ಇಂದಿನ ಭಾರತದ ದಕ್ಷಿಣ ಭಾಗದ ಹಿಂದೂ ಮಹಾಸಾಗರದಲ್ಲಿರುವ ಕುಮರಿ ಖಂಡಂ ಪ್ರಾಚೀನ ತಮಿಳು ನಾಗರಿಕತೆಯ ಖಂಡವೆಂದು ಹೇಳಲಾಗಿದೆ. ತಮಿಳು ಪುರಾಣಗಳಲ್ಲಿ ಇದು ಸಮುದ್ರದಲ್ಲಿ ಮುಳುಗಿಹೋದ ಖಂಡವೆಂದು ಉಲ್ಲೇಖಗೊಂಡಿದೆ.
ಇದಕ್ಕೆ “ಕುಮರಿಕ್ಕಂಟಂ” ಹಾಗು “ಕುಮರಿನಾಡು” ಎಂಬ ಇತರ ಹೆಸರುಗಳಿವೆ. ಹಿಂದೂ ಮಹಾಸಾಗರ ಹಾಗು ಪೆಸಿಫಿಕ್ ಮಹಾಸಾಗರದ ನಡುವಿನ ನಿಗೂಢ ಭೂಮಿಯನ್ನು ಪಾಶ್ಚಾತ್ಯ ಭೂವಿಜ್ಞಾನಿಗಳು “ಲೆಮೂರಿಯಾ”
“ಕುಮರಿ ಖಂಡಂ“ನ ಪ್ರತಿಪಾದಕರು ಭಾರತದ ದಕ್ಷಿಣ ಗಡಿಯಲ್ಲಿರುವ ಕನ್ಯಾಕುಮಾರಿ ಪ್ರದೇಶವು ಮೂಲತಹ ಕುಮರಿ ಖಂಡದ ಒಂದು ಭಾಗವೇ ಎಂದು ಸಾಬೀತು ಪಡಿಸುವುದರಲ್ಲಿ ತೀವ್ರವಾಗಿದ್ದರು. ಕೆಲವರು ಇಡೀ ತಮಿಳುನಾಡು, ಇಡೀ ಭಾರತ ಪರ್ಯಾಯದ್ವೀಪ ಹಾಗು ಇಡೀ ಭಾರತ ದೇಶವೇ ಕುಮರಿ ಖಂಡದ ಒಂದು ಭಾಗವಾಗಿದ್ದಿತೆಂದು ವಾದಿಸುತ್ತಿದ್ದರು. ಈ ಪ್ರಸ್ತಾಪ ಆಧುನಿಕ ತಮಿಳು ಜನಾಂಗದ ಉದಯಕ್ಕೆ ಹಾಗು ಕುಮರಿ ಖಂಡವೇ ಏಕೈಕ ಕಾರಣವೆಂದು ಸಾರುತ್ತಿದೆ. ಇದರಿಂದ ತಮಿಳು ಭಾಷೆ ಹಾಗು ಅದರ ಸಂಸ್ಕೃತಿಯನ್ನು ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಯನ್ನಾಗಿ ವರ್ಣಿಸಲು ಸಾಧ್ಯವಾಗಿದೆ.
ಕೊನೆಯ ಹಿಮಯುಗ ಮುಗಿದು ಸಮುದ್ರದ ಮಟ್ಟ ಏರಿಕೆಯಾದಾಗ ಈ ಖಂಡವು ಮುಳುಗಿಹೋಯಿತೆಂಬುದು ಕುಮರಿ ಖಂಡದ ಪ್ರತಿಪಾದಕರ ಅಭಿಪ್ರಾಯವಾಗಿದೆ. ಆನಂತರ ತಮಿಳು ಭಾಷೆಯನ್ನಾಡುವ ಜನರು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ, ಅಲ್ಲಿದ್ದ ಜನರೊಂದಿಗೆ ಬೆರೆತರು. ಇದು ನಮ್ಮ ಜಗತ್ತಿನಲ್ಲಿ ಹೊಸ ಜನಾಂಗ, ಭಾಷೆ, ಸಂಸ್ಕೃತಿ ಹಾಗು ಹೊಸ ನಾಗರಿಕತೆಗಳ ಉಗಮಕ್ಕೆ ಸಾಕ್ಷಿಯಾಯಿತು. ಇನ್ನೂ ಕೆಲವರು ಕುಮರಿ ಖಂಡವೇ ಮಾನವ ಕುಲಕ್ಕೆ ಮೂಲವೆಂದು ಊಹಿಸುತ್ತಾರೆ. ಹಲವಾರು ನಿರೂಪಣೆಗಳು ಜಗತ್ತಿನ ಎಲ್ಲ ನಾಗರಿಕತೆಗಳ ಮೂಲ ತಮಿಳು ಸಂಸ್ಕೃತಿಯೇ ಎಂದು ಒಪ್ಪಿದೆ. ಜಗತ್ತಿನ ಎಲ್ಲ ಭಾಷೆಗಳ ತಾಯಿ ಭಾಷೆ ”ತಮಿಳು”ಎಂದು ಒಪ್ಪಿದೆ. ಕುಮರಿ ಖಂಡಂ‘ನ ಜನರ ಪರಂಪರೆ, ಸಂಸ್ಕೃತಿ ಸಂಪ್ರದಾಯಗಳೆಲ್ಲವೂ ಬಹುಪಾಲು ಈಗಿನ ತಮಿಳುನಾಡಿನಲ್ಲಿ ಬದುಕುಳಿದುಕೊಂಡಿದೆ ಎಂದು ಇವು ಹೇಳುತ್ತಿದೆ.
ಎ.ಆರ್.ವಾಸುದೇವನ್ ಎಂಬ ಲೇಖಕರು ತಮ್ಮ “Aryans: who are they?” (ಆರ್ಯರು: ಅವರು ಯಾರು?) ಸಾಹಿತ್ಯದಲ್ಲಿ ‘ಕುಮರಿ ಖಂಡಂ‘ ಮಾದರಿಯನ್ನು ಪ್ರಸ್ತುತ ಪಡಿಸಿದ್ದಾರೆ. ಅದು ಮಾನವ ಕುಲದ ಮೂಲ ಸ್ಥಳ ಆಫ್ರಿಕಾ ಖಂಡವಲ್ಲ, ಆದರೆ ಅದು ಸುಮಾರು 14,000 ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಿಹೋದ ಕುಮರಿ ಖಂಡಂ ಎಂದು ಸಾರಿದೆ. ಭಾರತಕ್ಕೂ ಆಫ್ರಿಕಾಗೂ ಮಧ್ಯಭಾಗದಲ್ಲಿದ್ದ ಈ ಪ್ರದೇಶದಲ್ಲಿ ಕಾಣಿಸಿಕೊಂಡ ಮನುಷ್ಯರಿಗೆ ಎರಡು ಕಡಲ ಮಾರ್ಗವಿತ್ತು. ಒಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣ ಮಾಡಿ ಆಫ್ರಿಕಾ ಸೇರುವುದು. ಮತ್ತೊಂದು ಪೂರ್ವ ದಿಕ್ಕಿನಲ್ಲಿ ಹೋಗಿ ಭಾರತ ಸೇರುವುದು. ಭಾರತಕ್ಕೆ ವಲಸೆ ಹೋದ ಜನ ಮತ್ತೆ ಉತ್ತರದಿಕ್ಕಿನೆಡೆಗೆ ಪ್ರಯಾಣ ಮಾಡಿ, ವಿಶ್ವದ ಇತರ ಖಂಡಗಳಲ್ಲಿ ನೆಲೆಯಾದರೆಂದು ದಾಖಲೆಯಾಗಿದೆ.
ಭಾರತದಲ್ಲಿ ಲೆಮೂರಿಯಾ
1864ರಲ್ಲಿ ಆಂಗ್ಲ ಜೀವಶಾಸ್ತ್ರಜ್ಞರಾದ ಫಿಲಿಪ್ ಸ್ಕ್ಲೇಟರ್ (Philip Sclater) ಭಾರತ, ಮಡಗಾಸ್ಕರ್ ಹಾಗು ಆಫ್ರಿಕಾ ಖಂಡದ ಮಧ್ಯದಲ್ಲಿ ಈ ಮೂರೂ ಪ್ರದೇಶಗಳನ್ನು ಸೇರಿಸುವ ಭೂಪ್ರದೇಶ ಸಮುದ್ರದಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ. ಈ ಮೇಲ್ಕಂಡ ಮೂರೂ ಪ್ರದೇಶಗಳಲ್ಲಿ ಕಾಣಿಸಿಕೊಂಡ “ಲೆಮೂರ್” ಜನಾಂಗದವರ ಹೆಸರಿನಲ್ಲಿಯೇ ಇವರು ಆ ಮುಳುಗಿರುವ ಭೂಪ್ರದೇಶಕ್ಕೆ “ಲೆಮೂರಿಯಾ” ಎಂಬ ಹೆಸರನ್ನು ನೀಡಿದರು. ನಂತರ ಬಂದ “ಕಾಂಟಿನೆಂಟಲ್ ಡ್ರಿಫ್ಟ್” (continental drift) ಸಿದ್ಧಾಂತವು ಲೆಮೂರಿಯಾ ಕಲ್ಪನೆಯ ಅಂಗೀಕಾರವನ್ನು ನಿರಾಕರಿಸಿತು. ಅಷ್ಟರಲ್ಲಿ ಹಲವಾರು ವಿದ್ವಾಂಸರು ಆಗಾಗಲೇ ಅದನ್ನು ಜಗತ್ತಿಗೆ ಸಾರಿ ವಿಸ್ತಾರಗೊಳಿಸಿದ್ದರು. ಪೆಸಿಫಿಕ್ ಮಹಾಸಾಗರದಲ್ಲಿ ಮುಳುಗಿದ ಖಂಡಗಳಾದ “ಜೀಲ್ಯಾಂಡಿಯಾ” (Zealandia) ಹಾಗು ಹಿಂದೂ ಮಹಾಸಾಗರದಲ್ಲಿ ಮುಳುಗಿದ “ಮಾರಿಷಿಯಾ” (Mauritia) ಮತ್ತು “ಕರ್ಗುಲೆನ್ ಪ್ರಸ್ಥಭೂಮಿ” (Kergeaulen plateau) ಭೂವೈಜ್ಞಾನಿಕವಾಗಿ ತಮ್ಮನ್ನು ಆಧಾರಿತಪಡಿಸಿಕೊಂಡಿವೆ. ಆದರೆ ಪೆಸಿಫಿಕ್ ಹಾಗು ಹಿಂದೂ ಮಹಾಸಾಗರದ ನಡುವಿನಲ್ಲಿ ಯಾವ ನೆಲವೂ ಆಧಾರಪೂರ್ವಕವಾಗಿ ಸೃಷ್ಟಿಯಾಗಿಲ್ಲ ಎಂದು ದಾಖಲೆಗಳು ಹೇಳುತ್ತಿದ್ದೆ.
“ಕುಮರಿ ಖಂಡಂ” ಎಂಬ ಪದವನ್ನು ಮೊಟ್ಟಮೊದಲಿಗೆ ಕಾಚಿಯಪ್ಪ ಶಿವಾಚಾರ್ಯರು (1350-1420) “ಸ್ಕಂದ ಪುರಾಣ“ದ ತಮಿಳು ಆವೃತ್ತಿಯಾದ ತಮ್ಮ “ಕಂದ ಪುರಾಣ“ದಲ್ಲಿ ಬಳಸಿದ್ದರು. ತಮಿಳು ಪುನರುಜ್ಜೀವಕರು ಇದನ್ನು ಅಚ್ಚ ತಮಿಳು ಭಾಷೆಯ ಪದವೆಂದು ಹೇಳಿದರೂ, ನಿಜಕ್ಕೂ ಇದು “ಕುಮರಿಕ ಖಂಡ” ಎಂಬ ಸಂಸ್ಕೃತ ಪದದಿಂದ ಬಂದಿದೆ. “ಕಂದ ಪುರಾಣ“ದ ಒಂದು ಭಾಗವಾದ “ಅಂದಕೊಸಪ್ಪಡಲಂ” (Andakosappadalam), ಬ್ರಹ್ಮಾಂಡವನ್ನು ಈ ರೀತಿ ವರ್ಣಿಸಿದೆ- ” ಈ ಬ್ರಹ್ಮಾಂಡದಲ್ಲಿ ಹಲವಾರು ಜಗತ್ತುಗಳಿವೆ. ಪ್ರತಿಯೊಂದು ಜಗತ್ತಿನಲ್ಲೂ ಹಲವಾರು ಖಂಡಗಳಿವೆ. ಪ್ರತಿಯೊಂದು ಖಂಡದಲ್ಲೂ ನೂರಾರು ಸಾವಿರಾರು ರಾಜ್ಯಗಳಿವೆ” ಪರಟನ್ ಎಂಬವನು ಇಂತಹ ಒಂದು ರಾಜ್ಯದ ಅರಸನಾಗಿದ್ದ. ಅವನಿಗೆ ಎಂಟು ಸುತರು ಹಾಗು ಒಬ್ಬ ಮಗಳಿದ್ದಳು. ಅವನು ತನ್ನ ರಾಜಾಂಗವನ್ನು ಒಂಬತ್ತಾಗಿ ಭಾಗಿಸಿ ತನ್ನ ಮಕ್ಕಳಿಗೆ ಹಂಚಿದನು. ಅವನ ಮಗಳಾದ “ಕುಮರಿ” ಆಳುತ್ತಿದ್ದ ಪ್ರದೇಶವೇ “ಕುಮರಿ ಖಂಡಂ” ಎಂದು ಕರೆಯಲಾಗಿದೆ. ಆದ್ದರಿಂದ 20ನೇ ಶತಮಾನದಲ್ಲಿ ಎಂ.ಅರುಣಾಚಲಂ (1944) ರವರು ಅದು ಕೇವಲ ಮಹಿಳೆಯರು (ಕುಮರಿಯರು) ಆಳುತ್ತಿದ್ದ ಖಂಡವೆಂದು ಹೇಳುತ್ತಾರೆ. ಡಿ.ಸವರಿರಾಯನ್ ಪಿಳ್ಳೈ ಆ ಖಂಡದ ಆಚಾರ ವಿಚಾರಗಳನ್ನು ಟೀಕಿಸುತ್ತಾರೆ. ಅಲ್ಲಿ ಮಹಿಳೆಯರಿಗೆ ಗಂಡನನ್ನು ಆಯ್ಕೆ ಮಾಡುವ ಹಾಗು ಇಡೀ ಆಸ್ತಿಯನ್ನು ಕಟ್ಟಿ ಆಳುವ ಹಕ್ಕಿತ್ತೆಂದು ಹೇಳುತ್ತಾರೆ. ಅದರ ಪರಿಣಾಮವಾಗಿಯೇ ಆ ನೆಲವನ್ನು “ಕುಮರಿ ನಾಡು” ಎಂದು ಜನ ಕರೆಯಲಾರಂಭಿಸಿದರು. ಹಾಗು ಕನ್ಯಾಕುಮರಿಯಲ್ಲಿರುವ ದೇವಾಲಯದ ನಿರ್ಮಾಣ ಮಾಡಿದವರು ಪ್ರವಾಹದಿಂದ ಮುಳುಗಿದ ಕುಮರಿ ಖಂಡದಿಂದ ಬದುಕುಳಿದವರೆಂದು ಇವರು ಊಹಿಸುತ್ತಾರೆ. ಸಾಂಸ್ಕೃತಿಕ ಇತಿಹಾಸಕಾರರಾದ ಸುಮತಿ ರಾಮಸ್ವಾಮಿ ತಮಿಳು ಭಾಷೆಯ ಪದವಾದ “ಕುಮರಿ” (ಅಂದರೆ ಕನ್ಯೆ) ಎಂಬುದು ತಮಿಳುನಾಡಿನ ಭಾಷೆ ಹಾಗು ಸಂಸ್ಕೃತಿಯ ಪರಿಶುದ್ಧತೆಯನ್ನು ಸೂಚಿಸುತ್ತಿದೆ ಎಂದು ಹೇಳುತ್ತಾರೆ.
ನಂತರ ಹಲವಾರು ಬರಹಗಾರರು ಆ ಖಂಡಕ್ಕೆ ನಾನಾ ಹೆಸರುಗಳನ್ನಿಡುತ್ತಿದ್ದರು. 1903ರಲ್ಲಿ ವಿ.ಜಿ.ಸೂರ್ಯನಾರಾಯಣ ಶಾಸ್ತ್ರಿ ಅವರು ತಮ್ಮ ಕೃತಿಯಾದ “ತಮಿಳ್ ಮೊಳಿಯಿನ್ ವರಲಾರು” (ತಮಿಳು ಭಾಷೆಯ ಇತಿಹಾಸ)ದಲ್ಲಿ “ಕುಮರಿನಾಡು” (ಅಂದರೆ ಕುಮರಿ ಪ್ರದೇಶ) ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು. 1912ರಲ್ಲಿ ಸೋಮಸುಂದರ ಭಾರತಿ ಮೊದಲ ಬಾರಿಗೆ “ತಮಿಳಗಂ” (ಅಂದರೆ ಪ್ರಾಚೀನ ತಮಿಳು ದೇಶ) ಎಂಬ ಪದವನ್ನು ಬಳಸಿ ತಮಿಳು ನಾಗರಿಕತೆಯನ್ನು “ನಾಗರಿಕತೆಗಳ ತೊಟ್ಟಿಲು” (cradle of civilization) ಎಂದು ಕೊಂಡಾಡಿದ್ದಾರೆ. ಇದಕ್ಕೆ “ಪಾಂಡ್ಯ ನಾಡು“, “ನಾವಲನ್ ತೀವು“, “ಜಂಬುದ್ವೀಪ ” ಹೀಗೆ ಬೇರೆ ಬೇರೆ ಹೆಸರುಗಳಿವೆ. ೧೯೩೦ರ ದಶಕಗಳಲ್ಲೇ “ಲೆಮೂರಿಯಾ” ಪ್ರದೇಶವನ್ನು ಗುರುತಿಸಲು “ಕುಮರಿ ಖಂಡಂ” ಪದವನ್ನು ಪರ್ಯಾಯ ಪದವಾಗಿ ಬಳಸಲಾಗಿತ್ತು. ಹಲವಾರು ಐರೋಪ ಹಾಗು ಅಮೇರಿಕಾದ ಭೂವಿಜ್ಞಾನಿಗಳು ಆಧುನಿಕ ಮಾನವನ ಉಗಮಕ್ಕೆ ಲೆಮೂರಿಯಾ ಮೂಲ ಆಧಾರವಲ್ಲವೆಂದು, ಮನುಷ್ಯರು ಭೂಮಿಯಲ್ಲಿ ಅವತರಿಸುವ ಮೊದಲೇ ಆ ಖಂಡ ಕಣ್ಮರೆಯಾಯಿತೆಂದು ಗುರುತಿಸಿದ್ದಾರೆ. ೧೮೮೫ರಲ್ಲಿ ಐ.ಎ.ಎಸ್ ಅಧಿಕಾರಿಯಾಗಿದ್ದ “ಚಾರ್ಲೆಸ್.ಡಿ.ಮೆಕ್ಲೀನ್“ರವರು “The manual of the administration of the Madras presidency” (ಮದ್ರಾಸ್ ಪ್ರೆಸಿಡೆನ್ಸಿಯ ಆಡಳಿತದ ಕೈಪಿಡಿ) ಕೃತಿಯಲ್ಲಿ ಲೆಮೂರಿಯಾ ಖಂಡವನ್ನು ಆದಿ ದ್ರಾವಿಡರ ಮಾತೃಭೂಮಿಯೆಂದು ಊಹಿಸಿದ್ದಾರೆ. ೧೮೯೮ರಲ್ಲಿ ಜೆ.ನಲ್ಲಸಾಮಿ ಪಿಳ್ಳೈ ತಮ್ಮ “siddhanta deepika” (ಅಂದರೆ ಬೆಳಕಿನ ಸತ್ಯ) ಎಂಬ ತಾತ್ವಿಕ-ಸಾಹಿತ್ಯ ಪತ್ರಿಕೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಮುಳುಗಿ ಹೋದ ಖಂಡದ ಬಗ್ಗೆ ಒಮ್ಮೆ ಲೇಖನವನ್ನು ಸೃಷ್ಟಿಸಿದ್ದರು. ಅದರಲ್ಲಿ ತಮಿಳರ ಸಂಗಮ ಕಾಲದ ಸಾಹಿತ್ಯಗಳನ್ನು ಆ ಮಹಾಪ್ರವಾಹ ನುಂಗಿದುದಾಗಿ ಜನ ಹೇಳುವರೆಂದು ಅವರು ಉಲ್ಲೇಖಿಸಿದ್ದಾರೆ. ಆದರೆ ಈ ಎಲ್ಲ ಘಟನೆಗಳಿಗೆ ವೈಜ್ಞಾನಿಕವಾಗಿ ಯಾವ ಆಧಾರಗಳೂ ಇಲ್ಲವೆಂಬುದು ಗಮನಾರ್ಹ ವಿಷಯವಾಗಿದೆ.
ಪಠ್ಯಪುಸ್ತಕಗಳಲ್ಲಿ ಕುಮರಿ ಸಿದ್ಧಾಂತ
1908ರಲ್ಲಿ “ಕುಮರಿ ಖಂಡಂ” ಸಿದ್ಧಾಂತವನ್ನು ಪ್ರಥಮ ಬಾರಿಗೆ ಕಾಲೇಜು ಪಠ್ಯಕ್ರಮದಲ್ಲಿ ಸೇರಿಸಲಾಗಿತ್ತು. 1908-1909ರ ಶೈಕ್ಷಣಿಕ ವರ್ಷದಲ್ಲಿ ಸೂರ್ಯನಾರಾಯಣ ಶಾಸ್ತ್ರಿಯವರ ಪುಸ್ತಕವನ್ನು ಮದ್ರಾಸ್ ವಿಶ್ವವಿದ್ಯಾನಿಲಯದ ಮಾಸ್ಟರ್ ಡಿಗ್ರಿಯ ಪಠ್ಯಕ್ರಮದಲ್ಲಿ ಸೇರಿಸಲಾಗಿತ್ತು. ಕೆಲವೇ ದಶಮಾನಗಳಲ್ಲಿ ಪೂರ್ಣಲಿಂಗಂ ಪಿಳ್ಳೈ ಅವರ “A primer of tamil literature” (ಅಂದರೆ ತಮಿಳು ಸಾಹಿತ್ಯದ ಪ್ರಾಥಮಿಕ ಪುಸ್ತಕ) (1904) ಮತ್ತು “Tamil literature” (ತಮಿಳು ಸಾಹಿತ್ಯ) (1929), ಕಂದಯ್ಯ ಪಿಳ್ಳೈ ಅವರ “ತಮಿಳಗಂ” (1934) ಹಾಗು ಸ್ರೀನಿವಾಸ ಪಿಳ್ಳೈ ಅವರ “ತಮಿಳ್ ವರಲಾರು” (ತಮಿಳು ಇತಿಹಾಸ) (1927) ಕೃತಿಗಳು ಹೊರಬಂದಿತು. 1967ರಲ್ಲಿ ನಡೆದ ಚುಣಾವಣೆಯಲ್ಲಿ ಗೆದ್ದ ದ್ರಾವಿಡ ಪಕ್ಷದವರು ಕುಮರಿ ಖಂಡಂ ಸಿದ್ಧಾಂತವನ್ನು ರಾಜ್ಯದ ಬಹುತೇಕ ಶಾಲೆ ಹಾಗು ಕಾಲೇಜುಗಳಲ್ಲಿ ಪಾಠವಾಗಿ ಕಲಿಸಲು ಶುರು ಮಾಡಿದರು. 1971ರಲ್ಲಿ ತಮಿಳುನಾಡಿನ ಸರ್ಕಾರ ತಮಿಳುನಾಡಿನ ಇತಿಹಾಸವನ್ನು ರಚಿಸಲು ಒಂದು ಔಪಚಾರಿಕ ಮಂಡಳಿಯನ್ನು ಏರ್ಪಡಿಸಿತು. ಅಂದಿನ ಶಿಕ್ಷಣಾಧಿಕಾರಿಯಾಗಿದ್ದ ಆರ್.ನೆಡುಂಚೆಳಿಯನ್ ಅವರು ವಿಧಾನಸಭೆಯಲ್ಲಿ ತಮಿಳುನಾಡಿನ ಇತಿಹಾಸ ಕುಮರಿ ಖಂಡದ ಕಾಲದಲ್ಲಿಯೇ ಪ್ರಾರಂಭವಾಯಿತೆಂದು ಅಂಗೀಕರಿಸಿದರು. ಅಂದಿನಿಂದ ಕುಮರಿ ಸಿದ್ಧಾಂತವನ್ನು ತಮಿಳುನಾಡು ಸರ್ಕಾರದ ಇತಿಹಾಸ ಪುಸ್ತಕದಲ್ಲಿ ಮುದ್ರಿತವಾಗಲು ಆರಂಭವಾಯಿತು.
ನಕಾಶೆಗಳು
1916ರಲ್ಲಿ ಎಸ್.ಸುಬ್ರಹ್ಮಣ್ಯ ಶಾಸ್ತ್ರಿಯವರು ತಮ್ಮ “ಸೆಂತಮಿಳ್” ಪತ್ರಿಕೆಯಲ್ಲಿ ಕುಮರಿ ಖಂಡದ ಪ್ರಪ್ರಥಮ ನಕಾಶೆಯನ್ನು ಚಿತ್ರಿಸಿದ್ದರು. ನಂತರ 1946ರಲ್ಲಿ ಪೂರ್ಣಲಿಂಗಂ ಪಿಳ್ಳೈ ಅವರು ತಮ್ಮ ನಕಾಶೆಯಲ್ಲಿ “ತೆನ್ ಮದುರೈ“, “ಕಪಟಪುರಂ” ಮುಂತಾದ ನಗರಗಳನ್ನು ತೋರಿಸಿದ್ದರು. 1977ರಲ್ಲಿ ಆರ್.ಮದಿವಾನನ್ ಕುಮರಿ ಖಂಡವನ್ನು ವಿಸ್ತಾರವಾಗಿ ಚಿತ್ರಿಸಿ 49 ‘ನಾಡು‘ಗಳನ್ನು ಗುರುತಿಸಿದ್ದರು. ಅದು ತಮಿಳುನಾಡು ಸರ್ಕಾರದ 1981ರ ಸಾಕ್ಷ್ಯಚಿತ್ರದಲ್ಲಿ ಪ್ರಸ್ತುತಪಡಿಸಲಾಗಿತ್ತು. ಹಾಗು 1981ರಲ್ಲಿ ಎನ್.ಮಹಲಿಂಗಂ ರವರು ಬಿಡುಗಡೆ ಮಾಡಿದ ನಕಾಶೆಯಲ್ಲಿ ಕಾಣೆಯಾದ ಕುಮರಿ ಖಂಡವನ್ನು “ಕ್ರಿ.ಪೂ.3000 ವರ್ಷದಲ್ಲಿ ಮುಳುಗಿಹೋದ ತಮಿಳುನಾಡು” ಎಂದು ರೂಪಿಸಿದ್ದಾರೆ. ಕೆಲವು ಲೇಖಕರು ಹಿಂದಿನ “ಗೋಂಡ್ವಾನಾ ಲ್ಯಾಂಡ್” (Gondwana land)ಅನ್ನು “ಕುಮರಿ ಖಂಡಂ” ಎಂದು ನಿರೂಪಿಸಿರುವ ದಾಖಲೆಗಳೂ ಇವೆ.
ಮಾಹಿತಿ ಕೃಪೆ: Wikipedia