ದಟ್ಟ ಕಾಡಿನಲ್ಲಿ ನಾಪತ್ತೆಯಾಗಿ ನಾಲ್ಕು ದಿನ ಉಪವಾಸವಿದ್ದೂ ಬದುಕಿಬಂದ 114 ವರ್ಷದ ಅಜ್ಜ

in Kannada News/News 557 views

Dharwad: ದಟ್ಟ ಕಾಡಿನಲ್ಲಿ‌‌ ನಾಲ್ಕು ದಿನ ಆಹಾರವಿಲ್ಲದಿದ್ದರೂ 114 ವರ್ಷದ ವೃದ್ಧ ಬದುಕುಳಿದಿರೋ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.

Advertisement

ಮಗಳ ಮನೆಗೆಂದು ಹೋದ 114 ವರ್ಷದ ವೃದ್ಧರೊಬ್ಬರು ದಟ್ಟ ಅಡವಿಯಲ್ಲಿ ತಪ್ಪಿ ಹೋಗಿ, ನಾಲ್ಕು ದಿನಗಳ ನಂತರ ಪತ್ತೆಯಾಗಿದ್ದಾರೆ. ನಾಲ್ಕು ಹಗಲು, ಮೂರು ರಾತ್ರಿ ಅರಣ್ಯ ಪ್ರದೇಶದಲ್ಲಿ ಅನ್ನಾಹಾರವಿಲ್ಲದಿದ್ದರೂ ತನ್ನ ಮನೆಯವರನ್ನು ಸೇರಲೇಬೇಕೆಂಬ ಛಲದೊಂದಿಗೆ ನಡೆದಾಡುತ್ತಲೇ ಇದ್ದ ವೃದ್ಧ ಕೊನೆಗೂ ಸಂಬಂಧಿಕರನ್ನು ಸೇರಿದ್ದಾರೆ. ಪವಾಡಸದೃಶ ರೀತಿಯಲ್ಲಿ ಬದುಕುಳಿದಿರೋ ಅಜ್ಜನನ್ನು ನೆರೆ – ಹೊರೆಯ ಗ್ರಾಮಸ್ಥರು ಬಂದು ಮಾತನಾಡಿಸಿ, ಕುಶಲೋಪರಿ ವಿಚಾರಿಸುತ್ತಿದ್ದಾರೆ.

ದಟ್ಟ ಕಾಡಿನಲ್ಲಿ‌‌ ನಾಲ್ಕು ದಿನ ಆಹಾರವಿಲ್ಲದಿದ್ದರೂ 114 ವರ್ಷದ ವೃದ್ಧ ಬದುಕುಳಿದಿರೋ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ನಾಲ್ಕು ದಿನಗಳ‌ ಹಿಂದೆ ದಟ್ಟವಾದ ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದ ವೃದ್ಧ, ಹಗಲು ರಾತ್ರಿ ಆಹಾರ, ನೀರು ಸೇವಿಸದೇ, ವಿಶ್ರಾಂತಿ‌ಯನ್ನು ಪಡೆಯದೇ ಮರಳಿ ಸಂಬಂಧಿಕರ ಕೈಗೆ ಸಿಕ್ಕಿದ್ದಾರೆ. ಇಂಥದ್ದೊಂದು ಘಟನೆಗೆ ಧಾರವಾಡ ಜಿಲ್ಲೆಯ ಕಲಘಟಗಿ ಬೈಚವಾಡ ಗ್ರಾಮ ಸಾಕ್ಷಿಯಾಗಿದೆ. ಗೌಳಿದಡ್ಡಿ (ಬೈಚವಾಡ)ಯ ಜನ್ನು ಮಾಂಬು ಪಾಂಡ್ರಮೀಸೆ ಎಂಬ 114 ವರ್ಷ ವಯಸ್ಸಿನ ವ್ಯಕ್ತಿಯೇ ಪವಾಡಸದೃಶ ರೀತಿಯಲ್ಲಿ ಬದುಕುಳಿದ ವೃದ್ಧ.

ಹೊಲಕ್ಕೆ ಹೋಗುವುದಾಗಿ ಹೇಳಿ ಜನ್ನು ಮಾಂಬು‌ ಜೂನ್ 26ರ ಬೆಳಿಗ್ಗೆ ಮನೆಯಿಂದ ತೆರಳಿದ್ದ ಅವರು ನಂತರ ಪಕ್ಕದ ಬೈಚವಾಡದಲ್ಲಿನ ತನ್ನ ಮಗಳ‌ ಮನೆಗೆ ಹೋಗಿ ಅಲ್ಲಿ ಕೆಲ ಹೊತ್ತು ಉಳಿದಿದ್ದರು. ತನ್ನ ಸ್ವ ಗ್ರಾಮ ಗೌಳಿದಡ್ಡಿಗೆ ಮರಳುವಾಗ ವೃದ್ಧ ದಾರಿ ತಪ್ಪಿಸಿಕೊಂಡಿದ್ದರು. ದಟ್ಟ ಅರಣ್ಯದಲ್ಲಿ ಕಾಲು ದಾರಿಯಲ್ಲಿ ನಡೆದು ಬರುವಾಗ ವಯೋ ಸಹಜತೆಯಿಂದ ದಾರಿ ತಪ್ಪಿಸಿಕೊಂಡು ವೃದ್ಧ ಅಲೆದಾಡಿದ್ದರು. ಹೊಲಕ್ಕೆ ಹೋಗೋದಾಗಿ ಹೇಳಿ ಹೋಗಿದ್ದ ವೃದ್ಧ ಮನೆಗೆ ವಾಪಾಸ್ ಬಾರದೇ ಇದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ತೀವ್ರ ಹುಡುಕಾಟ ನಡೆಸಿದ್ದರು. ಮಗಳ ಮನೆಗೆ ಹೋಗಿದ್ದ ವಿಚಾರ ತಿಳಿದು ಅಲ್ಲಿಯೂ ಹುಡುಕಾಡಿದಾಗ ಸಿಕ್ಕಿರಲಿಲ್ಲ. ಇದರಿಂದ ಮನೆಯವರಿಗೆ ಗಾಬರಿಯಾಗಿತ್ತು.

ಕೊನೆಗೆ ಉಭಯ ಗ್ರಾಮಗಳ ಜನರು, ವೃದ್ಧನ ಸಂಬಂಧಿಕರು, ಗ್ರಾಮದ ಹಿರಿಯರು, ಯುವಕರು ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆಗೂಡಿ ಹುಡುಕಾಟ ನಡೆಸಿದ್ದಾರೆ. ಹಲವಾರು ತಂಡಗಳನ್ನು ಮಾಡಿಕೊಂಡು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ನಾಲ್ಕು ದಿನ ಹುಡುಕಾಟ ಮಾಡಿದ್ದಾರೆ. ಕೊನೆಗೂ ಕಾಣೆಯಾಗಿದ್ದ ಜನ್ನು ಬೈಚವಾಡದ ದಟ್ಟ ಅರಣ್ಯದಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ವೃದ್ಧ ಮೂರು ರಾತ್ರಿಗಳನ್ನು, ನಾಲ್ಕು ಹಗಲುಗಳನ್ನು ಅರಣ್ಯದಲ್ಲಿ ಕಳೆದಿದ್ದಾರೆ.

ಕಾಡು‌ ಪ್ರಾಣಿಗಳ‌ ಭಯದಲ್ಲಿಯೇ ಮಳೆ, ಚಳಿ ಎನ್ನದೆ ವೃದ್ಧ ಅಲೆದಾಡಿದ್ದಾರೆ. ನಿದ್ದೆಯನ್ನು‌ ಮಾಡದೇ, ಆಹಾರವನ್ನು ಸೇವಿಸದೇ, ನೀರನ್ನು ಕುಡಿಯದೇ, ಯಾರಾದರು ಬರುತ್ತಾರೆ ಎಂಬ ವಿಶ್ವಾಸದಲ್ಲಿಯೇ ವೃದ್ಧ ಅರಣ್ಯ ಪ್ರದೇಶದಲ್ಲಿ ಕಾಲ ದೂಡಿದ್ದರು. ಆದರೂ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರುಗಳಾಗದೇ ಇರೋದು ಅಚ್ಚರಿಗೆ ಕಾರಣವಾಗಿದೆ. ನಾಲ್ಕು ದಿನಗಳ ನಂತರ ಆರೋಗ್ಯವಂತವಾಗಿಯೇ ವೃದ್ಧ ಕುಟುಂಬದ ಸದಸ್ಯರನ್ನು ಸೇರಿದ್ದಾರೆ. ಪವಾಡ ಸದೃಶ ರೀತಿಯಲ್ಲಿ ಬಚಾವಾಗಿ ಬಂದಿದ್ದಾರೆಂದು ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರಿಂದ ವೃದ್ಧನಿಗೆ ಸನ್ಮಾನ ಮಾಡಿದ್ದಾರೆ. ನೀರು ಕುಡಿಸಿ, ಆಹಾರ ನೀಡಿ ಸಮಾಧಾನಪಡಿಸಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ವೃದ್ಧನನ್ನು ನೋಡಲು ನೆರೆ ಹೊರೆಯ ಗ್ರಾಮಸ್ಥರು ಬರುತ್ತಿದ್ದು, ಅಜ್ಜನ ಕುಶಲೋಪರಿ ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಮನೆಗೆ ವಾಪಸ್ಸಾಗುವ ವೇಳೆ ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡಿದ್ದೆ. ಮನೆಗೆ ಹೋಗಲು ದಾರಿಯನ್ನು ಹುಡುಕುತ್ತಲೇ ಸಾಗಿ ದಟ್ಟ ಅರಣ್ಯದೊಳಕ್ಕೆ ಹೋಗಿಬಿಟ್ಟಿದ್ದೆ. ಮತ್ತೆ ಮನೆ ಸೇರಿಯೇ ತೀರುತ್ತೇನೆ ಎನ್ನೋ ಧೈರ್ಯದಿಂದಲೇ ಅರಣ್ಯದಲ್ಲಿ ಕಾಲ ಕಳೆದೆ ಎಂದು ವೃದ್ಧ ಜನ್ನು ತಿಳಿಸಿದ್ದಾರೆ.

Advertisement
Share this on...