ಶಿವಮೊಗ್ಗ:
ಹಲವು ಬಾರಿ ಸಚಿವ ಸ್ಥಾನ ವಂಚಿತವಾದರೂ ತಾಳ್ಮೆ ವಹಿಸಿದ್ದ ಆರಗ ಜ್ಞಾನೇಂದ್ರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಗೃಹ ಖಾತೆ ಲಭಿಸಿದೆ. ಸರ್ಕಾರದಲ್ಲಿ ಮುಖ್ಯಮಂತ್ರಿ ನಂತರದ ಅತ್ಯಂತ ಪ್ರಭಾವಿ ಖಾತೆ ಇದು. ಹಾಗಾಗಿ ಅನುಭವಿಗಳಿಗೆ ಮಾತ್ರ ಈ ಖಾತೆಯನ್ನು ನೀಡಲಾಗುತ್ತದೆ.
ಆರಗ ಜ್ಞಾನೇಂದ್ರ ಹಿರಿಯ ಶಾಸಕರು, ವಿಧಾನಸಭೆಯ ವಿವಿಧ ಸಮಿತಿಗಳಲ್ಲಿ ಹಲವು ಜವಾಬ್ದಾರಿ ನಿಭಾಯಿಸಿ ಅನುಭವವಿದೆ. ಇದೇ ಕಾರಣಕ್ಕೆ ಅವರಿಗೆ ಗೃಹ ಖಾತೆ ನೀಡಿರುವ ಸಾಧ್ಯತೆ ಇದೆ.
ಇನ್ನು, ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಖಾತೆಯನ್ನು ಆರಗ ಜ್ಞಾನೇಂದ್ರರಿಗೆ ನೀಡಿರುವುದು ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ಸಂತಸ ಇಮ್ಮಡಿಯಾಗಿಸಿದೆ. ಬಿ.ಎಸ್. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಸರ್ಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಾತಿನಿಧ್ಯ ಮಾಸಿ ಹೋಗಲಿದೆ ಎಂಬ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಆಗಿದೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ವಿಚಾರದಲ್ಲೂ ಇದೇ ರೀತಿ ಲಕ್ ಕೈ ಹಿಡಿದಿತ್ತು. ಮೊದಲ ಬಾರಿ ಸಚಿವರಾಗುತ್ತಿದ್ದಂತೆ ಬಂಗಾರಪ್ಪ ಗೃಹ ಖಾತೆಯಂತಹ ಪ್ರಭಾವಿ ಸಚಿವಾಲಯವನ್ನು ಮುನ್ನಡೆಸಿದ್ದರು.
1977ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ಎಸ್. ಬಂಗಾರಪ್ಪ ಮೊದಲ ಬಾರಿಗೆ ಸಚಿವರಾದರು. ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಎಸ್. ಬಂಗಾರಪ್ಪರಿಗೆ ಗೃಹ ಖಾತೆ ಒಲಿದು ಬಂದಿತ್ತು. ಈಗ ಆರಗ ಜ್ಞಾನೇಂದ್ರರಿಗೂ ಮೊದಲ ಬಾರಿಗೆ ಪ್ರಭಾವಿ ಖಾತೆ ಲಭಿಸಿದೆ. ವಿಶೇಷ ಅಂದರೆ ಇಬ್ಬರೂ ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ.
ಎಸ್. ಬಂಗಾರಪ್ಪ ಗೃಹ ಖಾತೆಯನ್ನು ನಿಭಾಯಿಸಲು ಅತ್ಯಂತ ಕಡಿಮೆ ಅವಧಿ ಲಭಿಸಿತ್ತು. ಒಂದು ವರ್ಷ ಮಾತ್ರ ರಾಜ್ಯದ ಹೋಂ ಮಿನಿಸ್ಟರ್ ಆಗಿದ್ದರು. ಕಾಕತಾಳೀಯ ಎಂಬಂತೆ ನೂತನ ಗೃಹ ಸಚಿವ ಆರಗ ಜ್ಞಾನೇಂದ್ರರಿಗೂ ಕಡಿಮೆ ಅಧಿಕಾರವಧಿ ಲಭಿಸಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ಜವಾಬ್ದಾರಿಯು ಆರಗ ಜ್ಞಾನೇಂದ್ರ ಮೇಲಿದೆ.
ಇತ್ತ, ಪ್ರಭಾವಿ ಖಾತೆ ಲಭಿಸಿರುವ ಕುರಿತು ಆರಗ ಜ್ಞಾನೇಂದ್ರ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ರಾಜ್ಯದ ಶಾಂತಿ, ಸುವ್ಯವಸ್ಥೆ ಕಾಪಾಡುವ ಅತ್ಯಂತ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದ್ದೆ. ಗೃಹ ಖಾತೆಯನ್ನು ನೀಡಿರುವ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಪ್ರಮುಖ ಖಾತೆಯನ್ನು ನೀಡಿದ್ದಾರೆ. ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡುತ್ತೇನೆ,’ಎಂದು ತಿಳಿಸಿದ್ದಾರೆ.