ನವದೆಹಲಿ:
ಹೌದು. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿಗೆ ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಯತ್ನಿಸುತ್ತಿದ್ದಾರೆ. ನಾಯಕರು ಕಳೆದ 2 ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಸಿ.ಪಿ ಯೋಗೇಶ್ವರ್ ಅವರು ಈಗಾಗಲೇ ಪ್ರಹ್ಲಾದ್ ಜೋಶಿ, ಬಿ.ಎಲ್ ಸಂತೋಷ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಸಿಪಿವೈ ಅವರು ಸಚಿವ ಸ್ಥಾನ ಸಿಗದೇ ಇರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿಯವರು, ನನಗೆ ಮತ್ತೊಂದು ಚಾನ್ಸ್ ಕೊಡಿ ಎನ್ನುತ್ತಿದ್ದಾರೆ. ರಾಜಕೀಯ ದ್ವೇ ಷ ದ ಕಾರಣ ಸಿಡಿಯಾಗಿದೆ. ಹೀಗಾಗಿ ಮತ್ತೊಂದು ಅವಕಾಶ ನೀಡಿ ಅಂತ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ದೆಹಲಿಯಲ್ಲಿ ಜಾರಕಿಹೊಳಿ, ಯೋಗೇಶ್ವರ್ ಲಾಬಿ ಮಾಡುತ್ತಿದ್ದಂತೆಯೇ ಇತ್ತ ರೇಣುಕಾಚಾರ್ಯ ಕೂಡ ದೆಹಲಿಗೆ ಹಾರಿದ್ದಾರೆ. ನಿನ್ನೆಯೇ ದೆಹಲಿಗೆ ಹೋಗಿರೋ ರೇಣುಕಾಚಾರ್ಯ, ಸಚಿವ ಸ್ಥಾನಕ್ಕೆ ವರಿಷ್ಠರ ಎದುರು ಬೇಡಿಕೆ ಇಡಲು ಯತ್ನಿಸುತ್ತಿದ್ದಾರೆ.
ರಾಜ್ಯ ಬಿಜೆಪಿಗೆ ಸದ್ಯ ತಲೆನೋವಾಗಿ ಪರಿಣಮಿಸಿರುವ ಅತೃಪ್ತ ಸಚಿವ ಆನಂದ ಸಿಂಗ್, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಆನಂದಕ್ಕೇ ಕುತ್ತು ತಂದಿದ್ದಾರೆ. ಮಾತ್ರವಲ್ಲ, ಆನಂದ ಸಿಂಗ್ ರಾಜೀನಾಮೆ ಗುಲ್ಲಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಒಂದು ರೀತಿಯಲ್ಲಿ ಕಾವೇರಿದ ವಾತವಾರಣ ಸೃಷ್ಟಿಯಾಗಿದೆ.
ಸದ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧಗಂಟೆ ಕಾಲ ಚರ್ಚಿಸಿ ಕೆಲವು ನಿಮಿಷಗಳ ಮೊದಲು ಅಲ್ಲಿಂದ ತೆರಳಿರುವ ಸಿಎಂ, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.
ಆನಂದ್ ಸಿಂಗ್ ಮಾತ್ರವಲ್ಲದೆ ಅಸಮಾಧಾನಿತ ಶಾಸಕರಾದ ಎಂಟಿಬಿ ನಾಗರಾಜ್, ಸಿ.ಪಿ. ಯೋಗೀಶ್ವರ್, ಪ್ರೀತಂ ಗೌಡ ಮುಂತಾದವರ ಕುರಿತು ಚರ್ಚೆ ನಡೆದಿದ್ದು, ಮುಂದೇನು ಮಾಡಬೇಕು ಎಂಬ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ. ಅಸಮಾಧಾನಿತ ಶಾಸಕರ ಮನವೊಲಿಸುವ ತಂತ್ರಗಾರಿಕೆಯಲ್ಲಿ ಯಡಿಯೂರಪ್ಪ ಚಾಣಾಕ್ಷರಾಗಿರುವ ಕಾರಣಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಸದ್ಯ ರೆಬೆಲ್ ಆಗಿರುವ ಶಾಸಕರ ಜತೆಗೆ ಮತ್ತಷ್ಟು ಶಾಸಕರು ಸೇರಿದರೆ ಸರ್ಕಾರಕ್ಕೆ ಆಪತ್ತು ಖಚಿತ ಎಂಬುದನ್ನು ಅರಿತ ಸಿಎಂ, ಈಗಾಗಲೇ ಆ ಎಲ್ಲ ಬೆಳವಣಿಗೆಗಳನ್ನು ಶಮನಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂಬದು ತಿಳಿದು ಬಂದಿದೆ.