ಕನ್ನಡ ಚಿತ್ರರಂಗ ಮಾತ್ರವಲ್ಲದೆ ದಕ್ಷಿಣ ಸಿನಿರಂಗದಲ್ಲಿ ತನ್ನದೇ ಆದ ಹೆಸರನ್ನು ಪಡೆದಿರುವ ಹಿರಿಯ ನಟಿ ಗೀತಾ ಅವರು. ಸಿನಿಮಾ,ಸೀರಿಯಲ್ ಗಳ ಮೂಲಕ ಜನರ ಮನಸ್ಸಿನಲ್ಲಿ ಸದಾ ಇರುವ ನಟಿ ಗೀತಾ ದಕ್ಷಿಣ ಸಿನಿ ರಂಗದ ಬಹುತೇಕ ಎಲ್ಲಾ ಹಿರಿಯ ನಟರ ಜೊತೆಗೆ ನಟಿಸಿರುವ ನಟಿ. ಪಂಚ ಭಾಷಾ ನಟಿಯಾಗಿ ಹೆಸರನ್ನು ಪಡೆದಿರುವ ನಟಿ, ಹೆಚ್ಚು ಸದ್ದು ಮಾಡಿದ್ದು ಕನ್ನಡ, ತೆಲುಗು ಮತ್ತು ತಮಿಳು ಮತ್ತು ಮಲೆಯಾಳಿ ಸಿನಿಮಾಗಳಲ್ಲಿ. ಅದರಲ್ಲೂ ಕನ್ನಡದಲ್ಲಿ ಗೀತಾ ಅವರು ಜನರ ಮನಸ್ಸನ್ನು ಗೆದ್ದು ಉತ್ತಮ ಸಿನಿಮಾ ಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದ ನಟಿ. ನಮ್ಮಲ್ಲಿ ಎಷ್ಟೋ ಜನಕ್ಕೆ ತಿಳಿಯದ ವಿಷಯವೇನೆಂದರೆ ಗೀತಾ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಗೀತಾ ಅವರು ಚಿತ್ರರಂಗಕ್ಕೆ ಅಡಿಯಿಟ್ಟಿದ್ದು ತಮಿಳಿನ ಸಿನಿಮಾ ಭೈರವಿ ಮೂಲಕ.
ಭೈರವಿ ಸಿನಿಮಾದ ಟೈಟಲ್ ಪಾತ್ರದಲ್ಲಿ ನಟಿಸಿದ್ದ ಅವರು, ಸಿನಿಮಾದಲ್ಲಿ ನಟ ರಜನೀಕಾಂತ್ ಅವರ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಮಲೆಯಾಳಂ ಸಿನಿ ರಂಗಕ್ಕೆ ಅಡಿಯಿಟ್ಟ ಇವರ ಮೊದಲ ಸಿನಿಮಾ, ರಿಯಲ್ ಲೈಫ್ ಕಥೆ ಆಧಾರಿತ ಪಂಚಾಗ್ನಿಯಲ್ಲಿ ಇವರ ಅಭಿನಯಕ್ಕೆ ಬಂದ ಮೆಚ್ಚುಗೆ ಅಪಾರ. ದಿ ಹಿಂದೂ ಪತ್ರಿಕೆ ಗೀತಾ ಅವರನ್ನು ಮಲೆಯಾಳ ಚಿತ್ರರಂಗದಲ್ಲಿನ ಅದ್ಭುತ ನಟಿ ಎಂದು ಹೊಗಳಿತ್ತು. ಅದೇ ವರ್ಷ ಗೀತಾ ಅವರು ಐದು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದರು. ಕನ್ನಡ ಸಿನಿ ರಂಗದಲ್ಲಿ ಅವರು ವರನಟ ಡಾ.ರಾಜ್ ಕುಮಾರ್, ಅನಂತನಾಗ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ರಂತಹ ದಿಗ್ಗಜ ನಟರ ಜೊತೆ ತೆರೆ ಹಂಚಿಕೊಂಡರು.
ಅಣ್ಣಾವ್ರ ಜೊತೆ ಐದು ಸಿನಿಮಾ ಗಳಲ್ಲಿ ಅವರು ನಟಿಸಿದ್ದಾರೆ. ಧೃವತಾರೆ, ದೇವತಾ ಮನಷ್ಯ, ಅನುರಾಗ ಅರಳಿತು, ಶೃತಿ ಸೇರಿದಾಗ, ಆಕಸ್ಮಿಕ ಸಿನಿಮಾಗಳಲ್ಲಿ ಗೀತಾ ಅವರು ವರನಟನ ಜೊತೆ ನಟಿಸಿದರು. ಇದಲ್ಲದೇ ಮರೆಯದ ಮಾಣಿಕ್ಯ, ವೀರಾಧಿವೀರ, ಅರುಣರಾಗ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಸೀರಿಯಲ್ ಗಳಲ್ಲಿ ಕೂಡಾ ಅವರು ನಟಿಸಿದ್ದರು. ತೆಲುಗಿನಲ್ಲಿ ಸಹಾ ಅವರು ದೊಡ್ಡ ಹೆಸರನ್ನು ಪಡೆದಿದ್ದ ನಟಿ. ಮನವೂರಿ ಪಾಂಡವುಲು ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ನೀಡಿದ ಅವರು ಬಹು ಬೇಗ ಜನಪ್ರಿಯತೆ ಪಡೆದಿದ್ದರು.
1998 ರಲ್ಲಿ ಮದುವೆಯ ನಂತರ ಪತಿ ವಾಸನ್ ತಥಮ್ ಅವರ ಜೊತೆ ನ್ಯೂಜೆರ್ಸಿ ಯಲ್ಲಿ ನೆಲೆಸಿದರು. ಈ ದಂಪತಿಗೆ ಒಬ್ಬ ಮಗ ಇದ್ದಾನೆ. 2002 ರ ವರೆಗೆ ಸಿನಿಮಾದಿಂದ ದೂರವಿದ್ದ ಗೀತಾ ಅವರು ನಟನೆ ಬಿಟ್ಟು ಇರಲಾಗಲಿಲ್ಲ. ಅವರು 2003 ರಲ್ಲಿ ತೆಲುಗು ಸಿನಿಮಾ ನುವ್ವೊಸ್ತಾನಂಟೇ ನೇನೊದ್ದಂಟಾನ ಸಿನಿಮಾ ಮೂಲಕ ನಾಯಕನ ತಾಯಿ ಪಾತ್ರದಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದರು. ಅಲ್ಲಿಂದ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಸಿನಿಮಾಕ್ಕಾಗಿ ಅಮೆರಿಕಾದಿಂದ ಅವರು ಭಾರತಕ್ಕೆ ಬರುತ್ತಾರೆ. ಸಿನಿಮಾ ಮುಗಿದ ಮೇಲೆ ಮತ್ತೆ ಅವರು ಅಮೆರಿಕಾಗೆ ತೆರಳುತ್ತಾರೆ. ಕೆಲವು ಸಿನಿಮಾಗಳಿಗೆ ಅವರೇ ಇರಬೇಕೆಂದು ನಿರ್ದೇಶಕರು ಬಯಸಿ ಅವರನ್ನು ಕರೆ ತರುತ್ತಾರೆ.
ಗೀತಾ ಅವರಿಗೆ ಕನ್ನಡದ ಅರುಣ ರಾಗ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಎನ್ನುವ ರಾಜ್ಯ ಪ್ರಶಸ್ತಿ ದೊರೆತಿದೆ. ಇದಲ್ಲದೇ ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿನ ನಟನೆಗಾಗಿ ಅಲ್ಲಿನ ರಾಜ್ಯ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಸುಖ ಸಂಸಾರದ ನೌಕೆಯಲ್ಲಿ ಸಂತಸದ ಜೀವನ ನಡೆಸಿರುವ ಗೀತಾ ಅವರು ಸಿನಿಮಾ ಹಾಗೂ ಸಂಸಾರ ಎರಡನ್ನೂ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಅವರು ಹೀಗೆ ಸಂತೋಷವಾಗಿರಲಿ, ಇನ್ನಷ್ಟು ವರ್ಷ ಪ್ರೇಕ್ಷಕರನ್ನು ರಂಜಿಸಲಿ ಎಂದು ಹಾರೈಸೋಣ.