ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠಾನ’ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ಪೂರ್ಣಗೊಂಡ ನಂತರ ಮಂದಿರವು ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ. ಶತಮಾನಗಳ ಕಾಯುವಿಕೆಯ ನಂತರ ರಾಮದೇವ ಬಂದಿದ್ದಾನೆ ಎಂಬ ಸಂಭ್ರವನ್ನು ಜಗತ್ತಿನಾದ್ಯಂತ ಜನರು ಬಹಳ ಸಂಭ್ರಮದಿಂದ ಆಚರಿಸಿದ್ದು ನಮಗೆಲ್ಲಾ ತಿಳಿದೇ ಇದೆ. ದೇಶದ ಬೀದಿ ಬೀದಿಗಳಲ್ಲಿ, ಪ್ರತಿ ಮನೆಗಳಲ್ಲಿ ಈ ದಿನವನ್ನು ರಾಮ ನವಮಿಯಂತೆ ಆಚರಿಸಿ, ರಾಮನಿಗೆ ಸ್ವಾಗತ ಕೋರಲಾಗಿದೆ.
ಈ ಸಂಭ್ರಮದ ನಡುವೆಯೇ ಎಲ್ಲರ ಗಮನ ಸೆಳೆಯುತ್ತಿರುವುದು ರಾಮಮಂದಿರದ ರಚನೆ, ಕಟ್ಟಡದ ವಿನ್ಯಾಸ ಹಾಗೂ ವಾಸ್ತುಶಿಲ್ಪ. ಪ್ರಾಕೃತಿಕ ವಿಕೋಪಗಳು ತಂದೊಡ್ಡಬಹುದಾದ ಅಪಾಯಗಳನ್ನು ಸಹ ಮನದಲ್ಲಿಟ್ಟುಕೊಂಡು ರಾಮಮಂದಿರವನ್ನು ನಿರ್ಮಿಸಲಾಗಿದ್ದು, ಮಂದಿರದ ಆಯುಷ್ಯ ಸುಮಾರು ಕನಿಷ್ಠ 2500 ವರ್ಷಗಳವರೆಗೂ ಇರಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಕೆಲಸ ಮಾಡಿದೆ. ಆದರೆ, ಇಷ್ಟು ಸುಂದರ ಹಾಗೂ ಸಾವಿರಾರು ವರ್ಷ ಬಾಳುವ ಗಟ್ಟಿಮುಟ್ಟಾದ ನಿರ್ಮಾಣ ಮಾಡಿರುವುದು ಯಾವ ಸಂಸ್ಥೆ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಇಲ್ಲಿದೆ ನೋಡಿ ಅದರ ಬಗ್ಗೆ ಮಾಹಿತಿ.
ರಾಮ ಮಂದಿರದ ನಿರ್ಮಾಣ ಮಾಡ್ತಿರೋದು ದೈತ್ಯ ಸಂಸ್ಥೆ L&T
ನಮ್ಮ ದೇಶದ ಬಹುದೊಡ್ಡ ಎಂಜಿನಿಯರಿಂಗ್ ಮತ್ತು ನಿರ್ಮಾಣ ಸಂಸ್ಥೆಯಾಗಿರುವ ಎಲ್ ಅಂಡ್ ಟಿ (L&T) ರಾಮ ಮಂದಿರವನ್ನು ವಿನ್ಯಾಸಗೊಳಿಸಿ, ನಿರ್ಮಿಸಿದ ಹೆಮ್ಮೆಗೆ ಪಾತ್ರವಾಗಿದೆ.
ಅಯೋಧ್ಯೆ ರಾಮಮಂದಿರದ ಆಕರ್ಷಕ ಸೌಂದರ್ಯದ ಹಿಂದೆ ಹಲವಾರು ಪ್ರಮುಖ ಹೆಸರುಗಳಿದ್ದರೂ, ಮುನ್ನಲೆಯಲ್ಲಿದ್ದದ್ದು ಲಾರ್ಸೆನ್ & ಟುಬ್ರೊ.
ಅಂದಹಾಗೆ, 491000 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಎಸ್ಎನ್ ಸುಬ್ರಹ್ಮಣ್ಯನ್.
ಇವರ ದಿನನಿತ್ಯದ ವರಮಾನ ಬರೋಬ್ಬರಿ 16 ಲಕ್ಷ
ಅಬ್ಬಾ! ಎನಿಸಿದರೂ ಇದು ಸತ್ಯ. L&T ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಸ್.ಎನ್.ಸುಬ್ರಹ್ಮಣ್ಯನ್ ಅವರ ದಿನನಿತ್ಯದ ಸಂಬಳ 16,70,000 ರೂ. ಅಂದರೆ, ಅವರ ವರ್ಷದ ವರಮಾನ 61.27 ಕೋಟಿ ರೂಪಾಯಿ. 2021 ಕ್ಕೆ ಹೋಲಿಸಿದರೆ ಇವರ ಸಂಬಳದಲ್ಲಿ 115 ಪ್ರತಿಶತ ಹೆಚ್ಚಳವಾಗಿದೆ.
ಸುಬ್ರಮಣ್ಯನ್ ರವರು ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ ಮತ್ತು ವ್ಯವಹಾರ ನಿರ್ವಹಣೆಯಲ್ಲಿ (MBA) ಸ್ನಾತಕೋತ್ತರ ಪದವಿ ಹೊಂದಿದ್ದು, 1984 ರಲ್ಲಿ ಸಂಸ್ಥೆಗೆ ನೇಮಕಗೊಂಡರು.
ಸುಬ್ರಮಣ್ಯನ್ ಮೂಲತಃ ಚೆನ್ನೈ ನವರು. ಪ್ರಾಜೆಕ್ಟ್ ಪ್ಲಾನಿಂಗ್ ಇಂಜಿನಿಯರ್ ಆಗಿ 1984 ರಲ್ಲಿ ಎಲ್ & ಟಿ ಯೊಂದಿಗೆ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ ಇವರು ಲಂಡನ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಸಹ ಶಿಕ್ಷಣ ಪಡೆದಿದ್ದಾರೆ. ಇವರ ಪತ್ನಿ ಮೀನಾ ಸುಬ್ರಹ್ಮಣ್ಯನ್. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಎಲ್ ಅಂಡ್ ಟಿ, ಎಂಜಿನಿಯರಿಂಗ್, ನಿರ್ಮಾಣ, ಉತ್ಪಾದನೆ, ತಂತ್ರಜ್ಞಾನ ಇತ್ಯಾದಿಗಳಲ್ಲಿ ಅತಿ ದೊಡ್ಡ ಹೆಸರನ್ನು ಹೊಂದಿರುವ ಬಹುರಾಷ್ಟ್ರೀಯ ಭಾರತೀಯ ಸಂಘಟನೆಯಾಗಿದೆ.
ಸುಬ್ರಮಣ್ಯನ್ ಜುಲೈ 2017 ರಿಂದ ಸಿಇಒ ಮತ್ತು ಎಂಡಿ ಆಗಿ ಈ ದೈತ್ಯ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಎಎಮ್ ನಾಯಕ್ ತಮ್ಮ ಸ್ಥಾನದಿಂದ ಕೆಳಗಿಳಿದ ನಂತರ ಅವರು ಇತ್ತೀಚೆಗೆ ಎಲ್ & ಟಿ ಗ್ರೂಪ್ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇವರು ಈ ಬಹುಕೋಟಿ ಡಾಲರ್ ಸಮೂಹದ ನಿರ್ದೇಶಕರ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಸುಬ್ರಮಣ್ಯನ್ LTIMindtree ಮತ್ತು L&T ಟೆಕ್ನಾಲಜಿ ಸೇವೆಗಳ ಮಂಡಳಿಗಳಲ್ಲಿ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ, L&T ಮೆಟ್ರೋ ರೈಲ್ (ಹೈದರಾಬಾದ್) ಲಿಮಿಟೆಡ್ನ ಅಧ್ಯಕ್ಷರು ಮತ್ತು L&T ಫೈನಾನ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ನ ನಿರ್ದೇಶಕರು ಮತ್ತು ಅಧ್ಯಕ್ಷರು ಸಹ ಹೌದು.