ಶಶಿ ಥರೂರ್‌ನ್ನ ಪಕ್ಷದಿಂದ ಕಿತ್ತೆಸೆಯಲು ಮುಂದಾದ ಕಾಂಗ್ರೆಸ್: ಕಾರಣವೇನು ನೋಡಿ

in Uncategorized 417 views

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (Kerala Congress Committee) ಮುಖ್ಯಸ್ಥ ಕೆ ಸುಧಾಕರನ್ ಭಾನುವಾರ (26 ಡಿಸೆಂಬರ್ 2021) ತಮ್ಮದೇ ಪಕ್ಷದ ಸಂಸದ ಶಶಿ ತರೂರ್ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು, ಅವರು ಪಕ್ಷದಲ್ಲಿ ಕೇವಲ ಒಬ್ಬ ವ್ಯಕ್ತಿಯೇ ಹೊರತು ಅವರೇ ಇಡೀ ಕಾಂಗ್ರೆಸ್ ಅಲ್ಲ ಎಂದು ಹೇಳಿದ್ದಾರೆ. ಪಕ್ಷಾತೀತವಾಗಿ ನಡೆದುಕೊಳ್ಳದಿದ್ದರೆ ಪಕ್ಷದಿಂದ ತೊರೆಯಬೇಕಾಗುತ್ತದೆ ಎಂದು ವಾರ್ನ್ ಮಾಡಿದ್ದಾರೆ.

Advertisement

ಸುಧಾಕರನ್ ತಮ್ಮ ಸ್ವಗ್ರಾಮ ಕಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತರೂರ್ ಅವರ ರಾಜಕೀಯ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಹೈಸ್ಪೀಡ್ ರೈಲು ಯೋಜನೆಯನ್ನು ಅಧ್ಯಯನ ಮಾಡಲು ಹೆಚ್ಚಿನ ಸಮಯ ಬೇಕು ಎಂದು ಅವರು ಹೇಳಿದರು.

ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ತರೂರ್ ಪಕ್ಷದಲ್ಲಿ ಒಬ್ಬ ಸದಸ್ಯರು ಮಾತ್ರ. ಪಕ್ಷದ ನಿರ್ಧಾರದ ವ್ಯಾಪ್ತಿಗೆ ಒಳಪಟ್ಟರೆ ಪಕ್ಷದ ಭಾಗವಾಗಿಯೇ ಉಳಿಯುತ್ತಾರೆ. ಹಾಗೆ ಮಾಡದಿದ್ದರೆ ಪಕ್ಷದಲ್ಲಿ ಇರುವುದಿಲ್ಲ. ಇದು ಶಶಿ ತರೂರ್ ಆಗಿರಲಿ ಅಥವಾ ಕೆ ಸುಧಾಕರನ್ ಆಗಿರಲಿ ಎಲ್ಲರಿಗೂ ಅನ್ವಯಿಸುತ್ತದೆ. ಪಕ್ಷದ ಭಾಗವಾಗಿರುವ ಯಾವುದೇ ವ್ಯಕ್ತಿಗೆ ಸಂಘಟನೆ ತೆಗೆದುಕೊಳ್ಳುವ ನಿರ್ಧಾರಗಳನ್ನು ವಿರೋಧಿಸುವ ಅಥವಾ ತಿರಸ್ಕರಿಸುವ ಹಕ್ಕು ಇಲ್ಲ. ಅಂತಹ ಹಕ್ಕನ್ನು ಯಾರಿಗೂ ನೀಡಲಾಗಿಲ್ಲ, ಸಂಸದರಿಗೂ ನೀಡಲಾಗಿಲ್ಲ. ಕಾಂಗ್ರೆಸ್ ಎಂದರೆ ಕೇವಲ ಶಶಿ ತರೂರ್ ಅಲ್ಲ” ಎಂದರು‌.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕೇರಳದ ‘ಸೆಮಿ ಹೈಸ್ಪೀಡ್ ರೈಲು ಕಾರಿಡಾರ್’ ವಿರುದ್ಧ ಕೇಂದ್ರಕ್ಕೆ ಬರೆದ ಪತ್ರಕ್ಕೆ ಸಹಿ ಹಾಕಲು ಪಕ್ಷದ ಸಂಸದ ಶಶಿ ಥರೂರ್ ನಿರಾಕರಿಸಿದ ನಂತರ ಮತ್ತು ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಬಹಿರಂಗವಾಗಿ ಹೊಗಳಿದ ನಂತರ ತರೂರ್ ರಾಜ್ಯ ಕಾಂಗ್ರೆಸ್ ಘಟಕದ ನಾಯಕರಿಂದ ಟೀಕೆಗಳನ್ನು ಎದುರಿಸಿದ್ದರು. ತರೂರ್ ಅವರಿಂದ ಲಿಖಿತ ವಿವರಣೆ ಕೇಳಲಾಗಿದೆ. ಸ್ಪಷ್ಟನೆ ಬಂದ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುಧಾಕರನ್ ಹೇಳಿದ್ದಾರೆ.

ತಮ್ಮ ಪಕ್ಷದ ಸಹೋದ್ಯೋಗಿಗಳ ಟೀಕೆಗೆ ಪ್ರತಿಕ್ರಿಯಿಸಿದ ತರೂರ್, ಕೆಲವು ವಿಷಯಗಳಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಡುವುದು ಅಗತ್ಯ ಎಂದು ಟ್ವೀಟ್ ಮಾಡಿದ್ದರು. ಸಿಲ್ವರ್ ಲೈನ್ ಯೋಜನೆ ಬಗ್ಗೆ ಅಧ್ಯಯನ ನಡೆಸಿ ಅಭಿಪ್ರಾಯ ನೀಡುವುದಾಗಿಯೂ ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಎಲ್‌ಡಿಎಫ್ (LDF) ಸರ್ಕಾರದ ಮಹತ್ವಾಕಾಂಕ್ಷೆಯ ಸಿಲ್ವರ್ ಲೈನ್ ರೈಲು ಕಾರಿಡಾರ್ ಯೋಜನೆಯನ್ನು ವಿರೋಧಿಸುತ್ತಿದೆ. ಈ ಯೋಜನೆಯು ಅವೈಜ್ಞಾನಿಕ ಮತ್ತು ಅಪ್ರಾಯೋಗಿಕವಾಗಿದೆ ಎಂದು ಪ್ರತಿಪಕ್ಷಗಳ ಒಕ್ಕೂಟ UDF ಆರೋಪಿಸಿದೆ. ಆದರೆ, ಆಡಳಿತಾರೂಢ ಸಿಪಿಎಂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಎಂತಹ ಬೆಲೆ ತೆತ್ತಾದರೂ ಸರಿ ಯೋಜನೆಗೆ ಮುಂದಾಗುವುದಾಗಿ ಸ್ಪಷ್ಟಪಡಿಸಿದೆ.

Advertisement
Share this on...