ಬಿವೈ ವಿಜಯೇಂದ್ರರಿಗೆ ಬಂಪರ್ ಜ್ಯಾಕ್‌ಪಾಟ್? ಸಚಿವ ಸ್ಥಾನವೋ ರಾಜ್ಯಾಧ್ಯಕ್ಷ ಪಟ್ಟವೋ?

in Kannada News/News 357 views

ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ ಅಥವ ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಕುರಿತು ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

Advertisement

ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ, “ಪಕ್ಷದ ನಾಯಕರು ಭವಿಷ್ಯದಲ್ಲಿ ನನ್ನ ಪಾತ್ರದ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ” ಎಂದರು.

“ಸಚಿವನಾಗಬೇಕು ಅಥವ ಬಿಜೆಪಿ ರಾಜ್ಯಾಧ್ಯಕ್ಷನಾಗಬೇಕು ಎಂಬ ಯಾವುದೇ ಆಕಾಂಕ್ಷೆಯನ್ನು ನಾನು ಹೊಂದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಮುಂದಿನ ಜವಾಬ್ದಾರಿ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ” ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

“ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ಹಿರಿಯ ಮುಖಂಡರು. ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ. ಅವರ ಟೀಕೆಗಳಿಗೆ ಪ್ರತಿಕ್ರಿಯಿಸಲಾರೆ” ಎಂದು ವಿಜಯೇಂದ್ರ ಹೇಳಿದರು.

“ಯಾವುದೇ ಸ್ಥಾನ ಬಯಸಿಲ್ಲ. ಫಲಾಪೇಕ್ಷೆ ಇಲ್ಲದೇ ಪಕ್ಷ ಸಂಘಟನೆ ಮಾಡುವೆ. ತಂದೆ ಯಡಿಯೂರಪ್ಪ ಅವರ ಆಶಯದಂತೆ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ” ಎಂದು ವಿಜಯೇಂದ್ರ ತಿಳಿಸಿದರು.

“ಹಲವು ಬಾರಿ ಪಕ್ಷ ಬಹುಮತದ ಹೊಸ್ತಿಲಿಗೆ ಬಂದು ನಿಂತಿದೆ. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲಿದೆ. ಅದಕ್ಕಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷವೂ ತಂದೆಗೆ ಉತ್ತಮ ಸ್ಥಾನಮಾನ ನೀಡಿ ಗೌರವಿಸಿದೆ” ಎಂದರು.

“ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸಲು ಹೈಕಮಾಂಡ್ ಸೂಚಿಸಿತ್ತು. ತಂದೆ ಹಲವು ಹೋರಾಟಗಳ ಮೂಲಕ ಪಕ್ಷ ಬೆಳೆಸಿದರು. ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಒತ್ತು ನೀಡುತ್ತಿರುವೆ” ಎಂದು ವಿಜಯೇಂದ್ರ ಹೇಳಿದರು.

ಜುಲೈ 26ರಂದು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು 2 ವರ್ಷ ಪೂರ್ಣಗೊಂಡಿತು. ಅಂದೇ ಮುಖ್ಯಮಂತ್ರಿ ಸ್ಥಾನಕ್ಕೆ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದರು. ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾದರು. ವಿಜಯೇಂದ್ರ ಬೊಮ್ಮಾಯಿ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಆದರೆ ಬಿ. ವೈ. ವಿಜಯೇಂದ್ರಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ಈ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದಾಗ ಹೈಕಮಾಂಡ್ ನಾಯಕರ ಕಡೆ ಕೈ ತೋರಿಸಿದ್ದರು. ಪಕ್ಷದಲ್ಲಿ ವಿಜಯೇಂದ್ರ ಹುದ್ದೆ ಬದಲಾಗಲಿದೆ ಎಂಬ ಸುದ್ದಿಗಳು ಹಬ್ಬಿದ್ದವು.

ಪ್ರಸ್ತುತ ಬಿ. ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರು. ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಕೆಳಗಿನ ಹುದ್ದೆ ಇದಾಗಿದೆ. ವಿಜಯೇಂದ್ರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗುವ ಸಾಧ್ಯತೆ ಇದೆ ಎಂಬ ವರದಿಗಳು ಸಹ ಇವೆ.

ಬಿಜೆಪಿ ಹೈಕಮಾಂಡ್ 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ವಿವಿಧ ಹುದ್ದೆಗಳಲ್ಲಿ ಬದಲಾವಣೆ ಮಾಡಲಿದೆ. ಸಚಿವ ಸ್ಥಾನ ಕೈ ತಪ್ಪಿದವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2018ರ ವಿಧಾನಸಭೆ ಚುನಾವಣೆ ಬಿ. ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ಆದರೆ ಕೊನೆ ಕ್ಷಣದಲ್ಲಿ ಹೈಕಮಾಂಡ್ ನಾಯಕರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಅವರು ಕಣಕ್ಕಿಳಿಯಲಿಲ್ಲ.

ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದ ಮತ್ತೆ ವಿಜಯೇಂದ್ರ ಸ್ಪರ್ಧೆಯ ವಿಚಾರ ಚರ್ಚೆಗೆ ಬಂದಿತ್ತು. ಬಸವಕಲ್ಯಾಣದಿಂದ ಅವರು ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಬಂದಿತು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಈ ಸುದ್ದಿಗಳನ್ನು ತಳ್ಳಿ ಹಾಕಿದರು.

ಮುಂದಿನ ಚುನಾವಣೆಯಲ್ಲಿ 120ಕ್ಕಿಂತಲೂ ಅಧಿಕ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬುದು ಬಿಜೆಪಿ ಗುರಿ. ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇದೆ, ನಾಯಕತ್ವ ಬದಲಾವಣೆ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರದಂತೆ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ.

Advertisement
Share this on...