“ಶ್ರೀಶೈಲ ಮಂದಿರ ಪರಿಸರದಲ್ಲಿ ಮುಸ್ಲಿಮರಿಗೂ ಅವಕಾಶ”: ಸುಪ್ರೀಂಕೋರ್ಟ್.. ಆಂಧ್ರಪ್ರದೇಶ ಸರ್ಕಾರಕ್ಕೆ ತರಾಟೆ

in Kannada News/News 1,797 views

“ದೇವಸ್ಥಾನದ ಆವರಣದೊಳಗೆ ನಂಬಿಕೆಗೆ ಧಕ್ಕೆ ತರುವಂತಹ ಮಾತುಗಳನ್ನು ಹೇಳದಿರಬಹುದು ಅಥವಾ ಮದ್ಯದಂಗಡಿ ಅಥವ ಇನ್ನಿತರೆ ಅಂಗಡಿಗಳು ಇರದಿರಬಹುದು, ಆದರೆ ನೀವು ಹಿಂದುಗಳಲ್ಲದಿದ್ದರೆ ಬಿದಿರು, ಹೂವುಗಳು ಅಥವಾ ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡಬಾರದು ಎಂದು ಹೇಳುವಂತಿಲ್ಲ” ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಟೀಕಿಸಿದರು.

Advertisement

ಆಂಧ್ರಪ್ರದೇಶದ ಕರ್ನೂಲ್‌ನ ಶ್ರೀ ಭ್ರಮರಮಾಂಬಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಅಂಗಡಿಗಳ ಗುತ್ತಿಗೆ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಧರ್ಮದ ಜನರು ಭಾಗವಹಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದ ಪರಿಸರದಲ್ಲಿ ಹಿಂದೂಯೇತರರು (ಮುಸ್ಲಿಮರು) ವ್ಯಾಪಾರ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನೊಂದರಲ್ಲಿ ಹೇಳಿದೆ. ಶುಕ್ರವಾರ (ಡಿಸೆಂಬರ್ 17) ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರು ಈ ನಿರ್ಧಾರವನ್ನು ಪ್ರಕಟಿಸಿದರು. ದೇವಸ್ಥಾನದ ಆವರಣದಲ್ಲಿ ಈಗಾಗಲೇ ಅಂಗಡಿಗಳು ಚಾಲ್ತಿಯಲ್ಲಿದ್ದು, ಅನ್ಯ ಧರ್ಮವನ್ನು ಅನುಸರಿಸುವ ಅಂಗಡಿಕಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲು ಸಾಧ್ಯವಿಲ್ಲ ಎಂದರು. ಈ ಆದೇಶದಲ್ಲಿ ಅಂಗಡಿ ಮಾಲೀಕರೊಂದಿಗೆ ಹಿಂದೂಗಳಲ್ಲದ ಬಾಡಿಗೆದಾರರನ್ನೂ ಸೇರಿಸಲಾಗಿದೆ.

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಬಿವಿ ನಾಗರತ್ನ ಅವರ ಪೀಠವು “ಯಾವುದೇ ಬಾಡಿಗೆದಾರರು/ಅಂಗಡಿದಾರರು ಹರಾಜಿನಲ್ಲಿ ಭಾಗವಹಿಸುವುದರಿಂದ ಅಥವಾ ಅವರ ಧರ್ಮದ ಆಧಾರದ ಮೇಲೆ ಗುತ್ತಿಗೆ ನೀಡುವುದರಿಂದ ಹೊರಗಿಡಬಾರದು” ಎಂದು ನಿರ್ದೇಶಿಸಿದರು.

ತನ್ನ ತೀರ್ಪಿನಲ್ಲಿ, ಪೀಠವು ಆಂಧ್ರ ಸರ್ಕಾರಕ್ಕೆ, “ದೇವಸ್ಥಾನದ ಆವರಣದಲ್ಲಿ ಮದ್ಯ ಅಥವಾ ಅಂತಹ ಯಾವುದೇ ಅಂಗಡಿಯನ್ನು ತೆರೆಯಲು ಸಾಧ್ಯವಿಲ್ಲ ಎಂದು ನೀವು ಒಮ್ಮೆ ಹೇಳಬಹುದು, ಆದರೆ ಹಿಂದೂ ಹೊರತುಪಡಿಸಿ ಬೇರೆ ಯಾವುದೇ ಅಂಗಡಿಯನ್ನು ತೆರೆಯಬಾರದು ಅನ್ನೋದು ಸರಿಯಲ್ಲ. ಹಿಂದೂಗಳಲ್ಲದವರು ಅಲ್ಲಿ ಹೂವು ಮತ್ತು ಆಟಿಕೆಗಳನ್ನು ಸಹ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ?” ಎಂದು ತರಾಟೆಗೆ ತೆಗೆದುಕೊಂಡಿದೆ. ಆಂಧ್ರಪ್ರದೇಶ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ತಮ್ಮ ಪರ ವಾದ ಮಂಡಿಸಿದರು.

ಆಂಧ್ರಪ್ರದೇಶ ಸರ್ಕಾರದ ಕಂದಾಯ (ದತ್ತಿ) ಇಲಾಖೆಯ ಪ್ರಧಾನ ಕಾರ್ಯದರ್ಶಿ, ದತ್ತಿ ಆಯುಕ್ತರು ಮತ್ತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸಿದ್ದು ಅಧಿಕಾರಿಗಳು ಕಳೆದ ವರ್ಷ ಸುಪ್ರೀಂಕೋರ್ಟ್ ಹೊರಡಿಸಿದ ಆದೇಶವನ್ನ ಉಲ್ಲಂಘಿಸಿದ್ದಾರೆ ಎಂದು ವಾದಿಸಿದರು.

ಈ ಹಿಂದೆ ಆಂಧ್ರಪ್ರದೇಶ ಸರ್ಕಾರವು ದೇವಸ್ಥಾನದ ಪಕ್ಕದಲ್ಲಿರುವ ಅಂಗಡಿಗಳ ಹರಾಜಿನಲ್ಲಿ ಹಿಂದೂ ಧರ್ಮದ ಅನುಯಾಯಿಗಳಿಗೆ ಮಾತ್ರ ಭಾಗವಹಿಸುವ ಹಕ್ಕನ್ನು ನೀಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ 2019 ರಲ್ಲಿ, ಸೈಯದ್ ಜಾನಿ ಬಾಷಾ ಈ ಆದೇಶವನ್ನು ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆಗ ಆಂಧ್ರ ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಈ ಆದೇಶವು ಅವರ ಬದುಕುವ ಹಕ್ಕಿನ ಹಸ್ತಕ್ಷೇಪ ಎಂದು ಅರ್ಜಿದಾರ ಸೈಯದ್ ಜಾನಿ ಬಾಷಾ ಹೇಳಿದ್ದಾರೆ. 1980 ರ ಮೊದಲು, ಎಲ್ಲಾ ಅಂಗಡಿಕಾರರು ತಮ್ಮ ಅಂಗಡಿಗಳನ್ನ ಮಂದಿರದ ಸುತ್ತಮುತ್ತ ನಡೆಸುತ್ತಿದ್ದರು, ಆದರೆ ಈ ಆದೇಶದ ನಂತರ ಅವುಗಳನ್ನು ಧರ್ಮದ ಆಧಾರದ ಮೇಲೆ ವಿಂಗಡಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಶ್ರೀಶೈಲ ದೇಗುಲಕ್ಕೆ ಹೊಂದಿಕೊಂಡಿರುವ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಹಿಂದೂಗಳನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮದ ವ್ಯಕ್ತಿಗಳು ಭಾಗವಹಿಸುವಂತಿಲ್ಲ ಎಂದು ಆಂಧ್ರಪ್ರದೇಶ ಸರ್ಕಾರ 2015 ರಲ್ಲಿ ಆದೇಶ ಹೊರಡಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಈ ಆದೇಶವು ಆಂಧ್ರಪ್ರದೇಶ ಚಾರಿಟಬಲ್ ಮತ್ತು ಹಿಂದೂ ಧರ್ಮ ಸಂಸ್ಥಾನ ಅಮೆಂಡ್‌ಮೆಂಟ್ ಆ್ಯಕ್ಟ್ 1987 ರ ಅಡಿಯಲ್ಲಿ ಬರುವ ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿದೆ.

Advertisement
Share this on...