ಡಿಸೆಂಬರ್ ಚಿತ್ರರಂಗಕ್ಕೆ ಎಷ್ಟು ಅದೃಷ್ಟವೋ ಅಷ್ಟೇ ಭಯ ಹುಟ್ಟಿಸುವ ತಿಂಗಳು ಕೂಡ ಹೌದು. ಹೊಸ ವರ್ಷ ಸಂಭ್ರಮದಲ್ಲಿ ಚಿತ್ರರಂಗ ಮುಳುಗಿರುವಾಗಲೇ ಚಿತ್ರರಂಗಕ್ಕೆ ಒಂದಲ್ಲ ಒಂದು ಆಘಾತ ಎದುರಾಗುತ್ತೆ. ಸಿನಿಮಾ ತಾರೆಯರು ಇದೇ ತಿಂಗಳಲ್ಲಿ ಕೊನೆಯುಸಿರೆಳೆಯುತ್ತಾರೆ. ಈಗ ತೆಲುಗು ಚಿತ್ರರಂಗ ಕೂಡ ಒಬ್ಬರ ಹಿಂದೊಬ್ಬರಂತೆ ಹಿರಿಯರನ್ನು ಕಳೆದುಕೊಂಡು ಶೋಕದಲ್ಲಿ ಮುಳುಗಿ ಹೋಗಿದೆ.
ತೆಲುಗು ಚಿತ್ರರಂಗ ದು:ಖದಲ್ಲಿ ಮುಳುಗಿದೆ. ತಮ್ಮ ಸಿನಿಮಾ ಕುಟುಂಬದ ಹಿರಿಯರನ್ನು ಕಳೆದುಕೊಂಡು ಕಂಗಾಲಾಗಿದೆ. ಹಿರಿಯ ಸಿನಿ ಸಾಹಿತಿ, ಕೋರಿಯೋಗ್ರಾಫರ್, ಹಿರಿಯ ನಿರ್ದೇಶಕರು ಕೆಲವು ದಿನಗಳಲ್ಲಿ ಅಂತರದಲ್ಲಿ ಇಡೀ ಚಿತ್ರರಂಗವನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ತೆಲುಗು ಚಿತ್ರರಂಗ ದಿಗ್ಗಜರನ್ನು ಕಳೆದುಕೊಂಡು ಬಡವಾಗಿದೆ.
ಐದು ದಿನಗಳಲ್ಲಿ ಮೂವರ ದಿಗ್ಗಜರನ್ನು ಕಳೆದುಕೊಂಡ ಟಾಲಿವುಡ್
ಒಂದ್ಕಡೆ ಪ್ರವಾಹದಿಂದ ಜನ ಜೀವನ ತತ್ತರಿಸಿ ಹೋಗಿದೆ. ಜನರು ಸೂರು ಕಳೆದುಕೊಂಡು ಕಂಗಾಲಾಗಿದ್ದಾರೆ. ಅವರ ಗೋಳನ್ನು ನೋಡಲಾಗದೆ ತಾರೆಯರು ಪ್ರವಾಹಕ್ಕೆ ಸಿಕ್ಕು ತತ್ತರಿಸಿ ಹೋಗಿರುವ ಜನರ ನೆರವಿಗೆ ಬರುತ್ತಿದ್ದಾರೆ. ಇನ್ನೊಂದು ಕಡೆ ಕೇವಲ ಐದು ದಿನಗಳಲ್ಲಿ ತೆಲುಗು ಚಿತ್ರರಂಗದ ಮೂರು ದಿಗ್ಗಜರನ್ನು ಕಳೆದುಕೊಂಡು ಮರುಗುತ್ತಿದೆ. ಟಾಲಿವುಡ್ ತಾರೆಯರು ಹಿರಿಯರ ಅಂತಿಮ ದರ್ಶನ ಪಡೆದ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಸಿನಿ ಸಾಹಿತಿ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ನಿಧನ
ಸಾವಿರಾರು ಹಾಡುಗಳನ್ನು ಬರೆದಿರುವ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ತೆಲುಗು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 1986ರಲ್ಲಿ ಸಿರಿವೆನ್ನೆಲ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು. ಇವರ ಸಿನಿಮಾ ಸಾಧನೆಗಾಗಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ. ಇತ್ತೀಚೆಗೆ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೀಗಾಗಿ ಸಿಕಂದರಾಬಾದ್ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ನವೆಂಬರ್ 30ರಂದು ಕೊನೆಯುಸಿರೆಳೆದಿದ್ದರು.
ಕೊವಿಡ್‌ಗೆ ರಾಷ್ಟ್ರಪ್ರಶಸ್ತಿ ವಿಜೇತ ಶಿವಶಂಕರ್ ಮಾಸ್ಟರ್ ಬಲಿ
ತೆಲುಗು, ತಮಿಳು ಸೇರಿದಂತೆ ಸುಮಾರು 800ಕ್ಕೂ ಅಧಿಕ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಶಿವಶಂಕರ್ ಮಾಸ್ಟರ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಹೈದರಾಬಾದ್‌ನ ಗಚ್ಚಿಬೌಲಿ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ 73 ವರ್ಷದ ಶಿವಶಂಕರ್ ಶ್ವಾಸಕೋಶ ಕೊರೊನಾಗೆ ಸಂಪೂರ್ಣ ಹಾನಿಯಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (ನವೆಂಬರ್ 28) ಸಾವನ್ನಪ್ಪಿದ್ದರು. ಮಗಧೀರ ಸಿನಿಮಾದ ಧೀರ.. ಧೀರ.. ಹಾಡಿನ ನೃತ್ಯ ಸಂಯೋಜನೆ ಮಾಡಿದ್ದಕ್ಕೆ 2011 ರಲ್ಲಿ ಶಿವಶಂಕರ್ ಮಾಸ್ಟರ್‌ಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ನಿರ್ದೇಶಕ ಕೆ ಎಸ್ ನಾಗೇಶ್ವರ ರಾವ್ ನಿಧನ
ಟಾಲಿವುಡ್‌ನ ಹೆಸರಾಂತ ನಿರ್ದೇಶಕ ನಾಗೇಶ್ವರ ರಾವ್ ನವೆಂಬರ್ 26ರಂದು ಕೊನೆಯುಸಿರೆಳೆದಿದ್ದಾರೆ. ಹೈದರಾಬಾದ್‌ನಿಂದ ಪಾಲಕ್ಕೋಲುಗೆ ನಾಗೇಶ್ವರ್ ರಾಮ್ ಪ್ರಯಾಣಿಸುತ್ತಿದ್ದರು. ನಾಗೇಶ್ವರ್ ರಾವ್ ಅವರಿಗೆ ದಾರಿ ಮಧ್ಯೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಏಲೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಮೃತರಾಗಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದರು. 1986ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದ ನಾಗೇಶ್ವರ ರಾವ್, ಜನಪ್ರಿಯ ನಿರ್ದೇಶಕ ಕೋಡಿ ರಾಮಕೃಷ್ಣ ಬಳಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಬಳಿಕ ನಾಗೇಶ್ವರ ರಾವ್ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು.