ಟೋಕಿಯೊ ಒಲಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಚಿನ್ನದ ಪದಕಕ್ಕೆ ಮುತ್ತಿಟ್ಟಿರುವ ಚೋಪ್ರಾಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 6 ಕೋಟಿ ನಗದು ಹಾಗೂ ಎ ಗ್ರೇಡ್ ಸರ್ಕಾರಿ ಹುದ್ದೆಯನ್ನು ಘೋಷಿಸಿದ್ದಾರೆ.
ಭಾರತದ ಪ್ರತಿಷ್ಠಿತ ಮೋಟಾರು ವಾಹನ ಕಂಪೆನಿ ಮಹೀಂದ್ರ ನೀರಜ್ ಚೋಪ್ರಾಗೆ ಮಹೀಂದ್ರಾ ಎಕ್ಸ್ ಯುವಿ 700 ವಾಹನವನ್ನು ಉಡುಗೊರೆಯಾಗಿ ಘೋಷಣೆ ಮಾಡಿದೆ. ಇನ್ನೂ ಬಿಸಿಸಿಐ 1 ಕೋಟಿ ನಗದು, ಪಂಜಾಬ್ ರಾಜ್ಯ ಸರ್ಕಾರ 2 ಕೋಟಿ ನಗದು, ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ಕೋಟಿ ನಗದು, ಮಣಿಪುರ ಸರ್ಕಾರ 1 ಕೋಟಿ ಹಾಗೂ ಇಂಡಿಗೋ ಏರ್ಲೈನ್ಸ್ ಒಂದು ವರ್ಷದವರೆಗೂ ಉಚಿತ ಏರ್ಲೈನ್ಸ್ ಟಿಕೆಟ್ ಘೋಷಿಸಿದ್ರೆ, ಕರ್ನಾಟಕ ಸರ್ಕಾರ ಕೆಎಸ್ಆರ್ಟಿಸಿ ಬಸ್ ಪ್ರಯಾಣದಲ್ಲಿ ಗೋಲ್ಡನ್ ಬಸ್ ಪಾಸ್ ನೀಡಿದೆ.
ಇನ್ನೂ ಬಿಸಿಸಿಐ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನ ಘೋಷಿಸಿದ್ದು ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಮತ್ತು ರವಿ ಕುಮಾರ್ ದಾಹಿಯಾಗೆ ತಲಾ 50 ಲಕ್ಷ ರೂಪಾಯಿ ನಗದು, ಕಂಚಿನ ಪದಕ ಗೆದ್ದಿರುವ ಪಿ ವಿ ಸಿಂಧು, ಲವ್ಲಿನಾ ಬೊರ್ಗಹೈನ್ ಮತ್ತು ಬಜರಂಗ್ ಪುನಿಯಾಗೆ ತಲಾ 25 ಲಕ್ಷ ಹಾಗೂ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ನಗದು ಪುರಸ್ಕಾರವನ್ನು ನೀಡುವುದಾಗಿ ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ.
ನೀರಜ್ ಚೋಪ್ರಾ ಬಗ್ಗೆ ನಿಮಗೆ ಗೊತ್ತಿರದ ಕೆಲ ರೋಚಕ ಸಂಗತಿಗಳು
ನೀರಜ್ ಚೋಪ್ರಾ.. ಇಡೀ ಭಾರತ ಇಂದು ಸಂಭ್ರಮದಿಂದ ಕೊಂಡಾಡುತ್ತಿರುವ ಹೆಸರು. ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಹೊಸ ಸಾಧನೆ ಬರೆದ ಸಾಧಕ.
ಜಾವಲಿನ್ ಫೈನಲ್ ಸ್ಪರ್ಧೆಯಲ್ಲಿ ಬರೋಬ್ಬರಿ 87.58 ಮೀಟರ್ ಎಸೆಯುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಈ ಮೂಲಕ ಭಾರತದ ಬಹು ವರ್ಷಗಳ ಕನಸ್ಸು ನನಸಾಗಿದೆ. ಈ ಮೂಲಕ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿದ ಭಾರತದ ಎರಡನೇ ಅಥ್ಲಿಟ್ ಎಂಬ ಹೆಗ್ಗಳಿಕೆ ಇವರದ್ದು.
ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಒಟ್ಟು 7 ಪದಕಗಳು ಲಭಿಸಿವೆ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ನೀರಜ್ ಚೋಪ್ರಾ ತಂದು ಕೊಟ್ಟಿದ್ದಾರೆ.
ನೀರಜ್ ಚೋಪ್ರಾ ಬಗ್ಗೆ ಹೆಚ್ಚಿನವರಿಗೆ ತಿಳಿಯದ ಕೆಲ ಸಂಗತಿಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:
ನೀರಜ್ ಚೋಪ್ರಾ ವೀರ ಯೋಧ ಕೂಡ
* ಹರಿಯಾಣದ ಪಾಣಿಪತ್ ಜಿಲ್ಲೆಯ ಖಂದ್ರಾ ಹಳ್ಳಿಯ 23 ವರ್ಷದ ಅಥ್ಲೀಟ್ ಭಾರತೀಯ ಸೇನೆಯಲ್ಲಿ ಜೂ. ಕಮಿಷನ್ಡ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
* ನೀರಜ್ ಚೋಪ್ರಾ 2011ರಲ್ಲಿ ಜಾವೆಲಿನ್ ತರಬೇತಿ ಆರಂಭಿಸಿದರು. ತನ್ನ ಹಳ್ಳಿಯಲ್ಲಿ ಬೇರೆಯವರ ಅಭ್ಯಾಸ ಮಾಡುವುದನ್ನು ನೋಡಿ ಆಸಕ್ತಿ ಬೆಳೆಸಿದರು. ಇವರ ಹೀರೋ ಅಂದ್ರೆ ಜೆಕ್ ಜಾವೆಲಿನ್ ಥ್ರೋವರ್ ಜಾನ್ ಜೆಲೆಜ್ನಿ.
* ಟೋಕಿಯೋ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಬಾರತೀಯ ಅಥ್ಲೀಟ್. ಅಭಿನವ್ ಬಿಂದ್ರಾ ಚಿನ್ನ ಗೆದ್ದು 13 ವರ್ಷಗಳ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ.
* 2016 ರಿಯೋ ಒಲಿಂಪಿಕ್ಸ್‌ನಲ್ಲಿ ಕಟ್ ಆಫ್ ಡೇಟ್ ಮಿಸ್ ಮಾಡಿದ್ದರಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ.
* ನೀರಜ್ ಚೋಪ್ರಾ ಅವರಿಗೆ ಸ್ಪೋರ್ಟ್ಸ್ ವಿಭಾಗದಲ್ಲಿ ನೀಡಲ್ಪಡುವ ಅತ್ಯುನ್ನತ ಪ್ರಶಸ್ತಿ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 20218ರಲ್ಲಿ ಲಭಿಸಿದೆ.
* 2018ರಲ್ಲಿ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಬಳಿಕ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
* 2018ರಲ್ಲಿ ಏಷ್ಯಾನ್ ಗೇಮ್ಸ್‌ನಲ್ಲಿ 88.06 ಮೀಟರ್ ದೂರ ಎಸೆಯುವ ಮೂಲಕ ಭಾರತದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಚಿನ್ನದ ಹುಡುಗ ನೀರಜ್ ಚೋಪ್ರಾ ಸಾಧನೆ
* 2020ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಬಂಗಾರದ ಪದಕ
* 13 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಠಿ
* 2016ರಲ್ಲಿ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ 82.23 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕ ಪಡೆಯುವುದರೊಂದಿಗೆ ರಾಷ್ಟ್ರೀಯ ದಾಖಲೆ
* 2018ರ ಏಷ್ಯನ್ ಕ್ರೀಡಾಕೂಟ ಇಂಡೋನೇಷ್ಯಾದ ಜಕಾರ್ತದಲ್ಲಿ ಚಿನ್ನ
* 2018 ರ ಕಾಮನ್ ವೆಲ್ತ್ ಕ್ರೀಡಾಕೂಟ ಗೋಲ್ಡ್ ಕೋಸ್ಟ್ ನಲ್ಲಿ ಸ್ವರ್ಣಪದಕ
* 2017ರ ಏಷ್ಯನ್ ಚಾಂಪಿಯನ್ ಶಿಪ್ಸ್ ಭುವನೇಶ್ವರದಲ್ಲಿ ಚಿನ್ನ
* 2016 ರ ಸೌತ್ ಏಷ್ಯನ್ ಕ್ರೀಡಾಕೂಟ ಗುವಾಹಾಟಿ/ಶಿಲ್ಲಾಂಗ್ ನಲ್ಲಿ ಚಿನ್ನದ ಪದಕ
ಜನನ: 24 ಡಿಸೆಂಬರ್ 1997 (23 ವರ್ಷ)
ಜನನ ಸ್ಥಳ: ಹರ್ಯಾಣದ ಪಾಣಿಪತ್ ನಗರದ ಖಂದ್ರಾ
ಭಾರತೀಯ ಸೇನೆಯಲ್ಲಿ ಜೂನಿಯರ್ ಕಮೀಷನ್ಡ್ ಅಧಿಕಾರಿಯಾಗಿ ಸೇವೆ