ಪಾಕಿಸ್ತಾನದ ಪ್ರಜೆಯೊಬ್ಬ ನಮಗೆ ಅಲ್ಲಾಹ್ ಮೋದಿಯನ್ನು ನೀಡಲಿ ಅವರು ಈ ದೇಶದ ಸ್ಥಿತಿಯನ್ನು ಸರಿಪಡಿಸುತ್ತಾರೆ ಎಂದು ಹೇಳಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಸ್ಲಾಮಾಬಾದ್: ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರದ ನೀತಿಗಳು ವಿಶ್ವಮಾನ್ಯವಾಗಿವೆ. ಜಗತ್ತಿನ ದೊಡ್ಡ ದೊಡ್ಡ ದೇಶಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ನಿಲುವುಗಳನ್ನು ಆಗಾಗ ಹೊಗಳುತ್ತಿರುತ್ತಾರೆ. ಆದರೆ ನೆರೆಯ ಪಾಕಿಸ್ತಾನದ ಜನರು ಭಾರತವನ್ನು ಅದರಲ್ಲೂ ಮೋದಿಯನ್ನು ಹೊಗಳಿದ್ದು, ಇದುವರೆಗೆ ನಡೆದಿಲ್ಲ. ಆದರೆ ಈಗ ಅದೂ ಆಗಿದೆ. ಪಾಕಿಸ್ತಾನದ ಪ್ರಜೆಯೊಬ್ಬ ನಮಗೆ ಅಲ್ಲಾಹ್ ಮೋದಿಯನ್ನು ನೀಡಲಿ ಅವರು ಈ ದೇಶದ ಸ್ಥಿತಿಯನ್ನು ಸರಿಪಡಿಸುತ್ತಾರೆ ಎಂದು ಹೇಳಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀವ್ರವಾಗಿ ಹದೆಗೆಟ್ಟಿದೆ, ಪೆಟ್ರೋಲ್ ಡಿಸೇಲ್ ಸೇರಿದಂತೆ ದಿನ ಬಳಕೆಯ ವಸ್ತುಗಳು ತೀವ್ರವಾಗಿ ಏರಿಕೆಯಾಗಿದ್ದು, ಬಡವರು ತಿನ್ನಲು ಅನ್ನವಿಲ್ಲದೇ ಕೈಯಲ್ಲಿ ಕಾಸು ಇಲ್ಲದೇ ಒದ್ದಾಡುತ್ತಿದ್ದಾರೆ. ದೇಶದ ಸರ್ಕಾರದ ವಿರುದ್ಧ, ಜನರ ಆಕ್ರೋಶ ತೀವ್ರವಾಗಿದೆ. ಈ ಮಧ್ಯೆ ಪಾಕಿಸ್ತಾನದ ಯೂಟ್ಯೂಬರ್ ಸನಾ ಅಮ್ಜದ್ ಅವರು ಪೋಸ್ಟ್ ಮಾಡಿದ ವೈರಲ್ ವೀಡಿಯೊದಲ್ಲಿ ಯುವಕನೋರ್ವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ದೇಶದ ಆರ್ಥಿಕ ದುಸ್ಥಿತಿಗೆ ಬೇಸರ ವ್ಯಕ್ತಪಡಿಸಿದ ಆತ ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನವನ್ನು ಆಳಿದ್ದರೆ ದೇಶದ ಜನ ಸಮಂಜಸವಾದ ಬೆಲೆಯಲ್ಲಿ ದಿನ ಬಳಕೆಯ ವಸ್ತುಗಳನ್ನು ಖರೀದಿಸಲಾಗುತ್ತಿತ್ತು ಎಂದು ಆತ ಹೇಳಿದ್ದಾನೆ.
ಮಾಜಿ ಪತ್ರಕರ್ತೆಯಾಗಿರುವ, ಸನಾ ಅಮ್ಜದ್ ಅವರು ವೈರಲ್ ವಿಡಿಯೋದಲ್ಲಿ, ‘ಪಾಕಿಸ್ತಾನ್ ಸೆ ಜಿಂದಾ ಭಾಗೋ ಚಾಹೆ ಇಂಡಿಯಾ ಚಲೇ ಜಾವೋ’ (ಪಾಕಿಸ್ತಾನದಿಂದ ನಿಮ್ಮ ಪ್ರಾಣಕ್ಕಾಗಿ ಭಾರತಕ್ಕೆ ಓಡಿಹೋಗಿ) ಎಂದು ಘೋಷಣೆಯನ್ನು ಏಕೆ ಬೀದಿಗಳಲ್ಲಿ ಎತ್ತಲಾಗುತ್ತಿದೆ ಎಂದು ಸ್ಥಳೀಯರೊಬ್ಬರನ್ನು ಕೇಳಿದ್ದಾರೆ. ಇದಕ್ಕೆ ಅವರು ತುಂಬಾ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದು, ತಾನು ಪಾಕಿಸ್ತಾನದಲ್ಲಿ ಹುಟ್ಟಬಾರದೆಂದು ಬಯಸುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಅಲ್ಲದೇ 1947ರಲ್ಲಿ ಪಾಕಿಸ್ತಾನ ಭಾರತದಿಂದ ಪ್ರತ್ಯೇಕಗೊಂಡು ಸ್ವಾತಂತ್ರ ಗಳಿಸಿತ್ತು. ಆದರೆ ಈ ಪ್ರತ್ಯೇಕತೆ ಆಗಬಾರದಿತ್ತು. ಪ್ರತ್ಯೇಕವಾಗದೇ ಹೋಗಿದ್ದಲ್ಲಿ ನಾವು 20 ರೂಪಾಯಿಗೆ ಒಂದು ಕೇಜಿ ಟೊಮೆಟೋ ಖರೀದಿಸಬಹುದಿತ್ತು. 150 ರೂಪಾಯಿಗೆ ಒಂದು ಕೆಜಿ ಚಿಕನ್ ಖರೀದಿಸಬಹುದಿತ್ತು. 100 ರೂಪಾಯಿಗೆ ಪೆಟ್ರೋಲ್ ಖರೀದಿಸಬಹುದಿತ್ತು ಎಂದು ಆತ ಹೇಳಿದ್ದಾನೆ. ಇಸ್ಲಾಮಿಸ್ಟ್ ರಾಷ್ಟ್ರ (Islamist nation) ಎಂದು ಘೋಷಿಸಲ್ಪಟ್ಟಿದ್ದರು, ದುರಾದೃಷ್ಟವಶಾತ್ ಇಸ್ಲಾಂನ ತತ್ವಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿಲ್ಲ ಎಂದು ಆ ಯುವಕ ಬೇಸರ ವ್ಯಕ್ತಪಡಿಸಿದರು.
ನಮಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಬೇಕು ಅವರ ಹೊರತಾಗಿ ಬೇರೆ ಯಾರೂ ಬೇಡ. ಮೋದಿ ನಮಗಿಂತ ಉತ್ತಮರು, ಅವರು ಅಲ್ಲಿನ ಜನರನ್ನು ತುಂಬಾ ಗೌರವಿಸುತ್ತಾರೆ. ಒಂದು ವೇಲೆ ನಮಗೆ ನರೇಂದ್ರ ಮೋದಿ ಸಿಕ್ಕರೆ, ನಮಗೆ ಪರ್ವೇಜ್ ಮುಷರಫ್, ನವಾಜ್ ಷರೀಫ್ ಅಥವಾ ಬೆನಜೀರ್ ಅಥವಾ ಇಮ್ರಾನ್ ಯಾರ ಅಗತ್ಯವೂ ನಮಗಿಲ್ಲ. ನಮಗೆ ಬೇಕಾಗಿರುವುದು ಪ್ರಧಾನಿ ಮೋದಿ ಏಕೆಂದರೆ ಅವರು ಮಾತ್ರ ನಮ್ಮ ದೇಶದ ಎಲ್ಲಾ ಚೇಷ್ಟೆ ಕುತಂತ್ರಗಳನ್ನು ನಿಭಾಯಿಸಬಲ್ಲರು. ಭಾರತವೂ ಪ್ರಸ್ತುತ ವಿಶ್ವದ 5ನೇ ಅತೀದೊಡ್ಡ ಆರ್ಥಿಕತೆಯಾಗಿದೆ. ಆದರೆ ನಾವು ಭಾರತದ ಸಮೀಪದಲ್ಲೂ ಇಲ್ಲ. ಅವರು ಎಲ್ಲೋ ಇದ್ದರೆ ನಾವೆಲ್ಲೋ ಇದ್ದೇವೆ. ನಮಗೂ ಅವರಿಗೂ ಯಾವುದೇ ಹೋಲಿಕೆ ಇಲ್ಲ. ಅಲ್ಲಾಹೂ ನಮಗೆ ಬೇರೆನೂ ಕೊಡುವುದು ಬೇಡ ನರೇಂದ್ರ ಮೋದಿಯನ್ನು ಕೊಡಲಿ ಎಂದು ಆ ಯುವಕ ಹೇಳಿದ್ದಾನೆ.
"Hamen Modi Mil Jaye bus, Na hamen Nawaz Sharif Chahiye, Na Imran, Na Benazir chahiye, General Musharraf bhi nahi chahiye"
Ek Pakistani ki Khwahish 😉 pic.twitter.com/Wbogbet2KF
— Meenakshi Joshi ( मीनाक्षी जोशी ) (@IMinakshiJoshi) February 23, 2023
ಭಾರತದಲ್ಲಿರುವ ಮುಸ್ಲಿಮರು ಪುಣ್ಯವಂತರು, ನಾನು ಮೋದಿಯವರ ಆಳ್ವಿಕೆಯಲ್ಲಿ ಬದುಕಲು ಸಿದ್ಧನಿದ್ದೇನೆ, ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ಕೆಟ್ಟ ಮನುಷ್ಯ ಅಲ್ಲ, ಅಲ್ಲಿ ಭಾರತೀಯರಿಗೆ ಟೊಮ್ಯಾಟೊ ಮತ್ತು ಚಿಕನ್ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ರಾತ್ರಿಯಲ್ಲಿ ನಿಮ್ಮ ಮಕ್ಕಳಿಗೆ ತಿನ್ನಲು ಕೊಡಲು ಏನೂ ಇಲ್ಲದಿದ್ದಾಗ ನೀವು ಇರುವ ದೇಶವನ್ನು ದೂರಲು ಪ್ರಾರಂಭಿಸುತ್ತೀರಿ ಎಂದು ಅವರು ಹೇಳಿದರು. ನಾನು ದೇವರಲ್ಲಿ ಮೋದಿಯನ್ನು ನೀಡುವಂತೆ ಬೇಡುತ್ತೇನೆ. ಅವರು ನಮ್ಮ ದೇಶವನ್ನು ಅಳುವಂತೆ ಕೇಳುತ್ತೇನೆ ಎಂದು ಆ ಯುವಕ ಭಾವುಕನಾಗಿದ್ದಾನೆ. ಪಾಕಿಸ್ತಾನ ಭಾರತದೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಪ್ರಸ್ತುತ ಭಾರತ ಹಾಗೂ ಪಾಕಿಸ್ಥಾನ ಮಧ್ಯೆ ಯಾವುದೇ ಹೋಲಿಕೆ ಇಲ್ಲ ಎಂದು ಆತ ಹೇಳಿದ್ದಾನೆ.