“ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದದ್ದಾಯ್ತು, ನನ್ನ‌ ಮುಂದಿನ ಟಾರ್ಗೇಟ್….” ನೀರಜ್ ಚೋಪ್ರಾ ಮುಂದಿನ ಗುರಿಯೇನು ಗೊತ್ತಾ?

in Kannada News/News/ಕ್ರೀಡೆ 404 views

ಟೋಕಿಯೊ: ಒಲಿಂಪಿಕ್ಸ್‌ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಮುಂದಿನ ಗುರಿಯೇನು? ಇಂತಹದೊಂದು ಕುತೂಹಲಕಾರಿ ಪ್ರಶ್ನೆಗೆ ಭಾರತದ ಚಾಂಪಿಯನ್ ಅಥ್ಲೀಟ್ ಉತ್ತರ ನೀಡಿದ್ದಾರೆ.

ಹೌದು, ಮುಂಬರುವ ಸ್ಪರ್ಧೆಗಳಲ್ಲಿ 90 ಮೀಟರ್ ದೂರ ಜಾವೆಲಿನ್ ಎಸೆಯುವ ಗುರಿ ಹೊಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದು ನೀರಜ್ ಹೋರಾಟ ಮನೋಭಾವ ಇಲ್ಲಿಗೆ ನಿಲ್ಲುವುದಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೆ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸುವ ಇರಾದೆಯನ್ನು ಹೊಂದಿದ್ದಾರೆ.

ಒಲಿಂಪಿಕ್ಸ್ ಇತಿಹಾಸದಲ್ಲಿ 90.57 ಮೀಟರ್ ದೂರ ಜಾವೆಲಿನ್ ಎಸೆದಿರುವುದು ಇದುವರೆಗಿನ ದಾಖಲೆಯಾಗಿದೆ. ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಈ ಸಾಧನೆಯನ್ನು ಮೀರಿ ನಿಲ್ಲುವ ಗುರಿ ಹೊಂದಿದ್ದಾರೆ.

‘ಜಾವೆಲಿನ್ ಥ್ರೋ ತಾಂತ್ರಿಕ ಅಂಶಗಳಿಂದ ಕೂಡಿದ ಸ್ಪರ್ಧೆಯಾಗಿದ್ದು, ಬಹಳಷ್ಟು ವಿಚಾರಗಳನ್ನು ಅವಲಂಬಿಸಿರುತ್ತದೆ. ಆ ನಿರ್ದಿಷ್ಟ ದಿನದಲ್ಲಿ ಏನು ಬೇಕಾದರೂ ಸಂಭವಿಸಬಹುದು. ನನ್ನ ಮುಂದಿನ ಗುರಿ 90 ಮೀಟರ್ ದೂರವನ್ನು ಕ್ರಮಿಸುವುದಾಗಿದೆ’ ಎಂದು ತಿಳಿಸಿದ್ದಾರೆ.

‘ನಾನು ಈ ವರ್ಷ ಒಲಿಂಪಿಕ್ಸ್ ಮೇಲೆ ಗಮನ ಕೇಂದ್ರಿಕರಿಸಿದ್ದೆ. ಚಿನ್ನ ಗೆದ್ದು ಅದನ್ನು ಸಾಧಿಸಿದ್ದೇನೆ. ಇನ್ನು ಮುಂಬರುವ ಸ್ಪರ್ಧೆಗಳತ್ತ ಗಮನ ಹರಿಸಲಿದ್ದೇನೆ. ಸ್ವದೇಶಕ್ಕೆ ಹಿಂತಿರುಗಿದ ಬಳಿಕ ಮುಂಬರುವ ಸ್ಪರ್ಧೆಗಳತ್ತ ಯೋಜನೆ ರೂಪಿಸಲಿದ್ದೇನೆ’ ಎಂದಿದ್ದಾರೆ.

ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಭಾರತದ 100 ವರ್ಷಗಳ ಕಾಯುವಿಕೆಗೆ ವಿರಾಮ ಹಾಕಿರುವ ಹರಿಯಾಣದ ರೈತನ ಮಗನಾಗಿರುವ 23 ವರ್ಷದ ನೀರಜ್, ಗರಿಷ್ಠ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು.

‘ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದರೂ ಯಾವುದೇ ಒತ್ತಡವಿರಲಿಲ್ಲ. ನಾನು ನನ್ನದೇ ಶ್ರೇಷ್ಠ ಪ್ರದರ್ಶನವನ್ನು ಮೀರಿಸಲು ಪ್ರಯತ್ನಿಸುತ್ತಿದ್ದೆ. ಹಾಗಾಗಿ ಚಿನ್ನ ಗೆಲ್ಲಲು ಸಾಧ್ಯವಾಯಿತು’ ಎಂದಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುತ್ತಲೇ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಏರಿಕೆ

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ 2 ಮಿಲಿಯನ್ ಫಾಲೋವರ್‌ಗಳನ್ನು ಪಡೆದುಕೊಂಡಿದ್ದಾರೆ.

ಒಲಿಂಪಿಕ್ಸ್‌ ನಲ್ಲಿ ಚಿನ್ನದ ಪದಕ ಹೊಂದಿರುವ ಭಾರತ ಈಗ ಬೀಗುತ್ತಿದೆ. ಆಗಸ್ಟ್ 7 ರ ಸಂಜೆಯವರೆಗೆ ದೇಶವು 100 ವರ್ಷಗಳಲ್ಲಿ ಅಥ್ಲೆಟಿಕ್ಸ್ ನಲ್ಲಿ ಯಾವುದೇ ಚಿನ್ನದ ಪದಕವನ್ನು ಹೊಂದಿರಲಿಲ್ಲ. 23 ವರ್ಷದ ನೀರಜ್ ಚೋಪ್ರಾ ದೇಶದ ಬರವನ್ನು ಕಂಚು ಅಥವಾ ಬೆಳ್ಳಿಯಿಂದಲ್ಲ, ಬದಲಾಗಿ ಚಿನ್ನದ ಮೂಲಕ ಕೊನೆಗೊಳಿಸಿದ್ದಾರೆ. ಇಡೀ ದೇಶವೇ ಸ್ಟಾರ್ ಜಾವೆಲಿನ್ ಎಸೆತಗಾರನ ಮೇಲೆ ತನ್ನ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿ ಸಂಭ್ರಮಿಸಿದೆ.

ಚೋಪ್ರಾ ಚಿನ್ನದ ಪದಕ ಗೆದ್ದ ನಂತರ 24 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಳಿಸಿದ್ದಾರೆ. ಟೋಕಿಯೊ 2020 ರಲ್ಲಿ ಪುರುಷರ ಜಾವೆಲಿನ್ ಥ್ರೋ ಫೈನಲ್ ಸಮಯದಲ್ಲಿ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಸುಮಾರು 100 ಸಾವಿರ ಫಾಲೋವರ್‌ಗಳನ್ನು ಹೊಂದಿದ್ದಾಗ, ಈ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುವಿನ ಕೊನೆಯ ಕಾರ್ಯಕ್ರಮವು ನಡೆಯುತ್ತಿತ್ತು, ಅವರು ಈಗ ಅವರ ಪ್ರೊಫೈಲ್‌ನಲ್ಲಿ 2.2 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಹರಿಯಾಣದ ಚಿನ್ನದ ಹುಡುಗನ ಮೇಲೆ ಬಹುಮಾನದ ಜೊತೆಗೆ ಅಭಿನಂದನೆಗಳ ಮಳೆ ಸುರಿಯುತ್ತಿದೆ.. ಹರಿಯಾಣ ಸರ್ಕಾರವು ಈ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋಟಿ ನಗದು ಬಹುಮಾನ ಮತ್ತು ವರ್ಗ -1 ಸರ್ಕಾರಿ ಉದ್ಯೋಗವನ್ನು ಘೋಷಿಸಿತು. ಇದಲ್ಲದೆ, ಅವರಿಗೆ ರಾಜ್ಯದ ಎಲ್ಲಿಯಾದರೂ ಶೇಕಡ 50 ರಷ್ಟು ರಿಯಾಯಿತಿ ದರದಲ್ಲಿ ಭೂಮಿ ನೀಡುವ ಭರವಸೆ ನೀಡಲಾಗಿದೆ.

Advertisement
Share this on...