“ಬಿಜೆಪಿ, ನರೇಂದ್ರ ಮೋದಿಯನ್ನ ಮಣಿಸೋಕೆ ಬೇರೆ ದಾರಿಗಳೇ ಇಲ್ಲ, ಇರೋದಿದೊಂದೇ ದಾರಿ ಅದನ್ನ ಬೇಗ ಮಾಡಿ”: ಸೋನಿಯಾ ಗಾಂಧಿ

in Kannada News/News 1,604 views

ನವದೆಹಲಿ: ‘ಬಿಜೆಪಿಯನ್ನು ಹಣಿಯಲು ಎಲ್ಲಾ ವಿರೋಧಪಕ್ಷಗಳು ಒಟ್ಟಾಗಲೇಬೇಕು. 2024ರ ಲೋಕಸಭಾ ಚುನಾವಣೆಗೆ ಎಲ್ಲಾ ವಿಪಕ್ಷಗಳು ಒಟ್ಟಾಗಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಬೇಕು. ಇದರ ಹೊರತಾಗಿ ನಮಗೆ ಪರ್ಯಾಯ ಆಯ್ಕೆಯೇ ಇಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಪಕ್ಷಗಳ ನಾಯಕರಿಗೆ ಕರೆಕೊಟ್ಟಿದ್ದಾರೆ.

Advertisement

2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿಯನ್ನು ಸೋಲಿಸಲು ಪ್ರಬಲ ಒಕ್ಕೂಟ ರಚಿಸುವ ಉದ್ದೇಶದೊಂದಿಗೆ ಮೊದಲ ಬಾರಿಗೆ ಸೋನಿಯಾ ಗಾಂಧಿ ಸಭೆ ನಡೆಸಿದ್ದಾರೆ.

ಶುಕ್ರವಾರ ಒಟ್ಟಾರೆ ಹತ್ತೊಂಬತ್ತು ವಿರೋಧಪಕ್ಷಗಳ ನಾಯಕರೊಂದಿಗೆ ವರ್ಚುಯಲ್ ಸಭೆ ನಡೆಸಿದ ಸೋನಿಯಾ ಗಾಂಧಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಅಗತ್ಯ, ಅದಕ್ಕೆ ಬೇಕಾದ ಸಿದ್ಧತೆ ಹಾಗೂ ಕಾರ್ಯತಂತ್ರವನ್ನು ರೂಪಿಸಲು ಮುನ್ನುಡಿಯಂತೆ ಈ ಸಭೆಯನ್ನು ಹಮ್ಮಿಕೊಂಡಿದ್ದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಕಂಡುಕೊಳ್ಳಬೇಕಾದ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದರು.

‘ಸಂವಿಧಾನದ ತತ್ವ, ನಿಯಮಗಳಲ್ಲಿ ನಂಬಿಕೆ ಇರುವ ಸರ್ಕಾರವನ್ನು ದೇಶಕ್ಕೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಇದಕ್ಕೆ ನಾವು ಸೂಕ್ತ ಯೋಜನೆ ರೂಪಿಸಬೇಕಿದೆ. ನಾವೆಲ್ಲಾ ಒಟ್ಟಿಗೆ ಸೇರಿ ಈ ಸವಾಲನ್ನು ಗೆಲ್ಲಬಹುದಾಗಿದೆ’ ಎಂದು ಹೇಳಿದ್ದಾರೆ.

‘ಬಿಜೆಪಿ ವಿರುದ್ಧ ಒಗ್ಗಟ್ಟಾಗಲು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಬದಿಗಿರಿಸುವುದು ಅತ್ಯವಶ್ಯಕ. ನಾವೆಲ್ಲರೂ ನಮ್ಮದೇ ಕಟ್ಟುಪಾಡುಗಳನ್ನು ಹೊಂದಿದ್ದೇವೆ. ಆದರೆ ನಾವು ಅವನ್ನೆಲ್ಲಾ ದೂರವಿಟ್ಟು ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿದೆ’ ಎಂದು ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

‘2024ರ ಚುನಾವಣೆ ನಮ್ಮ ಅಂತಿಮ ಹಾಗೂ ಸವಾಲಿನ ಗುರಿಯಾಗಿದೆ’ ಎಂದಿರುವ ಸೋನಿಯಾ ಗಾಂಧಿ, ‘ಈ ಸವಾಲನ್ನು ಒಗ್ಗಟ್ಟಿನಿಂದ ಸಾಧಿಸಲು ಸಾಧ್ಯವಿದೆ. ಇದರ ಹೊರತಾಗಿ ನಮಗೆ ಬೇರೆ ಪರ್ಯಾಯ ಆಯ್ಕೆಗಳಿಲ್ಲ. ಹೀಗಾಗಿ ಎಲ್ಲರೂ ಒಂದಾಗಿ ಸವಾಲು ಎದುರಿಸೋಣ’ ಎಂದು ಹೇಳಿದ್ದಾರೆ.

‘ವಿರೋಧ ಪಕ್ಷಗಳು ಈಗ ನಾಯಕನನ್ನು ಹುಡುಕಲು ಗಮನ ಹರಿಸಬಾರದು’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ‘ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದ ಪಕ್ಷಗಳನ್ನು ಕೂಡ ಬಿಜೆಪಿ ವಿರುದ್ಧ ಹೋರಾಟಕ್ಕೆ ಕರೆ ನೀಡಬೇಕು. ನಾವು ಒಟ್ಟಾಗಿ ಕೆಲಸ ಮಾಡೋಣ’ ಎಂದು ಮಮತಾ ಬ್ಯಾನರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ಒಗ್ಗೂಡಲು ಕರೆ ನೀಡಿದ್ದಾರೆ. ಯಾರಿಗೆ ಪ್ರಜಾಪ್ರಭುತ್ವ, ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇದೆಯೋ ಅವರೆಲ್ಲಾ ಒಟ್ಟಾಗಿ ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಉಳಿಸಿ, ಬೆಳೆಸುವ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ನ ನಾಯಕಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌, ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಹಾಗೂ ಎಡಪಕ್ಷದ ಸೀತಾರಾಮ್‌ ಯೆಚೂರಿ ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಈ ಸಭೆಗೆ ಗೈರು ಹಾಜರಾಗಿದ್ದರು ಹಾಗೂ ಬಹುಜನ ಸಮಾಜ ಪಕ್ಷದ ಮಾಯಾವತಿಯನ್ನು ಈ ಸಭೆಗೆ ಆಹ್ವಾನಿಸಿಲ್ಲ. ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಇತ್ತೀಚೆಗೆ ಬಿಜೆಪಿಯ ಎನ್‌ಡಿಎ ಒಕ್ಕೂಟದಿಂದ ಹೊರ ಬಂದ ಅಕಾಲಿ ದಳವನ್ನು ಕೂಡ ಆಹ್ವಾನ ಮಾಡಿಲ್ಲ.

ದೇಶದಲ್ಲಿ ಸದ್ಯ ಸುದ್ದಿಯಲ್ಲಿರುವ ಪೆಗಾಸಸ್, ಕೃಷಿ ಕಾಯ್ದೆಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆದಿದೆ. ‘ಸಂಸತ್ತಿನ ಅಧಿವೇಶನ ಸಂದರ್ಭ ಎಲ್ಲರೂ ಒಗ್ಗಟ್ಟಾಗಿ ನಿಂತಂತೆ ಇನ್ನು ಮುಂದೆಯೂ ವಿಪಕ್ಷಗಳು ಜೊತೆಯಾಗಿ ನಿಲ್ಲುವ ಭರವಸೆ ನನ್ನಲ್ಲಿದೆ’ ಎಂದು ಹೇಳಿದ್ದಾರೆ.

Advertisement
Share this on...