ಸಚಿವ ಸಂಪುಟ ದರ್ಜೆ ಸೌಲಭ್ಯವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಾಪಸ್ ನೀಡಿದ್ದಾರೆ. ಯಡಿಯೂರಪ್ಪ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಾನೇ ಯಡಿಯೂರಪ್ಪನವರಿಗೆ ಹೇಳೋಣ ಅಂದುಕೊಂಡಿದ್ದೆ. ನಾನು ಹೇಳುವ ಮೊದಲೇ ಯಡಿಯೂರಪ್ಪ ವಾಪಸ್ ಮಾಡಿದ್ದಾರೆ. ಅದು ಒಳ್ಳೆಯ ನಿರ್ಧಾರವಾಗಿದೆ. ಸಂಪುಟ ದರ್ಜೆ ಸ್ಥಾನಮಾನವನ್ನೊಪ್ಪದೇ ಯಡಿಯೂರಪ್ಪ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮೂಲಕ ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನವನ್ನು ನಿರಾಕರಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಯಡಿಯೂರಪ್ಪ ನಿರ್ಧಾರವನ್ನು ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
ಕಾವೇರಿ ನಿವಾಸದ ಮೇಲಿನ ಮೋಹ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಇನ್ನೂ ತೊರೆಯದ ಬಿಎಸ್ವೈ
ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ಜುಲೈ 26 ರಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿ 15 ಕ್ಕೂ ಹೆಚ್ಚು ದಿನಗಳು ಕಳೆದವು. ಆದರೆ ಯಡಿಯೂರಪ್ಪ ತಮ್ಮ ಸಿಎಂ ಅಧಿಕೃತ ನಿವಾಸ ಕಾವೇರಿಯನ್ನು ಈವರೆಗೂ ತೊರೆದಿಲ್ಲ. ಅದೃಷ್ಟದ ನಿವಾಸ ಎಂದೇ ರಾಜಕೀಯ ವಲಯದಲ್ಲಿ ಪರಿಗಣಿಸಲ್ಪಟ್ಟಿರುವ ಕಾವೇರಿಯನ್ನು ತೊರೆಯಲು ಯಡಿಯೂರಪ್ಪ ಮನಸ್ಸು ಮಾಡಿರದೆ ಇರುವುದು ಕುತೂಹಲ ಕೆರಳಿಸಿದೆ.
ಕಾವೇರಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ. ಅದರ ಪಕ್ಕದಲ್ಲೇ ಸಿಎಂ ಗೃಹ ಕಚೇರಿ ಕೃಷ್ಣಾ ಇದೆ. ಸಹಜವಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದರವರು ಈ ನಿವಾಸದಲ್ಲಿ ವಾಸ್ತವ್ಯ ಹೂಡುತ್ತಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದರು. ಬಳಿಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಎಚ್.ಡಿ ಕುಮಾರಸ್ವಾಮಿ ಖಾಸಗಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರೆ ಸಿದ್ದರಾಮಯ್ಯನವರು ಕಾವೇರಿ ನಿವಾಸದಲ್ಲಿ ವಾಸ್ತವ್ಯ ಮುಂದುವರಿಸಿದ್ದರು.
ಸಮ್ಮಿಶ್ರ ಸರ್ಕಾರದ ಪತನವಾದ ಬಳಿಕವೂ ಸಿದ್ದರಾಮಯ್ಯ ಅವರ ಕಾವೇರಿ ತೊರೆಯಲು ಮನಸ್ಸು ಮಾಡಿರಲಿಲ್ಲ. ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಅವರು ಧವಳಗಿರಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದಲೇ ಗೃಹ ಕಚೇರಿ ಕೃಷ್ಣಾಗೆ ಆಗಮಿಸುತ್ತಿದ್ದರು. ಆದರೆ ಇದು ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂಬ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬೇರೆ ನಿವಾಸವನ್ನು ನೀಡಿ ಕಾವೇರಿಗೆ ಯಡಿಯೂರಪ್ಪ ಶಿಫ್ಟ್ ಆದರು.
ಇದೀಗ ಯಡಿಯೂರಪ್ಪ ಮತ್ತೆ ಅಧಿಕಾರ ಕಳೆದುಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ತಾವು ಈ ಹಿಂದೆ ಇದ್ದ ನಿವಾಸದಲ್ಲೇ ತಮ್ಮ ವಾಸ್ತವ್ಯವನ್ನು ಮುಂದುವರಿಸಿದ್ದಾರೆ. ಯಡಿಯೂರಪ್ಪನವರು ಕಾವೇರಿಯನ್ನು ತೊರೆದಿಲ್ಲ. ಇದೀಗ ಅವರಿಗೆ ಬೊಮ್ಮಾಯಿ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನಮಾನವೂ ಸಿಕ್ಕಿದೆ.
ಆದರೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರು ಕಾವೇರಿಯನ್ನು ತೊರೆಯುತ್ತಾರಾ? ಅಥವಾ ಅಲ್ಲೇ ವಾಸ್ತವ್ಯಹೂಡಿ ತಮ್ಮ ರಾಜಕೀಯ ಹೋರಾಟ ಮುಂದುವರಿಸುತ್ತಾರಾ? ಎಂಬುವುದು ಕುತೂಹಲ ಕೆರಳಿಸಿದೆ. ಒಟ್ಟಿನಲ್ಲಿ ಕಾವೇರಿ ನಿವಾಸದ ಮೇಲಿನ ಮೋಹ ಸಿದ್ದರಾಮಯ್ಯ ಅವರ ಬಳಿಕ ಯಡಿಯೂರಪ್ಪ ಅವರಲ್ಲೂ ಕಾಣಿಸುತ್ತಿದೆ.