ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಆತಂಕದ ನಡುವೆಯೇ ಬ್ಲ್ಯಾಕ್ ಫಂಗಸ್ ಸಮಸ್ಯೆ ಸೃಷ್ಟಿಯಾಗಿರುವುದು ವೈದ್ಯಕೀಯ ಲೋಕದ ನಿದ್ದೆ ಕೆಡಿಸಿದೆ. ಹಲವು ರಾಜ್ಯಗಳಲ್ಲಿ ಈ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚಾಗುತ್ತಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಆದರೆ ಇದೀಗ ಬೆಂ-ಕಿಗೆ ತುಪ್ಪ ಸುರಿದಂತೆ ವೈಟ್ ಫಂಗಸ್ ಸಮಸ್ಯೆಯೂ ಕಾಣಿಸಿಕೊಂಡಿದೆ.
ಬ್ಲ್ಯಾಕ್ ಫಂಗಸ್ ಪ್ರಕರಣಗಳ ಬೆನ್ನಲ್ಲೇ ದೇಶದಲ್ಲಿ ವೈಟ್ ಫಂಗಸ್ ಸೋಂಕು ಕಂಡುಬಂದಿದ್ದು, ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಇದು ಬ್ಲಾಕ್ ಫಂಗಸ್ಗಿಂತಲೂ ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ವೈಟ್ ಫಂಗಸ್ ಪ್ರಕರಣ ಎಲ್ಲೆಲ್ಲಿ ಕಂಡುಬಂದಿದೆ? ಇದರ ಲಕ್ಷಣ, ಅಪಾಯಗಳೇನು? ಮುಂದೆ ಓದಿ…
ಎಲ್ಲೆಲ್ಲಿ ವೈಟ್ ಫಂಗಸ್ ಪ್ರಕರಣ ಕಂಡುಬಂದಿದೆ?
ಬ್ಲ್ಯಾಕ್ ಫಂಗಸ್ಗಿಂತಲೂ ಅಪಾಯಕಾರಿ ಎನ್ನಲಾಗುವ ಈ ವೈಟ್ ಫಂಗಸ್ ಪ್ರಕರಣ ಪಾಟ್ನಾ, ಬಿಹಾರದಲ್ಲಿ ಪತ್ತೆಯಾಗಿದೆ. ಪಾಟ್ನಾದಲ್ಲಿನ ವೈದ್ಯರೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. ತಜ್ಞರ ಪ್ರಕಾರ ಈ ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ಗಿಂತ ಹೆಚ್ಚು ಅಪಾಯಕಾರಿ. ಇದು ಶ್ವಾಸಕೋಶಕ್ಕೆ ನೇರ ಹಾನಿ ತರುತ್ತದೆ. ಇದರ ಬಹುಪಾಲು ಲಕ್ಷಣಗಳು ಬ್ಲ್ಯಾಕ್ ಫಂಗಸ್ನಂತೆಯೇ ಇರುತ್ತವೆ.
ವೈಟ್ ಫಂಗಸ್ ನೇರ ಶ್ವಾಸಕೋಶಗಳಿಗೆ ಹಾನಿ ಮಾಡುತ್ತದೆ. ಇದರ ಜೊತೆ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಮೆದುಳು, ಬಾಯಿ ಹಾಗೂ ಖಾಸಗಿ ಭಾಗಗಳಿಗೆ ಹೆಚ್ಚು ಹಾನಿ ಮಾಡುತ್ತದೆ.
ವೈಟ್ ಫಂಗಸ್ ಲಕ್ಷಣಗಳೇನು?
ಈ ಸೋಂಕಿನ ಬಹುಪಾಲು ಲಕ್ಷಣಗಳು ಬ್ಯ್ಲಾಕ್ ಫಂಗಸ್ ಅನ್ನೇ ಹೋಲುತ್ತವೆ. ತಲೆ ನೋವು, ಮುಖದಲ್ಲಿ ಊತ ಅಥವಾ ಬಾವು, ಮೂಗು ಕಟ್ಟುವಿಕೆ ಇದರ ಸಾಮಾನ್ಯ ಲಕ್ಷಣಗಳು. ಭಾರತದಲ್ಲಿ ಪತ್ತೆಯಾಗಿರುವ ವೈಟ್ ಫಂಗಸ್ ಪ್ರಕರಣಗಳಲ್ಲಿ ಕೊರೊನಾ ರೀತಿಯ ಲಕ್ಷಣಗಳು ಗೋಚರಿಸಿವೆ. ನಾಲ್ಕು ಮಂದಿಯಲ್ಲಿ ಲಕ್ಷಣಗಳು ಕಂಡುಬಂದಿದ್ದು, ಅವರಲ್ಲಿ ಶ್ವಾಸಕೋಶಕ್ಕೆ ಸೋಂಕು ತಗುಲಿದೆ. ಸದ್ಯಕ್ಕೆ ಬ್ಲ್ಯಾಕ್ ಫಂಗಸ್ಗೆ ನೀಡಲಾಗುವ ಆಂಟಿಫಂಗಲ್ ಔಷಧಿಗಳನ್ನೇ ಚಿಕಿತ್ಸೆಯಾಗಿ ನೀಡಲಾಗುತ್ತಿದೆ.
ಬ್ಲ್ಯಾಕ್ ಫಂಗಸ್ ನಂತೆಯೇ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಮಧುಮೇಹಿಗಳಿಗೆ ಹಾಗೂ ದೀರ್ಘಾವಧಿ ಸ್ಟೆರಾಯ್ಡ್ ಬಳಕೆ ಮಾಡುತ್ತಿರುವವರಲ್ಲಿ ವೈಟ್ ಫಂಗಸ್ ಸಮಸ್ಯೆ ಗೋಚರಿಸುತ್ತಿದೆ. ಎಂದು ಅವರು ತಿಳಿಸಿದ್ದಾರೆ. ಕೊರೊನಾ ವೈರಸ್ನ ಗಂಭೀರ ಸಮಸ್ಯೆಗೆ ಒಳಗಾಗಿ ವೆಂಟಿಲೇಟರ್ ಮಾಸ್ಕ್ ಅಥವಾ ಮೂಗಿನ ಕೊಳವೆ ಮೂಲಕ ಆಮ್ಲಜನಕದ ಸಹಾಯದಲ್ಲಿದ್ದ ರೋಗಿಗಳು ಈ ಸಮಸ್ಯೆಗೆ ತುತ್ತಾಗುವ ಅಪಾಯವಿದೆ. ಕ್ಯಾನ್ಸರ್ ರೋಗವಿರುವವರು ಎಚ್ಚರಿಕೆಯಿಂದಿರಬೇಕೆಂದು ವೈದ್ಯರು ಸೂಚಿಸಿದ್ದಾರೆ. ಮಕ್ಕಳು ಹಾಗೂ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಕೊರೊನಾ ರೋಗಿಗಳಿಗೆ ವೆಂಟಿಲೇಟರ್ ಹಾಗೂ ಆಮ್ಲಜನಕದ ವ್ಯವಸ್ಥೆಯನ್ನು ಸೂಕ್ತವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಇದು ವೈಟ್ ಫಂಗಸ್ ಆದರೆ ಸದ್ಯ ರಾಜ್ಯದಲ್ಲಿ ಕಾಡುತ್ತಿರುವ ಬ್ಲ್ಯಾಕ್ ಫಂಗಸ್ ಅಂದರೇನು? ಅದರ ಲಕ್ಷಣಗಳೇನು?
ಕೊರೊನಾದಿಂದ ಚೇತರಿಸಿಕೊಂಡವರಿಗೆ ‘ಬ್ಲಾಕ್ ಫಂಗಸ್ʼ ಸಮಸ್ಯೆ ಕಾಡ್ತಿದೆ. ದೇಶದಲ್ಲಿ ‘ಬ್ಲ್ಯಾಕ್ ಫಂಗಸ್ʼ ನ ಕೆಲ ಪ್ರಕರಣ ಬೆಳಕಿಗೆ ಬಂದಿದೆ. ಈ ‘ಬ್ಲಾಕ್ ಫಂಗಸ್ʼ ಲಕ್ಷಣವೇನು…? ಅದನ್ನು ಹೇಗೆ ಪತ್ತೆ ಹಚ್ಚಬೇಕು ಮತ್ತು ಅದನ್ನು ತಡೆಗಟ್ಟುವ ಮಾರ್ಗವೇನು ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ್ ವರ್ಧನ್ ಹೇಳಿದ್ದಾರೆ.
ಹರ್ಷ್ ವರ್ಧನ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮ್ಯೂಕೋರ್ಮೈಕೋಸಿಸ್, ಶಿಲೀಂದ್ರಗಳ ಸೋಂಕು. ಆರೋಗ್ಯ ಸಮಸ್ಯೆಗಳಿರುವವರ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಹರ್ಷ್ ವರ್ಧನ್ ಹೇಳಿದ್ದಾರೆ. ಆರಂಭದಲ್ಲಿಯೇ ಚಿಕಿತ್ಸೆ ನೀಡಿದಲ್ಲಿ ಚೇತರಿಕೆ ಸಾಧ್ಯವೆಂದು ಅವರು ಹೇಳಿದ್ದಾರೆ.
ರೋಗಿ ‘ಬ್ಲಾಕ್ ಫಂಗಸ್ʼ ಗೆ ಹೇಗೆ ಒಳಗಾಗುತ್ತಾನೆ ಎಂಬುದನ್ನು ಹರ್ಷ್ ವರ್ಧನ್ ಹೇಳಿದ್ದಾರೆ. ವೊರಿಕೊನಜೋಲ್ ಚಿಕಿತ್ಸೆಗೆ ಒಳಗಾದವರು, ಅನಿಯಂತ್ರಿತ ಡಯಾಬಿಟಿಸ್ ನಿಂದ ಬಳಲುತ್ತಿರುವವರು, ಸ್ಟಿರಾಯ್ಡ್ ಬಳಕೆ, ದೀರ್ಘಕಾಲ ಐಸಿಯುವಿನಲ್ಲಿರುವವರಿಗೆ ಇದು ಹೆಚ್ಚು ಅಪಾಯಕಾರಿ. ತಲೆನೋವು, ಕಣ್ಣು, ಮೂಗಿನ ಸುತ್ತಲೂ ನೋವು, ಕೆಂಪಾಗುವುದು, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ರಕ್ತ ವಾಂತಿ ಮತ್ತು ಬದಲಾದ ಮಾನಸಿಕ ಸ್ಥಿತಿ ಇವು ಇದ್ರ ರೋಗ ಲಕ್ಷಣವಾಗಿದೆ. ರೋಗ ಉಲ್ಬಣಿಸುವ ಮೊದಲು ಜನರು ವೈದ್ಯರನ್ನು ಭೇಟಿಯಾಗಬೇಕು.
ಬ್ಲಾಕ್ ಫಂಗಸ್ ಬರದಂತೆ ತಡೆಯಲು ಹೈಪರ್ಗ್ಲೈಕೆಮಿಯಾವನ್ನು ನಿಯಂತ್ರಿಸಬೇಕು. ಕೋವಿಡ್ -19ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಮತ್ತು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕು. ಸ್ಟಿರಾಯ್ಡ್ ಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಬೇಕು. ಆಕ್ಸಿಜನ್ ಥೆರಪಿ ವೇಳೆ ಶುದ್ಧ, ಕ್ರಿಮಿನಾಶಕ ನೀರನ್ನು ಬಳಸಬೇಕು. ಎಂಟಿಬಯೋಟಿಕ್ ಹಾಗೂ ಎಂಟಿ ಫಂಗಲ್ ಮಾತ್ರೆಗಳನ್ನು ಸರಿಯಾಗಿ ಬಳಸಬೇಕು.
ಮೂಗು ಸದಾ ಕಟ್ಟುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ರೋಗ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಆದಷ್ಟು ಬೇಗ ಚಿಕಿತ್ಸೆ ಶುರು ಮಾಡಿ ಎಂದು ಹರ್ಷ್ ವರ್ಧನ್ ತಿಳಿಸಿದ್ದಾರೆ.
ಮುಂದಿನ ಆರೋಗ್ಯ ಸುದ್ದಿ: ನಿಮ್ಮ ರೋಗ ನಿರೋಧಕ ಶಕ್ತಿಯನ್ನ ಹೀಗೆ ಹೆಚ್ಚಿಸಿಕೊಳ್ಳಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಪ್ರಮುಖ ಪಾತ್ರವಹಿಸುತ್ತದೆ. ಗಿಡ ಮೂಲಿಕೆಯ ಔಷಧಿಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ವ್ಯಕ್ತಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ.
ಬಿಸಿ ಬಿಸಿಯಾದ ನೀರು ಕುಡಿಯಿರಿ. ದಿನಾ 30 ನಿಮಿಷ ಯೋಗಾಸನ, ಪ್ರಾಣಯಾಮ, ಧ್ಯಾನ ಮಾಡಿ. ಆಹಾರದಲ್ಲಿ ಅರಿಶಿಣ, ಜೀರಿಗೆ, ಕೊತ್ತಂಬರಿ ಬೀಜ ಮತ್ತು ಬೆಳ್ಳುಳ್ಳಿ ಬಳಸಿ.
ಹರ್ಬಲ್ ಟೀ ಕುಡಿಯಿರಿ, ಕಷಾಯ ಮಾಡಿ ಕುಡಿಯಿರಿ.
ನಿಂಬೆ ಪಾನೀಯ ಮಾಡಿ ಕುಡಿಯಿರಿ. ಮೂಗಿಗೆ ಎಳ್ಳೆಣ್ಣೆ ಅಥವಾ ತುಪ್ಪವನ್ನು ಬೆಳಗ್ಗೆ ಹಾಗೂ ಸಂಜೆ ಸವರಿ. ಆಯಿಲ್ ಪುಲ್ಲಿಂಗ್ ಅಂದ್ರೆ 1 ಚಮಚ ಎಣ್ಣೆ ಹಾಕಿ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿಯಲ್ಲಿರುವ ಕೀಟಾಣುಗಳನ್ನು ಕೊ-ಲ್ಲ-ಬಹುದು. ಇದರಲ್ಲಿ ಒಂದು ಚಮಚ ಎಣ್ಣೆ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸಬೇಕು, ಆದ್ರೆ ನುಂಗಬಾರದು. 2-3 ನಿಮಿಷ ಬಾಯಿ ಮುಕ್ಕಳಿಸಿ. ನಂತರ ಬಾಯಿಗೆ ನೀರು ಹಾಕಿ, ಬಾಯಿ ಮುಕ್ಕಳಿಸಿ. ಈ ರೀತಿ ದಿನದಲ್ಲಿ ಒಂದು ಬಾರಿ ಮಾಡಿ.
ಕುದಿಯುವ ನೀರಿಗೆ ಪುದೀನಾ ಎಲೆ ಅಥವಾ ಅಜ್ವೈನ್ ಹಾಕಿ ಹಬೆ ತೆಗೆದುಕೊಳ್ಳಿ, ಈ ರೀತಿ ದಿನದಲ್ಲಿ ಒಮ್ಮೆ ಮಾಡಿ. ಒಣಕೆಮ್ಮು, ಗಂಟಲು ಕೆರೆತ ಇದ್ರೆ ಲವಂಗ ಪುಡಿಯನ್ನು ಒಂದು ಚಮಚ ಜೇನಿನಲ್ಲಿ ಮಿಶ್ರ ಮಾಡಿ ದಿನದಲ್ಲಿ ಒಮ್ಮೆ ತೆಗೆದುಕೊಳ್ಳಿ.
ಕಷಾಯ ಮಾಡುವುದು ಹೇಗೆ? ಒಂದು ಲೀಟರ್ ನೀರಿಗೆ ಜೀರಿಗೆ, ಚಕ್ಕೆ, ಲವಂಗ, ಒಣ ಶುಂಠಿ, ಒಣ ದ್ರಾಕ್ಷಿ, ಬೆಲ್ಲ ಹಾಕಿ ಅದು ಅರ್ಧ ಲೀಟರ್ ಆಗುವಷ್ಟು ಕುದಿಸಿ, ಅದಕ್ಕೆ ಸ್ವಲ್ಪ ನೀಂಬೆ ರಸ ಸೇರಿಸಿ ಮನೆಯವರು ಒಂದೊಂದು ಲೋಟ ಕುಡಿಯರಿ.