ದೆಹಲಿಯ MCD ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (AAP) ಭಾರಿ ಯಶಸ್ಸನ್ನು ಗಳಿಸಿದೆ ಮತ್ತು ಅದು ಬಹುಮತದ ಅಂಕಿಅಂಶವನ್ನ ಮುಟ್ಟುತ್ತಿದೆ. ಆದರೆ, ಮತ ಎಣಿಕೆಯ ಅಂತಿಮ ಫಲಿತಾಂಶ ಸಂಜೆ ವೇಳೆಗೆ ಪ್ರಕಟವಾಗಲಿದೆ. ಏತನ್ಮಧ್ಯೆ, MCD ಯಲ್ಲಿ AAP ಬಹುಮತ ಪಡೆದಿದ್ದರೂ ಮೇಯರ್ (Mayor) ಬಿಜೆಪಿಯವರೇ ಆಗುತ್ತಾರೆ ಎಂದು ಹೇಳಲಾಗುತ್ತಿದೆ.
ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ಪಾಲ್ ಸಿಂಗ್ ಬಗ್ಗಾ ಟ್ವೀಟ್ ಮಾಡಿದ್ದು “ಭಾರತೀಯ ಜನತಾ ಪಕ್ಷದ ಮೇಯರ್ ಮತ್ತೊಮ್ಮೆ ದೆಹಲಿಯಲ್ಲಿ ಆಯ್ಕೆಯಾಗುತ್ತಾರೆ.” ಎಂದು ಬರೆದಿದ್ದಾರೆ. ಬಗ್ಗಾ ಇದನ್ನು 12:41 ನಿಮಿಷಕ್ಕೆ ಟ್ವೀಟ್ ಮಾಡಿದ್ದಾರೆ ಮತ್ತು ಆ ಹೊತ್ತಿಗಾಗಲೇ ಆರಂಭಿಕ ಟ್ರೆಂಡ್ ನಲ್ಲಿ AAP ಬಹುಮತ ಪಡೆಯೋದು ಕನ್ಫರ್ಮ್ ಆಗಿತ್ತು.
दिल्ली में फिर एक बार भारतीय जनता पार्टी का मेयर बनेगा ।
— Tajinder Pal Singh Bagga (@TajinderBagga) December 7, 2022
ಅದರ ನಂತರ, MCD ಚುನಾವಣೆಯಲ್ಲಿ AAP ಬಹುಮತವನ್ನು ಪಡೆದುಕೊಂಡಿರಬಹುದು, ಆದರೆ ದೆಹಲಿಯ ಮೇಯರ್ ಬಿಜೆಪಿಯವರೇ ಆಗಿರುತ್ತಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳು ಬರಲಾರಂಭಿಸಿದವು. ಇದರ ಹಿಂದೆ ಹಲವು ವಾದಗಳನ್ನು ನೀಡಲಾಗುತ್ತಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ (ರಾಜ್ಯಪಾಲರು) 12 ಕೌನ್ಸಿಲರ್‌ಗಳನ್ನು ನಾಮನಿರ್ದೇಶನ ಮಾಡುತ್ತಾರೆ ಎಂಬುದು ಒಂದು ವಾದವಾಗಿದೆ. ಈ ಮೂಲಕ ಬಿಜೆಪಿಯ ಕೌನ್ಸಿಲರ್‌ಗಳ ಸಂಖ್ಯೆ 116ಕ್ಕೆ ಏರಿಕೆಯಾಗಲಿದೆ.
ಇದರೊಂದಿಗೆ ಎಎಪಿಯ ಕೌನ್ಸಿಲರ್‌ಗಳು ಹೆಚ್ಚಿರಬಹುದು, ಆದರೆ ಅವರು ಅಡ್ಡ ಮತದಾನ ಮಾಡಿ ಬಿಜೆಪಿಗೆ ಮೇಯರ್ ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ ಎಂದು ಜನರು ವಾದಿಸುತ್ತಾರೆ. ಇದೇ ವೇಳೆ ಕೆಲವರು ಕಾರ್ಪೊರೇಟರ್‌ಗಳು ಬಿಜೆಪಿ ಸೇರುವ ಬಗ್ಗೆಯೂ ಮಾತನಾಡುತ್ತಿದ್ದಾರೆ, ಏಕೆಂದರೆ ಪಕ್ಷಾಂತರ ನಿಷೇಧ ಕಾನೂನು ಕಾರ್ಪೊರೇಟರ್‌ಗಳಿಗೆ ಅನ್ವಯಿಸುವುದಿಲ್ಲ.
MCD ಚುನಾವಣೆಯಲ್ಲಿ ಪಕ್ಷಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸದಿರುವುದು ಆಮ್ ಆದ್ಮಿ ಪಕ್ಷಕ್ಕೆ ನಿಜವಾದ ಅಪಾಯವಾಗಿದೆ. ಸದನದಲ್ಲಿ ಪಕ್ಷದ ಒಪ್ಪಿಗೆಯಿಲ್ಲದೆ ಸಂಸದರು ಮತ್ತು ಶಾಸಕರು ಸ್ವಂತವಾಗಿ ಪಕ್ಷ ಬದಲಾಯಿಸುವಂತಿಲ್ಲ ಅಥವಾ ಯಾವುದೇ ವಿಷಯದ ಬಗ್ಗೆ ಮತ ಹಾಕುವಂತಿಲ್ಲ. ಆದಾಗ್ಯೂ, ಈ ನಿಯಮವು ಮೇಯರ್‌ಗಳು, ನಗರ ಸಭೆಗಳು ಮತ್ತು ಪುರಸಭೆಗಳ ಮುಖ್ಯಸ್ಥರು ಮತ್ತು ಕೌನ್ಸಿಲರ್‌ಗಳಿಗೆ ಅನ್ವಯಿಸುವುದಿಲ್ಲ.
ಈಗ ಬಿಜೆಪಿಯವರೇ ಮೇಯರ್ ಆಗುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿದ್ದರೆ ಅದರ ಹಿಂದೆಯೂ ಒಂದು ಕಾರಣವಿದೆ. ನಗರಪಾಲಿಕೆಗಳಲ್ಲಿ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ, ಆದರೆ ಅದು ಅನ್ವಯವಾಗುವ ಕಡೆಯೂ ಬಿಜೆಪಿ ಬಹುಮತವಿಲ್ಲದೆಯೂ ಸರ್ಕಾರ ರಚಿಸಿದೆ. ಇದಕ್ಕೆ ಉದಾಹರಣೆಗಳೂ ಇವೆ.
ಬಿಜೆಪಿಯು ಗೋವಾ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಇತರ ಪಕ್ಷದ ಶಾಸಕರ ಬೆಂಬಲದೊಂದಿಗೆ ಸುಲಭವಾಗಿ ಸರ್ಕಾರ ರಚಿಸಿತು. ಗೋವಾ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿತ್ತು, ಆದರೂ ಕಾಂಗ್ರೆಸ್ ಅಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಮತ್ತು ಬಿಜೆಪಿ ಅಧಿಕಾರವನ್ನು ವಶಪಡಿಸಿಕೊಂಡಿತ್ತು.