿಯಾಗಿದ್ದಾಗ ರಿಚಾ ಎಂಬ ಹಿಂದೂ ಯುವತಿಯನ್ನ ವಿವಾಹವಾದ
ರಿಪೋರ್ಟ್ನ ಪ್ರಕಾರ, ಸಂತ್ರಸ್ತೆ ತನ್ನ ಕಷ್ಟವನ್ನು ಹೇಳುತ್ತ, ತಾನು 2019 ರಲ್ಲಿ ಅಶ್ರಫ್ನನ್ನ ಮದುವೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಮದುವೆಯಾದ ಕೆಲ ದಿನಗಳ ನಂತರ ಆಕೆಯನ್ನು ಥಳಿಸತೊಡಗಿದ. ಪತಿ ಮತ್ತು ಅತ್ತೆ ಶಾದಿಯಾ ಹಿಂದೂ ಮಹಿಳೆಯರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವಂತೆ ಮತ್ತು ಇಬ್ಬರಿಗೂ ಪರಿಚಯಿಸುವಂತೆ ಪ್ರತಿದಿನ ಒತ್ತಡ ಹೇರುತ್ತಿದ್ದರು. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ, ಪತಿ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಮಹಿಳೆ ಮುಂದೆ ಮಾತನಾಡುತ್ತ, “ನಾನು ಗರ್ಭಿಣಿಯಾಗಿದ್ದಾಗ, ನನ್ನ ಗಂಡ ರಿಚಾ ಪಹ್ವಾ ಎಂಬ ಹುಡುಗಿಯನ್ನು ಮದುವೆಯಾದನು ಮತ್ತು ಅವಳ ಹೆಸರನ್ನು ಮದಿಹಾ ಎಂದು ಬದಲಾಯಿಸಿದನು” ಎಂದು ಹೇಳಿದ್ದಾರೆ.
ಅಬಾರ್ಷನ್ ಮಾಡಿಕೊಳ್ಳುವಂತೆ ಹೇಳಿದ್ದರು
ಸಂತ್ರಸ್ತೆಯ ಪ್ರಕಾರ, ಪತಿ ಮತ್ತು ಅತ್ತೆ ಇದರಿಂದ ತೃಪ್ತರಾಗದಿದ್ದಾಗ, ಅವರು ವರದಕ್ಷಿಣೆಗೆ ಒತ್ತಾಯಿಸಲು ಪ್ರಾರಂಭಿಸಿದರು. ಸಂತ್ರಸ್ತೆ ಮಾತನಾಡುತ್ತ, “ನಾನು ಗರ್ಭಿಣಿಯಾಗಿದ್ದಾಗ, ನಾನು ಭ್ರೂಣದ ಪರೀಕ್ಷೆಯನ್ನು ಮಾಡಿಸಿಕೊಂಡೆ. ನನಗೆ ಮಗಳಿದ್ದಾಳೆ ಎಂದು ತಿಳಿದ ಕೂಡಲೇ ಅಬಾರ್ಷನ್ ಮಾಡಿಸಿಕೊಳ್ಳುವಂತೆ ಹೇಳಿದ್ದರು. ಒಂದು ವೇಳೆ ನೀನು ಅಬಾರ್ಷನ್ ಮಾಡಿಸಿಕೊಳ್ಳದಿದ್ದರೆ ಮಗುವಿನ ಪೋಷಣೆಗಾಗಿ ನಿನ್ನ ತವರು ಮನೆಯಿಂದ 25 ಲಕ್ಷ ರೂಪಾಯಿಗಳನ್ನು ತರಬೇಕಾಗುತ್ತೆ ಎಂದು ಹೇಳಿದರು. ಈ ವಿಷಯ ಗೊತ್ತಾದ ಕೂಡಲೇ ಲಂಡನ್ನಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದರ 7.50 ಲಕ್ಷ ರೂಪಾಯಿ ಕಳುಹಿಸಿ ಮಗಳ ಜೀವ ಉಳಿಸಿದ್ದ” ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಇಂದಿರಾನಗರ ಠಾಣೆ ಪೊಲೀಸರು ಧಾರ್ಮಿಕ ಮತಾಂತರ ಕಾಯ್ದೆ, ವರದಕ್ಷಿಣೆ ಕಿರುಕುಳ, ಕೊಲೆ ಬೆದರಿಕೆ ಮತ್ತಿತರ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದರೊಂದಿಗೆ ಪೊಲೀಸರು ಉತ್ತರಪ್ರದೇಶ ಎಟಿಎಸ್ಗೂ ಮಾಹಿತಿ ನೀಡಿದ್ದಾರೆ.