ಮುಂಬೈ: ಕಳೆದ ಕೆಲವು ದಿನಗಳಿಂದ ಧಾರಾವಾಹಿ ಮತ್ತು ಸಿನಿಮಾ ನಿರ್ಮಾಪಕಿ ಏಕ್ತಾ ಕಪೂರ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಇದೀಗ ಸೆಕ್ಸ್ಗಿಂತ ರೇಪ್ ಮಾಡೋದು ಒಳ್ಳೆಯದಾ ಎಂದು ಪ್ರಶ್ನಿಸುವ ಮೂಲಕ ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ.
ಏಕ್ತಾ ಕಪೂರ್ ನಿರ್ಮಾಣದ ‘ತ್ರಿಪಲ್ ಎಕ್ಸ್-2’ ವೆಬ್ ಸೀರೀಸ್ ವಿವಾದದಲ್ಲಿ ಸಿಲುಕಿತ್ತು. ಸೀರೀಸ್ ನಲ್ಲಿ ಸೇನೆಯನ್ನು ಅಪಮಾನ ಮಾಡಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ಸಹ ದಾಖಲಾಗಿದೆ. ನನಗೆ ಭಾರತೀಯ ಸೇನೆಗೆ ಕ್ಷಮೆ ಕೇಳಲು ಯಾವುದೇ ಹಿಂಜರಿಕೆ ಇಲ್ಲ. ಈಗಾಗಲೇ ವೆಬ್ ಸೀರೀಸ್ ನಲ್ಲಿ ವಿವಾದಾತ್ಮಕ ಎನ್ನಲಾದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ಏಕ್ತಾ ಕಪೂರ್ ಸ್ಪಷ್ಟಪಡಿಸಿದ್ದಾರೆ.
ವೆಬ್ ಸೀರೀಸ್ ಆ ತುಣುಕುಗಳಿಗೆ ಕತ್ತರಿ ಹಾಕಿ, ಭಾರತೀಯ ಸೇನೆ ಮತ್ತು ಸೈನಿಕರ ಪತ್ನಿಯರ ಬಳಿ ನಾನು ಕ್ಷಮೆ ಕೇಳಲು ಸಿದ್ಧಳಿದ್ದೇನೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿರೋದರಿಂದ ನನಗೆ ಬೇಸರವಾಗಿದೆ ಎಂದಿದ್ದಾರೆ.
ಭಾರತೀಯ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಕೆಲ ವ್ಯಕ್ತಿಗಳು ತಾವು ದೊಡ್ಡ ಹೋರಾಟಗಾರರು ಎಂದು ತಿಳಿದು ನನ್ನನ್ನು ಮತ್ತು ನನ್ನ ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ನಮ್ಮನ್ನು ಆಶ್ಲೀಲವಾಗಿ ಟ್ರೋಲ್ ಮಾಡುವದರ ಜೊತೆಗೆ ಆತ್ಯಾಚಾರದ ಬೆದರಿಕೆಯೊಡ್ಡಿದ್ದಾರೆ. ಇದು ಸೆಕ್ಸ್ ಅಥವಾ ಸೇನೆಗೆ ಸಂಬಂಧಿಸಿದ ಸಮಸ್ಯೆ ಅಲ್ಲ. ರೇಪ್ ಮಾಡುವದಾಗಿ ಬೆದರಿಕೆಯೊಡ್ಡುವ ವ್ಯಕ್ತಿ ನನ್ನನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದೀನಿ ಅಂತಾ ಆರೋಪಿಸುತ್ತಾನೆ. ಹಾಗಾದಾರೆ ರೇಪ್ ಮಾಡೋದಕ್ಕಿಂತ ಸೆಕ್ಸ್ ತುಂಬಾನೇ ಕೆಟ್ಟದ್ದು ಅಲ್ವಾ? ಎಂದು ಟ್ರೋಲರ್ ಗಳಿಗೆ ತಿರುಗೇಟು ನೀಡಿದ್ದಾರೆ.
ವೈಯಕ್ತಿಕವಾಗಿ ನಾನು ಸೈನಿಕರನ್ನು ಗೌರವಿಸುತ್ತೇನೆ. ವೆಬ್ ಸೀರೀಸ್ ನಲ್ಲಿರೋದು ಕೇವಲ ಒಂದು ಕಾಲ್ಪನಿಕ ಪಾತ್ರ. ಹೌದು, ಈ ಪಾತ್ರ ಸೃಷ್ಟಿಸಿದ್ದು ತಪ್ಪು. ಹಾಗಾಗಿ ತಪ್ಪನ್ನು ಒಪ್ಪಿಕೊಂಡು ವಿವಾದಾತ್ಮಕ ದೃಶ್ಯಗಳನ್ನು ತೆಗೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಟ್ರೋಲ್ಗಳಿಗೆ ಸರಿಯಾದ ಉತ್ತರ ನೀಡುತ್ತೇನೆ. ಸೈಬರ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ನನಗಾದ ಮಾನಸಿಕ ನೋವು ಬೇರೆ ಮಹಿಳೆಯರಿಗೆ ಆಗೋದು ಬೇಡ ಎಂದು ಹೇಳಿದ್ದಾರೆ.
ಯೂತ್ಸ್ ಹಾಳು ಮಾಡುತ್ತಿದ್ದೀರಿ ಎಂದ ಸುಪ್ರೀಂ ಕೋರ್ಟ್
ಬಾಲಿವುಡ್ ಖ್ಯಾತ ನಿರ್ಮಾಪಕಿ, ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ನಿರ್ಮಾಣದ ವೆಬ್ ಸರಣಿ ಬಗ್ಗೆ ಸುಪ್ರೀಂ ಕೋರ್ಟ್ (Court) ಅಸಮಾಧಾನ ವ್ಯಕ್ತಪಡಿಸಿದೆ. XXX ನಂತಹ ಚಿತ್ರಗಳಿಂದ ನೀವು ಯುವಕರನ್ನು ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡಿದೆ. ಏಕ್ತಾ ಕಪೂರ್ ನಿರ್ಮಾಣದಲ್ಲಿ ಈ ವೆಬ್ ಸರಣಿ ಮೂಡಿ ಬರುತ್ತಿದ್ದು, ಯುವ ಜನತೆಯ ಮನಸ್ಸನ್ನು ಹಾಳು ಮಾಡುವಂತಹ ವಿಷಯವನ್ನು ಅದು ಒಳಗೊಂಡಿದೆ ಎನ್ನಲಾಗುತ್ತಿದೆ.
ಇದೇ ವೆಬ್ ಸರಣಿಯಲ್ಲಿ ಯೋಧರಿಗೆ ಅವಮಾನ ಮಾಡುವಂತಹ ಸರಣಿಯೊಂದು ಪ್ರಸಾರವಾಗಿದ್ದು, ಅದರಲ್ಲಿ ಯೋಧರಿಗೆ ಮತ್ತು ಅವರ ಪತ್ನಿಗೆ ಅಪಮಾನ ಮಾಡಲಾಗಿದೆ ಎಂದು ಬಿಹಾರದ ಮಾಜಿ ಯೋಧ ಶಂಭು ಕುಮಾರ್ ದೂರು ನೀಡಿದ್ದರು. ಯೋಧರು ಗಡಿ ಕಾಯುತ್ತಿದ್ದರೆ, ಅವರ ಪತ್ನಿ ಬೇರೆಯವರೊಂದಿಗೆ ಸಂಬಂಧ ಬೆಳೆಸಿರುತ್ತಾರೆ ಎಂಬ ಅರ್ಥ ಬರುವಂತಹ ಕಂಟೆಂಟ್ ಅನ್ನು ಅದು ಒಳಗೊಂಡಿತ್ತು ಎನ್ನಲಾಗುತ್ತಿದೆ.
ಈ ದೂರಿಗೆ ಸಂಬಂಧಪಟ್ಟಂತೆ ಸತತವಾಗಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಕೋರ್ಟಿಗೆ ಹಾಜರಾಗದ ಕಾರಣ, ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು. ಇದನ್ನು ರದ್ದು ಮಾಡುವಂತೆ ಏಕ್ತಾ ಮತ್ತೆ ಕೋರ್ಟಿಗೆ ಮೊರೆ ಹೋಗಿದ್ದರು. ಈ ಸಮಯದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವೆಸ್ ಸರಣಿ ಬಗ್ಗೆ ಕಿಡಿಕಾರಿದ್ದಾರೆ. ನೀವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೀರಿ ಮತ್ತು ಯಾರು ಅದನ್ನು ನೋಡಬೇಕು ಎಂದು ಬಯಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೆಬ್ ಸರಣಿಗೆ (Web Series) ಸಂಬಂಧಿಸಿದಂತೆ ಈಗಾಗಲೇ ಹಲವು ದೃಶ್ಯಗಳನ್ನು ತಗೆದುಹಾಕಿರುವುದಾಗಿ ಈ ಹಿಂದೆಯೇ ಏಕ್ತಾ ಹೇಳಿಕೊಂಡಿದ್ದರು. ಯಾವ ದೃಶ್ಯಗಳು ಆಕ್ಷೇಪಾರ್ಹ ಎಂದು ಜನರು ಹೇಳಿದ್ದರೋ, ಅದೆಲ್ಲವನ್ನೂ ಕಿತ್ತು ಹಾಕಲಾಗಿದೆ ಎಂದೂ ತಿಳಿಸಿದ್ದರು. ಹಾಗಾಗಿ ಕೋರ್ಟಿಗೆ ಹಾಜರಾಗುತ್ತಿಲ್ಲ ಎಂದು ಅವರ ಪರ ವಕೀಲರು ತಿಳಿಸಿದ್ದರು. ಆದರೆ, ಈ ಮಾತನ್ನು ಕೋರ್ಟ್ ಒಪ್ಪಲಿಲ್ಲ. ಬಿಹಾರದಲ್ಲಿ ನಡೆಯುತ್ತಿರುವ ಕೇಸ್ ಬಗ್ಗೆಯೂ ಸುಪ್ರೀಂ ಕೋರ್ಟ್ ವರದಿ ಕೇಳಿದೆ.