ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ಮಹಿಳೆಯೊಂದಿಗೆ ಟ್ರಿಪಲ್ ತಲಾಖ್ ಮತ್ತು ಹಲಾಲಾಗೆ ಬಲವಂತಗೊಳಿಸಿದ ಪ್ರಕರಣ ಮುನ್ನೆಲೆಗೆ ಬಂದಿದೆ. ಇಲ್ಲಿ ಮಹಿಳೆ ಅರ್ಶಿ ಫಾತಿಮಾಗೆ ತನ್ನ ಪತಿ ಅಲಿ ಅಶ್ರಫ್ ಖಾದ್ರಿ ಮೊದಲು ತ್ರಿವಳಿ ತಲಾಖ್ ನೀಡಿದ್ದ ಮತ್ತು ಈಗ ರಾಜಿ ಹೆಸರಿನಲ್ಲಿ ಅಶ್ರಫ್ ಖಾದ್ರಿಯ ತಂದೆಯೊಂದಿಗೇ ಹಲಾಲಾ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ತನ್ನ ಪತಿ ಕೆಟ್ಟ ಸ್ವಭಾವದವನಾಗಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆ ಆಗಸ್ಟ್ 2022 ರಲ್ಲಿ ಮೌದರ್ವಾಜ ಪೊಲೀಸರಿಗೆ ದೂರು ನೀಡಿದ್ದರು, ಆದರೆ ಪ್ರಕರಣದ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗಮನಾರ್ಹ. ಇದರಿಂದ ಅತೃಪ್ತಿಗೊಂಡ ಮಹಿಳೆ ಮಂಗಳವಾರ (ಫೆಬ್ರವರಿ 7, 2023) ಡಿಎಂ ಸಂಜಯ್ ಕುಮಾರ್ ಅವರ ಕಚೇರಿಗೆ ತಲುಪಿ ತನ್ನ ದೂರನ್ನ ನೀಡಿದ್ದಾಳೆ.
ಅಲ್ಲಿ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನರೇಂದ್ರ ಕುಮಾರ್ ಅವರು ಡಿಎಂ ಕಚೇರಿಯಿಂದ ಹೊರಗೆ ಹೋಗುತ್ತಿದ್ದರು. ಮಹಿಳೆ ಅವರ ವಾಹನದ ಮುಂದೆ ನಿಂತಿದ್ದಳು. ಇದಾದ ಬಳಿಕ ಭದ್ರತಾ ಸಿಬ್ಬಂದಿ ಮಹಿಳೆಯ ದೂರು ಪತ್ರವನ್ನು ಮ್ಯಾಜಿಸ್ಟ್ರೇಟ್ಗೆ ನೀಡಿದ್ದಾರೆ. ವಿಷಯದ ಗಂಭೀರತೆಯನ್ನು ಕಂಡ ಮ್ಯಾಜಿಸ್ಟ್ರೇಟ್ ಮತ್ತೆ ಕಚೇರಿಗೆ ತೆರಳಿ ಮಹಿಳೆಯ ಅಹವಾಲು ಆಲಿಸಿದರು. ಇದಾದ ನಂತರ ಡಿಎಂ ಸಂಜಯ್ ಕುಮಾರ್ ಕೂಡ ಮಹಿಳೆಯನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಹಿಳೆ ತನ್ನ ದೂರಿನಲ್ಲಿ, “ಆಗಸ್ಟ್ 2022 ರಲ್ಲಿ ಮೌದರ್ವಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಮತ್ತು ಆರೋಪಿಯ ವಿರುದ್ಧ ಅಪರಾಧ ಸಂಖ್ಯೆ 373/2022 ಸೆಕ್ಷನ್ 323 504 506 ಮುಸ್ಲಿಂ ಮಹಿಳಾ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ವರದಿಯನ್ನು ದಾಖಲಿಸಿದೆ. ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಇನ್ನೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ” ಎಂದಿದ್ದಾರೆ.
ತನ್ನ ದೂರಿನಲ್ಲಿ ಸಂತ್ರಸ್ತೆ, “ಆರೋಪಿಗಳಾದ ಸಯೀದುಲ್ಲಾ, ರಿಹಾನಾ, ನಿದಾ, ಫೈಜಿ, ಶೋಯೆಬ್, ಮುಶೀರ್, ಸರ್ವರ್ ಹಫೀಜ್, ಮಾಸ್ಟರ್ ಎಂಬುವವರ ಹೆಸರನ್ನು ಮೌದರ್ವಾಜ ಪೊಲೀಸ್ ಠಾಣೆಯ ತನಿಖಾಧಿಕಾರಿ ಪ್ರಕರಣದಿಂದ ತೆಗೆದುಹಾಕಿದ್ದಾರೆ. ಆರೋಪಿ ಪತಿ ಅಲಿ ಅಶ್ರಫ್ ಖಾದ್ರಿ ಕೆಟ್ಟ ವ್ಯಕ್ತಿ. ಟ್ರಿಪಲ್ ತಲಾಖ್ ವಿರೋಧಿಸಿದ್ದಕ್ಕೆ ನನಗೆ ಥಳಿಸಿ, ಪೋಲಿಸರಿಗೆ ಏನಾದರೂ ಕಂಪ್ಲೇಂಟ್ ಕೊಟ್ಟರೆ ನಿನ್ನ ಶವವೂ ಸಿಗುವುದಿಲ್ಲ ಎಂದು ಪಿಸ್ತೂಲಿನಿಂದ ಬೆದರಿಸಿದ್ದರು” ಎಂದಿದ್ದಾಳೆ.
ಮಹಿಳೆ ಮಾತನಾಡುತ್ತ, “ನನ್ನ ಗಂಡ ನನ್ನ ತಂದೆಯನ್ನೂ ಆ್ಯಕ್ಸಿಡೆಂಡ್ ಮಾಡಿಸಿದ್ದ ಮತ್ತು ನನ್ನನ್ನ ಮತ್ತೆ ಮನೆಗೆ ವಾಪಸ್ ಕರೆಸಿ ಅವನ ತಂದೆಯೊಂದಿಗೆ ಹಲಾಲಾ ಮಾಡುವಂತೆ ನನಗೆ ಒತ್ತಡ ಹೇರುತ್ತಿದ್ದಾರೆ. ಅವನು ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಯಾವುದೇ ಸಮಯದಲ್ಲಿ ಕೊಲ್ಲಬಹುದು” ಎಂದು ಹೇಳಿದ್ದಾಳೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತ ಮಹಿಳೆ, “ಹಿರಿಯರು ಮತ್ತು ನನ್ನ ತಂದೆ ಸಮಾನರಾಗಿದ್ದರೂ ನನ್ನ ಗಂಡನ ತಂದೆ ನನ್ನೊಂದಿಗೆ ಹಲಾಲಾ ಮಾಡಲು ಉತ್ಸುಕರಾಗಿದ್ದರು. ನನ್ನ ಅತ್ತೆ ಇದನ್ನೆಲ್ಲ ಕೇಳುತ್ತಿದ್ದರೂ ಮೌನವಾಗಿ ಈ ಕೃತ್ಯವನ್ನು ಬೆಂಬಲಿಸುತ್ತಿದ್ದರು. ನನ್ನ ಗಂಡನ ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರು ಆದರೆ ಅವರ ಕಾರ್ಯಗಳು ಮಾತ್ರ ತುಂಬಾ ಕೊಳಕು. ಅವರು ನನಗೆ ಸಾಕಷ್ಟು ಹಿಂಸೆ ನೀಡಿದ್ದಾರೆ” ಎಂದು ತಿಳಿಸಿದ್ದಾಳೆ.