ಗರುಡ ಮತ್ತು ಸುದರ್ಶನ
ಒಮ್ಮೆ ಸುದರ್ಶನ ಚಕ್ರ ಹಾಗು ಗರುಡರಿಗೆ ಕೊಬ್ಬು ಬಂತಂತೆ. (ಅಹಂಕಾರ). ಸುದರ್ಶನ ಚಕ್ರ ಹೇಳಿತಂತೆ. “ನನ್ನ ಶಕ್ತಿ, ಸಾಮರ್ಥ್ಯ ಬಲು ಶ್ರೇಷ್ಷವಾದದ್ದು” ಶ್ರೀಮನ್ನಾರಾಯಣ ನನ್ನನ್ನು ಆಯುಧವನ್ನಾಗಿ ಉಪಯೋಗಿಸುತ್ತಾನೆ., ನನಗೆ ಸೋಲೇ ಇಲ್ಲ.
ಶ್ರೀಮನ್ನಾರಾಯಣನಿಗೆ ನನ್ನ ಶಕ್ತಿ ಸಾಮರ್ಥ್ಯಯದ ಮೇಲೆ ಸಂಪೂರ್ಣ ನಂಬಿಕೆ, ಅದಕ್ಕೇ ವೈಕುಂಠದ ದ್ವಾರದಲ್ಲಿ ನನ್ನನ್ನು ನಿಲ್ಲಿಸಿ ನಿರಂತರವಾಗಿ ಅವನಿಗೆ ಏನು ಆಪತ್ತು ಬರದಂತೆ ಕಾಯಲು ನನ್ನನ್ನು ನಿಯಮಿಸಿದ್ದಾನೆ.”
ಆಗ ಗರುಡ, “ನಾನು ಅಪಾರ ಶಕ್ತಿ ಶಾಲಿ, ಶ್ರೀಮನ್ನಾರಾಯಣನ ವಾಹನ, ಅವನಿಗೆ ಒಂದು ಹೆಸರು ಗರುಡ ವಾಹನ ಅಂತ, ನಾನು ಮೂರು ಲೋಕಗಳ ಒಡೆಯನಾದ ಶ್ರೀಮನ್ನಾರಾಯಣನನ್ನು ಎತ್ತಿಕೊಂಡು ಹಾರಾಡಬಲ್ಲೆ. ನನಗೆ ಸರಿಸಮಾನರು ಯಾರೂ ಇಲ್ಲ” ಅಂದಿತು.
ಶ್ರೀಮನ್ನಾರಾಯಣನ ಕಿವಿಗೆ ಈ ಸುದರ್ಶನ ಮತ್ತು ಗರುಡರ ಅಹಂಕಾರದ ಸುದ್ದಿ ಬಿತ್ತು. ಇವರಿಬ್ಬರು ನನ್ನ ಪರಮ ಭಕ್ತರು. ನನಗೆ ಆತ್ಮೀಯರು. ಆದರೂ ಈ ಅಹಂಕಾರ ಇವರಿಗೆ ಒಳಿತಲ್ಲ. ಇವರಿಬ್ಬರನ್ನು ತಿದ್ದಬೇಕು ಎಂದು ಯೋಚಿಸಿದ.
“ಶಕ್ತಿ ಸಾಮರ್ಥ್ಯ, ವಿದ್ಯೆ, ಸೌಂದರ್ಯ ಎಲ್ಲದಕ್ಕು ವಿನಯ ಇವರಿಗೆ ವಿನಯವಿಲ್ಲ. ಇವರು ನಮ್ಮವರು. ಆದ್ದರಿಂದ ಏನಾದರು ಆಗುವ ಮುನ್ನ ಇವರನ್ನು ಸರಿ ದಾರಿಗೆ ತರಲೇಬೇಕು” ಎಂದುಕೊಂಡು ಒಂದು ನಾಟಕವಾಡಿದ.
ಶ್ರೀಮನ್ನಾರಾಯಣನು ನಿದ್ರೆ, ಆಹಾರ, ನೀರು ಬಿಟ್ಟು ಕೃಷನಾದ. ಎಲ್ಲರಿಗೂ ಆಶ್ಚರ್ಯ, ಆತಂಕ, ಯಾವುದಪ್ಪಾ? ಮಹಾಲಕ್ಷ್ಮಿ ಈ ವಿಷಯವನ್ನು ಶ್ರೀಮನ್ನಾರಾಯಣನಿಗೆ ಕೇಳಿದಾಗ ಅವನು ಹೇಳುತ್ತಾನೆ.
“ನನಗೆ ಒಬ್ಬ ಆಪ್ತಮಿತ್ರನಿದ್ದಾನೆ. ಅವನನ್ನು ನೋಡಿ, ಮಾತನಾಡಿ ಬಹಳ ವರ್ಷಗಳು ಸಂದವು. ಅವನಿಗೆ ವೃದ್ಧಾಪ್ಯ ಸಮೀಪಿಸಿದೆ. ಅವನು ಇಲ್ಲಿಗೆ ಬರಲು ಸಾಧ್ಯವಾಗದು. ನಾನು ಈಗಿನ ಸ್ಥಿತಿಯಲ್ಲಿ ಅವನಲ್ಲಿಗೆ ಹೋಗಲಾರೆ. ಅವನನ್ನು ನೋಡಬೇಕೆನ್ನಿಸುತ್ತಿದೆ. ಏನುಮಾಡುವುದು?” ಅದಕ್ಕೆ ಮಹಾಲಕ್ಷ್ಮೀ ಹೇಳುತ್ತಾಳೆ:
“ಇಷ್ಟೇನಾ! ನಮ್ಮ ಗರುಡನಿಗೆ ಹೇಳಿದರೆ ಸಾಕು, ಕ್ಷಣ ಮಾತ್ರದಲ್ಲಿ
ಅವನನ್ನು ಇಲ್ಲಿಗೆ ಕರೆತರುತ್ತಾನೆ”. ಸರಿ, ಗರುಡ ಬಂದ. ಅವನಿಗೆ ಶ್ರೀಮನ್ನಾರಾಯಣ ಹೇಳುತ್ತಾನೆ. ಆಪ್ತಮಿತ್ರ ಆಂಜನೇಯ, ಈಗ ಗಂಧಮಾದನ ಪರ್ವತದಲ್ಲಿ ಇದ್ದಾನೆ. ವಯಸ್ಸಾಗಿದೆ. ತ್ರೇತಾಯುಗದಲ್ಲಿ ನಾನು ಶ್ರೀರಾಮನಾಗಿದ್ದಾಗ ನನಗೆ ಬೇಕಾದವನಾಗಿದ್ದ. ಚಿರಂಜೀವಿ. ಅವನಿಗೆ ನೀನು, ‘ಶ್ರೀರಾಮ ನಿನ್ನನ್ನು ನೋಡಬೇಕಂತೆ’, ಅಂತ ಹೇಳಿ ಇಲ್ಲಿಗೆ ಕರೆದುಕೊಂಡು ಬಾ.
ಗರುಡ ವಾಯುವೇಗದಲ್ಲಿ ಹಾರಿ ಗಂಧಮಾಧನ ಪರ್ವತದಲ್ಲಿ ಇಳಿದ. ಅಲ್ಲಿ ಆಂಜನೇಯ ಶ್ರೀರಾಮನ ಧ್ಯಾನದಲ್ಲಿ ಇದ್ದ, ಬಾಯಿಯಿಂದ ರಾಮನಾಮ ಬರುತ್ತಾ ಇದೆ. ಗರುಡ ಹೇಳುತ್ತಾನೆ: “ಸ್ವಾಮೀ, ನಾನು ಶ್ರೀಮನ್ನಾರಾಯಣನ ದಾಸ ಹಾಗೂ ವಾಹನ, ಶ್ರೀರಾಮಚಂದ್ರ ಪ್ರಭುವಿಗೆ ನಿಮ್ಮನ್ನು ನೋಡಬೇಕೆನಿಸಿದೆ. ನಾಲೈದು ದಿನಗಳಿಂದ ನಿದ್ರಾಹಾರಗಳನ್ನು ತೊರೆದು ಬಹಳ ಕೃಷರಾಗಿದ್ದಾರೆ. ಬಹಳ ಆತಂಕದಲ್ಲಿದ್ದಾರೆ. ದಯವಿಟ್ಟು ಬೇಗ ಬನ್ನಿ”
ಶ್ರೀರಾಮನ ಹೆಸರು ಕೇಳಿದೊಡನೇ ಆಂಜನೇಯ ಧ್ಯಾನ ಸ್ಥಿತಿಯಿಂದ ಎಚ್ಚೆತ್ತ. “ಏನು ನನ್ನ ಆರಾಧ್ಯ ದೈವ ಶ್ರೀರಾಮನು ನನ್ನನ್ನು ನೋಡಬೇಕೆಂದನೆ? ನಾನೆಂಥ ಪುಣ್ಯಶಾಲಿ. ಈಗಲೇ ಹೊರಟೆ” ಎಂದ.
ಆಗ ಗರುಡ, “ಸ್ವಾಮೀ, ನಿಮಗೆ ವಯಸ್ಸಾಗಿದೆ. ನನ್ನ ಮೇಲೆ ಕುಳಿತುಕೊಳ್ಳಿ. ನಾನೇ ನಿಮ್ಮನ್ನು ವಾಯು ವೇಗದಲ್ಲಿ ಶ್ರೀರಾಮನ ಬಳಿ ವೈಕುಂಠಕ್ಕೆ ಕರೆದೊಯ್ಯುತ್ತೇನೆ” ಅಂದ. ಆಂಜನೇಯ, “ಬೇಡ, ಶ್ರೀರಾಮನ ಕೃಪೆಯಿಂದ ನನ್ನ ದೇಹದಲ್ಲಿ ಶಕ್ತಿ ಇದೆ. ನಾನೇ ಹೋಗುತ್ತೇನೆ. ನೀನು ಮುಂದೆ ಬೇಗ ಹೋಗಿ, ಶ್ರೀರಾಮಚಂದ್ರನಿಗೆ ನಾನು ಬರುವ ಸುದ್ದಿ ತಿಳಿಸು” ಎಂದು ಆಕಾಶಕ್ಕೆ ಹಾರಿದ.
ಆಂಜನೇಯ ಹಾರಿ ವೈಕುಂಠ ದ್ವಾರಕ್ಕೆ ಬಂದೆ. ಅಲ್ಲಿ ಸುದರ್ಶನ(ಚಕ್ರ) ಅವನನ್ನು ಒಳಗೆ ಹೋಗಲು ಬಿಡಲಿಲ್ಲ. ಆಂಜನೇಯ ಬೇಡಿಕೊಂಡ. ನನ್ನ ಪ್ರಭು ಶ್ರೀರಾಮಚಂದ್ರನನ್ನು ನೋಡಬೇಕು. ಅವನೇ ಹೇಳಿ ಕಳುಹಿಸಿದ್ದಾನೆ.. ನನ್ನನ್ನು ಬೇಗ ಒಳಗೆ ಬಿಡು”. ಸುದರ್ಶನ ಅವನನ್ನು ಒಳಗೆ ಬಿಡಲಿಲ್ಲ. ಆಗ ಆಂಜನೇಯ ಸುಮ್ಮನೆ ಇವನೊಡನೆ ಏನು ಮಾತು. ಸಮಯ ಹಾಳು ಅಷ್ಟೇ ಅಂದುಕೊಂಡು ಚಕ್ರವನ್ನು ತನ್ನ ಎಡ ಕಂಕುಳದಲ್ಲಿ ಇಟ್ಟುಕೊಂಡು ಒಳಗೆ ಹೋಗಿಯೇ ಬಿಟ್ಟ.
ಶ್ರೀ ಮನ್ನಾರಾಯಣನು ಅವನಿಗೆ ಶ್ರೀ ರಾಮಚಂದ್ರನಂತೆ, ಮಹಾಲಕ್ಷ್ಮಿ ಸೀತಾಮಾತೆಯಂತೆ ಕಾಣಿಸಿದರು. ಇಬ್ಬರು ಬಹಳ ಮಾತನಾಡಿದರು.
ಭಗವಂತ ಮತ್ತು ಭಕ್ತನ ಸಂಭಾಷಣೆ:
ಆಂಜನೇಯ, “ಸ್ವಾಮೀ, ಕಡೆಗೂ ನಿನ್ನ ದರ್ಶನ ಕೊಟ್ಟು ನನ್ನನ್ನು ಧನ್ಯನಾಗಿಸಿದೆ”, ಅಂದ.
ಆಗ ಶ್ರೀಮನ್ನಾನಾರಾಯಣ, “ಹೌದು. ನಿನ್ನ ಆ ಶ್ರೇಷ್ಠ ವ್ಯಕ್ತಿತ್ವ, ನಮ್ಮ ಸಂಬಂಧ ನೆನಪಿಗೆ ಆಗಾಗ ಬರುತ್ತಲೇ ಇರುತ್ತದೆ. ಅದಿರಲಿ, ಆಂಜನೇಯಾ, ನಿನ್ನ ಕಂಕುಳಲ್ಲಿಏನೋ ಇದೆಯಲ್ಲಾ! ಏನದು?” ಅಂತ ಕೇಳಿದ. ಆಂಜನೇಯ ಪ್ರಭು ವೈಕುಂಠ
ದ್ವಾರದಲ್ಲಿ ಒಂದು ಹುಳು ನನಗೆ ಪ್ರವೇಶ ನೀಡದೆ ಸತಾಯಿಸಿತು. ನೀವೇ ನನ್ನನ್ನು ಕರೆಸಿದ್ದೀರಿ, ನಿಮ್ಮನ್ನು ತುರ್ತಾಗಿ ಕೊಡಬೇಕು ಅಂದರೂ ಎಷ್ಟು ಬೇಡಿದರು ನನ್ನನ್ನು ಒಳಗೆ ಬಿಡಲಿಲ್ಲ. ಅದನ್ನು ಇಲ್ಲಿ ನನ್ನ ಕಂಕುಳದಲ್ಲಿ ಇಟ್ಟುಕೊಂಡೇ ಒಳಗೆ ಬಂದೆ” ಅನ್ನುತ್ತ ಕೈ ಕೊಡವಿದ. ಆಗ ಸುದರ್ಶನ ಚಕ್ರ ಕೆಳಗೆ ಬಿತ್ತು.
ಸುದರ್ಶನಿಗೆ ಬಹಳ ನಾಚಿಕೆಯಾಯ್ತು. ಅವನ ಅಹಂಕಾರ ಮುರಿಯಿತು. ಅಷ್ಟರಲ್ಲಿ ಗರುಡ ಏದುಸಿರು ಬಿಡುತ್ತಾ ಓಡೋಡಿ ಬಂದ. ಇಷ್ಟೆಲ್ಲ ಇಲ್ಲಿ ಆಗುತ್ತಿರುವಾಗಲೂ ಗರುಡನಿಗೆ ಬರಲಾಗಲಿಲ್ಲ, ಇಲ್ಲಿ ನಡೆದ ಸಂಗತಿಯನ್ನು ಕೇಳಿ ಗರುಡನಿಗೆ ನಾಚಿಕೆಯಾಯಿತು.
ಸುದರ್ಶನ ಮತ್ತು ಗರುಡ, ಶ್ರೀಮನ್ನಾರಾಯಣನ ಹಾಗೂ ಆಂಜನೇಯನ ಕ್ಷಮೆ ಕೇಳಿದರು,.
ಸಾಮರ್ಥ್ಯ, ವಿದ್ಯೆ,ಸಂಪತ್ತು,ಸೌಂದರ್ಯ ಏನೇ ಇರಲಿ ವಿನಯವೇ ಭೂಷಣ