ಪೋಷಕರೇ ಇದನ್ನೊಮ್ಮೆ ತಿಳಿದುಕೊಳ್ಳಿ: ಕೊರೋನಾ ವೈರಸ್‌ನ ಮೂರನೆ ಅಲೆ ಮಕ್ಕಳ ಮೇಲೆ ಇಲ್ಲ ಆದರೆ….

in Helath-Arogya/Kannada News/News 333 views

ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು 18 ವರ್ಷದೊಳಗಿನ ಮಕ್ಕಳಿಗೆ ಹೆಚ್ಚು ಅಪಾಯಕಾರಿಯೇ ಎಂಬ ಬಗ್ಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸಮೀಕ್ಷೆ ನಡೆಸಿದೆ.

Advertisement

ದೇಶದ ವಿವಿಧ ಭಾಗಗಳಲ್ಲಿ ಇರುವ ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ವಯಸ್ಕರಲ್ಲಿ ಗೋಚರಿಸಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಬಗ್ಗೆ ಏಮ್ಸ್ ನೇತೃತ್ವದ ಬಹು ಕೇಂದ್ರಿತ ಸಮುದಾಯ ಆಧಾರಿತ ಸಿರೊಸರ್ವೆ ನಡೆಸಿದೆ. ಮಕ್ಕಳಿಗೆ ಕೊವಿಡ್-19 ಸೋಂಕಿನ ಮೂರನೇ ಅಲೆಯಿಂದ ನಿರೀಕ್ಷಿತ ಮಟ್ಟದಲ್ಲಿ ಅಪಾಯ ಎದುರಾಗುವುದಿಲ್ಲ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನವದೆಹಲಿ, ಭುವನೇಶ್ವರ್ ಹಾಗೂ ಗೋರಖ್ ಪುರ್ ಏಮ್ಸ್ ಆಸ್ಪತ್ರೆಯ ಸಂಶೋಧಕರು ಸೇರಿದಂತೆ ಪುದುಚೇರಿಯ ಜೆಐಪಿಎಂಇಆರ್, ಫರಿದಾಬಾದ್ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಅಗರ್ತಲಾದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧಕರು ಕೊವಿಡ್-19 ಮೂರನೇ ಅಲೆಯು ಮಕ್ಕಳ ಮೇಲೆ ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ ಎಂಬ ವಾದವನ್ನು ತಳ್ಳಿ ಹಾಕಿದ್ದಾರೆ.

ಏಮ್ಸ್ ಸಮೀಕ್ಷೆಗಾಗಿ 4509 ಮಾದರಿ ಪರೀಕ್ಷೆ

ಕೊರೊನಾವೈರಸ್ ಮೂರನೇ ಅಲೆಗೆ ಸಂಬಂಧಿಸಿದಂತೆ ನಡೆಸಿದ ಅಧ್ಯಯನಕ್ಕಾಗಿ, 4,509 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಸಿಲಾಯಿತು. 2 ರಿಂದ 17 ವರ್ಷದೊಳಗಿನ 700 ಹಾಗೂ 18 ವರ್ಷ ಮೇಲ್ಪಟ್ಟ 3809 ಜನರ ರಕ್ತದ ಮಾದರಿಯನ್ನು ವೈದ್ಯಕೀಯ ತಪಾಸಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಕಳೆದ ಮಾರ್ಚ್ 15 ರಿಂದ ಜೂನ್ 10ರವರೆಗೆ ಕೊವಿಡ್-19 ಸೋಂಕು ಕಾಣಿಸಿಕೊಂಡವರ ರಕ್ತದ ಮಾದರಿಯನ್ನು ಅಧ್ಯಯನದಲ್ಲಿ ಬಳಸಿಕೊಂಡಿದ್ದು, ಯಾವ ವಯಸ್ಸಿನವರಲ್ಲಿ ಅತಿಹೆಚ್ಚು ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ ಎಂಬುದನ್ನು ಸಂಶೋಧಿಸಲಾಗಿದೆ.

ಕೊರೊನಾ ಅಂಟಿಕೊಂಡವರಲ್ಲಿ ಪ್ರತಿಕಾಯ ಶಕ್ತಿ

ನವದೆಹಲಿ, ಫರಿದಾಬಾದ್, ಭುವನೇಶ್ವರ್, ಅಗರ್ತಲಾ ಹಾಗೂ ಗೋರಖ್ ಪುರ್ ಏಮ್ಸ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ ರಕ್ತದ ಮಾದರಿಯ ಫಲಿತಾಂಶ ಸ್ಪಷ್ಟವಾಗಿದೆ. 18 ವರ್ಷಕ್ಕಿಂತ ಒಳಗಿನ ಮಕ್ಕಳು ಹಾಗೂ ಹದಿಹರಿಯ ವಯಸ್ಸಿನವರಲ್ಲಿ ಶೇ.55.70ರಷ್ಟು ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.63.5ರಷ್ಟು ಪ್ರತಿಕಾಯ ಶಕ್ತಿ ಹೆಚ್ಚಾಗಿದೆ. ‘ಆದ್ದರಿಂದ, ಈಗಿನ COVID-19 ರೂಪಾಂತರ ತಳಿಯೇ ಆಗಲಿ ಅಥವಾ ಭವಿಷ್ಯದ ಮೂರನೇ ಅಲೆಯೇ ಆಗಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಅನುಗುಣವಾಗಿ ಪರಿಣಾಮ ಬೀರುತ್ತದೆ ಎಂಬುದು ಅಸಂಭವವಾಗಿದೆ,’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾವೈರಸ್ ಮೂರನೇ ಅಲೆಯ ಬಗ್ಗೆ ತಪ್ಪು ಪರಿಕಲ್ಪನೆ

‘ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳ ಮೇಲೆ ಅತಿಹೆಚ್ಚಾಗಿ ಪರಿಣಾಮ ಬೀರಲಿದೆ. ಈ ಅವಧಿಯಲ್ಲಿ ಮಕ್ಕಳು ಅತಿಹೆಚ್ಚು ಅಪಾಯಕ್ಕೆ ಸಿಲುಕಲಿದ್ದಾರೆ ಎಂಬ ಸುದ್ದಿಗಳು ಆಧಾರ ರಹಿತವಾಗಿವೆ. ಈ ಸುದ್ದಿಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ’ ಎಂದು ಏಮ್ಸ್ ಸ್ಪಷ್ಟಪಡಿಸಿದೆ.

ಗ್ರಾಮೀಣ-ನಗರ ಪ್ರದೇಶಗಳಲ್ಲಿ ಕೊವಿಡ್ ಪಾಸಿಟಿವಿಟಿ

ಕಳೆದ ಮಾರ್ಚ್ ತಿಂಗಳಿನಿಂದ ಜೂನ್ 10ರವರೆಗೆ ಕೊರೊನಾವೈರಸ್ ಸೋಂಕು ತಗುಲಿದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಂಕಿ-ಸಂಖ್ಯೆಯನ್ನು ಅವಲೋಕಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗಿಂತ ವಯಸ್ಕರಲ್ಲಿ ಕೊವಿಡ್-19 ಸೋಂಕಿನ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ಇದು ವ್ಯತಿರಿಕ್ತವಾಗಿದ್ದು, ವಯಸ್ಕರಿಗಿಂತ ಮಕ್ಕಳಲ್ಲಿ ಸೋಂಕಿನ ಪಾಸಿಟಿವಿಟಿ ದರ ಸ್ವಲ್ಪ ಮಟ್ಟಿಗೆ ಹೆಚ್ಚಾಗಿರುವುದು ಕಂಡು ಬಂದಿದೆ. ಪುರುಷರಿಗೆ ಹೋಲಿಸಿದರೆ ಮಕ್ಕಳಲ್ಲಿ ಹರಡುವಿಕೆ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಆದರೆ ಗಂಡು ಮತ್ತು ಹೆಣ್ಣು ನಡುವಿನ ಸಿರೊ-ಸಕಾರಾತ್ಮಕತೆಯಲ್ಲಿ ಅಷ್ಟಾಗಿ ವ್ಯತ್ಯಾಸ ಕಂಡು ಬಂದಿಲ್ಲ. ಪುರುಷರಲ್ಲಿ ಶೇ.58.6 ಮತ್ತು ಮಹಿಳೆಯರಲ್ಲಿ ಶೇ.53.0 ಪಾಸಿಟಿವಿಟಿ ದರ ಪತ್ತೆಯಾಗಿದೆ.

ಮಕ್ಕಳಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಎಷ್ಟಿದೆ?

ದೇಶದಲ್ಲಿ 2 ರಿಂದ 4 ವರ್ಷದ ಮಕ್ಕಳಲ್ಲಿ ಶೇ.42.40ರಷ್ಟು ಹಾಗೂ 5 ರಿಂದ 9 ವರ್ಷದ ಮಕ್ಕಳಲ್ಲಿ ಶೇ.43.8ರಷ್ಟು ಸೆರೋ-ಪಾಸಿಟಿವಿಟಿ ದರ ಇರುವುದು ಸಂಶೋಧನೆಯಲ್ಲಿ ಸ್ಪಷ್ಟವಾಗಿದೆ. ಆದರೆ 10 ರಿಂದ 17 ವರ್ಷದ ಮಕ್ಕಳಲ್ಲಿ ಅತಿಹೆಚ್ಚು ಸೆರೋ-ಪಾಸಿಟಿವಿಟಿ ದರ ಪತ್ತೆಯಾಗಿದ್ದು, ಶೇ.60.0ರಷ್ಟಿದೆ ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. 10 ರಿಂದ 17 ವರ್ಷದ ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಸೆರೋ-ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದ್ದು, ಈ ಪೈಕಿ ಶೇ.50.90ರಷ್ಟು ಕೊರೊನಾವೈರಸ್ ಸೋಂಕಿತ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳಿರುವುದಿಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ದೇಶದಲ್ಲಿ ಕೊವಿಡ್-19 ಅಂಕಿ-ಸಂಖ್ಯೆಗಳು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 67,208 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,03,570 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2,330 ಮಂದಿ ಪ್ರಾಣ ಬಿಟ್ಟಿದ್ದಾರೆ.

ದೇಶದಲ್ಲಿ ಒಟ್ಟು 2,97,00,313 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,84,91,670 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,81,903 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 8,26,740 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Advertisement
Share this on...