“ಜೀನ್ಸ್ ಹಾಕ್ತಾರಲ್ಲ ಆ ಹುಡುಗಿಯರಲ್ಲ, ಮದುವೆಯಾದ ಮಹಿಳೆಯರನ್ನೇ ಪ್ರಧಾನಿ ಮೋದಿ….”: ದಿಗ್ವಿಜಯ್ ಸಿಂಗ್

in Kannada News/News 477 views

ತನ್ನ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ಮಹಿಳೆಯರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. 40 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತರಾಗಿದ್ದಾರೆ ಎಂದ ಅವರು, ಜೀನ್ಸ್‌ನ್ನ ಧರಿಸುವ ಹುಡುಗಿಯರು ಅವರಿಂದ ಪ್ರಭಾವಿತರಾಗುವುದಿಲ್ಲ ಎಂದಿದ್ದಾರೆ.

Advertisement

ವಾಸ್ತವವಾಗಿ, ಶನಿವಾರ (ಡಿಸೆಂಬರ್ 25) ಕಾಂಗ್ರೆಸ್‌ನ ಜನಜಾಗರಣ್ ಅಭಿಯಾನದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದಿಗ್ವಿಜಯ್ ಸಿಂಗ್, “ಜೀನ್ಸ್ ಧರಿಸುವ ಮತ್ತು ಮೊಬೈಲ್ ಬಳಸುವ ಹುಡುಗಿಯರು ಪ್ರಧಾನಿ ಮೋದಿಯನ್ನು ಇಷ್ಟಪಡುವುದಿಲ್ಲ ಎಂದು ಹೇಳಿದರು. 40-50 ವರ್ಷ ವಯಸ್ಸಿನ ಮಹಿಳೆಯರನ್ನೇ ಪ್ರಧಾನಿ ಮೋದಿ ಪ್ರಭಾವಿತರಾಗುವಂತೆ ಮಾಡುತ್ತಾರೆ, ಆ ಮಹಿಳೆಯರೇ ಪ್ರಧಾನಿ ಮೋದಿಯವರೆಡೆಗೆ ಪ್ರಭಾವಿತರಾಗುತ್ತಾರೆ ಹೊರತು ಜೀನ್ಸ್ ತೊಡುವ, ಮೊಬೈಲ್ ಬಳಸುವ ಯುವತಿಯರಲ್ಲ” ಎಂದಿದ್ದಾರೆ. ವಾಸ್ತವವಾಗಿ, ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ‘ಮೈ ಲಡಕಿ ಹೂಂ, ಲಡ್ ಸಕತಿ ಹೂಂ (ನಾನು ಹುಡುಗಿ, ಹೋರಾಡಬಲ್ಲೆ)’ ಥೀಮ್ ಹಾಡಿನ ಬಗ್ಗೆ ಮಾತನಾಡುತ್ತಿದ್ದರು.

ಈ ವೇಳೆ ಅವರು ಬಜರಂಗದಳದ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಬಜರಂಗದಳದ ಕಾರ್ಯಕರ್ತರನ್ನು ಗೂಂಡಾಗಳು ಎಂದು ಟೀಕಿಸಿದ ಅವರು, “ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಗರಿಷ್ಠ ಸಂಖ್ಯೆಯಲ್ಲಿರೋ ಗೂಂಡಾಗಳಲ್ಲಿ ಭಜರಂಗದಳದವರೇ ಇದ್ದಾರೆ. ಅವರಿಗೆ ಪೊಲೀಸರ ಬೆಂಬಲವೂ ಇದೆ” ಎಂದು ಆರೋಪಿಸಿದರು.

ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರು ಹಿಂದೂ ಧರ್ಮ ಮತ್ತು ಹಿಂದುತ್ವ ಎರಡೂ ಬೇರೆ ಬೇರೆ ಎಂದು ಹೇಳಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಗೋಮಾಂಸ ತಿನ್ನುವುದರಲ್ಲಿ ತಪ್ಪೇನಿಲ್ಲ ಎಂದು ಸಾವರ್ಕರ್ ಹೇಳಿದ್ದರು. ಭಾರತವನ್ನು ವೈವಿಧ್ಯತೆಯ ದೇಶ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ, ದೇಶದಲ್ಲಿ ಗೋಮಾಂಸ ತಿನ್ನುವ ಅನೇಕ ಹಿಂದೂಗಳಿದ್ದಾರೆ ಎಂದು ಹೇಳಿದರು. ಇದೇ ವೇಳೆ ಗೋಮಾಂಸ ತಿನ್ನಬಾರದು ಎಂದು ಎಲ್ಲಿ ಬರೆಯಲಾಗಿದೆ ಎಂದು ಪ್ರಶ್ನಿಸಿದರು.

ದಿಗ್ವಿಜಯ್ ಸಿಂಗ್ ಮಹಿಳೆಯರಿಗೆ ಸಂಬಂಧಿಸಿದಂತೆ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಈ ರೀತಿ ಮಾತನಾಡಿದ್ದು, ಈ ಬಗ್ಗೆ ಭಾರೀ ವಿವಾದ ಉಂಟಾಗಿತ್ತು. 2013ರಲ್ಲಿ ಮಂದಸೌರ್ ರ್ಯಾಲಿಯಲ್ಲಿ ಆಗಿನ ಸಂಸದೆ ಮೀನಾಕ್ಷಿ ನಟರಾಜನ್ ಬಗ್ಗೆ ಮಾತನಾಡಿದ್ದ ಅವರು, “ನಾನು ರಾಜಕೀಯದ ಹಳೆಯ ಖಿಲಾಡಿ ಆಗಿದ್ದೇನೆ, ಮೀನಾಕ್ಷಿ ಜೀ ಅವರ ಕೆಲಸ ನೋಡಿ 100 ಟಕಾ ಟಂಚ್ ಮಾಲ್ ಅಂತ ಹೇಳಬಹುದು” ಎಂದಿದ್ದರು.

ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಎಲ್ಲೆಡೆ ಭಾರೀ ಕೋಲಾಹಲ ಎದ್ದಿತ್ತು. ಆಗ ಸ್ಪಷ್ಟನೆ ನೀಡಿದ ಅವರು, ‘‘ನಾನೇನೂ ತಪ್ಪಾಗಿ ಹೇಳಿಲ್ಲ. ನಾನು ಅವರಿಗೆ 100 ಟಕಾ ಚಿನ್ನದ ಮಾಲ್ ಎಂದು ಹೇಳಿದೆ. ಅವರನ್ನು ಹೊಗಳಿ ಹೀಗೆ ಹೇಳಿದ್ದೆ” ಎಂದಿದ್ದರು.

ಅದೇ ರೀತಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಕಮಲ್ ನಾಥ್ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದರು. ದಾಬ್ರಾ ಪ್ರದೇಶದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್ ಅವರು ಮಾಜಿ ಸಚಿವೆ ಇಮರ್ತಿ ದೇವಿ ಅವರ ಬಗ್ಗೆ ಒಂದು ಐಟಂ ಎಂದು ಹೇಳಿದ್ದರು. ಆಗ ಬಿಜೆಪಿ ಈ ವಿಚಾರವಾಗಿ ಕಮಲ್ ನಾಥ್ ವಿರುದ್ಧ ವಾಗ್ದಾಳಿ ನಡೆಸಿತ್ತು. ವಿವಾದ ಉಲ್ಬಣಗೊಂಡ ನಂತರ ಕಮಲ್ ನಾಥ್ ಕ್ಷಮೆ ಯಾಚಿಸಿ ವಿಷಾದ ವ್ಯಕ್ತಪಡಿಸಿದ್ದರು.

Advertisement
Share this on...