ಇದು ಬಯೋಪಿಕ್‌ಗಳ ಕಾಲ. ಬಾಲಿವುಡ್‌ನಿಂದ ಆರಂಭವಾಗಿ ಹಲವು ಚಿತ್ರರಂಗಗಳಲ್ಲಿ ಸಾಧಕರ ಅಥವಾ ವಿವಾದಾತ್ಮಕ ವ್ಯಕ್ತಿಗಳ ಜೀವನ ಆಧರಿಸಿದ ಕತೆಯುಳ್ಳ ಸಿನಿಮಾಗಳನ್ನು ಮಾಡಲಾಗುತ್ತಿದೆ.
ಬಾಲಿವುಡ್‌ನಲ್ಲಿಯಂತೂ ಬಯೋಪಿಕ್ ಸಿನಿಮಾಗಳನ್ನು ಪೈಪೋಟಿಯ ಮೇಲೆ ತೆರೆಗೆ ತರಲಾಗುತ್ತಿದೆ. ಅದರಲ್ಲಿಯೂ ಕ್ರೀಡಾಪಟುಗಳ ಜೀವನ ಆಧರಿಸಿದ ಸಿನಿಮಾಗಳು ಬಾಲಿವುಡ್ಡಿಗರ ಫೇವರೇಟ್.
ಮಿಲ್ಕಾ ಸಿಂಗ್ ಜೀವನ ಆಧರಿಸಿದ ‘ಭಾಗ್ ಮಿಲ್ಕಾ ಭಾಗ್’ ಸಿನಿಮಾ ಸೂಪರ್ ಹಿಟ್ ಆಗಿದ್ದೇ ತಡ ಹಲವರು ಕ್ರೀಡಾಪಟುಗಳ ಜೀವನದ ಮೇಲೆ ಸಿನಿಮಾ ತೆರೆಗೆ ಬರಲು ಆರಂಭವಾಯಿತು. ಬಾಕ್ಸರ್ ಮೇರಿಕೋಮ್, ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಕ್ರಿಕೆಟಿಗ ಅಜರುದ್ಧೀನ್, ಹಾಕಿ ಆಟಗಾರ ಸಂದೀಪ್ ಸಿಂಗ್ ಹೀಗೆ ಹಲವು ಆಟಗಾರರ ಜೀವನ ಆಧರಿಸಿದ ಸಿನಿಮಾಗಳು ತೆರೆಗೆ ಬಂದಿವೆ. ಈಗಲೂ ಬರುತ್ತಿವೆ. ಇದೀಗ ಭಾರತ ಕ್ರಿಕೆಟ್‌ನ ಹೆಮ್ಮೆಯ ಆಟಗಾರ ರಾಹುಲ್ ದ್ರಾವಿಡ್ ಜೀವನ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
ಒಪ್ಪಿಗೆ ಸೂಚಿಸಿದ್ದಾರೆ ದ್ರಾವಿಡ್?
ಕ್ರಿಕೆಟಗನಾಗಿ ಮಿಂಚಿ ಈಗ ಕೋಚ್ ಆಗಿ ಅತ್ಯುತ್ತಮ ಕ್ರಿಕೆಟ್ ಆಟಗಾರರನ್ನು ತಯಾರು ಮಾಡುತ್ತಿರುವ ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗುತ್ತಿದ್ದು, ದ್ರಾವಿಡ್‌ಗೆ ಕತೆಯನ್ನು ಹೇಳಲಾಗಿದ್ದು, ತಮ್ಮ ಜೀವನ ಕತೆಯನ್ನು ಸಿನಿಮಾ ಮಾಡಲು ದ್ರಾವಿಡ್ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಚಿತ್ರಕತೆ ರಚಿಸಿರುವ ತೆಲುಗು ನಿರ್ದೇಶಕ
ತೆಲುಗಿನ ನಿರ್ಮಾಣ ಸಂಸ್ಥೆಯೊಂದು ಸಿನಿಮಾಕ್ಕೆ ಬಂಡವಾಳ ಹೂಡಲು ಮುಂದೆ ಬಂದಿದ್ದು, ತೆಲುಗಿನ ಪ್ರತಿಭಾವಂತ ನಿರ್ದೇಶಕ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸಿನಿಮಾವು ಹಿಂದಿ, ತೆಲುಗು ಸೇರಿ ಇತರ ಭಾಷೆಗಳಲ್ಲಿಯೂ ನಿರ್ಮಾಣಗೊಳ್ಳಲಿದೆ ಹಾಗೂ ಬಿಡುಗಡೆಗೊಳ್ಳಲಿದೆ.
ದ್ರಾವಿಡ್ ಪಾತ್ರದಲ್ಲಿ ನಟ ಸಿದ್ಧಾರ್ಥ್
ಸಿನಿಮಾದಲ್ಲಿ ರಾಹುಲ್ ದ್ರಾವಿಡ್ ಪಾತ್ರವನ್ನು ನಟ ಸಿದ್ಧಾರ್ಥ್ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಸಿದ್ಧಾರ್ಥ್ ಕತೆಯನ್ನು ಈಗಾಗಲೇ ಒಪ್ಪಿದ್ದು, ಸಿನಿಮಾಕ್ಕಾಗಿ ಸೂಕ್ತ ತಯಾರಿ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ದ್ರಾವಿಡ್ ಜೀವನ ಸಿನಿಮಾ ಆಗುವುದು ಒಳ್ಳೆಯದೇ
ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗುವುದು ಉತ್ತಮ ಬೆಳವಣಿಗೆ ಎನಿಸುತ್ತದೆ. ದ್ರಾವಿಡ್ ಅವರ ಶ್ರಮ, ತಾಳ್ಮೆ, ದೇಶಪ್ರೇಮ, ಕ್ರಿಕೆಟ್ ಪ್ರೇಮ, ತಂತ್ರ, ಹಲವು ಇನ್ನಿಂಗ್ಸ್‌ಗಳು, ಆಟಕ್ಕೆ ತಯಾರಾಗುತ್ತಿದ್ದ ರೀತಿ ಇವುಗಳೆಲ್ಲವೂ ಯುವಕರಿಗೆ ತಿಳಿಸಿದಂತಾಗುತ್ತದೆ. ದ್ರಾವಿಡ್‌ಗೆ ಭಾರತ ತಂಡದ ನಾಯಕ ಸ್ಥಾನ ಸಿಕ್ಕಿದ್ದು ಮತ್ತು ತಪ್ಪಿ ಹೋಗಿದ್ದು ಹೀಗೆ ಹಲವು ವಿಷಯಗಳು ಸಹ ಹೊರಬಂದಂತಾಗುತ್ತದೆ.