ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಕೊರೊನಾ ಭೀತಿ ಮತ್ತೆ ಆವರಿಸಿದೆ. ಕಳೆದ ವರ್ಷದೊಂದಿಗೆ, ಕರೋನಾ ಇದೀಗ ಮತ್ತೊಮ್ಮೆ ಜಗತ್ತಿನಾದ್ಯಂತ ವಿನಾಶ ಸೃಷ್ಟಿಸಲಾರಂಭಿಸಿದೆ. ಹೀಗಿರುವಾಗ ಇದೀಗ ಮತ್ತೆ ಜನ ಆತಂಕಕ್ಕೆ ಒಳಗಾಗಿದ್ದಾರೆ. ಜನರ ಮನಸ್ಸಿನಿಂದ ಕರೋನಾ ಭಯ ಇನ್ನೂ ಮುಗಿದಿಲ್ಲ, ಇದೀಗ ಮತ್ತೊಂದು ಹೊಸ ರೀತಿಯ ಕಾಯಿಲೆ ಜನರನ್ನು ಚಿಂತೆಗೀಡು ಮಾಡಿದೆ. ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾದಿಂದ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಇದನ್ನು ಕೇಳಿ ಎಲ್ಲರೂ ಕಂಗಾಲಾಗಿದ್ದಾರೆ. ವಾಸ್ತವವಾಗಿ, ನೇಗ್ಲೇರಿಯಾ ಫೌಲೆರಿಯಾ ಎಂಬ ಕಾಯಿಲೆಯಿಂದ ಒಬ್ಬ ವ್ಯಕ್ತಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.
ದಕ್ಷಿಣ ಕೊರಿಯಾದಲ್ಲಿ ‘ಮೆದುಳು ತಿನ್ನುವ ಅಮೀಬಾ (Brain Eating Amoeba)’ದಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅಮೆರಿಕದಲ್ಲಿ ಸೋಂಕಿಗೆ ಒಳಗಾದ 154 ಜನರಲ್ಲಿ ಕೇವಲ 4 ಜನರು ಮಾತ್ರ ಬದುಕುಳಿದಿದ್ದಾರೆ ಎಂಬುದನ್ನ ಗಮನಿಸಿದರೆ ಈ ಕಾಯಿಲೆ ಎಷ್ಟು ಅಪಾಯಕಾರಿ ಎಂದು ಅಂದಾಜಿಸಬಹುದು. ಈ ರೋಗದ ವೈಜ್ಞಾನಿಕ ಹೆಸರು ‘ನೇಗ್ಲೇರಿಯಾ ಫೌಲೆರಿ (Naegleria fowleri)’. ಇದನ್ನು ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಲಾಯಿಟಿಸ್ (PAM) ಎಂದೂ ಕರೆಯುತ್ತಾರೆ.
ದಕ್ಷಿಣ ಕೊರಿಯಾ ಟೈಮ್ಸ್ ವರದಿಯ ಪ್ರಕಾರ, ಕೊರಿಯಾ ಡಿಸೀಸ್ ಕಂಟ್ರೋಲ್ & ಪ್ರಿವೆನ್ಶನ್ ಎಜೆನ್ಸಿ (KDCA) ಈ ಬಗ್ಗೆ ಮಾಹಿತಿ ನೀಡುತ್ತ, ಡಿಸೆಂಬರ್ 10, 2022 ರಂದು ಥೈಲ್ಯಾಂಡ್‌ಗೆ ತೆರಳಿ ಬಳಿಕ ನಾಲ್ಕು ತಿಂಗಳು ಅಲ್ಲಿದ್ದು ಈಗ ಹಿಂದಿರುಗಿದ 50 ವರ್ಷದ ವ್ಯಕ್ತಿ ಈ ರೋಗದಿಂದ ಡಿಸೆಂಬರ್ 21, 2022 ರಂದು ನಿಧನರಾದರು. ವ್ಯಕ್ತಿಯು ತಲೆನೋವು, ಜ್ವರ, ವಾಂತಿ, ಮಾತನಾಡಲು ತೊಂದರೆ ಮತ್ತು ಕುತ್ತಿಗೆ ಬಿಗಿತದ ಲಕ್ಷಣಗಳನ್ನು ಎದುರಿಸುತ್ತಿದ್ದನು ಮತ್ತು ಆತನ ಸ್ಥಿತಿಯು ಹದಗೆಡುತ್ತಲೇ ಇತ್ತು. ಆತನನ್ನ ಐಸಿಯುಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ತಿಳಿಸಿದೆ.
ವ್ಯಕ್ತಿಯ ಸಾವಿನ ನಂತರ, ಆರೋಗ್ಯ ಅಧಿಕಾರಿಗಳು ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಗಳನ್ನು ನಡೆಸಿದರು, ನಂತರ ಆತ ‘ನೇಗ್ಲೇರಿಯಾ ಫೌಲೆರಿ’ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಿದರು. ಇದು ಕೊರಿಯಾದಲ್ಲಿ ನೆಗ್ಲೇರಿಯಾ ಫೌಲೆರಿ ಸೋಂಕಿನ ಮೊದಲ ಅಧಿಕೃತ ಪ್ರಕರಣವಾಗಿದೆ.
ಈ ರೋಗದ ಮೊದಲ ಪ್ರಕರಣವು 1937 ರಲ್ಲಿ ಅಮೆರಿಕಾದಲ್ಲಿ ವರದಿಯಾಗಿತ್ತು. ನೇಗ್ಲೇರಿಯಾ ಫೌಲೆರಿ ಎಂಬುದು ಅಮೀಬಾ ಆಗಿದ್ದು ಅದು ಮಾನವನ ಮೆದುಳಿಗೆ ಪ್ರವೇಶಿಸಿ ಟಿಶ್ಯು ವನ್ನ ನಾಶಪಡಿಸುತ್ತದೆ. ಅದಕ್ಕಾಗಿಯೇ ಇದನ್ನು ಮೆದುಳು ತಿನ್ನುವ ಅಮೀಬಾ ಅಥವ ಬ್ರೇನ್ ಈಟಿಂಗ್ ಅಮೀಬಾ ಎಂದೂ ಕರೆಯುತ್ತಾರೆ. ಈ ಅಮೀಬಾ ಹೆಚ್ಚಾಗಿ ಬೆಚ್ಚಗಿನ ಸಿಹಿನೀರಿನ ಸರೋವರಗಳು, ನದಿಗಳು, ಕಾಲುವೆಗಳು ಅಥವಾ ಕೊಳಗಳಲ್ಲಿ ಕಂಡುಬರುತ್ತದೆ. ಅಮೀಬಾ ಮನುಷ್ಯನ ಮೆದುಳಿಗೆ ಮೂಗಿನ ಮೂಲಕ ಪ್ರವೇಶಿಸುತ್ತದೆ.
ಮೆದುಳು ತಿನ್ನುವ ಅಮೀಬಾ (Brain Eating Amoeba) ಲಕ್ಷಣಗಳ ಬಗ್ಗೆ ಮಾತನಾಡುವುದಾದರೆ, ಅದರ ಆರಂಭಿಕ ಲಕ್ಷಣಗಳು ತೀವ್ರ ತಲೆನೋವು ಮತ್ತು ವಾಂತಿ. ನಂತರದ ರೋಗಲಕ್ಷಣಗಳು ತೀವ್ರವಾದ ಕುತ್ತಿಗೆ ನೋವು, ಕನ್ಫ್ಯೂಷನ್ ಮತ್ತು ಕೋಮಾ ಒಳಗೊಂಡಿರುತ್ತವೆ. ಆದಾಗ್ಯೂ, ಸಮಾಧಾನಕರ ವಿಷಯವೆಂದರೆ ಇದು ಜನರಿಂದ ಜನರಿಗೆ ಹರಡುವುದಿಲ್ಲ, ಅಂದರೆ, ಯಾವುದೇ ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಗೆ ಈ ಸೋಂಕು ತಗುಲುವುದಿಲ್ಲ.
ವಿಶ್ವದಲ್ಲಿ ಈ ಸೋಂಕಿನ ಒಟ್ಟು 381 ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಅಮೆರಿಕ, ಭಾರತ ಮತ್ತು ಥೈಲ್ಯಾಂಡ್ ಕೂಡ ಸೇರಿವೆ. 1962 ರಿಂದ 2021 ರವರೆಗೆ, ಅಮೆರಿಕಾದಲ್ಲಿ ಈ ಸೋಂಕಿನಿಂದ ಬಳಲುತ್ತಿರುವ 154 ಜನರಲ್ಲಿ ಕೇವಲ ನಾಲ್ಕು ಜನರು ಮಾತ್ರ ಬದುಕುಳಿದಿದ್ದಾರೆ.