2-3 ವಾರಗಳಿಂದ ಒಂದೇ ಮಾಸ್ಕನ್ನ ಬಳಸುತ್ತಿದ್ದೀರ? ಎಚ್ಚರ ಇದರಿಂದ ನಿಮಗೂ ತಗುಲಬಹುದು ಬ್ಲ್ಯಾಕ್ ಫಂಗಸ್: AIIMS ವೈದ್ಯರ ಈ ಎಚ್ಚರಿಕೆಯನ್ನೊಮ್ಮೆ ಓದಿ

in Helath-Arogya/Kannada News 1,229 views

ಹಿಂದೆಂದೂ ಪ್ಯಾಂಡಮಿಕ್​ನೊಂದಿಗೆ ಫಂಗಸ್​ ಸಮಸ್ಯೆ ಬೆಸೆದುಕೊಂಡಿರಲಿಲ್ಲ. ಇದಕ್ಕೆ ಸತತವಾಗಿ ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸುತ್ತಿರುವುದು ಕಾರಣವಿರಬಹುದು ಎಂದು ಏಮ್ಸ್​​ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ನವದೆಹಲಿ: ಕೊರೋನಾ 2ನೇ ಅಲೆ ಸೃಷ್ಟಿಸುವ ಕರಾಳತೆಯ ಮಧ್ಯೆಯೇ ಭಾರತೀಯರನ್ನು ಬ್ಲ್ಯಾಕ್​​ ಫಂಗಸ್​ (mucormycosis) ಕಾಡುತ್ತಿದೆ. ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಪ್ಪು ಶಿಲೀಂದ್ರಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ. ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯರು ನೀಡಿರುವ ಹೇಳಿಕೆ ಪ್ರಕಾರ ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್​​ ಫಂಗಸ್​​ ಬರುತ್ತದೆಯಂತೆ. ಸತತವಾಗಿ ಒಂದೇ ಮಾಸ್ಕನ್ನು ಧರಿಸುವುದರಿಂದ ಫಂಗಸ್​​ ಬೆಳೆಯುತ್ತಿದೆ ಎಂದು ಡಾ. ಸರಾಟ್​​​ ಚಂದ್ರ ತಿಳಿಸಿದ್ದಾರೆ.

ಬ್ಲ್ಯಾಕ್​​ ಫಂಗಸ್​ ಹೊಸ ಕಾಯಿಲೆ ಅಲ್ಲ. ಆದರೆ ಕೊರೋನಾ ಸಾಂಕ್ರಾಮಿಕವಾಗಿರುವ ಸಂದರ್ಭದಲ್ಲಿ ಫಂಗಸ್​​​ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಪರೂಪ. ಇದಕ್ಕೆ ಅಸ್ವಚ್ಛವಾದ ಮಾಸ್ಕ್​​ ಕಾರಣವಿರಬೇಕು ಎಂದು ವೈದ್ಯರು ವಿಶ್ಲೇಷಿಸಿದ್ದಾರೆ. ಸತತವಾಗಿ ಒಂದೇ ಮಾಸ್ಕ್​​ ಧರಿಸುವುದರಿಂದ ಫಂಗಸ್​​ ಸುಲಭವಾಗಿ ಬೆಳೆಯುತ್ತಿದೆ. ಹೀಗಾಗಿಯೇ ಸೋಂಕಿತರಲ್ಲಿ ಬ್ಲ್ಯಾಕ್​ ಫಂಗಸ್​ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅನಿಯಂತ್ರಿತ ಮಧುಮೇಹ, ಅತಿಯಾದ ಸ್ಟಿರಾಯಿಡ್​​ ಬಳಕೆ, ಮೆಡಿಕಲ್​ ಆಕ್ಸಿಜನ್​​ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್​​ ಫಂಗಸ್​ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಏಮ್ಸ್​​ ವೈದ್ಯರು ತಿಳಿಸಿದರು.

ಇನ್ನು ಆಕ್ಸಿಜನ್​ ಸಿಲಿಂಡರ್​ನಿಂದ ಕೋಲ್ಡ್​​ ಆಕ್ಸಿಜನನ್ನು ನೇರವಾಗಿ ನೀಡುವುದು ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಹಿಂದೆಂದೂ ಪ್ಯಾಂಡಮಿಕ್​ನೊಂದಿಗೆ ಫಂಗಸ್​ ಸಮಸ್ಯೆ ಬೆಸೆದುಕೊಂಡಿರಲಿಲ್ಲ. ಆದರೆ ಈಗ ಕೊರೋನಾ 2ನೇ ಅಲೆಯ ಸಮಯದಲ್ಲಿ ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿದೆ. ಇದಕ್ಕೆ ಸತತವಾಗಿ ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸುತ್ತಿರುವುದು ಕಾರಣವಿರಬಹುದು ಎಂದು ಏಮ್ಸ್​​ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಯಾರಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳಬಹುದು?

ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು, ಅತಿ ಹೆಚ್ಚು ಸ್ಟಿರಾಯಿಡ್ಸ್​ ಬಳಸುವವರರು, ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿರುವವರು, ದೀರ್ಘ ಕಾಲದ ಆರೋಗ್ಯ ಸಮಸ್ಯೆ ಇರುವವರು, ಅತಿಯಾದ ಶೀತ, ಥಂಡಿ ಸಮಸ್ಯೆ ಎದುರಿಸುತ್ತಿರುವವರು, ಉಸಿರಾಟದ ಸಮಸ್ಯೆಯಿಂದ ಮೆಡಿಕಲ್​ ಆಕ್ಸಿಜನ್​ ಸಹಾಯ ಪಡೆದವರು, ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಪಡೆದವರು.

ಮೇಲಿನ ಲಕ್ಷಣಗಳಿರುವವರಿಗೆ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇವರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಬ್ಲ್ಯಾಕ್​ ಫಂಗಸ್​ ಬಂದಿದೆಯಾ ಎಂದು ಪರೀಕ್ಷಿಸುವುದು ಹೇಗೆ?

ಮೂಗಿನಲ್ಲಿ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು, ಮೂಗಿನಲ್ಲಿ ಕಿರಿಕಿರಿ, ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು, ದೃಷ್ಟಿ ಮಂಜಾಗುವುದು, ರೆಪ್ಪೆ ತೆರೆಯಲು/ಮುಚ್ಚಲು ಕಷ್ಟವಾಗುವುದು, ಕಣ್ಣು ಕಾಣದಿರುವುದು, ಮುಖ ಮರಗಟ್ಟುವಿಕೆ, ಜುಮ್​​ ಎನಿಸುವ ಅನುಭವ, ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು, ಮುಖದಲ್ಲಿ ಊತ, ಮುಖ ಕಪ್ಪುಗಟ್ಟುವಿಕೆ , ಮುಖದಲ್ಲಿ ನೋವು, ಹಲ್ಲು ಉದುರುವುದು, ಬಾಯಿಯಲ್ಲಿ ಕಪ್ಪು ಬಣ್ಣ, ಊತ ಕಾಣಿಸಿಕೊಳ್ಳುವುದು.

ಮೇಲಿನ ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ಹೈ ಶುಗರ್​ ಇರುವವರು, ಅನಾರೋಗ್ಯ ಪೀಡಿತರು ಈ ಲಕ್ಷಣಗಳ ಬಗ್ಗೆ ಗಮನ ಹರಿಸಬೇಕು. ಸ್ವಯಂ ನಿಗಾ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ಮುಂದೆ ದೊಡ್ಡ ಅಪಾಯ ತಂದೊಡ್ಡಬಹುದು.

ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಾಗ ಏನು ಮಾಡಬೇಕು?

ಬ್ಲ್ಯಾಕ್​ ಫಂಗಸ್​​ ಲಕ್ಷಣಗಳು ಕಂಡು ಬಂದೊಡನೆ ENT ವೈದ್ಯರನ್ನು ಸಂಪರ್ಕಿಸಿ

ENT ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಪಡೆಯಬೇಕು

ರಕ್ತದಲ್ಲಿ ಮಧುಮೇಹ ಪ್ರಮಾಣವನ್ನು ಸದಾ ಪರೀಕ್ಷಿಸುತ್ತಿರಬೇಕು, ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಬೇಕು

ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಚಿಕಿತ್ಸೆ ಪಡೆಯಬೇಕು, ನಿರ್ಲಕ್ಷ್ಯ ಮಾಡಬಾರದು

ವೈದ್ಯರನ್ನು ಕೇಳದೆ ಸ್ಟಿರಾಯಿಡ್​​, ಆ್ಯಂಟಿ ವೈರಲ್​ ಔಷಧಗಳನ್ನು ತೆಗೆದುಕೊಳ್ಳಬಾರದು

ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್​, ಎಂಆರ್​ಐ ಮಾಡಿಸಬೇಕು.

ಅನಗತ್ಯವಾಗಿ ವೈದ್ಯರನ್ನು ಕೇಳದೆ ಔಷಧಗಳನ್ನು ತೆಗೆದುಕೊಳ್ಳುವುದು ಪ್ರಾಣಕ್ಕೆ ಕುತ್ತು ತರಬಹುದು. ಅತಿಯಾದ ಹೆದರಿಕೆಯಿಂದ ಅಗತ್ಯವಿಲ್ಲದಿದ್ದರೂ ಸಿಟಿ ಸ್ಕ್ಯಾನ್​, ಎಂಆರ್​ಐ ಮಾಡಿಸಬಾರದು. ಭಯಕ್ಕಿಂತ ಹೆಚ್ಚಾಗಿ ಎಚ್ಚರಿಕೆಯಿಂದ ಇದ್ದರೆ ಬ್ಲ್ಯಾಕ್​ ಫಂಗಸ್​ನಿಂದ ಬಚಾವ್​ ಆಗಬಹುದು.

Advertisement
Share this on...