ಶಾರುಖ್ ಖಾನ್ ಅಭಿನಯದ ಮುಂಬರುವ ಚಿತ್ರ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿನಿಂದಲೂ ವಿವಾದದಲ್ಲಿದೆ. ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆಯ ಬಟ್ಟೆ, ಹಾಡುಗಳಲ್ಲಿನ ಅಶ್ಲೀಲ ನೃತ್ಯದ ಹೆಜ್ಜೆಗಳ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ, ಇದೀಗ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ (CWC) ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೋಶಿಯಲ್ ಮೀಡಿಯಾಗಳಿಂದ ‘ಬೇಷರಂ ರಂಗ್’ ಹಾಡನ್ನು ತೆಗೆದುಹಾಕುವಂತೆ ಕೇಳಿದೆ. ಇದು ಹದಿಹರೆಯದವರ ಮನಸ್ಸಿನ ಮೇಲೆ ‘ನಕಾರಾತ್ಮಕ ಪರಿಣಾಮ’ ಬೀರಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
🚨Child Welfare Committee (CWC) in Bahraich, Uttar Pradesh has advised State’s DGP via letter to remove clips of #Pathan movie song ‘Besharam Rang’ starring @iamsrk and #DeepikaPadukone from social media as it may have “detrimental impact on the psyche of adolescents”.@UPGovt pic.twitter.com/MsMukiLzYT
— Bar & Bench (@barandbench) January 4, 2023
ಮಕ್ಕಳ ಕಲ್ಯಾಣ ಸಮಿತಿ (CWC) ಬಹ್ರೈಚ್ (ಮ್ಯಾಜಿಸ್ಟೀರಿಯಲ್ ಬೆಂಚ್) ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಹಾಡಿನ ಕುರಿತು ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015 ರ ಸೆಕ್ಷನ್ 30 (xii) ಅಡಿಯಲ್ಲಿ ಅಧಿಕಾರ ಚಲಾಯಿಸುತ್ತ ಡಿಜಿಪಿಗೆ ಪತ್ರ ಬರೆದಿದೆ. ಸಿಡಬ್ಲ್ಯುಸಿ ಬರೆದ ಪತ್ರದಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಅಶ್ಲೀಲ ಕಂಟೆಂಟ್‌ನ್ನ ವಿರೋಧಿಸಿದೆ. ಸಮಿತಿಯು ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡನ್ನ ನಿರ್ದಿಷ್ಟವಾಗಿ ಉಲ್ಲೇಖಿಸಿದೆ.
ಸಮಿತಿಯು ತನ್ನ ಪತ್ರದಲ್ಲಿ, “ನಾವು ಆಳವಾದ ಚಿಂತನ ಮಂಥನ ಮಾಡಿದ್ದೇವೆ ಮತ್ತು ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ಗ್ರಹಿಸಿದ್ದೇವೆ. ‘ಬೇಷರಂ ರಂಗ’ದಲ್ಲಿ ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸಿರುವ ರೀತಿ ಆಕ್ಷೇಪಾರ್ಹ. ಹದಿಹರೆಯದವರು ಇದನ್ನು ಮೊಬೈಲ್‌ನಲ್ಲಿ ನೋಡುತ್ತಿದ್ದಾರೆ ಮತ್ತು ಅದು ಅವರ ಮನಸ್ಸಿನ ಮೇಲೆ ವಿಕೃತ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ಅಶ್ಲೀಲ ವಿಷಯಗಳು ಅತ್ಯಂತ ಅಪಾಯಕಾರಿ. ನಮ್ಮ ಜನಪ್ರಿಯ ಉತ್ತರ ಪ್ರದೇಶ ಸರ್ಕಾರವು ಹದಿಹರೆಯದವರ ಸರ್ವತೋಮುಖ ಅಭಿವೃದ್ಧಿಗಾಗಿ ಮೊಬೈಲ್ ಫೋನ್‌ಗಳನ್ನು ಒದಗಿಸಿದೆ. ಇದಲ್ಲದೇ ಹೆಚ್ಚಿನ ಹದಿಹರೆಯದವರು ಮೊಬೈಲ್ ಬಳಸುತ್ತಾರೆ” ಎಂದಿದೆ.
ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಏನನ್ನೂ ನೋಡದಂತೆ ತಡೆಯುವುದು ಸುಲಭವಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ಇಂತಹ ಅಶ್ಲೀಲ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವುದು ಸೂಕ್ತ ಎಂದು ತಿಳಿಸಿದೆ. ಪತ್ರಕ್ಕೆ ಸಿಡಬ್ಲ್ಯುಸಿ ಬಹ್ರೈಚ್ ಪೀಠದ ಮುಖ್ಯಸ್ಥ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ದೀಪಮಾಲಾ ಪ್ರಧಾನ್, ಅರ್ಚನಾ ಪಾಂಡೆ ಮತ್ತು ನವನೀತ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸಹಿ ಮಾಡಿದೆ.
ಪಠಾಣ್ ಚಿತ್ರದ ‘ಬೇಷರಂ ರಂಗ್’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು ಉಲ್ಲೇಖಾರ್ಹ. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ. ಈ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಅಲ್ಲದೆ, ಚಿತ್ರದಲ್ಲಿ ದೀಪಿಕಾ ಸಾಕಷ್ಟು ಆಶ್ಲೀಲ ಸ್ಟೆಪ್ ಗಳನ್ನ ಹಾಕಿದ್ದಾರೆ. ಅನೇಕ ಸೋಶಿಯಲ್ ಮೀಡಿಯಾ ಯೂಸರ್ ಗಳು ಈ ಹಾಡನ್ನು ಸಾಫ್ಟ್ ಪಾರ್ನ್ ಎಂದು ಕೂಡ ಹೇಳಿದ್ದಾರೆ.
ಪಠಾಣ್ ಚಿತ್ರಕ್ಕೆ CBFC ಮಂಡಳಿಯಿಂದ ಎಚ್ಚರಿಕೆ
ಡಿಸೆಂಬರ್ 29, 2022 ರಂದು, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಅಧ್ಯಕ್ಷರಾದ ಪ್ರಸೂನ್ ಜೋಶಿ ಅವರು ಶಾರುಖ್ ಖಾನ್ ಅವರ ‘ಪಠಾಣ್’ ಚಿತ್ರದ ನಿರ್ಮಾಪಕರಿಗೆ ಚಿತ್ರದ ಹಾಡುಗಳನ್ನು ಒಳಗೊಂಡಂತೆ ಹಲವಾರು ಬದಲಾವಣೆಗಳನ್ನು ಮಾಡಲು ನಿರ್ದೇಶನ ನೀಡಿದ್ದರು. “CBFC ಸೃಜನಶೀಲತೆಯನ್ನು ಉತ್ತೇಜಿಸಲು ಮತ್ತು ಪ್ರೇಕ್ಷಕರ ಭಾವನೆಗಳ ನಡುವೆ ಸಮತೋಲನವನ್ನು ಸಾಧಿಸಲು ಮತ್ತು ಅದಕ್ಕೆ ಅನುಗುಣವಾಗಿ ವಿವಾದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿದೆ. ನಮ್ಮ ಸಂಸ್ಕೃತಿ ಮತ್ತು ನಂಬಿಕೆಯು ವೈಭವಯುತ, ಸಂಕೀರ್ಣ ಮತ್ತು ಸೂಕ್ಷ್ಮವಾಗಿದೆ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ನಾವು ಜಾಗರೂಕರಾಗಿರಬೇಕು” ಎಂದಿದ್ದರು.
ಸತ್ಯ ಮತ್ತು ವಾಸ್ತವದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಅಂತಹ ಯಾವುದೇ ಕಥೆ-ಕಥೆಯ ಮೂಲಕ ಅದನ್ನು ವ್ಯಾಖ್ಯಾನಿಸಬಾರದು ಎಂದ ಜೋಶಿ ಮುಂದೆ ಮಾತನಾಡುತ್ತ, “ನಾನು ಮೊದಲೇ ಹೇಳಿದಂತೆ, ಫಿಲಂ ಮೇಕರ್ಸ್ ಮತ್ತು ಪ್ರೇಕ್ಷಕರ ನಡುವೆ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮೇಕರ್ಸ್ ಕೆಲಸ ಮಾಡಬೇಕು” ಎಂದಿದ್ದರು. ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಚಿತ್ರ ‘ಪಠಾಣ್’ ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯ ಪಾತ್ರದಲ್ಲಿದ್ದಾರೆ.