Devraha Baba: ದೇವ್ರಹಾ ಬಾಬಾ ಒಬ್ಬ ಸಿದ್ಧಪುರುಷ ಹಾಗು ಮಹಾನ್ ಸಂತರಾಗಿದ್ದರು. ದೊಡ್ಡ ದೊಡ್ಡ ರಾಜಕಾರಣಿಗಳೂ ಬಾಬಾ ಅವರ ಆಶೀರ್ವಾದ ಪಡೆಯುತ್ತಿದ್ದರು. ಬಾಬಾರ ದರ್ಶನಕ್ಕೆ ದೇಶ ವಿದೇಶಗಳಿಂದ ಜನ ಬರುತ್ತಿದ್ದರು. ಬಾಬಾರವರು ಸಾರ್ವಜನಿಕ ಸೇವೆ ಮತ್ತು ಗೋಸೇವೆಯನ್ನು ಸರ್ವಶ್ರೇಷ್ಠವೆಂದು ಪರಿಗಣಿಸುತ್ತಿದ್ದರು.
Devraha Baba Story: ಭಾರತದಲ್ಲಿ ಪೌರಾಣಿಕ ಸಮಯದಿಂದಲೂ ಋಷಿ ಮುನಿಗಳ ಪರಂಪರೆಯಿದೆ. ಹಿಂದೂ ಧರ್ಮದಲ್ಲಂತೂ ನೂರಾರು ಜನ ಯೋಗಿಗಳು, ಋಷಿಮುನಿಗಳು, ಸಾಧು ಸಂತರ ವರ್ಣನೆ ನಮಗೆ ಇಂದಿಗೂ ಕಾಣಸಿಗುತ್ತವೆ. ಇವರ ಪೈಕಿಯೇ ಒಬ್ಬರು ಉತ್ತರಪ್ರದೇಶದ ದೇವಾರಿಯಾದ ಸಿದ್ಧ ಮಹಾಯೋಗಿ ಬಾಬಾ, ಇವರನ್ನ ದೇವಾರಿಯಾ ಕಾ ಬಾಬಾ ಎಂದೂ ಕರೆಯುತ್ತಾರೆ.
ನೂರಾರು ವರ್ಷಗಳ ಕಾಲ ಬದುಕಿ ದಾಖಲೆ ಬರೆದಿರುವ ಬಾಬಾರವರ ಬಗ್ಗೆ ಹೇಳುವುದಾದರೆ, ಅವರು ಹಲವಾರು ಸಿದ್ಧಿಗಳನ್ನೂ ಪ್ರಾಪ್ತಿ ಮಾಡಿಕೊಂಡಿದ್ದರು. ಬಾಬಾರವರು ಮನುಷ್ಯರ ಮತ್ತು ಪ್ರಾಣಿಗಳ ಮನಸ್ಸಿನ ಮಾತುಗಳನ್ನ ತಿಳಿದುಕೊಳ್ಳುವುದರಲ್ಲಿ ನಿಪುಣರಾಗಿದ್ದರು. ಬಾಬಾರ ಪವಾಡಗಳ ಬಗ್ಗೆ ಅನೇಕ ಕಥೆಗಳಿವೆ. ಬನ್ನಿ ಬಾಬಾರ ಪವಾಡಗಳು ಮತ್ತು ಕಥೆಗಳ ಬಗ್ಗೆ ತಿಳಿದುಕೊಳ್ಳೋಣ.
ದೇವರಹಾ ಬಾಬಾರ ದೀರ್ಘಾಯುಷ್ಯದ ರಹಸ್ಯ
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಆಯಸ್ಸು 70, 80, 90 ಅಥವ 100 ವರ್ಷದ್ದಾಗಿರುತ್ತದೆ. ಒಂದು ವೇಳೆ 100 ವರ್ಷ ದಾಟಿದರೆ ಅಂತಹ ವ್ಯಕ್ತಿ ರೆಕಾರ್ಡ್ ಪಟ್ಟಿಗೆ ಸೇರಿಬಿಡುತ್ತಾನೆ. ಆದರೆ ಬಾಬಾ ದೇವರಹಾ ರವರು ನೂರಲ್ಲ ಇನ್ನೂರಲ್ಲ ಬರೋಬ್ಬರಿ 900 ವರ್ಷಕ್ಕೂ ಅಧಿಕ ಕಾಲ ಬದುಕಿ ರೆಕಾರ್ಡ್ ಸೃಷ್ಟಿಸಿದ್ದರು ಎಂದು ಹೇಳಲಾಗುತ್ತದೆ.
ಬಾಬಾರವರ ಜೀವಿತಾವಧಿಯ ಬಗ್ಗೆ ಅನೇಕ ಅಭಿಪ್ರಾಯಗಳಿದ್ದರೂ. ಕೆಲವರು ಬಾಬಾ 250 ವರ್ಷಗಳ ಕಾಲ ಬದುಕಿದ್ದರು ಎಂದು ಹೇಳಿದರೆ, ಇನ್ನೂ ಕೆಲವರು ಬಾಬಾ ಅವರ ವಯಸ್ಸು 500 ವರ್ಷಗಳು ಎಂದು ನಂಬುತ್ತಾರೆ. ಇದರೊಂದಿಗೆ ಬಾಬಾರ ಜನನದ ಬಗ್ಗೆಯೂ ಗೊಂದಲವಿದೆ. ಬಾಬಾ ಯಾವಾಗ, ಎಲ್ಲಿ ಮತ್ತು ಹೇಗೆ ಜನಿಸಿದರು ಎಂಬುದು ಇಂದಿನವರೆಗೂ ಯಾರಿಗೂ ತಿಳಿದಿಲ್ಲ.
ಸಾರ್ವಜನಿಕ ಸೇವೆ ಮತ್ತು ಗೋಸೇವೆಯನ್ನು ಪುಣ್ಯದ ಕೆಲಸವೆಂದು ಪರಿಗಣಿಸುತ್ತಿದ್ದ ಬಾಬಾ ದೇವರಹಾ
ಬಾಬಾ ದೇವರಹಾ ಭಗವಾನ್ ಶ್ರೀರಾಮನ ಭಕ್ತರಾಗಿದ್ದರು ಮತ್ತು ಶ್ರೀ ಕೃಷ್ಣನನ್ನು ಬಾಬಾ ಶ್ರೀರಾಮನಿಗೆ ಸಮಾನವೆಂದು ಪರಿಗಣಿಸುತ್ತಿದ್ದರು ಮತ್ತು ಭಕ್ತರ ತೊಂದರೆಗಳನ್ನು ತೊಡೆದುಹಾಕಲು ಅವರು ರಾಮ, ಕೃಷ್ಣರ ಜೀವನ ಮಂತ್ರಗಳನ್ನೇ ನೀಡುತ್ತಿದ್ದರು. ಆದರೆ ಇದರ ಹೊರತಾಗಿ ಬಾಬಾರವರು ಗೋಸೇವೆ ಮತ್ತು ಸಾರ್ವಜನಿಕ ಸೇವೆಯನ್ನು ಅತಿಮುಖ್ಯವೆಂದು ಪರಿಗಣಿಸಿದ್ದರು. ಬಡವರು, ಅಸಹಾಯಕರು ಮತ್ತು ನಿರ್ಗತಿಕರ ಸೇವೆ ಮಾಡಲು, ಗೋಮಾತೆಯನ್ನು ರಕ್ಷಿಸಲು ಮತ್ತು ದೇವರ ಭಕ್ತಿಯಲ್ಲಿ ಮಗ್ನರಾಗಿರಲು ಬಾಬಾ ತಮ್ಮ ಭಕ್ತರನ್ನು ಪ್ರೇರೇಪಿಸುತ್ತಿದ್ದರು. ಬಾಬಾ ದೇವರಾಹ್ ಗೋ ಹ ತ್ಯೆ ಯ ವಿರುದ್ಧ ಜನರನ್ನು ಪ್ರೇರೇಪಿಸುತ್ತಿದ್ದರು.
ಬಾಬಾರ ಭಕ್ತಗಣದಲ್ಲಿ ಹೆಸರಾಂತ ಗಣ್ಯರೂ ಇದ್ದಾರೆ
ದೇವರಹಾ ಬಾಬಾರ ದರ್ಶನಕ್ಕೆ ದೇಶ ವಿದೇಶಗಳ ಮೂಲೆಮೂಲೆಗಳಿಂದ ಜನರು ಆಗಮಿಸುತ್ತಿದ್ದರು. ಆದರೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಸಹ ಬಾಬಾರನ್ನು ನೋಡಲು ಬರುತ್ತಿದ್ದರು. ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೇಂದ್ರ ಪ್ರಸಾದ್, ಮದನ್ ಮೋಹನ್ ಮಾಳವೀಯ, ಪುರುಷೋತ್ತಮದಾಸ್ ಟಂಡನ್ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಬಾಬಾರ ಭಕ್ತರಲ್ಲಿ ಸೇರಿದ್ದಾರೆ.
ಬಾಬಾ ದೇವರಹಾ ರವರ ಚಮತ್ಕಾರಿಕ ಹಾಗು ಅಲೌಕಿಕ ರಹಸ್ಯ
ಬಾಬಾ ಅವರು ಸರಯೂ ನದಿಯ ದಡದಲ್ಲಿ ನಿರ್ಮಿಸಲಾದ ಆಶ್ರಮದ ಮರದ ಹಂದರವೊಂದರ ಮೇಲೆ ಕುಳಿತು ತಮ್ಮ ಭಕ್ತರಿಗೆ ಇಲ್ಲಿ ದರ್ಶನ ನೀಡುತ್ತಿದ್ದರು. ಸರಯೂ ದಿಯಾರಾ ಪ್ರದೇಶದಲ್ಲಿದ್ದುದರಿಂದ ಬಾಬಾರಿಗೆ ‘ದೇವರಹಾ ಬಾಬಾ’ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಬಾಬಾ ಅವರ ದೈಹಿಕ ಮತ್ತು ವಸ್ತ್ರ ವಿನ್ಯಾಸವೂ ಅದ್ಭುತವಾಗಿತ್ತು. ತೆಳ್ಳನೆಯ ದೇಹ, ಉದ್ದ ಕೂದಲು, ಭುಜದ ಮೇಲೆ ಯಜ್ಞೋಪವಿತ್ (ಜನಿವಾರ) ಮತ್ತು ಸೊಂಟದಲ್ಲಿ ಹುಲ್ಲೆ ಗುಳ್ಳೆ ಧರಿಸುತ್ತಿದ್ದರು. ಬಾಬಾ ಪ್ರಾಣಿಗಳ ಭಾಷೆಯನ್ನೂ ಅರ್ಥಮಾಡಿಕೊಂಡಿದ್ದರು ಮತ್ತು ಈ ಪವಾಡದಿಂದ ಅವರು ಅಪಾಯಕಾರಿ ಕಾಡು ಪ್ರಾಣಿಗಳನ್ನು ಕ್ಷಣಾರ್ಧದಲ್ಲಿ ನಿಯಂತ್ರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಬಾಬಾ ದೇವರಹಾ ಉಸಿರಾಟವೂ ಇಲ್ಲದೆ 30 ನಿಮಿಷಗಳ ಕಾಲ ನೀರಿನಲ್ಲಿ ಇರುತ್ತಿದ್ದರೆಂದು ಹೇಳಲಾಗುತ್ತದೆ.
ಬಾಬಾ ತಮ್ಮ ಭಕ್ತರಿಗೆ ಸದಾ ರಾಮ ಮಂತ್ರದ ದೀಕ್ಷೆ ನೀಡುತ್ತ ಅವರು…
‘ಏಕ್ ಲಕಡಿ ಹೃದಯ್ ಕೋ ಮಾನೋ ದುಸರಾ ನಾಮ್ ಪಹಿಚಾನೋ, ರಾಮ್ ನಾಮ್ ನಿತ್ ಉರ ಪೆ ಮಾರೋ ಬ್ರಹ್ಮಾ ದಿಖೇ ಸಂಶಯ್ ನ ಜಾನೋ’ ಎನ್ನುತ್ತಿದ್ದರು.
ಬಾಬಾ ರಾಮನ ಜೊತೆಗೆ ಶ್ರೀಕೃಷ್ಣನನ್ನೂ ನಂಬುತ್ತಿದ್ದರು. ಬಾಬಾರವರು ಶ್ರೀರಾಮ ಮತ್ತು ಶ್ರೀಕೃಷ್ಣ ಒಂದೇ ಎಂದು ನಂಬುತ್ತಿದ್ದರು. ಬಾಬಾ ಭಕ್ತರಿಗೆ ಕೃಷ್ಣ ಮಂತ್ರವನ್ನು ನೀಡುತ್ತಿದ್ದರು. ಅದು…
‘ಓಂ ಕೃಷ್ಣಾಯ ವಾಸುವೇವಾಯ ಹರಯೇ ಪರಮಾತ್ಮನೆ, ಪ್ರಣತಃ ಕ್ಲೇಶ ನಾಶಾಯ, ಗೋವಿಂದಾಯ ನಮೋ ನಮಃ’ ಎಂಬುದಾಗಿತ್ತು
ಈ ದಿನ ತಮ್ಮ ನಶ್ವರ ಶರೀರವನ್ನ ತ್ಯಾಗ ಮಾಡಿದ್ದ ಬಾಬಾ
ಬಾಬಾರವರು ತಮ್ಮ ಜೀವನದಲ್ಲಿ ಆಹಾರ ಸೇವಿಸಿಲ್ಲ ಎಂದು ಹೇಳಲಾಗುತ್ತದೆ. ಅವರು ಹಾಲು, ಜೇನುತುಪ್ಪ ಮತ್ತು ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದರು. ಬಾಬಾರ ಜನ್ಮ ದಿನಾಂಕದ ಬಗ್ಗೆ ಈವರೆಗೂ ಯಾರಿಗೂ ತಿಳಿದಿಲ್ಲ, ಈ ಕಾರಣದಿಂದಾಗಿ ಅವರ ವಯಸ್ಸನ್ನು ಸರಿಯಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಆದರೆ ಬಾಬಾ ಜೂನ್ 19, 1990 ರಂದು ತಮ್ಮ ನಶ್ವರ ಶರೀರವನ್ನ ತೊರೆದರು. ಅಂದು ಯೋಗಿನಿ ಏಕಾದಶಿಯ ದಿನ. ಹಿಂದೂ ಧರ್ಮದಲ್ಲಿ, ಯೋಗಿನಿ ಏಕಾದಶಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದು ಮೋಕ್ಷವನ್ನು ತರುತ್ತದೆ.