ಮೈಸೂರು: ಮುಂದಿನ ಬಾರಿ ಬಿಜೆಪಿಯಿಂದ ರಾಷ್ಟ್ರವಾದಿಯನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರು ಕುಟುಂಬ ಸಮೇತರಾಗಿ ಗುರುವಾರ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುತ್ತದೆ. ಆಗ ಜಾತಿ ವಿಚಾರ ಬರುವುದಿಲ್ಲ. ರಾಷ್ಟ್ರವಾದಿಯೊಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಬೇಕೆಂದು ಬೆಂಬಲಿಗರು ಬಯಸಿದ್ದರು. ಆದರೆ ಸಚಿವನೂ ಆಗುವುದಿಲ್ಲ ಅಂತ ಬಿಂಬಿಸಲಾಗಿತ್ತು. ಹೈಕಮಾಂಡ್ ನನ್ನನ್ನು ಹೇಗೆ ಪರಿಗಣಿಸಿದೆ ಅಂತ ಈಗ ಎಲ್ಲರಿಗೂ ಗೊತ್ತಾಗಿದೆ ಎಂದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಸವರಾಜ ಬೊಮ್ಮಾಯಿ ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ವಾಸ್ತವವಾಗಿ ಸಿದ್ದರಾಮಯ್ಯ ಅವರೇ ಹಸಿವಿನಿಂದ ಒದ್ದಾಡುತ್ತಿರುವ ಇಲಿ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಹುಲಿಯಾಗುತ್ತಾರೆ ಅಂದುಕೊಂಡಿದ್ದೆವು. ಆದರೆ ಅವರು ಇಲಿಯಾಗಿ ವಿಲ ವಿಲ ಒದ್ದಾಡುತ್ತಿದ್ದಾರೆ. ಅವರು ರಾಜ್ಯಕ್ಕೆ ಹುಲಿಯಾಗುವ ಬದಲು ಡಿ.ಕೆ.ಶಿವಕುಮಾರ್ ಮೇಲೆ ಹುಲಿಯಾಗಿದ್ದಾರೆ ಎಂದು ಚಾಟಿ ಬೀಸಿದರು.
ಇದನ್ನೂ ಓದಿ: ಸಚಿವ ಸ್ಥಾನ ಸಿಗದ ರಮೇಶ್ ಜಾರಕಿಹೊಳಿ ಮುಂದಿನ ನಡೆ ಏನು?
ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೆ ಬಿಜೆಪಿ ಕಚೇರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜೊತೆ ಚರ್ಚೆ ನಡೆಸಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ ನನಗೂ ಒಳ್ಳೆಯ ಕಾಲ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ನಳಿನಕುಮಾರ್ ಕಟೀಲ್ ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ತಮ್ಮ ಬದಲು ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿತ್ತು. ಆದರೆ, ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ಕೈ ಬಿಟ್ಟಿರುವುದರಿಂದ ಜಾರಕಿಹೊಳಿ ಸಹೋದರರು ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯಾಧ್ಯಕ್ಷರ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿರುವ ರಮೇಶ್ ಜಾರಕಿಹೊಳಿ, ನನಗೂ ಒಳ್ಳೆಯ ಕಾಲ ಬರಲಿದೆ. ನನಗೆ ನಮ್ಮ ಕ್ಷೇತ್ರದ ಜನರು ಇದ್ದಾರೆ. ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಅರವಿಂದ್ ಬೆಲ್ಲದ್ ರವರ ಫೇಸ್ಬುಕ್ ಪೋಸ್ಟ್
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಆರಂಭವಾದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲು ಕೇಳಿ ಬಂದ ಹೆಸರು ಧಾರವಾಡ ಶಾಸಕ ಅರವಿಂದ ಬೆಲ್ಲದ. ಆದರೆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಪಟ್ಟ ಕೈತಪ್ಪಿತ್ತು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಬೊಮ್ಮಾಯಿ ಸಂಪುಟದಲ್ಲಿ ಅರವಿಂದ ಬೆಲ್ಲದ ಸಚಿವರಾಗಿ ಬಹುಮುಖ್ಯ ಖಾತೆಯನ್ನು ಪಡೆಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ಸಿಕಿಲ್ಲ.
ಅರವಿಂದ ಬೆಲ್ಲದ ಫೇಸ್‌ಬುಕ್ ಪೋಸ್ಟ್ ಹಾಕಿದ್ದು ರಾಜಕೀಯ ಬೆಳವಣಿಗೆ ಕುರಿತು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕ್ಷೇತ್ರದ ಜನರನ್ನು ಉದ್ದೇಶಿಸಿ ಪೋಸ್ಟ್ ಹಾಕಿರುವ ಶಾಸಕರು ‘ಇಂದು ನನ್ನ ಹೆಸರು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ಪರಿಗಣಿಸಲ್ಪಟ್ಟು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗಮನಕ್ಕೆ ಬರುವಂತಾಗಿದೆ. ಇದು ನಿಮ್ಮೆಲ್ಲರ ಆಶೀರ್ವಾದವೇ ಸರಿ’ ಎಂದು ಹೇಳಿದ್ದಾರೆ.
‘ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೂ & ಸಂಪುಟದ ಎಲ್ಲಾ ಸ್ನೇಹಿತರಿಗೂ ನಾನು ಶುಭಾಶಯ ಕೋರುತ್ತೇನೆ. ನರೇಂದ್ರ ಮೋದಿಜೀಯವರ ಕನಸಿನಂತೆ ಕರ್ನಾಟಕ ತನ್ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸೋಣ ಎಂದು ಭಗವಂತ ಹಾಗೂ ತಮ್ಮಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಕರೆ ನೀಡಿದ್ದಾರೆ.