* ಬೊಮ್ಮಯಿ ಸಂಪುಟದ ಮೊದಲ ವಿಕೆಟ್ ಪತನ?
* ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ?
* ಪ್ರಬಲ ಖಾತೆ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿದ್ದ ಆನಂದ್ ಸಿಂಗ್
ಬೆಂಗಳೂರು/ವಿಜಯನಗರ, (ಆ.10): ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಇದೀಗ ಅಸಮಾಧಾನ ಭುಗಿಲೆದಿದ್ದು, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ರಾಜೀನಾಮೆ ಸುದ್ದಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಹೌದು…ತಾವು ಕೇಳಿದ್ದ ಖಾತೆ ನೀಡಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನ ಹೊರಹಾಕಿದ್ದ ಸಚಿವ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೇವಲ ಸಚಿವ ಸ್ಥಾನಕ್ಕೆ ರಾಜೀನಾಮೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದು ಆವರ ಆಪ್ತ ಮೂಲಗಳು ತಿಳಿಸಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಆನಂದ್ ಸಿಂಗ್ ಇದುವರೆಗೂ ವಿಧಾನಸಭೆಗೆ ಕಾಲಿಟ್ಟಿಲ್ಲ. ಅಲ್ಲದೇ ವಿಜಯನಗರ ಶಾಸಕರ ಕಚೇರಿಯನ್ನು ಸಹ ಆನಂದ್ ಸಿಂಗ್ ಖಾಲಿ ಮಾಡಿದ್ದು, ಇಲ್ಲಿ ಶಾಸಕರು ಲಭ್ಯವಿಲ್ಲ ಎಂದು ಬೋರ್ಡ್ ಸಹ ಹಾಕಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಸಿಎಂಗೆ ರಾಜೀನಾಮೆ ಪತ್ರ?
ಮೊನ್ನೇ ಕುಟುಂಬ ಸಮೇತರಾಗಿ ಬಂದು ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದರು. ಸದ್ಯಕ್ಕೆ ಆಗೋಲ್ಲ. ಈ ಖಾತೆಯನ್ನೇ ನಿಭಾಯಿಸಿ. ಮುಂದೆ ನೋಡೋಣ. ಈಗ ನಿಮ್ಮ ಖಾತೆ ಬದಲಿಸಿದ್ರೆ ಇನ್ನುಳಿದವರೂ ಸಹ ತಮ್ಮ ಖಾತೆ ಬದಲಾವಣೆ ಮಾಡುವಂತೆ ಬರುತ್ತಾರೆ. ಹಾಗಾಗಿ ಈಗ ಖಾತೆ ಬದಲಾವಣೆ ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಸಿಎಂ ಮಾತಿನಿಂದ ಬೇಸರಗೊಂಡ ಆನಂದ್ ಸಿಂಗ್ ಕವರ್‌ನಲ್ಲಿ ರಾಜೀನಾಮೆ ಪತ್ರ ನೀಡಿ ಬಂದಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೇ ರಾಜೀನಾಮೆ ಸುಳಿವು
ಯೆಸ್..ಖಾತೆ ಹಂಚಿಕೆ ಮಾಡಿದ ದಿನವೇ ಪ್ರವಾಸೋದ್ಯಮ ಆನಂದ್ ಸಿಂಗ್ ರಾಜೀನಾಮೆ ಸುಳಿವು ನೀಡಿದ್ದರು. ಬಳ್ಳಾರಿಯಲ್ಲಿ ಖಾತೆ ಹಂಚಿಕೆ ಬಗ್ಗೆ ಮಾತನಾಡುವ ವೇಳೆ ಅವರು, ಪ್ರವಾಸೋದ್ಯಮ ನನಗೆ ಬೇಡ. ಬೇರೆ ಖಾತೆ ಕೊಡಿ. ಇಲ್ಲ ಅಂದ್ರೆ ಶಾಸಕನಾಗಿಯೇ ಉಳಿಯುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸ್ಥಾನವೂ ಬೇಡ ಎಂದಿದ್ದರು.