ಚೀನಾ ಪ್ರಸ್ತುತ ಕರೋನದ ಮಾರಣಾಂತಿಕ ಅಲೆಯನ್ನು ಎದುರಿಸುತ್ತಿದೆ. 90 ಪ್ರತಿಶತದಷ್ಟು ಜನಸಂಖ್ಯೆಯು ಸೋಂಕಿಗೆ ಒಳಗಾಗುವ ಭಯವಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ. ಸ್ಮಶಾನಗಳಲ್ಲಿ ಮೃತದೇಹಗಳ ಸಾಲು ಸಾಲು. ಇದರಿಂದ ಇಡೀ ವಿಶ್ವವೇ ಆತಂಕಕ್ಕೆ ಒಳಗಾಗಿದೆ. ಆದರೆ ಚೀನಾದ ಖ್ಯಾತ ಗಾಯಕಿಯೊಬ್ಬಳು ನ್ಯೂ ಇಯರ್ ನ ಮ್ಯೂಸಿಕ್ ಕನ್ಸರ್ಟ್ (ಹೊಸ ವರ್ಷದ ಸಂಗೀತ ಗೋಷ್ಟಿ) ತಪ್ಪಿಸಿಕೊಳ್ಳಲು ಸಾಧ್ಯವಾಗಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ತನ್ನನ್ನು ತಾನೇ ಸೋಂಕಿಗೆ ಒಳಗಾಗಿದ್ದಾಳೆ. ಈ ಗಾಯಕಿಯ ಹೆಸರು ಜೇನ್ ಜಾಂಗ್.
ಇದನ್ನು ಸ್ವತಃ ಜಾಂಗ್ ಅವರೇ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಹೊಸ ವರ್ಷದಲ್ಲಿ ಸೋಂಕಿನ ಅಪಾಯವನ್ನು ತೆಗೆದುಕೊಳ್ಳಲು ನಾನು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ವಿಷಯ ಬಹಿರಂಗವಾದಾಗಿನಿಂದ ಅವರು ಚರ್ಚೆಯಲ್ಲಿದ್ದಾರೆ. ಅವರನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ.
ವರದಿಯ ಪ್ರಕಾರ, ಹೊಸ ವರ್ಷದ ಮುನ್ನಾದಿನದ ಸಮಾರಂಭದಲ್ಲಿ ಸೋಂಕಿನ ಬಗ್ಗೆ ಚಿಂತಿಸದೆ ಪ್ರದರ್ಶನ ನೀಡಲು ತಾನು ಕರೋನಾ ಪಾಸಿಟಿವ್ ಆಗಲು ಬಯಸುತ್ತೇನೆ ಎಂದು ಜಾಂಗ್ ಹೇಳಿದ್ದಾರೆ. ಇದಕ್ಕಾಗಿ ‘ಶೀಪ್(ಕುರಿ)’ಗಳ ಮನೆಗಳಿಗೆ ಹೋಗಿದ್ದಳು. ಕೊರೊನಾ ಸೋಂಕಿತರನ್ನು ಚೀನಾದಲ್ಲಿ ಶೀಪ್ ಎಂದು ಕರೆಯುತ್ತಾರೆ. ಆಕೆ ಮಾತನಾಡುತ್ತ, “ನಾನು ಈಗಾಗಲೇ ಕೊರೊನಾ ಪಾಸಿಟಿವ್ ಆಗಿರುವ ಜನರ ಮನೆಗೆ ಹೋಗಿದ್ದೆ. ಹೊಸ ವರ್ಷದ ಮೊದಲು ಕೊರೊನಾದಿಂದ ಚೇತರಿಸಿಕೊಳ್ಳಲು ನನಗೆ ಸಾಕಷ್ಟು ಸಮಯ ಬೇಕು ಅನ್ನೋ ಕಾರಣಕ್ಕೇ ಈಗಲೇ ಕೊರೋನಾ ಪಾಸಿಟಿವ್ ಆಗಿದ್ದೇನೆ” ಎಂದಿದ್ದಾಳೆ.
“ಕರೋನಾ ಪಾಸಿಟಿವ್ ಜನರನ್ನು ಭೇಟಿ ಮಾಡಿದ ನಂತರ ಜ್ವರ, ಗಂಟಲು ನೋವು ಮತ್ತು ದೇಹದ ನೋವಿನಂತಹ ಲಕ್ಷಣಗಳನ್ನು ಅನುಭವಿಸಿದ್ದೇನೆ. ಅದರ ನಂತರ ನಾನು ಒಂದು ದಿನ ಮತ್ತು ರಾತ್ರಿ ಮಲಗಿದ್ದೆ ಮತ್ತು ರೋಗಲಕ್ಷಣಗಳು ಕಣ್ಮರೆಯಾಯಿತು” ಎಂದು ಗಾಯಕಿ ಹೇಳಿದ್ದಾಳೆ. ಜಾಂಗ್ ಪ್ರಕಾರ, “ನಾನು ಬಹಳಷ್ಟು ನೀರು ಕುಡಿದೆ, ವಿಟಮಿನ್ ಸಿ ತೆಗೆದುಕೊಂಡೆ ಮತ್ತು ಚೇತರಿಸಿಕೊಂಡೆ” ಎಂದಿದ್ದಾಳೆ. ಆಕೆಯ ರೋಗಲಕ್ಷಣಗಳು ಕೋವಿಡ್ ರೋಗಿಯ ಲಕ್ಷಣಗಳನ್ನು ಹೋಲುತ್ತವೆ, ಆದರೆ ಕೇವಲ ಒಂದು ದಿನ ಮಾತ್ರ ಇರುತ್ತವೆ ಎಂದು ಆಕೆ ಹೇಳಿದ್ದಾಳೆ.
Twitter ಯೂಸರ್ ಗಳು ಡಿಸೆಂಬರ್ 17, 2022 ರಂದು ಜಾಂಗ್ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, “ಹೊಸ ವರ್ಷದ ಮ್ಯೂಸಿಕ್ ಕನ್ಸರ್ಟ್ ಸಮಯದಲ್ಲಿ ಅವಳು ಸೋಂಕಿಗೆ ಒಳಗಾಗಬಹುದು ಎಂದು ಆಕೆ ಚಿಂತಿಸುತ್ತಿದ್ದಳು ಎಂದು ಗಾಯಕಿ ಜೇನ್ ಜಾಂಗ್ ಹೇಳುತ್ತಾರೆ, ಆದ್ದರಿಂದ ಆಕೆ ಚೇತರಿಸಿಕೊಳ್ಳಲು ಕೆಲವು COVID+ ಜನರನ್ನು ಭೇಟಿ ಮಾಡಲು ನಿರ್ಧರಿಸಿದರು. ಇನ್ನು ಕೇವಲ 1 ದಿನದಲ್ಲಿ ಗುಣಮುಖಳಾದೆ, ತೂಕ ಕಳೆದುಕೊಂಡು ಈಗ ಚರ್ಮ ಚೆನ್ನಾಗಿದೆ ಎಂದು ಟೀಕೆಗೆ ಗುರಿಯಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ.
Singer #JaneZhang says that she's worried she'll be sick for New Years concerts, so she decided to visit some covid+ people to get sick and get over it
Now she's getting bashed because she said she recovered in 1 day, lost weight and now has good skin😂 pic.twitter.com/wyki8v2wrZ
— 🍉 田里的猹 (@melonconsumer) December 17, 2022
ಜಾಂಗ್ ಅವರ ಈ ಕೃತ್ಯದ ನಂತರ, ಅವರು ಚೀನಾದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಎಲ್ಲರ ಟೀಕೆಗಳಿಂದ ಸುತ್ತುವರೆದಿರುವ ಜಾಂಗ್ ಜನರಲ್ಲಿ ಕ್ಷಮೆಯಾಚಿಸಿದ್ದಾರೆ ಮತ್ತು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. “ಪೋಸ್ಟ್ ಮಾಡುವ ಮೊದಲು ನಾನು ಇದರ ಬಗ್ಗೆ ಗಂಭೀರವಾಗಿ ಯೋಚಿಸಿರಲಿಲ್ಲ. ಇದಕ್ಕಾಗಿ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ. ಇದಲ್ಲದೆ, ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಮತ್ತು ಇತರ ಜನರಿಗೆ ತನ್ನಿಂದಾಗಿ ಸೋಂಕು ತಗುಲಲು ಬಯಸುವುದಿಲ್ಲ. ಅದಕ್ಕಾಗಿಯೇ ನಾನು ಈ ಹೆಜ್ಜೆ ಇಟ್ಟಿದ್ದೆ” ಎಂದು ಆಕೆ ಹೇಳಿದ್ದಾಳೆ.