ಹೈದರಾಬಾದ್: ದೇವರ ಸ್ಥಾನದಲ್ಲಿ ನಿಂತು ವೇದ-ಮಂತ್ರಗಳನ್ನು ಪಠಿಸುವ ಮೂಲಕ ನವಜೋಡಿಯನ್ನು ಮದುವೆ ಬಂಧನದಲ್ಲಿ ಒಂದು ಮಾಡುವಂತಹ ಸೇತುವೆಯಾಗಿ ಕೆಲಸ ಮಾಡುವ ಪುರೋಹಿತನೇ ಅಡ್ಡದಾರಿ ಹಿಡಿದ ಪ್ರಸಂಗವೊಂದು ಬೆಳಕಿಗೆ ಬಂದಿದೆ.
ಮದುವೆ ಮಂಟಪದಲ್ಲಿ ವಧು-ವರರ ಎದುರೇ ಪುರೋಹಿತನೊಬ್ಬ ಮಂಗಳಸೂತ್ರವನ್ನು ಎಗರಿಸಿದ ಘಟನೆ ಮೇದಕ್ ಜಿಲ್ಲೆಯ ತುಪ್ರಾನ್ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಜ್ಞಾನೇಂದರ್ ದಾಸ್ಗೂ ತುಪ್ರಾನ್ ಮುನ್ಸಿಪಾಲಿಟಿಯಲ್ಲಿ ವಾಸವಿದ್ದ ಯುವತಿಗೂ ಮದುವೆ ನಿಶ್ಚಯವಾಗಿತ್ತು. ಅದಕ್ಕಾಗಿ ಗಜ್ವೆಲ್ ಮೂಲದ ಪುರೋಹಿತರನ್ನು ಆಯ್ಕೆ ಮಾಡಿಕೊಂಡಿದ್ದರು. ಅದರಂತೆಯೇ ಮದುವೆ ಸಂಭ್ರಮ ನಡೆಯುವಾಗ ಮಂತ್ರ ಹೇಳುತ್ತಲೇ ವಧು-ವರ ಮತ್ತು ಸಂಬಂಧಿಕರ ಗಮನವನ್ನು ಬೇರೆಡೆಗೆ ಸೆಳೆದು ಪುರೋಹಿತ ಮಂಗಳಸೂತ್ರವನ್ನು ಎತ್ತಿಕೊಂಡು ತನ್ನ ಜೇಬಿನಲ್ಲಿಟ್ಟುಕೊಂಡಿದ್ದಾನೆ. ಈ ದೃಶ್ಯವು ಅಲ್ಲಿಯೇ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದಾದ ಬಳಿಕ ವರ ತಾಳಿ ಕಟ್ಟಲು ಮುಂದಾದಾಗ ಮುಂದಿನ ವಿಧಾನಗಳನ್ನು ಅನುಸರಿಸದೇ ತರಾತುರಿಯಲ್ಲಿ ಪುರೋಹಿತ ಮದುವೆ ಮಂಟಪವನ್ನು ಖಾಲಿ ಮಾಡಿದ್ದಾನೆ. ಇತ್ತ ಪುರೋಹಿತರು ಹೋಗುತ್ತಿದ್ದಂತೆ ಅನುಮಾನ ಬಂದು ಪರಿಶೀಲನೆ ಮಾಡಿದಾಗ ಅಲ್ಲಿ ಮಂಗಳಸೂತ್ರ ನಾಪತ್ತೆಯಾಗಿರುವುದನ್ನು ನೋಡಿ ವಧು-ವರ ಶಾಕ್ ಆಗಿದ್ದಾರೆ.
ತಮ್ಮ ಅನುಮಾನ ನಿಜವಾದಾಗ ತಕ್ಷಣ ವಧು-ವರ ಪುರೋಹಿತರಿಗೆ ಕರೆ ಮಾಡಿದ್ದಾರೆ. ಆದರೆ, ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ತಕ್ಷಣ ಗಜ್ವೆಲ್ನಲ್ಲಿರುವ ಅವರ ಮನೆಗೆ ಹೋದಾಗ ಪುರೋಹಿತರ ತಾಯಿ ಉಡಾಫೆ ಉತ್ತರ ನೀಡಿದ್ದಾರೆ. ಇದಾದ ಬಳಿಕ ಮದುವೆ ರೆಕಾರ್ಡಿಂಗ್ ವಿಡಿಯೋವನ್ನು ವೀಕ್ಷಿಸಿದಾಗ ಪುರೋಹಿತನ ನಿಜಬಣ್ಣ ಬಯಲಾಗಿದೆ. ಬಳಿಕ ಸಂತ್ರಸ್ತರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ತುಣುಕನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಪುರೋಹಿತರೊಬ್ಬರು ಮಂಗಳಸೂತ್ರವನ್ನೇ ಕಳ್ಳತನ ಮಾಡಿದ ಸುದ್ದಿ ಕೇಳಿ ಅನೇಕರು ಶಾಕ್ಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಅಣ್ಣನನ್ನೇ ಮದುವೆಯಾದ ಯುವತಿ, ಬಳಿಕ ಕುಟುಂಬಸ್ಥರು ಮಾಡಿದ್ದನ್ನ ಕಂಡು ಶಾಕ್ ಆದ ಊರಿನ ಜನತೆ
ಚತ್ರಾ: ಸಹೋದರಿಯೊಬ್ಬರು ತನ್ನ ಹಿರಿಯ ಸಹೋದರನನ್ನು ಮದುವೆಯಾಗಿ ಸಪ್ತಪದಿ ತುಳಿದಿರುವ ಘಟನೆ ಖರಿಕಾ ಗ್ರಾಮದಲ್ಲಿ ನಡೆದಿದೆ. ಖರಿಕಾದ ಸುಖದೇವ್ ರಾಮ್‌ನ 25 ವರ್ಷದ ಮಗಳು ಸಬಿತಾ ಅಲಿಯಾಸ್ ಕಿರಣ್ ಕುಮಾರಿ ಅವರು ಲಖನ್ ರಾಮ್ ಅವರ ಪುತ್ರ ರಾಜ್‌ದೀಪ್ ಕುಮಾರ್ನನ್ನು ಪ್ರೀತಿಸುತ್ತಿದ್ದಳು. ಸಂಬಂಧದಲ್ಲಿ ಇಬ್ಬರೂ ಸಹೋದರ ಮತ್ತು ಸಹೋದರಿಯಾಗಿದ್ದಾರೆ.
ಇನ್ನು ಇವರ ಪ್ರೀತಿಯನ್ನು ಎರಡು ಕುಟುಂಬಗಳು ನಿರಾಕರಿಸಿದ್ದು, ಇಬ್ಬರಿಗೂ ಬುದ್ಧಿ ಹೇಳಿದ್ದರು. ಆದರೂ ಸಹ ಇಬ್ಬರು ತಮ್ಮ ಪ್ರೇಮವನ್ನು ಮುಂದುವರಿಸಿದ್ದರು. ನಾಲ್ಕು ತಿಂಗಳ ಹಿಂದೆ ಇಬ್ಬರೂ ಮದುವೆಯಾಗಿದ್ದಾರೆ. ನಂತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಹಿರಿಯರು ಒಪ್ಪದ ಕಾರಣ ಈ ವಿಷಯ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
ಅಲ್ಲಿಯೂ ಸಹ ಸಾಯುವುದಾಗಲಿ, ಜೀವಿಸುವುದಾಗಲಿ ಅದು ನನ್ನ ಪತಿ ರಾಜ್‌ದೀಪ್‌ನೊಂದಿಗೆ ಎಂದು ಹೇಳಿದ್ದಾಳೆ. ಈ ಮಾತುಗಳನ್ನು ಕೇಳಿದ ಆಕೆಯ ಕುಟುಂಬವು ಶಾಕ್ಗೆ ಒಳಪಟ್ಟಿತು. ಇನ್ನು ಯುವತಿಯ ಪೋಷಕರು ಆಕೆಯ ಫೋಟೋವನ್ನು ಶವಯಾತ್ರೆ ಮಾಡಿ ಮಗಳು ತಮ್ಮ ಪಾಲಿಗೆ ಸತ್ತಳೆಂದು ಅಂತ್ಯಕ್ರಿಯೆ ಮಾಡಿದರು. ಕೊನೆಯ ವಿಧಿಗಳನ್ನು ನೆರವೇರಿಸುವ ಮೂಲಕ ಮಗಳ ಜೊತೆಯಿದ್ದ ಎಲ್ಲಾ ಸಂಬಂಧಗಳನ್ನು ಆ ಕುಟುಂಬ ಕೊನೆಗೊಳಿಸಿತು.