ಕಾಬುಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ಅಲ್ಲಿಯ ಪ್ರಜೆಗಳ ಅದರಲ್ಲಿಯೂ ಮಹಿಳೆಯರು ಕ್ಷಣಕ್ಷಣವೂ ನರಕ ಅನುಭವಿಸುವಂತಾಗಿದೆ. ಎಷ್ಟೋ ಪುರುಷರು ಮಕ್ಕಳು, ಪತ್ನಿಯರನ್ನು ಅಲ್ಲಿಯೇ ಬಿಟ್ಟು ವಿಮಾನ ಏರಿ ಪರಾರಿಯಾಗಿದ್ದರೆ, ಇತ್ತ ಮಹಿಳೆಯರು ಮತ್ತು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಸಾಧ್ಯವಾದಷ್ಟು ತಪ್ಪಿಸಿಕೊಂಡು, ಎಲ್ಲೆಲ್ಲೋ ಅಡಗಿಕೊಂಡು ಬದುಕು ಸವೆಸುತ್ತಿದ್ದಾರೆ ಮಹಿಳೆಯರು. ಅಫ್ಘಾನಿಸ್ತಾನದ ದಯಕುಂಡಿ ಎಂಬಲ್ಲಿನ 25 ವರ್ಷದ ಮಹಿಳೆಯೊಬ್ಬರು ಕಳೆದ ಏಳು ದಿನಗಳಿಂದ ತಮ್ಮ ಸ್ನೇಹಿತರ ಮನೆಯಲ್ಲಿ ಅಡಗಿ ಕುಳಿತಿದ್ದಾರೆ. ಬದುಕುವ ದಾರಿ ಯಾವುದೂ ಕಾಣಿಸದೇ ಕಂಗಾಲಾಗಿರುವ ಈ ಸಮಯದಲ್ಲಿ ಅವರ ನೆನಪಿಗೆ ಬಂದಿರುವುದು ಪ್ರಧಾನಿ ನರೇಂದ್ರ ಮೋದಿಯವರು.
ಗುಟ್ಟಾಗಿ ಇಂಗ್ಲಿಷ್ ಪತ್ರಿಕೆಯೊಂದನ್ನು ಸಂಪರ್ಕಿಸಿರುವ ಈಕೆ, ಅಲ್ಲಿಂದ ವಾಟ್ಸ್ಆ್ಯಪ್ ಸಂದೇಶದ ಮೂಲಕ ಇ-ರಾಖಿಯನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸಿದ್ದು, ಧ್ವನಿ ಸಂದೇಶವನ್ನು ಕಳುಹಿಸಿದ್ದಾರೆ. ಅದರಲ್ಲಿ ಅವರು, ಭಾರತದ ಪ್ರಧಾನಿ ಅಣ್ಣಾ… ನಮಗೆ ಬದುಕುವ ಎಲ್ಲಾ ದಾರಿಗಳೂ ಮುಚ್ಚಿಹೋಗಿವೆ. ನಮ್ಮನ್ನು ನೀವೇ ಕಾಪಾಡಲು ಸಾಧ್ಯ. ಈ ಇ-ರಾಖಿಯನ್ನು ಸ್ವೀಕರಿಸಿ ಅಫ್ಘಾನ್ನಲ್ಲಿರುವ ನನ್ನಂಥ ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳ ಮಾನ-ಪ್ರಾಣ ಕಾಪಾಡಿ ಎಂದು ಕೇಳಿಕೊಂಡಿದ್ದಾರೆ.
‘ಭಾರತದಲ್ಲಿ ಇಂದು ರಕ್ಷಾ ಬಂಧನ. ಖುದ್ದು ರಾಖಿ ಕಳುಹಿಸಲು ಸಾಧ್ಯವಾಗುತ್ತಿಲ್ಲ, ಇ-ರಾಖಿ ಕಳುಹಿಸುತ್ತಿದ್ದೇನೆ. ಅಫ್ಘಾನಿಸ್ತಾನದ ಎಲ್ಲಾ ಮಹಿಳೆಯರ ಪರವಾಗಿ ನಾನು ಇದನ್ನು ಕಳುಹಿಸುತ್ತಿದ್ದೇನೆ. ದಯವಿಟ್ಟು ಪ್ರಧಾನಿ ಸಹೋದರರೇ, ಎಲ್ಲಾ ಹೆಣ್ಣುಮಕ್ಕಳ ಪ್ರಾಣ-ಮಾನವನ್ನು ನೀವೇ ಕಾಪಾಡಲು ಸಾಧ್ಯ. ಹೇಗಾದರೂ ಮಾಡಿ ನಮ್ಮನ್ನೆಲ್ಲಾ ಈ ರಕ್ಕಸರಿಂದ ರಕ್ಷಿಸಿ. ನಾನು ಇಲ್ಲಿ ಸರ್ಕಾರ ಉದ್ಯೋಗಿ. ನಾನು ಹೇಗೋ ತಪ್ಪಿಸಿಕೊಂಡು ಬಂದಿದ್ದೇನೆ. ಉದ್ಯೋಗ ಮಾಡುತ್ತಿರುವ ಹೆಣ್ಣುಮಕ್ಕಳನ್ನು ಅವರು ಹುಡುಕುತ್ತಿದ್ದಾರೆ. ನನ್ನ ಬದುಕು ಎಂದಿಗೆ ಅಂತ್ಯವಾಗುವುದೋ ತಿಳಿದಿಲ್ಲ. ದಯವಿಟ್ಟು ಇಲ್ಲಿಯ ಹೆಣ್ಣುಮಕ್ಕಳ ರಕ್ಷಣೆ ಮಾಡಿ.
ನಮಗೆ ಭಾರತಕ್ಕೆ ಬರಲು ವಿಸಾ ಕಲ್ಪಿಸಿ. ಇಲ್ಲಿ ಸಹಸ್ರಾರು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ. ಅತ್ಯಾಚಾರಿಗಳ ಕೈಯಲ್ಲಿ ಸಿಗುವ ಮೊದಲೇ ತಮ್ಮ ಮಕ್ಕಳಿಗೂ ವಿಷವುಣಿಸಿ ಸಾಯಲು ಮಹಿಳೆಯರು ಸಿದ್ಧರಾಗಿದ್ದಾರೆ. ನಮಗೆ ವೀಸಾ ಕೊಟ್ಟು ಎಲ್ಲರ ಪ್ರಾಣ ಕಾಪಾಡಿ. ಜೀವನ ಪರ್ಯಂತ ನಾವು ಋಣಿಯಾಗಿರುತ್ತೇವೆ. ಪ್ಲೀಸ್ ಪ್ಲೀಸ್… ನಿಮ್ಮ ಉತ್ತರಕ್ಕಾಗಿ ನಿರೀಕ್ಷಿಸುತ್ತಿದ್ದೇವೆ… ಎಂದು ಆಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಮಹಿಳೆ ಕಳುಹಿಸಿರುವ ಆಡಿಯೋ ಸಂದೇಶ ಇಲ್ಲಿದೆ ನೋಡಿ: ಕೃಪೆ ಔಟ್ಲುಕ್ ಮ್ಯಾಗಜೀನ್
'Dear Brother, Please Save Your Sisters': Afghan Woman Sends Rakhi To PM Narendra Modi @PMOIndia @narendramodi #Taliban #Afghanistan #Rakshabandhan #Rakhi https://t.co/xchVhwpA3u pic.twitter.com/t5XCQAETlx
— Outlook Magazine (@Outlookindia) August 22, 2021