ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಭಾನುವಾರ (ಡಿಸೆಂಬರ್ 19, 2021) ಅಯೋಧ್ಯೆ ಮತ್ತು ಕಾಶಿಯ ನಂತರ, ಮಥುರಾದಲ್ಲಿ ಮುಂದಿನ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು. ಇಂದೋರ್ನಲ್ಲಿ ನಡೆದ ಸಂವಾದದಲ್ಲಿ ಕಾಶಿಯ ಉದಾಹರಣೆ ನೀಡಿದ ಅವರು, ರಾಮಜನ್ಮಭೂಮಿ ಮತ್ತು ಕಾಶಿಯ ಪುನರುಜ್ಜೀವನದ ನಂತರ ಮಥುರಾದ ದೇವಾಲಯವನ್ನು ಈ ರೀತಿಯಾಗಿ ಭವ್ಯವಾಗಿ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಹೇಮಾ ಮಾಲಿನಿ ಮಾತನಾಡುತ್ತ, “ಕೃಷ್ಣನು ಪ್ರೀತಿ ಮತ್ತು ವಾತ್ಸಲ್ಯದ ಪ್ರತೀಕ. ಅವರ ಜನ್ಮಸ್ಥಳದ ಸಂಸದರಾಗಿರುವ ನಾನು ಭವ್ಯವಾದ ಮಂದಿರ ಬೇಕು ಎಂದು ಹೇಳುತ್ತೇನೆ. ಅದು ಏನೇ ಇರಲಿ, ಆದರೆ ಅದನ್ನು ಇನ್ನಷ್ಟು ಸುಂದರವಾಗಿ ಮಾಡಬಹುದು. ಕಾಶಿಯಲ್ಲಂತೂ ಮೋದಿಜಿಯವರು ಕಾಶಿ ವಿಶ್ವನಾಥ ದೇವಸ್ಥಾನದ ಮುಂದೆ ಇಷ್ಟೊಂದು ಸುಂದರವಾದ ಕಾರಿಡಾರ್ ನಿರ್ಮಿಸಿ, ಅಭಿವೃದ್ಧಿಪಡಿಸಿ, ದೇವಸ್ಥಾನದಿಂದ ಗಂಗೆಯವರೆಗೂ ನೇರವಾಗಿ ನೋಡಬಹುದು ಹಾಗೆ ಮಾಡಿದ್ದಾರೆ, ಅದೇ ರೀತಿ ಮಥುರಾ ಕೃಷ್ಣನ ದೇವಾಲಯವೂ ಭವ್ಯವಾಗಲಿದೆ” ಎಂದರು.
ಹೇಮಾ ಮಾಲಿನಿ ಮುಂದೆ ಮಾತನಾಡುತ್ತ, “ಮಥುರಾದಲ್ಲಿ ಈಗಾಗಲೇ ದೇವಸ್ಥಾನವಿದ್ದು, ಮೋದಿಜಿ ಅಭಿವೃದ್ಧಿಪಡಿಸಿದ ಕಾಶಿ ವಿಶ್ವನಾಥ ಕಾರಿಡಾರ್ನಂತೆಯೇ ಅದಕ್ಕೆ ಹೊಸ ರೂಪ ನೀಡಬಹುದು. ಈ ಬದಲಾವಣೆಯು (ಕಾಶಿ ಕಾರಿಡಾರ್) ತುಂಬಾ ಕಷ್ಟಕರವಾಗಿತ್ತು. ಕಳೆದ ಹಲವು ವರ್ಷಗಳಲ್ಲಿ ಇದನ್ನು ಹೀಗೆ ಮಾಡಬೇಕು ಎಂದು ಯಾರೂ ಯೋಚಿಸಿರಲಿಲ್ಲ. ಇದು ಅವರ (ಮೋದಿ) ದೂರದೃಷ್ಟಿಯನ್ನು ತೋರಿಸುತ್ತದೆ. ಮಥುರಾದಲ್ಲಿಯೂ ಹೀಗೇ ಆಗಲಿದೆ” ಎಂದರು.
#WATCH | Being the MP of Mathura, which is the birthplace of Lord Krishna, I will say that there should be a grand temple. A temple is already there and can be beautified like Modi Ji developed Kashi Vishwanath corridor: BJP MP Hema Malini in Indore (19.12.2021) pic.twitter.com/91N7jeiw8d
— ANI (@ANI) December 20, 2021
ಹಿಂದೂ ನಂಬಿಕೆಗಳ ಪ್ರಕಾರ, ಮಥುರಾವನ್ನು ಕೃಷ್ಣನ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಲವಾರು ದಶಕಗಳಿಂದ ಇಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಕೆಲವು ದಿನಗಳ ಹಿಂದೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಅವರು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯವಾದ ಮಂದಿರವನ್ನು ನಿರ್ಮಿಸುತ್ತಿರುವಾಗ, ಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲೂ ದೊಡ್ಡ ಮತ್ತು ಭವ್ಯವಾದ ಮಂದಿರ ನಿರ್ಮಿಸಬೇಕು. ರಾಮನ ನಾಡಿನಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗಿದೆ, ಆದರೆ ಕೃಷ್ಣನ ನಾಡಿನಲ್ಲಿ ಅದಕ್ಕಿಂತ ದೊಡ್ಡದೇನಾದರೂ ಆಗಬೇಕು” ಎಂದು ಹೇಳಿದ್ದರು. ಅವರಲ್ಲದೆ, ಯುಪಿ ಕ್ಯಾಬಿನೆಟ್ ಸಚಿವ ಚೌಧರಿ ಲಕ್ಷ್ಮಿ ನಾರಾಯಣ ಸಿಂಗ್ ಕೂಡ ಆ ಸ್ಥಳದಲ್ಲಿ ಕೃಷ್ಣನ ಭವ್ಯ ದೇವಾಲಯವನ್ನು ನಿರ್ಮಿಸಬೇಕು ಎಂದು ಹೇಳಿದ್ದರು.
ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಮಥುರಾದಿಂದಲೇ ಕಣಕ್ಕಿಳಿಯಬಹುದು ಯೋಗಿ ಆದಿತ್ಯನಾಥ್
ಕಳೆದ ಹಲವು ದಿನಗಳಿಂದ ಈ ಚರ್ಚೆ ನಡೆಯುತ್ತಿತ್ತು, ಆದರೆ ಈಗ ಈ ಚರ್ಚೆ ವಾಸ್ತವದಲ್ಲಿ ಬದಲಾಗುತ್ತಿದೆ. ಹೌದು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಮೂಲಗಳ ಪ್ರಕಾರ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥರನ್ನ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸಿದೆ. ಜನವರಿ 14 ರಂದು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಯೋಗಿ ಅವರ ಉಮೇದುವಾರಿಕೆ ಮತ್ತು ಯಾವ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂಬುದನ್ನ ಘೋಷಿಸಬಹುದು. ಮೂಲಗಳ ಪ್ರಕಾರ ಮಥುರಾ ವಿಧಾನಸಭಾ ಕ್ಷೇತ್ರದಿಂದ ಸಿಎಂ ಯೋಗಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
ಇದು ಯೋಗಿ ಆದಿತ್ಯನಾಥರಿಗೆ ಸುರಕ್ಷಿತ ಸ್ಥಾನ ಮಾತ್ರವಲ್ಲದೆ, ಈ ಸ್ಥಾನದಿಂದ ಅವರನ್ನು ಸ್ಪರ್ಧಿಸುವ ಮೂಲಕ ಬಿಜೆಪಿ ತನ್ನ ಹಿಂದುತ್ವದ ಅಜೆಂಡಾಗೆ ಸ್ಟಿಕ್ ಆಗಿದೆ ಅನ್ನೋದನ್ನ ತೋರಿಸಲಿದೆ. ಇತ್ತೀಚಿನ ದಿನಗಳಲ್ಲಿ ಮಥುರಾ ವಿಷಯ ಹಾಟ್ ಟಾಪಿಕ್ ಆಗಿದೆ. ಇಲ್ಲಿನ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ಔರಂಗಜೇಬ್ ನಿರ್ಮಿಸಿದ ಮಸೀದಿಗಳಲ್ಲಿ ಜಲಾಭಿಷೇಕ ಮಾಡುವುದಾಗಿ ಹಲವು ಹಿಂದೂ ಸಂಘಟನೆಗಳು ಘೋಷಿಸಿದ್ದವು. ಇದಲ್ಲದೆ, ಮಸೀದಿಯ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಶ್ರೀಕೃಷ್ಣನ ಪರವಾಗಿ ಅನೇಕರು ಅರ್ಜಿಗಳನ್ನು ಸಹ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶದ ರಾಜ್ಯ ವಿಧಾನಸಭಾ ಚುನಾವಣೆಗೆ, ಎಲ್ಲಾ ಪಕ್ಷಗಳು ತಮ್ಮದೇ ಆದ ಮಟ್ಟದಲ್ಲಿ ತಯಾರಿ ಆರಂಭಿಸಿವೆ. ಇಂದಿನಿಂದ ಕೆಲವೇ ತಿಂಗಳ ನಂತರ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಸ್ತುತ ಉತ್ತರ ಪ್ರದೇಶ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ನಾವು ಭಾರತೀಯ ಜನತಾ ಪಕ್ಷದ ಬಗ್ಗೆ ಮಾತನಾಡಿದರೆ, ಅದು ಯಾವುದೇ ರೀತಿಯಲ್ಲಿ ಮತ್ತೆ ಅಧಿಕಾರಕ್ಕೆ ಶತಾಯಗತಾಯವಾಗಿ ಬರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.
ಯುಪಿ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯೋಗಿ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಲೇ ಇವೆ. ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ. ಯೋಗಿ ಅವರು ತಮ್ಮ ಭದ್ರಕೋಟೆಯಾದ ಗೋರಖ್ಪುರದಿಂದ ಯಾವಾಗಲೂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಮತ್ತು ಸಂಸದರೂ ಆಗುತ್ತಿದ್ದಾರೆ. ಈ ಹಿಂದೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೋಗಿ, ಇಡೀ ಯುಪಿ ತನ್ನ ಕ್ಷೇತ್ರ ಎಂದು ಹೇಳಿದ್ದರು. ಯುಪಿಯ ಎಲ್ಲಾ ಜನರು ತಮ್ಮ ಕುಟುಂಬ ಎಂದು ಅವರು ನಿರಂತರವಾಗಿ ಹೇಳಿದ್ದಾರೆ. ಯೋಗಿ ಅವರು ಮಥುರಾದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೆ, ಪಶ್ಚಿಮ ಯುಪಿಯಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾದ ಆರ್ಎಲ್ಡಿ ಅಂದರೆ ರಾಷ್ಟ್ರೀಯ ಲೋಕದಳ ಮತ್ತು ಅದರ ಮೈತ್ರಿ ಪಾಲುದಾರ ಎಸ್ಪಿ ಅಂದರೆ ಸಮಾಜವಾದಿ ಪಕ್ಷವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು.
ಯೋಗಿ ಆದಿತ್ಯನಾಥರು ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿದ್ದಾರೆ. 2017ರಲ್ಲಿ ಯುಪಿಯಲ್ಲಿ ಪ್ರಚಂಡ ಬಹುಮತ ಗಳಿಸಿದ ಬಿಜೆಪಿ ಅವರನ್ನು ಗೋರಖ್ಪುರದಿಂದ ಕರೆಸಿ ಸಿಎಂ ಮಾಡಿತ್ತು. ಆಗ ಯೋಗಿ ಗೋರಖ್ಪುರದ ಸಂಸದರಾಗಿದ್ದರು. ಆರು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಯೋಗಿ ತೆರವಾದ ವಿಧಾನ ಪರಿಷತ್ತಿನ ಸ್ಥಾನಕ್ಕೆ ಸ್ಪರ್ಧಿಸಿದ್ದರು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೆ ಶ್ರೀಕಾಂತ್ ಶರ್ಮಾ ಅವರ ಮಥುರಾ ಟಿಕೆಟ್ಗೆ ಕತ್ತರಿ ಬೀಳಲಿದೆ. ಶ್ರೀಕಾಂತ್ ಶರ್ಮಾ ಪ್ರಸ್ತುತ ಯೋಗಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾರೆ. ಮಥುರಾದಲ್ಲಿ ಯೋಗಿಯ ಪ್ರತಿ ಕಾರ್ಯಕ್ರಮದಲ್ಲೂ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.