ಢಾಕಾ ಪ್ರೀಮಿಯರ್ ಲೀಗ್ನಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ಅಂಪೈರ್ ವಿರುದ್ಧ ಅನುಚಿತವಾಗಿ ವರ್ತಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್ಬಿಡ್ಲ್ಯೂ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರಿಂದ ಕೋಪಗೊಂಡ ಶಕೀಬ್ ಅಲ್ ಹಸನ್ ಮೊದಲಿಗೆ ಸ್ಟಂಪ್ಗೆ ಒದ್ದು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಮಳೆ ಕಾರಣ ಪಂದ್ಯವನ್ನು ಸ್ಥಗಿತಗೊಳಸಿಲು ಅಂಪೈರ್ ಗಳು ಕರೆ ನೀಡಿದ್ದರು. ಆಗ ಶಕೀಬ್ ಮತ್ತೊಮ್ಮೆ ಆಕ್ರೋಶಗೊಂಡು ಮೂರು ಸ್ಟಂಪ್ಗಳನ್ನು ಕಿತ್ತುಹಾಕಿ ಗೂಂಡಗಿರಿ ತೋರಿಸಿದ್ದರು. ಈ ದುರ್ವತನೆಗೆ ಶಿಕ್ಷೆಯಾಗಿ ಢಾಕಾ ಪ್ರೀಮಿಯರ್ ಲೀಗ್ನಲ್ಲಿ ಶಕೀಬ್ ಅನ್ನು ಮೂರು ಪಂದ್ಯಗಳಿಗೆ ನಿಷೇಧಿಸಲಾಗಿತ್ತು.
ಆದರೆ ಆ ಘಟನೆಯ ಬಳಿಕ ಅಂಪೈರ್ ಒಬ್ಬರು ತಮ್ಮ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಾಂಗ್ಲಾ ಅಂಪೈರ್ ಮೊನೀರುಜ್ಜಾಮಾನ್, ಅಂದಿನ ಪಂದ್ಯದಲ್ಲಿ ನಾನು ಅಂಪೈರ್ ಆಗಿರಲಿಲ್ಲ. ಆದರೆ ಆ ಘಟನೆ ನೋಡಿ ಮನಸ್ಸಿಗೆ ತುಂಬಾ ಆಘಾತವವಾಗಿತ್ತು. ಹೀಗಾಗಿ ನಾನು ಇಂತಹ ಕೆಲಸದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿರುವೆ ಎಂದಿದ್ದಾರೆ.
ಏಕೆಂದರೆ ನಮಗೂ ಸ್ವಾಭಿಮಾನವಿದ್ದು, ಅದನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಅಂಪೈರ್ಗಳಿಂದ ಕೆಲವೊಮ್ಮೆ ತಪ್ಪುಗಳಾಗುತ್ತವೆ. ಆದರೆ ಆಟಗಾರರು ಅವರೊಂದಿಗೆ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ. ನಾವು ಕೇವಲ ಹಣ್ಣಕ್ಕಾಗಿ ಕೆಲಸ ಮಾಡುತ್ತೇವೆ ಎನ್ನುವುದು ತಪ್ಪು. ನಮಗೂ ಸ್ವಾಭಿಮಾನವಿದ್ದು,ಅದರೊಂದಿಗೆ ಬದುಕಲು ನಾನು ಬಯಸುತ್ತೇನೆ ಎಂದು ಮೊನೀರುಜ್ಜಾಮಾನ್ ತಿಳಿಸಿದ್ದಾರೆ.
ಈ ನಿರ್ಧಾರಕ್ಕೆ ಕಾರಣ ಶಕೀಬ್ ಅಲ್ ಹಸನ್ ಅವರ ಒಂದು ಘಟನೆ ಮಾತ್ರವಲ್ಲ. ಮತ್ತೊಂದು ಪಂದ್ಯದಲ್ಲಿ ನಾನು ಮೂರನೇ ಅಂಪೈರ್ ಆಗಿದ್ದೆ. ಅಂದು ಪಂದ್ಯವನ್ನು ಮರು ಪ್ರಾರಂಭಿಸಲು ಬಯಸಿದಾಗ ಮತ್ತೋರ್ವ ಆಟಗಾರ ಮಹಮ್ಮದುಲ್ಲಾ ನಿರಾಕರಿಸಿದ್ದರು. ಅಂದರೆ ಅಂಪೈರ್ ತೀರ್ಮಾನಕ್ಕೆ ಬೆಲೆಯೇ ಇಲ್ಲದಂತಾಯಿತು. ಮಹಮ್ಮದುಲ್ಲಾ ಪ್ರಸ್ತುತ ಬಾಂಗ್ಲಾದೇಶ ಟಿ20 ತಂಡದ ನಾಯಕ. ಇಂತಹ ಆಟಗಾರರೇ ಅನುಚಿತವಾಗಿ ವರ್ತಿಸುವುದು ಎಷ್ಟು ಸರಿ ಎಂದು ಮುನೀರುಜ್ಜಾಮಾನ್ ಪ್ರಶ್ನಿಸಿದರು. ಒಟ್ಟಿನಲ್ಲಿ ಮೈದಾನದಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ತೋರಿದ ದುರ್ವತನೆಯಿಂದ ತಮ್ಮ ವೃತ್ತಿಗೆ ಗುಡ್ ಬೈ ಹೇಳಿದ್ದಾರೆ ಮೊನೀರುಜ್ಜಾಮಾನ್.