ಲಿವ್ ಇನ್ ಸಂಬಂಧದಲ್ಲಿರುವ ಅಂತರ್ಧರ್ಮೀಯ ಜೋಡಿಯೊಂದು, ತಮಗೆ ಯುವತಿಯ ಕುಟುಂಬದಿಂದ ಹಾಗೂ ಪೊಲೀಸರಿಂದ ಕಿರುಕುಳವಾಗುತ್ತಿದೆ. ಹೀಗಾಗಿ ರಕ್ಷಣೆ ನೀಡಿ ಎಂದು ಹೈಕೋರ್ಟ್ ಮೊರೆ ಹೋಗಿತ್ತು.
ಲಖನೌ: ‘ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ಹಾಗೂ ಗುರಾಯಿಸುವಿಕೆಗೆ ನಿಷೇಧ ಇದೆ’ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ತನ್ಮೂಲಕ ಮುಸ್ಲಿಂ ಜೋಡಿಯ ಲಿವಿಂಗ್ ಟುಗೆದರ್ ವಿರುದ್ಧ ಪರೋಕ್ಷವಾಗಿ ತೀರ್ಪು ನೀಡಿದೆ.
ಲಿವ್ ಇನ್ ಸಂಬಂಧದಲ್ಲಿರುವ ಅಂತರ್ಧರ್ಮೀಯ ಜೋಡಿಯೊಂದು, ತಮಗೆ ಯುವತಿಯ ಕುಟುಂಬದಿಂದ ಹಾಗೂ ಪೊಲೀಸರಿಂದ ಕಿರುಕುಳವಾಗುತ್ತಿದೆ. ಹೀಗಾಗಿ ರಕ್ಷಣೆ ನೀಡಿ ಎಂದು ಹೈಕೋರ್ಟ್ ಮೊರೆ ಹೋಗಿತ್ತು. ಇದನ್ನು ವಜಾಗೊಳಿಸಿದ ಕೋರ್ಟು, ಈ ಮೇಲಿನ ಅಭಿಪ್ರಾಯ ಹೇಳಿದೆ. ಈ ಮೂಲಕ ಲಿವ್ ಇನ್ ಸಂಬಂಧಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆ.
ಇಸ್ಲಾಂನಲ್ಲಿ ಗಂಡ-ಹೆಂಡತಿ ಬಿಟ್ಟು ಇತರರ ನಡುವೆ (ಅನೈತಿಕ ಸಂಬಂಧ ಹಾಗೂ ವಿವಾಹಪೂರ್ವ ಲೈಂಗಿಕತೆ) ಲೈಂಗಿಕ ಕ್ರಿಯೆ ನಡೆಸುವುದು ನಿಷಿದ್ಧ. ಇದಕ್ಕೆ ‘ಝೀನಾ’ ಎನ್ನುತ್ತಾರೆ. ಅಂತೆಯೇ ವಿವಾಹದ ಮುನ್ನವೇ ಚುಂಬನ, ಗುರಾಯಿಸುವುದು ಹಾಗೂ ಸ್ಪರ್ಶಿಸುವುದು ಕೂಡ ಇಸ್ಲಾಂ ಪ್ರಕಾರ ‘ಹರಾಮ್’ ಆಗಿದೆ’ ಎಂದು ಕೋರ್ಚ್ ಅಭಿಪಟ್ಟಿತು ಹಾಗೂ ರಕ್ಷಣೆ ಕೋರಿದ್ದ ಜೋಡಿಯ ಅರ್ಜಿ ವಜಾ ಮಾಡಿತು.
16 ವರ್ಷಕ್ಕೆ ಲೈಂಗಿಕತೆ ಬಗ್ಗೆ ನಿರ್ಧರಿಸುವ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್
ಶಿಲ್ಲಾಂಗ್: 16 ವರ್ಷದ ಬಾಲಕ ಅಥವಾ ಬಾಲಕಿಯು ಲೈಂಗಿಕತೆಗೆ ಸಂಬಂಧಿಸಿದಂತೆ ‘ಪ್ರಜ್ಞಾಪೂರ್ವಕ ನಿರ್ಧಾರ’ ವನ್ನು ಕೈಗೊಳ್ಳಲು ಸಮರ್ಥರಾಗಿರುತ್ತಾರೆ ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ. ಲೈಂಗಿಕ ಕ್ರಿಯೆ ನಡೆಸಿದ್ದ ಇಬ್ಬರು ಅಪ್ರಾಪ್ತ ಪ್ರೇಮಿಗಳ ಪೈಕಿ 16 ವರ್ಷದ ಬಾಲಕನ ವಿರುದ್ಧ ಪೋಕ್ಸೊ ಕಾಯಿದೆಯಡಿ ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ವಾನ್ಲುರಾ ಡಿಂಗ್ಡೋಹ್ ಏಕಸದಸ್ಯ ಪೀಠವು ‘ಇದು ಲೈಂಗಿಕ ದೌರ್ಜನ್ಯದ ಪ್ರಕರಣವಲ್ಲ. ಬಾಲಕಿ ಮತ್ತು ಬಾಲಕ ಪರಸ್ಪರ ಪ್ರೀತಿಸುತ್ತಿದ್ದರಿಂದ ಇದು ಸಂಪೂರ್ಣವಾಗಿ ಒಮ್ಮತದ ಕ್ರಿಯೆಯಾಗಿದೆ’ ಎಂದು ಈ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಬಾಲಕಿಯು ‘ಆತ (ಬಾಲಕ) ತನಗೆ ಯಾವುದೇ ಬಲವಂತ ಮಾಡಿಲ್ಲ ಹಾಗೂ ಪರಸ್ಪರ ಸಮ್ಮತಿಯ ಮೇರೆಗೆ ನಾವು ಲೈಂಗಿಕ ಕ್ರಿಯೆ ನಡೆಸಿದ್ದೆವು’ ಎಂದು ಹೇಳಿಕೆ ನೀಡಿದ್ದಾಳೆ. ಆದರೆ ಇದು ದೌರ್ಜನ್ಯ ಎಂದು ಬಾಲಕಿ ಕುಟುಂಬ ಕೋರ್ಟ್ ಮೆಟ್ಟಿಲೇರಿತ್ತು. ಇತ್ತೀಚೆಗಷ್ಟೇ ಲೈಂಗಿಕ ಕ್ರಿಯೆಗೆ ಸಮ್ಮತಿಯ ವಯಸ್ಸು ನಿರ್ಧರಿಸುವಂತೆ ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.