ಜನ್ ಕೀ ಬಾತ್- ಏಷ್ಯಾನೆಟ್ ಸಮೀಕ್ಷೆ: ಈ ಬಾರಿ ಉತ್ತರಪ್ರದೇಶದಲ್ಲಿ ಯಾರಾಗಲಿದ್ದಾರೆ ಮುಖ್ಯಮಂತ್ರಿ? ಅಚ್ಚರಿಯ ರಿಸಲ್ಟ್ ಕೊಟ್ಟ ಜನ್ ಕೀ ಬಾತ್ ಸರ್ವೇ

in Kannada News/News 254 views

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಭಾರೀ ನಿರೀಕ್ಷೆ ಹುಟ್ಟಿಸಿದೆ. ರಾಜಕೀಯ ನಾಯಕರು, ಪಕ್ಷಗಳು ಜನರ ಹೃದಯ ಗೆಲ್ಲುವತ್ತ ಚಿತ್ತ ಹರಿಸಿವೆ. ಈ ನಿಟ್ಟಿನಲ್ಲಿ ಚುನಾವಣೆ ನಡೆಯುವ ಒಂದು ವರ್ಷಕ್ಕಿಂತ ಮೊದಲೇ ಈ ನಿಟ್ಟಿನಲ್ಲಿ ಕಾರ್ಯ ಆರಂಭಿಸಿವೆ. ಹೀಗಿದ್ದರೂ ಜನರು ಏನು ಬಯಸುತ್ತಾರೆ? ಎಂಬ ಪ್ರಶ್ನೆ ಪ್ರಮುಖ ಪಾತ್ರ ವಹಿಸುತ್ತದೆ. ಏಷ್ಯಾನೆಟ್‌- ಜನ್ ಕಿ ಬಾತ್ ಉತ್ತರ ಪ್ರದೇಶದ ಆರು ಪ್ರದೇಶಗಳ ಜನಾಭಿಪ್ರಾಯ ಸಂಗ್ರಹಿಸಿ, ಮುಂದಿನ ಸರ್ಕಾರ ಯಾರು ರಚಿಸಬಹುದು? ಎಂಬ ಸಮೀಕ್ಷೆ ನಡೆಸಿದೆ.

Advertisement

ಏಷ್ಯಾನೆಟ್‌- ಜನ್ ಕಿ ಬಾತ್ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 14 ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿತ್ತು. ಇವುಗಳಿಗೆ ಸಿಕ್ಕ ಉತ್ತರದ ಆಧಾರದಲ್ಲಿ ಒಟ್ಟಾರೆಯಾಗಿ ಮತ್ತೆ ಯೋಗಿ ಆದಿತ್ಯನಾಥ್ ಅಧಿಕಾರಕ್ಕೇರುವ ಸುಳಿವು ಸಿಕ್ಕಿದರೂ, ಅಖಿಲೇಶ್ ಯಾದವು ತೀವ್ರ ಸ್ಪ್ರರ್ಧೆ ನೀಡುವ ಸಾಧ್ಯತೆ ಇದೆ. ಬೆಲೆ ಏರಿಕೆ ಬಿಸಿ ಶ್ರೀಸಾಮಾನ್ಯನನ್ನು ತಟ್ಟಿದೆ. ಆಡಳಿತ ವಿರೋಧಿ ಅಲೆ ಇದ್ದೇ ಇದೆ. ಆದ್ದರಿಂದ ಅಖಿಲೇಶ್ ಯಾದವ್‌ಗಿರುವ ಬೆಂಬಲವನ್ನು ಬಿಜೆಪಿ ಈ ಚುನಾವಣೆಯಲ್ಲಿ ಕಡೆಗಣಿಸುವಂತಿಲ್ಲ ಎಂಬುವುದೂ ಅಷ್ಟೇ ಸತ್ಯ. ಈ ಚುನಾವಣೆಯಲ್ಲಿ ಮಯಾವತಿ ಮತ ಸೆಳೆದುಕೊಳ್ಳಲು ಸ್ವಲ್ಪ ಸಫಲರಾದರೆ, ಯೋಗಿ ಹಾದಿ ಸುಗಮಗೊಳ್ಳುವುದು ಗ್ಯಾರಂಟಿ.  ಸದ್ಯ ಈ 14 ಪ್ರಶ್ನೆಗಳಲ್ಲಿ ಯೋಗಿ ನಾಯಕತ್ವದ ಬಗ್ಗೆ ಕೇಳಿದ ಮೂರು ಪ್ರಶ್ನೆಗಳಿಗೆ ಜನರು ಕೊಟ್ಟ ಉತ್ತರವೇನು? ಯೋಗಿ ಆಡಳಿತ ವೈಖರಿ ಜನರಿಗೆ ಇಷ್ಟವಾಗಿದೆಯೇ? ಈ ಬಾರಿ ಜನರ ಮತ ಯಾರಿಗೆ? ಪ್ರದೇಶವಾರು ಸಮೀಕ್ಷೆಯ ಫಲಿತಾಂಶವೇನು? ಎಲ್ಲಾ ಉತ್ತರಗಳಿಗೂ ಇಲ್ಲಿದೆ ಉತ್ತರ.

1. ಉತ್ತರ ಪ್ರದೇಶದಲ್ಲಾಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಅಭಿಪ್ರಾಯವೇನು? ಯೋಗಿ, ಅಖಿಲೇಶ್, ಮಾಯಾವತಿ ಈ ಮೂವರಲ್ಲಿ ಯಾರ ಆಡಳಿತ ಅವಧಿಯಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ನಡೆದಿತ್ತು?

ಜನಾಭಿಪ್ರಾಯ: ಈ ಮೇಲಿನ ಪ್ರಶ್ನೆಗೆ ಶೇ. 28ರಷ್ಟು ಮಂದಿ ಯೋಗಿ ಆಡಳಿತ ಅವಧಿಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿತ್ತು ಎಂದಿದ್ದರೆ, ಶೇ. 48ರಷ್ಟು ಮಂದಿ ಅಖಿಲೇಶ್ ಯಾದವ್ ಸರ್ಕಾರದ ಅವಧಿಯಲ್ಲಿ ಹೆಚ್ಚು ಲಂಚಬಾಕತನ ನಡೆಯುತ್ತಿತ್ತು ಎಂದಿದ್ದಾರೆ. ಇನ್ನುಳಿದ ಶೇ. 24ರಷ್ಟು ಮಂದಿ ಮಾಯಾವತಿ ಸರ್ಕಾರದ ಅವಧಿಯಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿತ್ತು ಎಂದಿದ್ದಾರೆ.

2. ಯಾವ ಬಗೆಯ ಸರ್ಕಾರ ಅಧಿಕಾರಕ್ಕೆ ಬರಬೇಕು? ಎಲ್ಲರನ್ನು ಸಮನಾಗಿ ಕಾಣುವ ಸರ್ಕಾರವೋ? ಜಾತಿ ಆಧಾರದಲ್ಲಿ ಆದ್ಯತೆ ನೀಡುವ ಆಡಳಿತ ಬೇಕೋ?

ಜನಾಭಿಪ್ರಾಯ: ಈ ಪ್ರಶ್ನೆಗೆ ಶೇ 92ರಷ್ಟು ಮಂದಿ ಎಲ್ಲಾ ನಾಗರಿಕರನ್ನು ಸಮನಾಗಿ ಪರಿಗಣಿಸುವ ಸರ್ಕಾರ ಬೇಕು ಎಂದಿದ್ದರೆ, ಶೇ. 8ರಷ್ಟು ಮಂದಿ ತಮ್ಮ ಜಾತಿ ಆಧಾರದಲ್ಲಿ ಆದ್ಯತೆ ನೀಡುವ ಜನ ನಾಯಕ ಬೇಕು ಎಂದಿದ್ದಾರೆ.

3. ಹಾಗಾದ್ರೆ ಈ ಬಾರಿ ನಿಮ್ಮ ಮತ ಯಾರಿಗೆ? ಯೋಗಿ, ಅಖಿಲೇಶ್ ಅಥವಾ ಬೇರೆ ಅಭ್ಯರ್ಥಿಗೋ?

ಜನಾಭಿಪ್ರಾಯ: ಈ ಪ್ರಶ್ನೆಗೆ ಉತ್ತರಿಸಿರುವ ಶೇ. 48ರಷ್ಟು ಮಂದಿ ಯೋಗಿ ಆದಿತ್ಯನಾಥ್‌ಗೆ ತಮ್ಮ ಮತ ಎಂದರೆ, ಶೇ. 36ರಷ್ಟು ಮಂದಿ ಅಖಿಲೇಶ್ ಪರ ಒಲವು ತೋರಿದ್ದಾರೆ. ಆದರೆ ಶೇ. 16ರಷ್ಟು ಮಂದಿ ಇತರ ಅಭ್ಯರ್ಥಿಗೆ ಮತ ನೀಡುವುದಾಗಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಫೇಮ್ ಕಡಿಮೆಯಾಗಿದೆ. ಅವರ ಆಡಳಿತ ವೈಖರಿ ಸರಿ ಇಲ್ಲ ಎಂಬಿತ್ಯಾದಿ ಮಾತುಗಳು ಭಾರೀ ಸದ್ದು ಮಾಡುತ್ತಿವೆ. ಇದಕ್ಕೆ ತಕ್ಕಂತೆ ಚುನಾವಣೆಗೆ ಸಿದ್ಧತೆ ಎಂಬಂತೆ ಉತ್ತರ ಪ್ರದೇಶ ಬಿಜೆಪಿ ಮೋದಿ ಆಪ್ತ ಎ. ಕೆ. ಶರ್ಮಾರನ್ನು ಉಪಾಧ್ಯಕ್ಷರಾಗಿ ನೇಮಿಸಿತ್ತು. ಈ ಎಲ್ಲಾ ಬೆಳವಣಿಗೆಗಳು ನಡೆದಿದ್ದರೂ ಸಿಎಂ ಯೋಗಿ ಆದಿತ್ಯನಾಥ್ ಪರ ಜನರ ಒಲವು ಹೆಚ್ಚು ಇದೆ ಎಂಬುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಹೀಗಿದ್ದರೂ ಬಿಜೆಪಿ ನಿಟ್ಟುಸಿರು ಬಿಡುವಂತಿಲ್ಲ ಎಂಬುವುದೂ ಸತ್ಯ. ಯಾಕೆಂದರೆ ಅತ್ತ ಅಖಿಲೇಶ್ ಹಾಗೂ ಮಾಯಾವತಿ ಮೇಲೂ ಜನರ ವಿಶ್ವಾಸವಿದೆ. ಅಲ್ಲದೇ ಈ ಸಮೀಕ್ಷೆ ಜುಲೈ 27ರಿಂದ ಆಗಸ್ಟ್‌2ರ ನಡುವೆ ನಡೆದಿದ್ದು, ಇದಾದ ಬಳಿಕದ ರಾಜಕೀಯ ಬೆಳವಣಿಗೆಗಳು ಬದಲಾವಣೆ ತರುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಸಮೀಕ್ಷೆಯಲ್ಲಿ ಕಂಡು ಬಂದ ಅಂಶ:

* ಯೋಗಿ ಹಾಗೂ ಅಖಿಲೇಶ್ ಯಾದವ್ ನಡುವಿನ ಪೈಪೋಟಿಯನ್ನು ಗಮನಿಸಿದರೆ ಮಾಜಿ ಸಿಎಂಗಿಂತ ಹಾಲಿ ಸಿಎಂ ಹೆಚ್ಚಿನ ಅಂಕ ಗಳಿಸಿದ್ದಾರೆ.

* ಆರು ಪ್ರದೇಶದ ಸುಮಾರು ಶೇ. 40ರಷ್ಟು ನಾಗರಿಕರು ಜಾತಿ, ಪ್ರಾದೇಶಿಕ, ಸ್ಥಳೀಯ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಅದರಲ್ಲೂ ಹಾಲಿ ಶಾಸಕರನ್ನು ಮತ್ತೆ ಕಣಕ್ಕಿಳಿಸುವುದು ಕೊಂಚ ದುಬಾರಿಯಾಗಬಹುದು.

* ಕಾನೂನು ಸುವ್ಯವಸ್ಥೆ ಹೆಚ್ಚಿನ ಮಹತ್ವ ಪಡೆದರೂ, ಹಣದುಬ್ಬರ ಸಮಸ್ಯೆ ಜನರನ್ನು ಬೆಂಬಿಡದೆ ಕಾಡುತ್ತಿದೆ. ಇದೇ ಮುಂದಿನ ಚುನಾವಣೆಗೆ ಹೆಚ್ಚಿನ ಪ್ರಭಾವ ಬೀರುವುದರಲ್ಲಿ ಅನುಮಾನವೇ ಇಲ್ಲ.

* ಪಶ್ಚಿಮ ಭಾಗದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಕಂಡುಬರಲಿದೆ.

* ಬಿಜೆಪಿ ಸರ್ಕಾರ ಜಾರಿಗೊಳಿಸಿದ ಪಡಿತರ ನೀತಿ, ಕಲ್ಯಾಣ ಯೋಜನೆಗಳು ಪ. ಜಾತಿ/ಪಂಗಡಗಳ ಒಲವು ಗಿಟ್ಟಿಸಿಕೊಳ್ಳುವಲ್ಲಿ ಸಹಾಯಕವಾದರೂ, ಮಾಯಾವತಿ ನೇತೃತ್ವದ BSP ಹಾಗೂ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ಈ ವಿಚಾರದಲ್ಲಿ ಬಿಜೆಪಿಗೆ ದುಬಾರಿಯಾಗಬಹುದು.

* ಇನ್ನು ಭ್ರಷ್ಟಾಚಾರ ವಿಚಾರದಲ್ಲಿ ಯೋಗಿ ಪ್ರಾಮಾಣಿಕರಾಗಿದ್ದರೂ, ಅಧಿಕಾರಿಗಳು ಲಂಚ ಪಡೆಯುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಯೋಗಿ ಸರಕಾರ ಅಖಿಲೇಶ್ ಸರಕಾರಕ್ಕೆ ಹೋಲಿಸಿದಲ್ಲಿ ಈ ವಿಷಯದಲ್ಲಿ ಬೆಸ್ಟ್ ಎನ್ನೋದು ಬಹಜನರ ಅಭಿಪ್ರಾಯ.

* ಹಿಂದುತ್ವ ಅಜೆಂಡಾವಿಲ್ಲದೇ 2022ರ ಚುನಾವಣೆ ಗೆಲ್ಲೋದು ಕಷ್ಟ. ಆದರೆ ಕೇವಲ ಹಿಂದುತ್ವವನ್ನೇ ಮುಂದಿಟ್ಟುಕೊಂಡು ಗೆಲ್ಲುವುದೂ ಸುಲಭವಲ್ಲ. ಇದರೊಂದಿಗೆ ಬೆಲೆ ಏರಿಕೆ ಬಿಸಿ ಇಳಿಸಲು ಸರಕಾರ ಆದಷ್ಟು ಬೇಗೆ ಏನಾದರೂ ಕ್ರಮ ಕೈಗೊಂಡರೆ ಮಾತ್ರ, ಯೋಗಿಯ ಗೆಲುವಿನ ಹಾದಿ ಮತ್ತಷ್ಟು ಸುಲಭವಾಗಲಿದೆ.

* ಸಣ್ಣ, ಪ್ರಾದೇಶಿಕ ಪಕ್ಷಗಳು ಮುಸಲ್ಮಾನರ ಮತ ವಿಭಜಿಸುವ ಸಾಧ್ಯತೆ ಬಹಳ ಕಡಿಮೆ.

* ಪಶ್ಚಿಮ ಭಾಗ ಹಾಗೂ ಬ್ರಿಜ್‌ನ ಕೆಲ ಭಾಗಗಳಲ್ಲಿ ರೈತ ಆಂದೋಲನದ ಪರಿಣಾಮ ಹೆಚ್ಚಿದೆ. ಪಶ್ಚಿಮ ಪ್ರದೇಶ ಹೊರತುಪಡಿಸಿ ಉಳಿದ ಭಾಗದ ಶೇ. 50ಕ್ಕಿಂತ ಹೆಚ್ಚು ಮಂದಿಗೆ ಕೃಷಿ ಬಿಲ್ ಬಗ್ಗೆ ಹೆಚ್ಚು ಮಾಹಿತಿಯೇ ಇಲ್ಲ. ಹೀಗಾಗಿ ಇದೊಂದು ಚುನಾವಣಾ ವಿಚಾರ ಎಂದು ಪರಿಗಣಿಸಿಲ್ಲ.

Advertisement
Share this on...