ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಚಳಿಗಾಲದ ಅಧಿವೇಶನ ಆರಂಭವಾದರೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸದನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಮಾಧ್ಯಮಗಳಿಗೆ ಬಂದಿರುವ ಸುದ್ದಿ ಪ್ರಕಾರ ಅವರ ಆರೋಗ್ಯ ಸರಿಯಿಲ್ಲ. ಮಹಾರಾಷ್ಟ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಶಿವಸೇನಾ ಪಕ್ಷದ ನಾಯಕರು ಹಾಗೂ ಉದ್ಧವ್ ಠಾಕ್ರೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬನ್ನಿ ನಿಮಗೆ ಸಂಪೂರ್ಣ ಸುದ್ದಿಯನ್ನು ವಿವರವಾಗಿ ತಳಿಸುತ್ತೇವೆ.
ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ?
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉದ್ಧವ್ ಠಾಕ್ರೆ ಅವರ ಆರೋಗ್ಯ ಸರಿಯಿಲ್ಲದಿದ್ದರೆ ಅವರು ತಮ್ಮ ಮುಖ್ಯಮಂತ್ರಿ ಹುದ್ದೆಯನ್ನು ಮಗನಿಗೆ ಅಥವ ಹೆಂಡತಿಯಾದ ರಶ್ಮಿ ಠಾಕ್ರೆಗೆ ನೀಡಬಹುದು ಎಂದು ಅವರು ಹೇಳಿದ್ದಾರೆ. ಏಕೆಂದರೆ ಶಿವಸೇನೆಯಲ್ಲಿ ಒಂದೇ ಕುಟುಂಬದವರು ಪಕ್ಷವನ್ನು ನಡೆಸುತ್ತಿದ್ದಾರೆ. ಉದ್ಧವ್ ಠಾಕ್ರೆ ಬಯಸಿದರೆ, ಅವರು ಚೇತರಿಸಿಕೊಳ್ಳುವವರೆಗೆ ಆದಿತ್ಯ ಠಾಕ್ರೆ ಅಥವ ರಶ್ಮಿ ಠಾಕ್ರೆ ಮಹಾರಾಷ್ಟ್ರದ ಮುಂದಿನ ಸಿಎಂ ಆಗಬಹುದು ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಯ ನಂತರವೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಉದ್ಧವ್ ಠಾಕ್ರೆ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ ವೈದ್ಯರು
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ 61 ವರ್ಷ ವಯಸ್ಸಾಗಿದೆ. ಉದ್ಧವ್ ಠಾಕ್ರೆ ಅವರ ಕುತ್ತಿಗೆ ನೋವಿನಿಂದ ಕಳೆದ ಹಲವು ತಿಂಗಳಿಂದ ಸದನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ವೈದ್ಯರ ಸಲಹೆ ಮೇರೆಗೆ ಅವರನ್ನ ಆಸ್ಪತ್ರೆಯಲ್ಲೇ ಇರಿಸಲಾಗಿದೆ. ಇತ್ತೀಚೆಗೆ ಉದ್ಧವ್ ಠಾಕ್ರೆ ಸರ್ವಾಯಿಕಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಈ ಶಸ್ತ್ರಚಿಕಿತ್ಸೆಯ ನಂತರ ಪಕ್ಷದ ಕೆಲವು ಮುಖಂಡರು ರಾಜಕೀಯ ಮಾಡುತ್ತಿದ್ದಾರೆ. ಕೆಲವು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಈ ನಡುವೆ ಶಿವಸೇನೆ ಪಕ್ಷಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ಒಂದರ ಹಿಂದೊಂದರಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿಗೆ ಪ್ರತ್ಯುತ್ತರ ಕೊಟ್ಟ ಆದಿತ್ಯ ಠಾಕ್ರೆ
ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್ ರವರ ಹೇಳಿಕೆಗೆ ಆದಿತ್ಯ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಸಂಪೂರ್ಣವಾಗಿ ಕ್ಷೇಮವಾಗಿದ್ದಾರೆ ಎಂದು ಆದಿತ್ಯ ಹೇಳಿದ್ದಾರೆ. ಅವರು ಶೀಘ್ರದಲ್ಲೇ ನಮ್ಮೆಲ್ಲರ ನಡುವೆ ಇರುತ್ತಾರೆ. ಮುಂದಿನ ಸಿಎಂ ಬಗ್ಗೆ ಮಾತನಾಡಿರುವ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಮಾತ್ರ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ. ರಶ್ಮಿ ಠಾಕ್ರೆ ಅಂದರೆ ತಮ್ಮ ತಾಯಿಯ ಕುರಿತು ಮಾತನಾಡಿದ ಅವರು, ಚಂದ್ರಕಾಂತ್ ಪಾಟೀಲ್ ನೀಡಿರುವ ಹೇಳಿಕೆ ಸಂಪೂರ್ಣ ನಿರಾಧಾರವಾಗಿದೆ. ರಶ್ಮಿ ಠಾಕ್ರೆ ಆಗಲಿ ಅಥವ ನಾನಾಗಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದಾರೆ.
ರಾಷ್ಟ್ರಪತಿ ಆಡಳಿತ ಒಪ್ಪಿಕೊಳ್ಳಬೇಕು ಎಂದಿದ್ದ ಚಂದ್ರಕಾಂತ ಪಾಟೀಲ್
ರಾಜ್ಯದಲ್ಲಿನ ಪ್ರತಿಯೊಂದು ಸಮಸ್ಯೆಯನ್ನೂ ಕೇಂದ್ರ ಸರ್ಕಾರವೇ ಬಗೆಹರಿಸಬೇಕು ಅಂತಾದರೆ ಮಹಾರಾಷ್ಟ್ರದ ಮಹಾವಿಕಾಸ್ ಅಘಾಡಿ ಸರ್ಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಅಂಗೀಕರಿಸಿ ರಾಜ್ಯ ವ್ಯವಹಾರಗಳನ್ನು ಕೇಂದ್ರಕ್ಕೆ ಹಸ್ತಾಂತರಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ ಕಾಂಗ್ರೆಸ್‌ನ ಲೋಕೋಪಯೋಗಿ ಸಚಿವ ಅಶೋಕ ಚವ್ಹಾಣ ವಿರುದ್ಧ ಹರಿಹಾಯ್ದರು.
“ಪ್ರತಿಯೊಂದು ವಿಷಯಕ್ಕೂ, ಅದು ಕೊರೋನಾ ಆಗಿರಲಿ, ಮರಾಠ ಮೀಸಲಾತಿ, ಅಥವಾ OBC ಗಳಿಗೆ ರಾಜಕೀಯ ಮೀಸಲಾತಿಯಾಗಿರಲಿ ರಾಜ್ಯವು ನಿರಂತರವಾಗಿ ಕೇಂದ್ರದ ಮೇಲೆ ಜವಾಬ್ದಾರಿಯನ್ನು ವರ್ಗಾಯಿಸುತ್ತದೆ” ಎಂದು ಅವರು ಹೇಳಿದರು.
ಪಾಟೀಲ ಅವರು ರಾಜ್ಯ ಸರ್ಕಾರದ ಅದಕ್ಷತೆಯಿಂದ ಒಬಿಸಿ ಮೀಸಲಾತಿ ಹಾಗೂ ಮರಾಠಾ ಮೀಸಲಾತಿ ಕೈತಪ್ಪಿ ಹೋಗಿದೆ ಎಂದು ತಿಳಿಸಿದರು. ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರಿಗೆ ಪರಿಹಾರವನ್ನು ನೀಡಿತು, ಆದರೆ ಮೈತ್ರಿ ಸರ್ಕಾರವು ಸಾಧ್ಯವಿದ್ದರೂ ರಾಜ್ಯದ ಜನರಿಗೆ ಅಂತಹ ಯಾವುದೇ ಪರಿಹಾರವನ್ನು ನೀಡುತ್ತಿಲ್ಲ ಎಂದು ಅವರು ಹೇಳಿದರು.