ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿಪಕ್ಷಗಳು I.N.D.I.A. ಹೆಸರಲ್ಲಿ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಎಪಿ, ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸೇರಿದಂತೆ ಹಲವು ಪಕ್ಷಗಳು ಒಂದು ಗೂಡಿದ್ದವು. ಆದರೆ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ I.N.D.I.A. ನಾಯಕರ ಮಧ್ಯೆ ಭಿನ್ನಮತ ಸ್ಫೋಟಗೊಂಡಿದೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಿಜೆಪಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, ಈ ಬಾರಿ ಬಿಜೆಪಿ 400 ಸ್ಥಾನಗಳನ್ನು ಪಡೆಯಲಿದೆ ಎಂದಿದ್ದಾರೆ. ಖರ್ಗೆಯವರ ಮಾತು ಕೇಳಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರೆಲ್ಲ ಸದನದಲ್ಲೇ ನಕ್ಕಿದ್ದಾರೆ!
ಬಿಜೆಪಿ ಈ ಬಾರಿ 400 ಸ್ಥಾನಗಳನ್ನು ಪಡೆಯಲಿದೆ ಎಂದ ಖರ್ಗೆ
ಬಿಜೆಪಿಯ ಅಬ್ಕಿ ಬಾರ್, 400 ಪಾರ್ ಎಂಬ ಘೋಷಣೆ ಪ್ರಸ್ತಾಪಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ದಾಟಲಿದೆ ಎಂದಿದ್ದಾರೆ.
ಖರ್ಗೆ ಮಾತಿಗೆ ನಕ್ಕ ಮೋದಿ, ಬಿಜೆಪಿ ನಾಯಕರಿಂದ ಮೆಚ್ಚುಗೆ
ಮಲ್ಲಿಕಾರ್ಜುನ್ ಖರ್ಗೆ ಹೀಗೆ ಹೇಳುತ್ತಿದ್ದಂತೆ ಇಡೀ ಸದನ ನಗೆಗಡಲಲ್ಲಿ ತೇಲಿದೆ. ಖುದ್ದು ಪ್ರಧಾನಿ ಮೋದಿಯವರೇ ಖರ್ಗೆ ಮಾತಿಗೆ ನಕ್ಕಿದ್ದಾರೆ. ಬಿಜೆಪಿ ಸದಸ್ಯರಂತೂ ಮೇಜು ಕುಟ್ಟುತ್ತಾ, ನಗುತ್ತಾ ಖರ್ಗೆ ಮಾತಿಗೆ ಬೆಂಬಲಿಸಿದ್ದಾರೆ.
ಮೋದಿಯಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ
ಸದನದಲ್ಲಿ ನಗೆ, ಚಪ್ಪಾಳೆ ಜೋರಾಗುತ್ತಿದ್ದಂತೆ ತಮ್ಮ ಮಾತಿಗೆ ಸಮರ್ಥನೆ ನೀಡಲು ಖರ್ಗೆ ಮುಂದಾಗಿದ್ದಾರೆ. ಈ ಬಾರಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲಿದೆ. ಆದರೆ ಮೋದಿಯಿಂದಲೇ ಎಲ್ಲರೂ ಗೆಲ್ಲುತ್ತಾರೆ. ಬಿಜೆಪಿ ಅಭ್ಯರ್ಥಿಗಳ ಪರಿಶ್ರಮದಿಂದಲ್ಲ ಅಂತ ಬಿಜೆಪಿ ನಾಯಕರಿಗೆ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ಡಿಕೆ ಸುರೇಶ್‌ಗೆ ನೇರ ಎಚ್ಚರಿಕೆ ಕೊಟ್ಟ ಖರ್ಗೆ
ಇನ್ನು ರಾಜ್ಯ ಸಭೆಯಲ್ಲಿ ಡಿಕೆ ಸುರೇಶ್ ಮಾತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಯಾರಾದರೂ ದೇಶವನ್ನು ಒಡೆಯುವ ಬಗ್ಗೆ ಮಾತನಾಡಿದರೆ ಕ್ಷಮಿಸುವುದಿಲ್ಲ ಅಂತ ಖರ್ಗೆ ಹೇಳಿದ್ರು.
ನಾನು ಮಲ್ಲಿಕಾರ್ಜುನ್ ಖರ್ಗೆ**,** ನಾನು ಇದನ್ನು ಸಹಿಸೋದಿಲ್ಲ
ದೇಶ ವಿಭಜನೆ ಬಗ್ಗೆ ಹೇಳಿಕೆ ನೀಡುವವರು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ ಅದನ್ನು ನಾವು ಎಂದಿಗೂ ಸಹಿಸುವುದಿಲ್ಲ. ನಾನು ಮಲ್ಲಿಕಾರ್ಜುನ ಖರ್ಗೆ… ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಂದಾಗಿದ್ದೇವೆ ಮತ್ತು ನಾವು ಒಂದಾಗಿರುತ್ತೇವೆ ಎಂದು ನಾನು ಹೇಳುತ್ತೇನೆ ಅಂತ ಖರ್ಗೆ ರಾಜ್ಯಸಭೆಯಲ್ಲಿ ಹೇಳಿದ್ರು.