“ಬೇಗ ಹೇಳಿ ಯಾರ‌್ಯಾರ್ ಎಣ್ಣೆ ಹೊಡೀತೀರ?” ರಾಹುಲ್ ಗಾಂಧಿ ಪ್ರಶ್ನೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್ ನಾಯಕರು

in Kannada News/News 357 views

“ನಮ್ಮ ಪಕ್ಷದಲ್ಲಿ ಮದ್ಯಪಾನ ಮಾಡುವವರು ಯಾರಿದ್ದೀರಿ?” ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಭೆಯಲ್ಲಿ ಸಂಸದ ರಾಹುಲ್ ಗಾಂಧಿ ಕೇಳಿದ ಈ ತೀಕ್ಷ್ಣ ಪ್ರಶ್ನೆಯು ಹಲವರ ಮುಖವನ್ನು ಕೆಂಪಾಗಿಸಿತು ಎಂದು ತಿಳಿದು ಬಂದಿದೆ.

Advertisement

ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾದ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ರಾಜ್ಯಾಧ್ಯಕ್ಷರ ಸಭೆ ನಡೆಸಲಾಯಿತು. ಮದ್ಯಪಾನ ವ್ಯಸನದಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಖಾದಿ ಬಳಕೆಯಂತಹ ಹಳೆಯ ನಿಯಮಗಳು ಎಷ್ಟರ ಮಟ್ಟಿಗೆ ಪಾಲನೆ ಆಗುತ್ತಿವೆ ಎಂದು ಪ್ರಶ್ನಿಸಲಾಯಿತು.

“ಈ ಸಭೆಗೆ ಹಾಜರಾದವರಲ್ಲಿ ಯಾರೆಲ್ಲ ಕುಡಿಯುತ್ತೀರಾ” ಎಂದು ಸಂಸದ ರಾಹುಲ್ ಗಾಂಧಿ ಕೇಳಿದ ನೇರ ಪ್ರಶ್ನೆ ನಾಯಕರ ಮುಖವನ್ನು ಕೆಂಪಾಗಿಸಿತು. ಕಳೆದ 2007ರಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಲು ಕರೆದ ಕಾರ್ಯಕರ್ತರ ಸಭೆಯಲ್ಲೂ ರಾಹುಲ್ ಗಾಂಧಿ ಇದೇ ರೀತಿಯಾದ ವಿಷಯವನ್ನು ಪ್ರಸ್ತಾಪಿಸಿದ್ದರು ಎಂದು ತಿಳಿದು ಬಂದಿದೆ.

ಕೈ ನಾಯಕರಲ್ಲಿ ಮುಜುಗರ ಮೂಡಿಸಿದ ಪ್ರಶ್ನೆ

ನಮ್ಮಲ್ಲಿ ಯಾರು ಕುಡಿಯುವವರಿದ್ದೀರಿ ಎಂಬ ರಾಹುಲ್ ಗಾಂಧಿಯವರ ಪ್ರಶ್ನೆ ಕಾಂಗ್ರೆಸ್ಸಿನ ಹಲವು ನಾಯಕರನ್ನು ಮುಜುಗರಕ್ಕೀಡು ಮಾಡುವಂತಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿದ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ನಿರ್ದಿಷ್ಟವಾಗಿ ಯಾರ ಹೆಸರನ್ನೂ ಪ್ರಸ್ತಾಪಿಸದೇ ನಮ್ಮ ರಾಜ್ಯದಲ್ಲಿ ಬಹಳಷ್ಟು ಜನ ಕುಡಿಯುವವರಿದ್ದಾರೆ ಅಂತಾ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಪುಸ್ತಕಕ್ಕೆ ಸೀಮಿತವಾದ ಮದ್ಯಪಾನ ನಿಷೇಧ ನಿಯಮ

ಪ್ರಸ್ತುತ ಪರಿಸ್ಥಿತಿಯನ್ನು ಸರಿ ಮಾಡುವುದಕ್ಕೆ ಸದಸ್ಯತ್ವದ ನಿಯಮಗಳಲ್ಲಿ ಬದಲಾವಣೆಯ ಅಗತ್ಯವಿದ್ದರೂ ಈ ಕ್ಷಣದಲ್ಲಿ ಅದನ್ನು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನಲ್ಲಿ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಆಗಿರುವ ಪಕ್ಷದ ಕಾರ್ಯಕಾರಿ ಸಮಿತಿಯು ಈ ನಿಯಮಗಳಲ್ಲಿ ಬದಲಾವಣೆ ತರಬಹುದು. ಆದರೆ ಮಹಾತ್ಮ ಗಾಂಧೀಜಿಯವರ ಕಾಲದಿಂದಲೂ ಮದ್ಯಪಾನ ಮಾಡಬಾರದು ಎಂಬ ನಿಯಮವು ಪುಸ್ತಕಗಳಲ್ಲೇ ಉಳಿದು ಹೋಗಿದೆ. ಈ ಹಿಂದೆ ಕಳೆದ 2007ರಲ್ಲಿ ಮದ್ಯಪಾನ ನಿಷೇಧ ನಿಯಮವನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದರು.

ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭಿಸಲಿರುವ ಕಾಂಗ್ರೆಸ್

ಭಾರತದಾದ್ಯಂತ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಕಾರ್ಯತಂತ್ರವನ್ನು ರೂಪಿಸಲು ಎಲ್ಲ ನಾಯಕರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದೆ. ನವೆಂಬರ್ 1 ರಿಂದ ಆರಂಭವಾಗಲಿರುವ ಕಾಂಗ್ರೆಸ್ ಹೊಸ ಸದಸ್ಯತ್ವ ಅಭಿಯಾನವು ಮುಂದಿನ ಮಾರ್ಚ್ ತಿಂಗಳಾಂತ್ಯದವರೆಗೂ ನಡೆಯಲಿದೆ. ಪಕ್ಷದ ಸದಸ್ಯತ್ವ ಬಯಸುವ ಜನರು ವೈಯಕ್ತಿಕ ಘೋಷಣೆಯಾಗಿ 10 ಅಂಶಗಳನ್ನು ಪಟ್ಟಿಯನ್ನು ಭರ್ತಿ ಮಾಡಬೇಕು. ಈ ಪಟ್ಟಿಯಲ್ಲಿ ಮದ್ಯಪಾನ ಮತ್ತು ಮಾದಕ ದ್ರವ್ಯಗಳಿಂದ ದೂರವಿರುವುದು ಕೂಡಾ ಒಂದು ಅಂಶವಾಗಿದೆ. ಇದರ ಜೊತೆಗೆ ಹೊಸ ಸದಸ್ಯರು ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಎಂದಿಗೂ ಟೀಕಿಸುವುದಿಲ್ಲ ಎಂದು ಪ್ರತಿಜ್ಞೆ ನೀಡಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬಲವರ್ಧನೆಯು ವೈಯಕ್ತಿಕ ಮಹತ್ವಾಕಾಂಕ್ಷೆಗಿಂತಲೂ ಮುಖ್ಯವಾಗಿದೆ ಎಂದಿರುವ ಹಂಗಾಮಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕರಿಗೆ ಒಗ್ಗಟ್ಟು ಹಾಗೂ ಶಿಸ್ತಿನ ಪಾಠ ಮಾಡಿದ್ದರು. ಕೇಂದ್ರ ಸರ್ಕಾರದ ಕೆಟ್ಟ ಆಡಳಿತದಿಂದ ಸಂತ್ರಸ್ತರಾಗಿರುವ ಜನರಿಗೋಸ್ಕರ ನಮ್ಮ ಹೋರಾಟವನ್ನು ಇಮ್ಮಡಿಗೊಳಿಸಬೇಕಿದೆ ಎಂದು ಕರೆ ನೀಡಿದ್ದರು. ‘ನಾನು ಶಿಸ್ತು ಮತ್ತು ಏಕತೆಯ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳುವುದಕ್ಕೆ ಬಯಸುತ್ತೇನೆ. ನಮ್ಮಲ್ಲಿ ಪಕ್ಷದ ಬಲವರ್ಧನೆಗೆ ಪ್ರತಿಯೊಬ್ಬರೂ ಮುಖ್ಯವಾಗಿ ಬೇಕಾಗುತ್ತಾರೆ. ಇಲ್ಲಿ ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ಹಿತಾಸಕ್ತಿಯ ಪ್ರಶ್ನೆಯೇ ಬರುವುದಿಲ್ಲ. ಕಾಂಗ್ರೆಸ್ ಸಂಘಟನೆ ಮತ್ತು ಬಲವರ್ಧನೆಯಲ್ಲೇ ಸಾಮೂಹಿಕ ಮತ್ತು ವೈಯಕ್ತಿಕ ಯಶಸ್ಸು ಅಡಗಿದೆ,’ ಎಂದು ಸೋನಿಯಾ ಗಾಂಧಿ ಹೇಳಿದ್ದರು.

2022ರ ಚುನಾವಣೆಗಳ ಮೇಲೆ ಕಾಂಗ್ರೆಸ್ ಲಕ್ಷ್ಯ

ದೇಶದಲ್ಲಿ ಮುಂಬರುವ 2022ರ ವಿಧಾನಸಭೆ ಚುನಾವಣೆಗಳ ಮೇಲೆ ಕಾಂಗ್ರೆಸ್ ಲಕ್ಷ್ಯ ವಹಿಸಿದೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶನ ಮತ್ತು ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸಂದೇಶ ನೀಡಲಾಗಿದೆ. ಈ ಹಿನ್ನೆಲೆ ಮಂಗಳವಾರದ ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಘಟಕಗಳ ಉಸ್ತುವಾರಿಗಳ ಸಭೆ ನಡೆಯಲಿದ್ದು, ಸದಸ್ಯತ್ವ, ತರಬೇತಿ, ಆಂದೋಲನ ಕಾರ್ಯಕ್ರಮ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.

Advertisement
Share this on...