ನನಗೆ ಮತ್ತು ನಮ್ಮ ಆಪ್ತರಿಗೆ ಮಂತ್ರಿಸ್ಥಾನ ನೀಡದಿರುವ ಬಗ್ಗೆ ಯಾವುದೇ ಬೇಸರವಿಲ್ಲ. ಪಕ್ಷದ ಹಿರಿಯರು ಮತ್ತು ಸಂಘ ಪರಿವಾರದ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ 2023ರಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾನು ಯಾವ ತ್ಯಾಗಕ್ಕೂ ಸಿದ್ಧ ಎಂಬುದಾಗಿ ಶಾಸಕ ರಮೇಶ್ ಜಾರಿಕಿಹೊಳಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಶಾಸಕ ಮಹೇಶ್ ಕುಮಠಳ್ಳಿ ಅವರೊಂದಿಗೆ ಪಕ್ಷದ ಮುಖಂಡರ ಸಭೆ, ಹಿರಿಯ ಆರೆಸ್ಸೆಸ್ ಮುಖಂಡ ಅರವಿಂದ ದೇಶಪಾಂಡೆ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶುಕ್ರವಾರ ದೆಹಲಿಯಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದೇನೆ. ಅಲ್ಲಿ ನನಗೆ ಮತ್ತು ನಮ್ಮ ಬೆಂಬಲಿಗ ಶಾಸಕರಿಗೆ ಯಾವುದೇ ಮಂತ್ರಿಸ್ಥಾನ ನೀಡುವ ಬಗ್ಗೆ ಲಾಬಿ ನಡೆಸಿಲ್ಲ ಎಂದರು.
ಸಿಡಿ ಪ್ರಕರಣಲ್ಲಿ ತನಿಖೆ ಮುಕ್ತಾಯವಾದರೂ ಕ್ಲೀನ್ ಚಿಟ್ ಸಿಗದ ಬಗ್ಗೆ ಈ ರೀತಿ ಪ್ರತಿಕ್ರಿಯೆ ನೀಡಿ, ಕ್ಲೀನ್ ಚಿಟ್ ಪಡೆಯಲು ಯಾವುದೇ ಆತುರವಿಲ್ಲ. ರಾಜಕಾರಣದಲ್ಲಿ ಶೂರರಿಗೆ ಷಡ್ಯಂತ್ರ ಮಾಡುವವರು ಇದ್ದೇ ಇರುತ್ತಾರೆ. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುತ್ತೇನೆ ಎಂದರು.
ಮುಗಿಯದ ಆನಂದ್ ಸಿಂಗ್ ಖಾತೆ ಕ್ಯಾತೆ: ಇಂದು ರಾಜೀನಾಮೆ ಸಾಧ್ಯತೆ?
ನಿರೀಕ್ಷಿತ ಖಾತೆ ಸಿಗದೆ ಸಂಧಾನದ ಬಳಿಕವು ಮುನಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ನಾಳೆ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಒಂದು ಮೂಲದ ಪ್ರಕಾರ ಆನಂದ್ ಸಿಂಗ್ ನಾಳೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ನಿಚ್ಚಳವಾಗಿದೆ. ಈ ದಿಢೀರ್ ಬೆಳವಣಿಗೆಯಿಂದಾಗಿ ಆಡಳಿತಾರೂಢ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದೆ.
ಅಬಿ ಪಿಕ್ಚರ್ ಬಾಕಿ ಹೈ ಎಂದು ನಿನ್ನೆಯಷ್ಟೇ ಆನಂದ್ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಅವರ ಈ ನಿಗೂಢ ಹೇಳಿಕೆ ನಾನಾ ಸಂಶಯಗಳನ್ನು ಮೂಡಿಸಿದ್ದು, ರಾಜೀನಾಮೆ ನೀಡುವುದು ಖಚಿತ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ನಾಳೆ ತಮ್ಮ ಸ್ವಕ್ಷೇತ್ರ ವಿಜಯನಗರದಿಂದ ಬೆಂಗಳೂರಿಗೆ ಆಗಮಿಸಲಿರುವ ಆನಂದ್ ಸಿಂಗ್ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಒಂದು ವೇಳೆ ಸಿಎಂ ಅವರಿಂದ ಖಾತೆ ಬದಲಾವಣೆ ಕುರಿತಂತೆ ಸಕಾರಾತ್ಮಕವಾದ ಆಶ್ವಾಸನೆ ಸಿಕ್ಕರೆ ತಮ್ಮ ನಿರ್ಧಾರದಿಂದ ಸಿಂಗ್ ಹಿಂದೆ ಸರಿಯಬಹುದು. ಇಲ್ಲವೇ ಖಾತೆ ಬದಲಾವಣೆ ಸಾಧ್ಯವಿಲ್ಲ ಎಂದು ಸಿಎಂ ಹೇಳಿದರೆ ಅಲ್ಲಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನೇರವಾಗಿ ವಿಧಾನಸೌಧಕ್ಕೆ ಬಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ತಮ್ಮ ಆಪ್ತರ ಬಳಿ ಹೇಳಿಕೊಂಡಿರುವಂತೆ ನನಗೆ ಬಿಜೆಪಿಯಿಂದ ಸಾಕಷ್ಟು ಅವಮಾನವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದೆ. ಆದರೆ ನನ್ನ ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ನನಗೆ ಇದರಿಂದ ಮನಸ್ಸಿಗೆ ನೋವಾಗಿದ್ದು, ಪಕ್ಷವನ್ನೇ ಬಿಡುತ್ತೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ನನಗೆ ಎಲ್ಲ ರೀತಿಯಲ್ಲೂ ಸಹಕಾರ ಕೊಟ್ಟಿದ್ದರು. ಆದರೆ ಈಗ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾಗಿದ್ದು, ಸಂಪುಟ ರಚನೆ ನಂತರ ನಮ್ಮನ್ನು ಕೇವಲವಾಗಿ ನೋಡಲಾಗುತ್ತಿದೆ. ಹೀಗಾಗಿ ನನಗೆ ರಾಜಕಾರಣದ ಸಹವಾಸವೇ ಬೇಡ. ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಕೊನೆ ಕ್ಷಣದವರೆಗೂ ಆನಂದ್ ಸಿಂಗ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದೆ. ಅವರು ರಾಜೀನಾಮೆ ನೀಡಿದರೆ ಸರ್ಕಾರ ಮತ್ತು ಪಕ್ಷಕ್ಕೆ ಭಾರೀ ಮುಜುಗರವಾಗುತ್ತದೆ ಎಂಬ ಕಾರಣಕ್ಕಾಗಿಯೇ ಸಂಧಾನ ನಡೆಸುವ ಪ್ರಕ್ರಿಯೆ ಮುಂದುವರೆದಿದೆ. ಶಾಸಕ ರಾಜುಗೌಡ ನಾಯಕ್ ಅವರನ್ನು ಸಂಧಾನಕ್ಕೆ ಬಿಡಲಾಗಿದೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಹಂತಕ್ಕೆ ಹೋಗದಂತೆ ಮನವೊಲಿಸಿ ಖಾತೆ ಬದಲಾವಣೆ ಸಂಬಂಧ ನಾನು ದೆಹಲಿಗೆ ತೆರಳಿದ ವೇಳೆ ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸುತ್ತೇನೆ.
ಒಂದು ವೇಳೆ ಬದಲಾಯಿಸಿ ಎಂದರೆ ಅವರು ನಿರೀಕ್ಷಿಸಿದ ಖಾತೆಯನ್ನೆ ಕೊಡುತ್ತೇನೆ. ಸದ್ಯಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡುವ ಮುಜುಗರ ಸೃಷ್ಟಿಸದಂತೆ ನೋಡಿಕೊಳ್ಳಬೇಕು ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜುಗೌಡ ನಾಯಕ್‍ಗೆ ಸೂಚಿಸಿದ್ದಾರೆ.
ದೆಹಲಿಗೆ ಬರುವುದಿಲ್ಲ: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಆನಂದ್ ಸಿಂಗ್ ದೆಹಲಿಗೆ ತೆರಳಿ ನಾನು ವರಿಷ್ಠರನ್ನು ಭೇಟಿಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ವತಃ ಸಿಎಂ ಬೊಮ್ಮಾಯಿ ಅವರೇ ದೆಹಲಿಗೆ ಬರುವಂತೆ ಸೂಚಿಸಿದರೂ ನಾನು ಮಾತ್ರ ಅಲ್ಲಿಗೆ ಬರುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ದೆಹಲಿಗೆ ತೆರಳಿದರೆ ವರಿಷ್ಠರು ಮನವೊಲಿಸಿ ಅದೇ ಖಾತೆಯಲ್ಲಿ ಮುಂದುವರೆಯುವಂತೆ ಸೂಚನೆ ನೀಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ನಾನು ಅಲ್ಲಿಗೆ ಬರುವುದಿಲ್ಲ. ಖಾತೆ ಬದಲಾವಣೆ ನೀವೇ ಮಾಡಬೇಕೆಂದು ಸಿಎಂಗೆ ಹೇಳಿರುವುದು ಬೊಮ್ಮಾಯಿಗೆ ತಲೆ ಬಿಸಿ ಮಾಡಿದೆ.