6 ದಿನಗಳ ಕಾಲ 150 ಕಿಲೋಮೀಟರ್ ಪಾದಯಾತ್ರೆ ಮಾಡುತ್ತ ಅಯೋಧ್ಯೆಯ ರಾಮಲಲ್ಲಾ ದರ್ಶನ ಪಡೆದ 350 ಮುಸ್ಲಿಮರು

in Uncategorized 51 views

Muslims Visited Ayodhya Ram Temple: ಲಖನೌದಿಂದ ಆರು ದಿನಗಳ ಕಾಲ್ನಡಿಗೆ ಪೂರ್ಣಗೊಳಿಸಿದ 350 ಮುಸ್ಲಿಮರು, 150 ಕಿಮೀ ಕ್ರಮಿಸಿ ಅಯೋಧ್ಯಾದ ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಆರೆಸ್ಸೆಸ್‌ನ ಮುಸ್ಲಿಂ ರಾಷ್ಟ್ರೀಯ ಮಂಚ್ ನೇತೃತ್ವದಲ್ಲಿ, ಭೀಕರ ಚಳಿಯನ್ನೂ ಲೆಕ್ಕಿಸದೆ ಈ ತಂಡ ಅಯೋಧ್ಯೆಗೆ ನಡೆದುಕೊಂಡೇ ಆಗಮಿಸಿದೆ.

Advertisement

ಅಯೋಧ್ಯೆ: ಜನವರಿ 22ರಂದು ಅಯೋಧ್ಯಾದ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ದರ್ಶನಕ್ಕೆ ಲಖನೌದಿಂದ 350 ಮುಸ್ಲಿಮರು ಅಯೋಧ್ಯೆವರೆಗೆ 6 ದಿನಗಳ ಪಾದಯಾತ್ರೆ ನಡೆಸಿದ್ದಾರೆ.

ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗ ‘ಮುಸ್ಲಿಂ ರಾಷ್ಟ್ರೀಯ ಮಂಚ್‌’ ನೇತೃತ್ವದಲ್ಲಿ ಜ 25ರಂದು ಈ ಯಾತ್ರೆ ಆರಂಭಗೊಂಡಿತ್ತು ಎಂದು ಮಂಚ್‌ನ ವಕ್ತಾರ ಶಾಹಿದ್‌ ಸಯೀದ್‌ ತಿಳಿಸಿದ್ದಾರೆ. ‘ಜೈ ಶ್ರೀರಾಮ್’ ಘೊಷಣೆಯೊಂದಿಗೆ ಹೆಜ್ಜೆ ಹಾಕಿದ ಈ ತಂಡ, ಮಂಗಳವಾರ ಅಯೋಧ್ಯೆ ತಲುಪಿತು. ಪ್ರತಿ 25 ಕಿಮೀಗೆ ರಾತ್ರಿ ವಿರಾಮಕ್ಕಾಗಿ ನಿಲ್ಲುತ್ತಿದ್ದ ಅವರು, ಮರು ದಿನ ಬೆಳಿಗ್ಗೆ ಮತ್ತೆ ಕಾಲ್ನಡಿಗೆ ಆರಂಭಿಸುತ್ತಿದ್ದರು.

ವಿಪರೀತ ಚಳಿಯ ಮಧ್ಯೆಯೂ ಸುಮಾರು 150 ಕಿಲೋಮೀಟರ್ ದೂರದ ಪಾದಯಾತ್ರೆ ಕ್ರಮಿಸಿದ್ದಾರೆ. ಪ್ರತಿ ದಿನ 25 ಕಿಮೀ ದೂರ ಕ್ರಮಿಸಿ, ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತಿದ್ದರು. ಮರುದಿನ ಬೆಳಿಗ್ಗೆ ಪಾದಯಾತ್ರೆ ಆರಂಭಿಸುತ್ತಿದ್ದರು. ಬರಿಗಾಲಲ್ಲೇ ಹೆಜ್ಜೆ ಹಾಕಿದ ಈ ತಂಡ, ಅಯೋಧ್ಯೆ ತಲುಪಿ ಬಾಲರಾಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ,” ಎಂದು ಶಾಹಿದ್‌ ಹೇಳಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಮುಸ್ಲಿಮರು ಯಾತ್ರೆಯನ್ನು ‘ಏಕತೆ, ಭಾವೈಕ್ಯತೆ, ಸಾರ್ವಭೌಮತ್ವ ಹಾಗೂ ಸಾಮರಸ್ಯದ ಸಂಕೇತ’ ಎಂದು ತಿಳಿಸಿದ್ದಾರೆ

ತಿರುಪತಿಯಲ್ಲಿ ಧಾರ್ಮಿಕ ಸಮ್ಮೇಳನ
ತಿರುಮಲ: ಫೆ 3ರಿಂದ 5ರ ವರೆಗೆ ತಿರುಪತಿಯಲ್ಲಿ ಸನಾತನ ಧಾರ್ಮಿಕ ಸದನವನ್ನು ಆಯೋಜಿಸಲಾಗಿದೆ. ದೇಶಾದ್ಯಂತ ವಿವಿಧ ಪೀಠಾಧಿಪತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದೂ ಸನಾತನ ಮೌಲ್ಯಗಳನ್ನು ರಕ್ಷಿಸಲು ಈ ‘ಆಧ್ಯಾತ್ಮಿಕ ಆಂದೋಲನ’ ಜರುಗುತ್ತಿದೆ ಎಂದು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಹೇಳಿದ್ದಾರೆ.

‘‘ಧಾರ್ಮಿಕ ಮತಾಂತರವನ್ನು ತಡೆಯಲು ಟಿಟಿಡಿ ತನ್ನ ಹಿಂದೂ ಧರ್ಮ ಪ್ರಚಾರ ಪರಿಷತ್‌ (ಎಚ್‌ಡಿಪಿಪಿ) ಆಶ್ರಯದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದೆ. ಹಿಂದೂ ಧರ್ಮದ ಮಹಾಕಾವ್ಯಗಳು, ಪರಂಪರೆ, ಸಂಸ್ಕೃತಿಯ ಉಜ್ವಲ ಗ್ರಂಥಗಳಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಸಾರ್ವಜನಿಕರಿಗೆ, ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ ರಾಷ್ಟ್ರದಾದ್ಯಂತ ತಲುಪಿಸುವ ಉದಾತ್ತ ಗುರಿಯನ್ನು ಹೊಂದಿದೆ. ಇದಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಧಾರ್ಮಿಕ ಸದನದಲ್ಲಿ 57 ಪೀಠಾಧಿಪತಿಗಳು ಪಾಲ್ಗೊಳ್ಳಲು ಅಂಗೀಕಾರ ನೀಡಿದ್ದಾರೆ. ಹಲವು ದಶಕಗಳಿಂದ ತಿರುಮಲ, ಇಡೀ ದೇಶಕ್ಕೆ ಆಧ್ಯಾತ್ಮಿಕ ರಾಜಧಾನಿಯಾಗಿದೆ. ಈಗ ಆಧ್ಯಾತ್ಮಿಕ ಆಂದೋಲನದ ಹೊಸ ಅಧ್ಯಾಯವನ್ನು ತೆರೆಯುತ್ತಿದೆ,’’ಎಂದು ಅವರು ಬಣ್ಣಿಸಿದರು.

ಆಸ್ಥಾನ ಮಂಟಪದಲ್ಲಿ ಸದನ ನಡೆಯಲಿದೆ. ಇದಕ್ಕಾಗಿ ನಡೆಯುತ್ತಿರುವ ವ್ಯವಸ್ಥೆಗಳನ್ನು ರೆಡ್ಡಿ ಪರಿಶೀಲಿಸಿದರು. ಅವರೊಂದಿಗೆ ಟಿಟಿಡಿ ಆರೋಗ್ಯ ಮತ್ತು ಶಿಕ್ಷಣದ ಜೆಇಒ ಸದಾ ಭಾರ್ಗವಿ ಹಾಗೂ ಇತರ ಅಧಿಕಾರಿಗಳಿದ್ದರು.

Advertisement
Share this on...