ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಯಾಕೆ ಕೇವಲ 1 ವೋಟ್ ಪಡೆಯಲು ಸಾಧ್ಯವಾಗದೆ ಪತನವಾಗಿತ್ತು? ಇದಕ್ಕೆ ಜಯಲಲಿತಾ ಅಲ್ಲ ಈ ಮುಸ್ಲಿಂ ಮುಖಂಡನೇ ಕಾರಣ

in Kannada News/News 192 views

ಲೋಕಸಭೆಯಲ್ಲಿ 1999 ರಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಕೇವಲ 1 ವೋಟ್‌ನಿಂದಾಗಿ ಪತನವಾಗಿದ್ದ ಬಗ್ಗೆ ಇದೀಗ ಪುಸ್ತಕವೊಂದರಲ್ಲಿ ಬಹಿರಂಗಪಡಿಸಲಾಗಿದೆ. ಸಣ್ಣ ಪುಟ್ಟ ಪಕ್ಷಗಳೊಂದಿಗೆ ಹೊಂದಾಣಿಕೆಯಾಗದ ಕಾರಣ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ವಿಫಲವಾಯಿತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

Advertisement
ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಕೇವಲ ಒಂದು ಮತದಿಂದ ಕುಸಿದಿರುವುದಕ್ಕೆ ಇದು ದೊಡ್ಡ ಕಾರಣವಾಗಿದೆ. ಆದರೆ, ಅಂದಿನ ಕಾಂಗ್ರೆಸ್ ಸಂಸದ ಗಿರಧರ್ ಗಮಾಂಗ್ ಮತ್ತು ನ್ಯಾಶನಲ್ ಕಾನ್ಫರೆನ್ಸ್‌ನ ಸಂಸದ ಸೈಫುದ್ದೀನ್ ಸೊಜ್ ನಿಂದಾಗಿ ವಾಜಪೇಯಿ ಸರ್ಕಾರದ ಪತನಕ್ಕೆ ಪ್ರಮುಖ ಕಾರಣ ಎಂದು ಬಿಜೆಪಿ ಈಗಲೂ ಆರೋಪಿಸುತ್ತದೆ.

‘ವಾಜಪೇಯಿ: ದಿ ಇಯರ್ಸ್ ದೆಟ್ ಚೇಂಜ್ಡ್ ಇಂಡಿಯಾ’ ಪುಸ್ತಕದಲ್ಲಿ ಈ ವಿಷಯ ಬಹಿರಂಗ

ಶಕ್ತಿ ಸಿನ್ಹಾ ರವರು ಬರೆದಿರುವ ‘ವಾಜಪೇಯಿ: ದಿ ಇಯರ್ಸ್ ದೆಟ್ ಚೇಂಜ್ಡ್ ಇಂಡಿಯಾ’ ಪುಸ್ತಕದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ ಸರ್ಕಾರ ಪತನವಾಗಿದ್ದರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಶಕ್ತಿ ಸಿನ್ಹಾ ರವರು ಹಲವಾರು ವರ್ಷಗಳ ಕಾಲ ವಾಜಪೇಯಿಯವರ ವೈಯಕ್ತಿಕ ಕಾರ್ಯದರ್ಶಿಗಳು ಆಗಿದ್ದರು ಹಾಗು ಅವರು ಪ್ರಧಾನಮಂತ್ರಿ ಕಾರ್ಯಾಲಯ (PMO) ನಲ್ಲೂ ಸೇವೆ ಸಲ್ಲಿಸಿದ್ದಾರೆ‌. ಎಐಎಡಿಎಂಕೆ ನಾಯಕಿ ಜಯಲಲಿತಾ ವಾಜಪೇಯಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ 13 ದಿನಗಳ ನಂತರ ಕೇಂದ್ರದಲ್ಲಿ ನಡೆದ ಮೊದಲ ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಯವೈಖರಿ ಮತ್ತು ಅದು ಹೇಗೆ ಕುಸಿಯಿತು ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ವಾಜಪೇಯಿ ಸರ್ಕಾರಕ್ಕೆ ಯಾವ ತೊಂದರೆಯೂ ಇರಲಿಲ್ಲ?

ವಾಜಪೇಯಿ ಸರ್ಕಾರದ ಪತನಕ್ಕೆ ಗಿರಧರ್ ಗಮಾಂಗ್‌ ರವರನ್ನ ದೂಷಿಸಲಾಗಿದ್ದರೂ, ಅದರಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದ ಅನೇಕ ಜನರಿದ್ದರು ಎಂದು ಸಿನ್ಹಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಅವರು ಈ ಬಗ್ಗೆ ಬರೆಯುತ್ತ, ‘ಬಿಜೆಪಿಯು ಸಣ್ಣ ಪಕ್ಷಗಳನ್ನು ನಿಭಾಯಿಸುವಲ್ಲಿ ವಿಫಲವಾಗಿತ್ತು’ ಎಂದು ಬರೆದಿದ್ದಾರೆ. ಲೇಖಕರು ಉದಾಹರಣೆಯೊಂದನ್ನ ನೀಡುತ್ತ ಅರುಣಾಚಲ ಪ್ರದೇಶದ ಕಾಂಗ್ರೆಸ್ಸಿನ ವಾಂಗ್ಚಾ ರಾಜ್‌ಕುಮಾರ್ ಅವರು ತಮ್ಮ ಪ್ರಾದೇಶಿಕ ಪಕ್ಷದಲ್ಲಿ ಒಡಕು ಇದೆ, ಆದರೂ ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಲೋಕಸಭೆಯಲ್ಲಿ ವಿಶ್ವಾಸ ಮತ ಚಲಾಯಿಸುವ ಮುನ್ನವೇ ವಾಜಪೇಯಿ ಯವರಿಗೆ ಭರವಸೆ ನೀಡಿದ್ದರು. ಆ ಸಮಯದಲ್ಲಿ ವಾಜಪೇಯಿ ಸರ್ಕಾರಕ್ಕೆ ಯಾವುದೇ ತೊಂದರೆ ಇರಲಿಲ್ಲ. ಆದರೆ ದುರದೃಷ್ಟವಶಾತ್ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಎನ್‌ಡಿಎ ನಾಯಕರಿಗೂ ರಾಜಕುಮಾರ ರವರನ್ನು ಸಂಪರ್ಕಿಸಲು ನೆನಪಾಗಲಿಲ್ಲ. ಆಗ ರಾಜಕುಮಾರ  ಸರ್ಕಾರದ ವಿರುದ್ಧ ಮತ ಚಲಾಯಿಸಿದರು.

ಸೈಫುದ್ದಿನ್ ಸೋಜ್ ಜೊತೆ ಸಮನ್ವಯ ಕಾಯ್ದುಕೊಳ್ಳಲು ವಿಫಲವಾಯಿತು ಬಿಜೆಪಿ’

ಸಿನ್ಹಾ ರವರು ತಮ್ಮ ಪುಸ್ತಕದಲ್ಲಿ ಬಿಜೆಪಿ ಸರಿಯಾದ ರೀತಿಯಲ್ಲಿ ಸೋಜ್ ಜೊತೆ ಮಾತುಕತೆ ನಡೆಸಿದ್ದರೆ ಸಕಾರಾತ್ಮಕ ಫಲಿತಾಂಶ ಬರುತ್ತಿತ್ತು ಎಂದು ಬರೆದಿದ್ದಾರೆ. ಸೈಫುದ್ದಿನ್ ಸೋಜ್ ಆಗ ನ್ಯಾಶನಲ್ ಕಾನ್ಫರೆನ್ಸ್ ಸದಸ್ಯರಾಗಿದ್ದರು ಹಾಗು ಅವರ ಪಕ್ಷದಿಂದ ಇಬ್ಬರು ಸಂಸದರಿದ್ದರು. ಅದರಲ್ಲಿ ಎರಡನೆಯವರೇ ಓಮರ್ ಅಬ್ದುಲ್ಲಾ ಆಗಿದ್ದರು. ಜಮ್ಮು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಆಗಿದ್ದರು ಹಾಗು ಅವರೇ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥರೂ ಆಗಿದ್ದರು. ಆದರೆ ಅವರು ಸೈಫುದ್ದಿನ್ ಸೋಜ್ ರವರನ್ನ ಪಕ್ಷದಿಂದ ದೂರವಿಡಲು ಪ್ರಯತ್ನಿಸಿದ್ದರು.

ಶ್ರೀನಗರ ಪ್ರವಾಸದ ವೇಳೆ ಆಗಿತ್ತು ತಪ್ಪು

ಪುಸ್ತಕದಲ್ಲಿ ತಿಳಿಸಿರುವಂತೆ ಸೈಫುದ್ದಿನ್ ಸೋಜ್ ಹಜ್‌ನ ಅಧಿಕೃಯ ಪ್ರತಿನಿಧಿಮಂಡಲಕ್ಕಾಗಿ ಕೆಲ ಹೆಸರುಗಳನ್ನ ಫಾರುಖ್ ಅಬ್ದುಲ್ಲಾ ಬಳಿ ಕಳಿಸಿದ್ದರು ಆದರೆ ಫಾರುಖ್ ಅಬ್ದುಲ್ಲಾ ಆ ಹೆಸರುಗಳನ್ನ ಲಿಸ್ಟ್ ನಿಂದ ತೆಗೆದು ಹಾಕಿದ್ದರು. ಡಿಸೆಂಬರ್ 6, 1998 ರಂದು ಅಟಲ್ ಬಿಹಾರಿ ವಾಜಪೇಯಿ ರವರು ಶ್ರೀನಗರ ಪ್ರವಾಸ ಕೈಗೊಂಡಿದ್ದರು. ಆಗ ಅವರು ಸ್ಥಳೀಯ ಸರ್ಕಾರದ ಮಂತ್ರಿಗಳನ್ನ ಭೇಟಿಯಾಗಲು ಬಯಸಿದ್ದರು ಆದರೆ ಸ್ವಲ್ಪ ಸಮಯದ ಕೊರತೆಯಿಂದಾಗಿ ಆ ಭೇಟಿ ರದ್ದಾಗಿತ್ತು. ಇದೇ ಕಾರಣದಿಂದಾಗಿ ವಾಜಪೇಯಿ ಸರ್ಕಾರ ದೊಡ್ಡ ಸಂಕಷ್ಟಕ್ಕೆ ಸಿಲುಕುವಂತಾಯಿತು. ಓಮರ್ ಅಬ್ದುಲ್ಲಾ ವಿಶ್ವಾಸಮತ ಯಾಚನೆಯಲ್ಲಿ ವಾಜಪೇಯಿ ಸರ್ಕಾರದ ಪರ ಮತವೇನೋ ಹಾಕಿದರು ಆದರೆ ಸೈಫುದ್ದಿನ್ ಸೋಜ್ ಸರ್ಕಾರದ ವಿರುದ್ಧ ಮತ ಚಲಾಯಿಸಿದರು. ಮಾಜಿ ಪ್ರಧಾನಿ ಐಕೆ ಗುಜ್ರಾಲ್ ಕೂಡ ವಾಜಪೇಯಿ ಸರ್ಕಾರ ಉರುಳಿಸಲು ಸರ್ಕಾರದ ವಿರುದ್ಧ ಮತಚಲಾಯಿಸಿದ್ದರು. ಕಾರಣ ಅಕಾಲಿ ದಳದ ಸಹಾಯವಿಲ್ಲದೆ ಐಕೆ ಗುಜ್ರಾಲ್ ಲೋಕಸಭಾ ಚುನಾವಣೆ ಗೆಲ್ಲಲು ಸಾಧ್ಯವಿರಲಿಲ್ಲ ಆದರೆ ಅಕಾಲಿ ದಳ ಆಗ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರಿಂದ ಐಕೆ ಗುಜ್ರಾಲ್ ವಾಜಪೇಯಿ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದರು‌ ಎಂದು ತಮ್ಮ ಪುಸ್ತಕದಲ್ಲಿ ಸಿನ್ಹಾ ಬರೆದಿದ್ದಾರೆ

ಗೇಮ್ ಆಡಿದ್ದ ಲಾಲು ಪ್ರಸಾದ್ ಯಾದವ್

ಜನತಾದಳದ ನಾಯಕ ರಾಮವಿಲಾಸ್ ಪಾಸ್ವಾನ್ ಆ ಸಮಯದಲ್ಲಿ ಲಾಲು ಪ್ರಸಾದ್ ಯಾದವ್ ಪಕ್ಷದ ಜೊತೆ ಸರ್ಕಾರದ ವಿರುದ್ಧ ಮತ ಹಾಕಲು ಇಷ್ಟವಿರಲಿಲ್ಲ ಆದರೂ ಅವರು ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾರಣ ಆಗ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಸರ್ಕಾರವಿತ್ತು ಹಾಗು ಜನತಾದಳದ ನಾಯಕ ರಾಮವಿಲಾಸ್ ಪಾಸ್ವಾನ್ ರನ್ನ ಒಲಿಸುವಲ್ಲಿ ಲಾಲು ಸಫಲರಾದರು. ಅದಾದ ಬಳಿಕ ಪಾಸ್ವಾನ್ ಜನತಾದಳದಿಂದ ಬೇರ್ಪಟ್ಟು ಬಿಜೆಪಿ ಜೊತೆ ಕೈ ಜೋಡಿಸಿ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರೂ ಆದರು.

Advertisement
Share this on...