ಗಾಜಿಪುರ: ನವಜಾತ ಶಿಶುವನ್ನು ಪೆಟ್ಟಿಗೆಯಲ್ಲಿಟ್ಟು ಗಂಗಾನದಿಯಲ್ಲಿ ತೇಲಿ ಬಿಟ್ಟಿರುವ ಘಟನೆ ದಾದ್ರಿಘಾಟ್ ಬಳಿ ನಡೆದಿದೆ.
ಪೆಟ್ಟಿಗೆಯಲ್ಲಿ ಕಂಡುಬಂದ ಜನನ ಪ್ರಮಾಣಪತ್ರದ ಪ್ರಕಾರ ಮಗುವಿನ ಹೆಸರು ಗಂಗಾ. ಗಾಳಿ ಜೋರಾಗಿ ಬೀಸಿದ್ದರಿಂದ ಮರದ ಪೆಟ್ಟಿಗೆಯು ದಡಕ್ಕೆ ಬಂದಿತ್ತು. ಅದರಲ್ಲಿ ಮಗು ಅಳುವ ಶಬ್ದ ಕೇಳಿ ಬಂದಿದ್ದು, ಸ್ಥಳೀಯರು ಆ ಬಾಕ್ಸ್ ಅನ್ನು ತೆರೆದು ನೋಡಿದಾಗ ಅದರಲ್ಲಿ ಮಗು ಇರುವುದು ಪತ್ತೆಯಾಗಿದೆ.
ಗಂಗೆಯಲ್ಲಿ ತೇಲಿಬಂದ ಈ ಮಗು ನಿಜಕ್ಕೂ ದೇವತೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 21 ದಿನದ ಮಗುವಿದ್ದ ಆ ಪೆಟ್ಟಿಗೆಯಲ್ಲಿ ದುರ್ಗಾದೇವಿ ಮತ್ತು ವಿಷ್ಣುವಿನ ಫೋಟೋಗಳಿದ್ದವು. ಇದರೊಂದಿಗೆ ಮಗುವಿನ ಜಾತಕ ಕೂಡ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗುಲ್ಲು ಎಂಬ ವ್ಯಕ್ತಿ ಮಗುವನ್ನು ಮನೆಗೆ ಕರೆದೊಯ್ದು ಸ್ನಾನ ಮಾಡಿಸಿ ಹಾಲು ಕೊಟ್ಟಿದ್ದಾರೆ. ಸದ್ಯ ಬಾಲಕಿ ಪೊಲೀಸ್ ರಕ್ಷಣೆಯಲ್ಲಿದ್ದಾಳೆ. ಸೋಮವಾರ ಸಂಜೆ, ಯುವಕ ಮತ್ತು ಯುವತಿಯರಿಬ್ಬರು ಮಲ್ಲಾ ಬಳಿಯ ದಾದ್ರಿ ಘಾಟ್ಗೆ ಬಂದು ಮಗು ನೀಡುವಂತೆ ಕೇಳಿದಾಗ ಗುಲ್ಲು ನಿರಾಕರಿಸಿದ್ದಾರೆ. ಅಲ್ಲದೆ, ಆ ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ನಾವೇ ಹೊರುತ್ತೇವೆ ಎಂದು ಅವರು ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಂದು ಮಹಾಭಾರತದಲ್ಲಿ ಇದೇ ಗಂಗಾನದಿಯಲ್ಲಿ ತೇಲಿ ಬಂದಿದ್ದ ಕರ್ಣ
ತುಂಬಿ ಹರಿಯುತ್ತಿರುವ ಗಂಗಾನದಿ. ದಡದಲ್ಲಿ ಒಬ್ಬ ವಯಸ್ಸಾದ ಮನುಷ್ಯ. ಆಗತಾನೆ ಹುಟ್ಟುತ್ತಿರುವ ಸೂರ್ಯನಿಗೆ ಕೈ ಜೋಡಿಸಿ ನಮಸ್ಕಾರ ಮಾಡಿದ. ಎಂದಿನಂತೆ ಪ್ರಾರ್ಥನೆ ಮಾಡಿದ:
“ಭಗವಾನ್ ಸೂರ್ಯನಾರಾಯಣ, ಜಗತ್ತಿಗೆಲ್ಲ ಬೆಳಕು ಕೊಡುವವನೆ! ಮಕ್ಕಳಿಲ್ಲದೆ ನನ್ನ ಜನ್ಮ ದುಃಖದಿಂದ ತುಂಬಿದ. ನನ್ನ ಮೇಲೆ ಕೃಪೆ ಮಾಡು. ನನಗೆ ಮಕ್ಕಳನ್ನು ಅನುಗ್ರಹಿಸು. ನನ್ನ ಬಾಳಿನಲ್ಲಿ ಬೆಳಕು ಹರಿಸು.”
ತೇಲಿಬಂದ ಭಾಗ್ಯ
ಪ್ರಾರ್ಥನೆ ಮುಗಿಯುತ್ತಿದ್ದಂತೆ ಅಧಿರಥನ ಕಣ್ಣಲ್ಲಿ ನೀರು ತುಂಬಿತು ಇದೇನು ಮೊದಲ ಸಲವಲ್ಲ. ದಿನವೂ ಅವನು ಹೀಗೆ ಪ್ರಾರ್ಥಿಸುತ್ತಿದ್ದ. ಅವನಿಗೆ ಆಗಲೇ ಮಯಸ್ಸಾಗುತ್ತ ಬಂದಿತ್ತು. ತನ್ನ ಮೊರೆ ದೇವರಿಗೆ ಕೇಳಲೇ ಇಲ್ಲವೇನೋ ಎಂದುಕೊಂಡ.
ಅಧಿರಥ ಇನ್ನೇನು ಹೊರಡಬೇಕು, ನದಿಯಲ್ಲಿ ಏನೋ ತೇಲಿ ಬರುತ್ತಿರುವುದು ಕಂಡಿತು. ಅಧಿರಥ ಅಲ್ಲೇ ನಿಂತ. ಅವನು ಇದ್ದ ದಿಕ್ಕಿಗೇ ಅದು ತೇಲಿ ಬರುತ್ತಿತ್ತು. ಹತ್ತಿರ ಬಂದಾಗ ಅಧಿರಥ ನೋಡುತ್ತಾನೆ, ಅದೊಂದು ದೊಡ್ಡ ಬುಟ್ಟಿ. ಅದರೊಳಗೆ ಮೆತ್ತನೆ ಬಟ್ಟೆಯ ಮೇಲೆ ಒಂದು ಮಗು. ಅದರ ಮೈಯಲ್ಲಿ ನಿಗಿನಿಗಿ ಹೊಳೆಯುವ ಕವಚ; ಕಿವಿಯಲ್ಲಿ ಕುಂಡಲ. ಮಗುವಂತೂ ತುಂಬ ಸುಂದರವಾಗಿದೆ; ಮರಿಸೂರ್ಯನೋ ಎನ್ನುವಂತೆ ಶೋಭಿಸುತ್ತಿದೆ.
ಅಧಿರಥನಲ್ಲಿ ಆಶ್ಚರ್ಯ, ಕನಿಕರ, ಸಂತೋಷ ಎಲ್ಲ ಒಟ್ಟೆಗೇ ಉಕ್ಕಿಬಂತು. ಕೂಡಲೇ ಆ ಮಗುವನ್ನು ಬುಟ್ಟಿಯಿಂದ ಎತ್ತಿಕೊಂಡ. ಅವನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು. ಎಂಥ ವಿಚಿತ್ರ! ತಾನು ಕೇಳುತ್ತಿದ್ದುದಕ್ಕೆ ಸರಿಯಾಗಿ ಅದೇ ಜಾಗದಲ್ಲಿಯೇ ತನಗೆ ಒಂದು ಮಗು ಸಿಗಬೇಕೆ? ಹಾಗಾದರೆ ದೇವರಿಗೆ ತನ್ನ ಕೂಗು ಕೇಳಿಸಿತೆ? ಯಾರ ಮಗುವೋ ಪಾಪ! ಯಾರದಾದರೆ ಏನು? ಇದು ಮಾತ್ರ ತನ್ನದೇ.
ಅಧಿರಥ ಆನಂದದಿಂದ ಮಗುವನ್ನು ಎತ್ತಿಕೊಂಡು ಮನೆಕಡೆ ಹೊರಟ. ಅಧಿರಥನ ಹೆಂಡತಿಯ ಹೆಸರು ರಾಧೆ. ಗಂಡನಂತೆ ಅವಳೂ ಮಕ್ಕಳಿಗಾಗಿ ಹಂಬಲಿಸುತ್ತಿದ್ದಳು. ಮಗುವನ್ನು ಕಂಡು ಅವಳಿಗೆ ಹಿಡಿಸಲಾಗದಷ್ಟು ಸಂತೋಷವಾಯಿತು. ಇಬ್ಬರೂ ಮಗುವನ್ನೂ ಪ್ರೀತಿಯಿಂದ ಸಾಕಿದರು. ಜಾತಕರ್ಮಗಳನ್ನು ಮಾಡಿಸಿದರು, ವಸುಷೇಣ ಎಂದು ಹೆಸರಿಟ್ಟರು. ಆದರೆ ಆ ಮಗುವಿಗೆ ಕರ್ಣ ಎಂಬ ಹೆಸರು ನಿಂತುಹೋಯಿತು.