ಇಷ್ಟು ಪ್ರತಿಶತ ಮುಕ್ತಾಯವಾಯ್ತು ಭವ್ಯ ರಾಮಮಂದಿರದ ನಿರ್ಮಾಣ, ಗರ್ಭಗೃಹದಲ್ಲಿ ಚಿನ್ನದ ಆಸನದಲ್ಲಿ ವಿರಾಜಮಾನರಾಗಲಿದ್ದಾನೆ ರಾಮಲಲ್ಲಾ: ಉದ್ಘಾಟನೆ ಯಾವಾಗ ಗೊತ್ತಾ?

in Uncategorized 335 views

ಹಿಂದೂಗಳ ಶೃದ್ಧಾ ಕೇಂದ್ರವಾದ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೊದಲ ಹಂತದ ನಿರ್ಮಾಣದ ನಂತರ, ಜನವರಿ 2024 ರಲ್ಲಿ, ಮಕರ ಸಂಕ್ರಾಂತಿಯ ದಿನದಂದು, ರಾಮ್ ಲಲ್ಲಾ ಚಿನ್ನದ ಆಸನದ ಮೇಲೆ ವಿರಾಜಮಾನರಾಗಲಿದ್ದಾರೆ. ಪ್ರಸ್ತುತ, ಮಂದಿರದ ನಿರ್ಮಾಣ ಕಾರ್ಯವು 55% ವರೆಗೆ ಪೂರ್ಣಗೊಂಡಿದೆ.

Advertisement

ದೈನಿಕ್ ಭಾಸ್ಕರ್ ಪತ್ರಿಕೆ ರಾಮಮಂದಿರ ನಿರ್ಮಾಣದ ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡಿದೆ. ರಾಮ ಮಂದಿರ ನಿರ್ಮಾಣ ಮೂರು ಹಂತಗಳಲ್ಲಿ ನಡೆಯುತ್ತಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಮೊದಲ ಹಂತವು ಡಿಸೆಂಬರ್ 30, 2023, ಎರಡನೇ ಹಂತವು ಡಿಸೆಂಬರ್ 30, 2024 ಮತ್ತು ಮೂರನೇ ಹಂತವು ಡಿಸೆಂಬರ್ 30, 2025 ರೊಳಗೆ ಪೂರ್ಣಗೊಳ್ಳಲಿದೆ. ಮಂದಿರ ನಿರ್ಮಾಣಕ್ಕೆ ಸುಮಾರು 1800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

1000 ವರ್ಷಗಳವರೆಗೆ ಸುರಕ್ಷಿತವಾಗಿರಲಿದೆ ರಾಮಮಂದಿರ

ದೇವಾಲಯದ ಸಂಪೂರ್ಣ ಸಂಕೀರ್ಣವು 71 ಎಕರೆಗಳಷ್ಟು ವಿಸ್ತಾರವಾಗಿದೆ. ಇದರಲ್ಲಿ 8 ಎಕರೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ದೇವಾಲಯದ ಶಿಖರ 161 ಅಡಿ ಇರಲಿದೆ. ದೇವಸ್ಥಾನ ನಿರ್ಮಾಣಕ್ಕೆ ಸ್ಟೀಲ್ ಅಥವಾ ಉಕ್ಕನ್ನು ಬಳಸುತ್ತಿಲ್ಲ. ಅಲ್ಲದೆ, ಈ ದೇವಾಲಯವು 1000 ವರ್ಷಗಳವರೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿರುವ ರೀತಿಯಲ್ಲಿ ಇದರ ನಿರ್ಮಾಣ ಮಾಡಲಾಗುತ್ತಿದೆ. ರಿಕ್ಟರ್ ಮಾಪಕದಲ್ಲಿ 6.5ರ ತೀವ್ರತೆಯ ಭೂಕಂಪವಾದರೂ ದೇವಾಲಯಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿರಾಜಮಾನರಾಗುವ ಆಸನವು ಚಿನ್ನದ್ದಾಗಿರಲಿದೆ. ಅದೇ ಸಮಯದಲ್ಲಿ, ದೇವಾಲಯದ ಶಿಖರವೂ ಚಿನ್ನದ್ದಾಗಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಮಹಾರಾಷ್ಟ್ರದ ಉದ್ಯಮಿಯೊಬ್ಬರು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಜೊತೆ ಮಾತನಾಡಿದ್ದಾರೆ. ಆದರೆ, ಈ ಬಗ್ಗೆ ಟ್ರಸ್ಟ್‌ನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ದೇವಾಲಯದ ನಿರ್ಮಾಣದ ಬಗ್ಗೆ ಹೇಳುವುದಾದರೆ ಶ್ರೀರಾಮನ ಮಂದಿರವನ್ನ ದೇಶದ ಅತಿದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡಲು ಮತ್ತು ಅತಿದೊಡ್ಡ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಸರ್ಕಾರವೂ ತೊಡಗಿಸಿಕೊಂಡಿದೆ.

ಬಾಲರೂಪದ ರಾಮಲಲ್ಲಾ ವಿಗ್ರಹವು ತುಂಬಾ ಚಿಕ್ಕದಾಗಿದೆ. ಹೀಗಾಗಿ ಭಕ್ತರಿಗೆ ಮೂರ್ತಿಯನ್ನು ಸರಿಯಾಗಿ ನೋಡಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಟ್ರಸ್ಟ್ ಮುಂದಾಗಿದೆ. ಟ್ರಸ್ಟ್‌ನ ಸದಸ್ಯ ಮತ್ತು ಅಯೋಧ್ಯೆಯ ಗೌರವ ರಾಜ ವಿಮಲೇಂದ್ರ ಪ್ರತಾಪ್ ಮಿಶ್ರಾ ಮಾತನಾಡುತ್ತ, ಈ ವಿಗ್ರಹವನ್ನು ನಿರ್ಮಿಸುವ ಮೊದಲು, ದೇಶದ ದೊಡ್ಡ ಶಿಲ್ಪಿಗಳಿಗೆ ರೇಖಾಚಿತ್ರಗಳನ್ನು ಮಾಡಲು ಕೇಳಲಾಗಿದೆ. ಇದರಲ್ಲಿ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪುರಸ್ಕೃತ ಕಲಾವಿದರೂ ಇದ್ದಾರೆ. ಈ ವಿಗ್ರಹವು ಅಮೃತಶಿಲೆಯಿಂದ ಕೂಡಿರಲಿದ್ದು ಇದರ ಎತ್ತರ ಎರಡೂವರೆಯಿಂದ ಮೂರು ಅಡಿಗಳವರೆಗೆ ಇರುತ್ತದೆ ಎಂದಿದ್ದಾರೆ.

ಗರ್ಭಗುಡಿಯಲ್ಲಿ ಮತ್ತೊಂದು ವಿಗ್ರಹವನ್ನು ಹೇಗೆ ಇಡಲಾಗುತ್ತದೆ ಎಂಬುದಕ್ಕೆ ಸಾಧು ಸಂತರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಾಮಲಲ್ಲಾ ದೇವಸ್ಥಾನದ ಅರ್ಚಕ ಪಂಡಿತ್ ಸತ್ಯೇಂದ್ರ ದಾಸ್ ಹೇಳಿದ್ದಾರೆ. ಅಷ್ಟಧಾತುವಿನ ವಿಗ್ರಹವಾದರೆ ಉತ್ತಮ ಎನ್ನುತ್ತಾರೆ ಸತ್ಯೇಂದ್ರ ದಾಸ್.

ಮೂರು ಫೇಸ್ ನಲ್ಲಿ ಮಂದಿರದ ಮೂರು ಫ್ಲೋರ್ ಗಳ ನಿರ್ಮಾಣ

ರಾಮ್ ಲಾಲಾ ಮಂದಿರ ನಿರ್ಮಾಣದಲ್ಲಿ ಮೊದಲ ಹಂತದಲ್ಲಿ ಗರ್ಭಗುಡಿ ಸೇರಿದಂತೆ 5 ಮಂಟಪಗಳನ್ನು ಮೊದಲ ಮಹಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಮಂಟಪಗಳ ಹೆಸರುಗಳು ಗುಡಿ ಮಂಟಪ, ನೃತ್ಯ ಮಂಟಪ, ರಂಗ ಮಂಟಪ, ಕೀರ್ತನ ಮಂಟಪ. ಮೊದಲ ಹಂತದಲ್ಲಿಯೇ ‘ಸಿಂಹ ದ್ವಾರ’ ದೇವಾಲಯದ ಪ್ರವೇಶ ದ್ವಾರವನ್ನು ನಿರ್ಮಿಸಲಾಗುವುದು. ಮೊದಲ ಹಂತದ ಕಾಮಗಾರಿ ಮುಗಿದ ತಕ್ಷಣ ಎರಡನೇ ಹಂತದ ಕಾಮಗಾರಿ ಆರಂಭವಾಗಲಿದೆ. ಇದರಲ್ಲಿ ಎರಡನೇ ಮಹಡಿ ನಿರ್ಮಿಸಲಾಗುವುದು. ಈ ಮಹಡಿಯಲ್ಲೇ ರಾಮ್ ದರ್ಬಾರ್ ನಡೆಯಲಿದೆ. ಮೂರನೇ ಹಂತದಲ್ಲಿ ಮೂರನೇ ಮಹಡಿ ನಿರ್ಮಾಣವಾಗಲಿದೆ. ಆದರೆ, ಭಕ್ತರು ಈ ಮಹಡಿಗೆ ಪ್ರವೇಶಿಸುವಂತಿಲ್ಲ ಎನ್ನುತ್ತಾರೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನ ಸದಸ್ಯ ಡಾ.ಅನಿಲ್ ಮಿಶ್ರಾ.

ರಾಮನವಮಿಯಂದು ರಾಮಲಲ್ಲಾ ಅಭಿಷೇಕ ಮಾಡಲಿದ್ದಾನೆ ಸೂರ್ಯದೇವ

ಭಗವಾನ್ ರಾಮನ ಜನ್ಮ ಅಂದರೆ ರಾಮ ನವಮಿಯಂದು ರಾಮಲಲ್ಲಾಗೆ ಸೂರ್ಯನ ಕಿರಣಗಳಿಂದ ಅಭಿಷೇಕ ಮಾಡುವ ಯೋಜನೆ ಇದೆ. ಇದಕ್ಕಾಗಿ ಐಐಟಿ ರೂರ್ಕಿಯಿಂದ ನಿರಂತರ ಯೋಜನೆ ರೂಪಿಸಲಾಗುತ್ತಿದೆ. ಪ್ರಸ್ತುತ, 350 ಕಾರ್ಮಿಕರು ಮತ್ತು ಕುಶಲಕರ್ಮಿಗಳು ಈ ದೇವಾಲಯದ ನಿರ್ಮಾಣದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಸುಮಾರು ಒಂದು ಸಾವಿರ ಕಾರ್ಮಿಕರು ಮತ್ತು ಕುಶಲಕರ್ಮಿಗಳು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ವಂಶಿ ಪಹರ್‌ಪುರ್‌ನಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ಗುಲಾಬಿ ಕಲ್ಲುಗಳ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇವಾಲಯದ ಪ್ರವೇಶದ್ವಾರವು ಪೂರ್ವ ದಿಕ್ಕಿನಲ್ಲಿರಲಿದ್ದು, ನಿರ್ಗಮನವು (Exit gate) ದಕ್ಷಿಣದಲ್ಲಿರುತ್ತದೆ.

Advertisement
Share this on...