ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಪ್ರಕರಣದಲ್ಲಿ ಗುರುವಾರ (17 ನವೆಂಬರ್ 2022) ಮಹತ್ವದ ತೀರ್ಪನ್ನು ನೀಡಿದೆ. ಮುಸ್ಲಿಂ ಕಡೆಯವರ ಆಕ್ಷೇಪವನ್ನು ನ್ಯಾಯಾಲಯ ತಿರಸ್ಕರಿಸಿದೆ. ಜ್ಞಾನವಾಪಿ ಪರಿಸರದ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸುವ ಪ್ರಕರಣವನ್ನು ನ್ಯಾಯಾಲಯ ಅಂಗೀಕರಿಸಬಾರದು. ಇದನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಬಾರದು ಎಂದು ಮುಸ್ಲಿಂ ಕಡೆಯವರು ಹೇಳಿದ್ದರು. ಆದರೆ ಈ ಪ್ರಕರಣದ ವಿಚಾರಣೆಗೆ ಯೋಗ್ಯವಿದ್ದು ವಿಚಾರಣೆ ಸಾಧ್ಯ ಎಂದು ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಈ ಆದೇಶವನ್ನು ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಮೊದಲ ಗೆಲುವು ಎಂದೇ ಹೇಳಲಾಗುತ್ತಿದೆ.
ಹಿಂದೂಗಳ ಪರ ವಕೀಲ ಅನುಪಮ್ ದ್ವಿವೇದಿ ಮಾತನಾಡುತ್ತ, “ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಿಚಾರಣೆಯ ನಿರ್ವಹಣೆಯನ್ನು ಪ್ರಶ್ನಿಸಿ ಮಸೀದಿ ಸಮಿತಿಯ ಮನವಿಯನ್ನು ವಾರಣಾಸಿ ನ್ಯಾಯಾಲಯ ವಜಾಗೊಳಿಸಿದೆ. ಮುಂದಿನ ವಿಚಾರಣೆ 2 ಡಿಸೆಂಬರ್ 2022 ರಂದು ನಡೆಯಲಿದೆ” ಎಂದು ತಿಳಿಸಿದ್ದಾರೆ.
Uttar Pradesh | Varanasi Court dismisses the plea filed by the Masjid committee challenging the maintainability of the suit in the Gyanvapi Mosque case; the next hearing is on 2nd December: Anupam Dwivedi, Advocate Hindu side pic.twitter.com/AbtVONiDfh
— ANI UP/Uttarakhand (@ANINewsUP) November 17, 2022
ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಿಕ್ಕಿರುವ ಶಿವಲಿಂಗವನ್ನು ಪೂಜಿಸುವ ಹಕ್ಕು, ಜ್ಞಾನವಾಪಿ ಆವರಣದಲ್ಲಿ ಮುಸ್ಲಿಮರ ಪ್ರವೇಶ ನಿಷೇಧ ಮತ್ತು ಜ್ಞಾನವಾಪಿ ಆವರಣದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ತೆರವು ಮಾಡುವ ವಿಚಾರವನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಪರಿಗಣಿಸಿದೆ. ವಿಶ್ವ ವೈದಿಕ ಸನಾತನ ಸಂಘವು ಈ ಕುರಿತು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸಿವಿಲ್ ನ್ಯಾಯಾಧೀಶ ಮಹೇಂದ್ರ ಪಾಂಡೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಜ್ಞಾನವಾಪಿ ಪರಿಸರವನ್ನ ಹಿಂದೂಗಳಿಗೆ ಹಸ್ತಾಂತರಿಸುವುದು ಸೇರಿದಂತೆ ಮೂರು ಬೇಡಿಕೆಗಳ ಕುರಿತು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಿಚಾರಣೆಗೆ ಬರಬೇಕಿದ್ದ ಮೂರು ಬೇಡಿಕೆಗಳ ಪೈಕಿ ಕಿರಣ್ ಸಿಂಗ್ ವಿಶೇನ್ ಮತ್ತಿತರರ ಅರ್ಜಿಯೂ ಒಂದು. ಇದರಲ್ಲಿ ಜ್ಞಾನವಾಪಿ ಜಾಗವನ್ನ ಹಿಂದೂಗಳಿಗೆ ಹಸ್ತಾಂತರಿಸುವಂತೆ ಆಗ್ರಹ ಮಾಡಲಾಗಿದೆ. ಇದಕ್ಕೆ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಕಿರಣ್ ಸಿಂಗ್ ವಿಶೆನ್ ಅವರ ಈ ಅರ್ಜಿಯನ್ನು ವಿಚಾರಣೆ ನಡೆಸಬಾರದು ಎಂದು ಸಮಿತಿ ಹೇಳಿತ್ತು.
ತಕ್ಷಣದಿಂದ ಜಾರಿಗೆ ಬರುವಂತೆ ಜ್ಯೋತಿರ್ಲಿಂಗ ಪೂಜೆ ಆರಂಭಿಸಿ ವಿವಾದಿತ ಜಾಗವನ್ನು ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ಹಿಂದೂ ಕಡೆಯವರು ಅರ್ಜಿಯಲ್ಲಿ ಕೋರಿದ್ದರು. ನ್ಯಾಯಾಲಯವು ಈ ವಿಷಯದ ಮುಂದಿನ ವಿಚಾರಣೆಯ ದಿನಾಂಕವನ್ನು ಡಿಸೆಂಬರ್ 2, 2022 ರಂದು ನಿಗದಿಪಡಿಸಿದೆ.
ಫಿರ್ಯಾದಿ ಕಿರಣ್ ಸಿಂಗ್ ಅವರು ಮೇ 24, 2022 ರಂದು ಪ್ರಕರಣವನ್ನು ದಾಖಲಿಸಿದ್ದರು, ಇದರಲ್ಲಿ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ಕಮಿಷನರ್, ಅಂಜುಮನ್ ಇಂತೇಜಾಮಿಯಾ ಸಮಿತಿ ಮತ್ತು ವಿಶ್ವನಾಥ ದೇವಸ್ಥಾನ ಟ್ರಸ್ಟ್ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ನಂತರ ಮೇ 25, 2022 ರಂದು, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಕೆ ವಿಶ್ವೇಶ್ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದ್ದರು.
ವಿಶ್ವ ವೈದಿಕ ಸನಾತನ ಸಂಘದ ಕಾರ್ಯಾಧ್ಯಕ್ಷ ಸಂತೋಷ್ ಸಿಂಗ್ ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದು, ಇದೊಂದು ದೊಡ್ಡ ವಿಜಯವಾಗಿದೆ ಎಂದರು. ಈಗ ಹಿಂದೂಗಳ ಬೇಡಿಕೆಗಳನ್ನು ಆಲಿಸಿದ ನಂತರವೂ ಹಿಂದುಗಳ ಪರವಾಗಿಯೇ ತೀರ್ಪು ಬರಲಿದೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಮೇ ತಿಂಗಳಲ್ಲಿ, ಸಿವಿಲ್ ನ್ಯಾಯಾಧೀಶರ (ಸೀನಿಯರ್ ಡಿವಿಷನ) ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ವೀಡಿಯೊಗ್ರಾಫಿ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ಸಮೀಕ್ಷೆಯ ಸಮಯದಲ್ಲಿ, ಜ್ಞಾನವಾಪಿ ರಚನೆಯ ವಜುಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು.