ತನ್ನ ಮಗ ಆತನನ್ನು ಶಿಕ್ಷಿಸಬೇಕಾದ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ಸಂಸತ್ ಭದ್ರತಾ ಉಲ್ಲಂಘನೆಯ ರೂವಾರಿ ಎನ್ನಲಾಗಿರುವ ಲಲಿತ್ ಝಾ ತಂದೆ ದೇವಾನಂದ ಝಾ (68) ಹೇಳಿದ್ದಾರೆ. ನಿರುದ್ಯೋಗದ ವಿರುದ್ಧ ಧ್ವನಿಯೆತ್ತುವುದು ದೇಶದ್ರೋಹವಲ್ಲ ಎಂದು ಒತ್ತಿ ಹೇಳಿರುವ ಅವರು,ಪೋಲಿಸರು ತನ್ನ ಮಗನನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು thehindu.com ವರದಿ ಮಾಡಿದೆ.
ದಿಲ್ಲಿ ಪೋಲಿಸರು ಲಲಿತ್ ಮತ್ತು ಇತರ ಐವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆರೋಪಗಳನ್ನು ಹೊರಿಸಿದ್ದಾರೆ.
‘ಲಲಿತ್ ನನ್ನ ಎರಡನೇ ಮಗ. ಅತ್ಯಂತ ಪ್ರತಿಭಾವಂತನಾಗಿರುವ ಆತ ಇತರರಿಗೆ ನೆರವಾಗಲು ಸದಾ ಸಿದ್ಧನಾಗಿರುತ್ತಿದ್ದ. ವಿಜ್ಞಾನ ಪದವೀಧರನಾಗಿರುವ ಆತ ವೈದ್ಯನಾಗಲು ಬಯಸಿದ್ದ. ಜೀವನ ನಿರ್ವಹಣೆಗಾಗಿ ಕೋಲ್ಕತಾದಲ್ಲಿ ಟ್ಯೂಷನ್ ನೀಡುತ್ತಿದ್ದ’ ಎಂದರು.
ಝಾ ಕುಟುಂಬವು ಹೆಚ್ಚಾಗಿ ಕೋಲ್ಕತಾದಲ್ಲಿಯೇ ವಾಸವಾಗಿರುತ್ತದೆ. “ಡಿ.10ರಂದು ಸಿಯಾಲ್ಡಾ ರೈಲು ನಿಲ್ದಾಣದಲ್ಲಿ ನಾವು ದರ್ಭಂಗಾಕ್ಕೆ ಪ್ರಯಾಣಿಸಲು ರೈಲು ಹತ್ತಿದಾಗ ಲಲಿತ್ ನಮ್ಮನ್ನು ಬೀಳ್ಕೊಟ್ಟಿದ್ದ. ನಮ್ಮ ಕಾಲಿಗೆರಗಿದ್ದ ಆತನಿಗೆ ಆಶೀರ್ವಾದದ ರೂಪದಲ್ಲಿ 250 ರೂ.ನೀಡಿದ್ದೆ” ಎಂದು ಬಿಹಾರದ ದರ್ಭಂಗಾದ ಬೇನಿಪುರ ಬ್ಲಾಕ್ ನ ರಾಮಪುರ ಉದಯ ಗ್ರಾಮದ ತನ್ನ ಪೂರ್ವಜರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವಾನಂದ ಝಾ ತಿಳಿಸಿದರು.
ತನ್ನ ಮಗನ ವಿಧಾನಗಳು ಸೂಕ್ತವಲ್ಲದಿರಬಹುದು, ಆದರೆ ದೇಶದಲ್ಲಿಯ ನಿರುದ್ಯೋಗದ ಕುರಿತು ಆತ ಎತ್ತಿದ್ದ ವಿಷಯ ಸರಿಯಾಗಿಯೇ ಇದೆ. ಕೊಲೆ, ಕಳ್ಳತನ ಅಥವಾ ದರೋಡೆಯಂತಹ ಅಪರಾಧವನ್ನು ಆತ ಮಾಡಿಲ್ಲ ಎಂದರು.
15 ವರ್ಷಗಳ ಹಿಂದಿನವರೆಗೂ ತನ್ನ ಮೂರು ಬಿಘಾ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದ ಝಾ ಈಗ ಪೂರ್ಣಕಾಲಿಕ ಅರ್ಚಕರಾಗಿದ್ದಾರೆ. ಈಗ ಅವರ ಆರೋಗ್ಯ ಅದಕ್ಕೆ ಅವಕಾಶ ನೀಡುತ್ತಿಲ್ಲ. ಅವರ ಹಿರಿಯ ಮಗಳು ಕೃಷಿಕನನ್ನು ಮದುವೆಯಾಗಿ ದರ್ಭಂಗಾದಲ್ಲಿ ನೆಲೆಸಿದ್ದಾಳೆ. ಲಲಿತ್ ನ ಹಿರಿಯ ಸೋದರ ಕೋಲ್ಕತಾದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು, ಗಾರ್ಮೆಂಟ್ ಅಂಗಡಿಯನ್ನು ನಡೆಸುತ್ತಿದ್ದಾನೆ. ಲಲಿತ್ ನ ಕಿರಿಯ ಸಹೋದರ ಇಲೆಕ್ಟ್ರಿಷಿಯನ್ ಆಗಿದ್ದಾನೆ.
ತನ್ನ ಮಗ ಭಗತ್ ಸಿಂಗ್ ಮತ್ತು ಚಂದ್ರಶೇಖರ ಆಝಾದ್ ಅವರ ಆರಾಧಕನಾಗಿದ್ದು, ಒಂದು ಕಾಲದಲ್ಲಿ ಕೋಲ್ಕತಾದಲ್ಲಿನ ಆತನ ಕೋಣೆ ಈ ಇಬ್ಬರು ಕ್ರಾಂತಿಕಾರಿಗಳ ಚಿತ್ರಗಳಿಂದ ತುಂಬಿರುತ್ತಿತ್ತು. ತಾನು ಸಮಾಜದಲ್ಲಿ ಬದಲಾವಣೆ ತರಲು ಬಯಸಿದ್ದೇನೆ ಎಂದು ಆತ ಯಾವಾಗಲೂ ಹೇಳುತ್ತಿದ್ದ ಎಂದು ಝಾ ಹೇಳಿದರು.
ಮರುಕು ಕುರ್ಚಿಯಲ್ಲಿ ಕುಳಿತುಕೊಂಡು ಬಿಕ್ಕುತ್ತಿದ್ದ ಲಲಿತ್ ತಾಯಿ ಮಂಜುಳಾ, “ಆತನ ಕೃತ್ಯದ ಗಂಭೀರತೆ ನನಗೆ ತಿಳಿದಿಲ್ಲ, ಆದರೆ ಆತ ಎಂದಿಗೂ ಅಪರಾಧವನ್ನು ಮಾಡುವುದಿಲ್ಲ ಎನ್ನುವುದು ನನಗೆ ಗೊತ್ತು. ಎರಡು ವರ್ಷಗಳ ಹಿಂದೆ ಆತ ಗ್ರಾಮಕ್ಕೆ ಭೇಟಿ ನೀಡಿದ್ದ. ಆತ ಬಂದಾಗಲೆಲ್ಲ ಮಕ್ಕಳಿಗೆ ಪಾಠ ಹೇಳುತ್ತಿದ್ದ. ಆತ ರಕ್ತದಾನವನ್ನೂ ಮಾಡಿದ್ದಾನೆ. ನಿನ್ನೆ ಪೋಲಿಸರು ನಮ್ಮ ಮನೆಗೆ ಬಂದಾಗಲಷ್ಟೇ ದಿಲ್ಲಿಯಲ್ಲಿ ಏನೋ ಸಂಭವಿಸಿದೆ ಮತ್ತು ನಮ್ಮ ಮಗ ಅದರಲ್ಲಿ ಭಾಗಿಯಾಗಿದ್ದಾನೆ, ಪೋಲಿಸರು ಆತನನ್ನು ಬಂಧಿಸಿದ್ದಾರೆ ಎನ್ನುವುದು ನಮಗೆ ಗೊತ್ತಾಗಿತ್ತು” ಎಂದರು.
“ತನ್ನ ಬಿಡುವಿನ ಸಮಯದಲ್ಲಿ ತಾನು ಏನು ಮಾಡುತ್ತೇನೆ ಎನ್ನುವುದನ್ನು ಲಲಿತ್ ನಮಗೆ ನಿಜಕ್ಕೂ ಹೇಳಿರಲಿಲ್ಲ” ಎಂದು ಹೆತ್ತವರು ಹೇಳಿದರು.
ಹೆತ್ತವರನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೆ ಬಂದಿದ್ದ ಲಲಿತ್ ತಾನು ಕೆಲವು ದಿನಗಳ ಮಟ್ಟಿಗೆ ದಿಲ್ಲಿಗೆ ಹೋಗುತ್ತಿರುವುದಾಗಿ ತಿಳಿಸಿದ್ದ. ಏಕೆ ಎಂದು ತಾಯಿ ಪ್ರಶ್ನಿಸಿದಾಗ ತನ್ನ ಸ್ನೇಹಿತರನ್ನು ಭೇಟಿಯಾಗಲಷ್ಟೇ ಎಂದಾತ ಉತ್ತರಿಸಿದ್ದ.
“ಕೋಲ್ಕತಾದಲ್ಲಿ ಪೋಲಿಸರು ನನ್ನ ಹಿರಿಯ ಸೋದರ ಮತ್ತು ಅತ್ತಿಗೆಯನ್ನೂ ಪ್ರಶ್ನಿಸಿದ್ದಾರೆ. ಆತನಾಗಲೀ ಲಲಿತ್ ಆಗಲೀ ಯಾವುದೇ ತಪ್ಪು ಮಾಡಿಲ್ಲ. ನಮ್ಮ ಕುಟುಂಬವನ್ನು ನೋಡಿದರೆ ನಾವೆಂದಾದರೂ ತಪ್ಪು ಕೆಲಸ ಮಾಡುತ್ತೇವೆ ಎಂದು ನಿಮಗೆ ಅನ್ನಿಸುತ್ತದೆಯೇ? ತಡವಾಗಿಯಾದರೂ ಲಲಿತ್ ಬಿಡುಗಡೆಗೊಳ್ಳುತ್ತಾನೆ ಎಂಬ ವಿಶ್ವಾಸ ನನಗಿದೆ”ಎಂದು ಕಿರಿಯ ಸೋದರ ಸೋನು ಝಾ ಹೇಳಿದ.
ಗ್ರಾಮಸ್ಥರೂ ಝಾ ಕುಟುಂಬದ ಕುರಿತು ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಅವರೆಲ್ಲ ತುಂಬ ಪ್ರಾಮಾಣಿಕ ಜನರು ಎಂದು ನೆರೆಯ ಅಜಯ ಝಾ ಹೇಳಿದರೆ, ‘ಅವರ ಕುಟುಂಬ ನಮಗೆ ಚೆನ್ನಾಗಿ ಗೊತ್ತು.ಲಲಿತ್ ಭಯೋತ್ಪಾದಕನಲ್ಲ, ಆತ ಕ್ರಾಂತಿಕಾರಿ ಚಿಂತನೆಗಳನ್ನು ಹೊಂದಿರುವ ಸರಳ ವ್ಯಕ್ತಿಯಾಗಿದ್ದಾನೆ’ ಎಂದು ಇನ್ನೋರ್ವ ಗ್ರಾಮಸ್ಥ ಪ್ರಿಯರಂಜನ ಮಿಶ್ರಾ ಹೇಳಿದರು.